Connect with us


      




ಕರ್ನಾಟಕ

ಸೊಪ್ಪಿನ ಬೆಟ್ಟಗಳ ಮಾರಾಟಕ್ಕೆ ವಿರೋಧ

Kumara Raitha

Published

on

ಬೆಂಗಳೂರು: ಫೆಬ್ರವರಿ ೦೧ (ಯು.ಎನ್.‌ಐ.)  ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಭೂಮಿಗಳನ್ನು   ಸಂಸ್ಥೆಗಳಿಗೆ ಮಾರಾಟಕ್ಕೆ ಸರ್ಕಾರ ಸಂಪುಟ ಉಪ ಸಮಿತಿ  ರಚನೆ ಮಾಡಿರುವುದನ್ನು  ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವಿರೋಧಿಸಿದೆ.

ಕರ್ನಾಟಕ ಸರ್ಕಾರ ರಾಜ್ಯದಲ್ಲಿರುವ ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಲಕ್ಷಾಂತರ ಎಕರೆ ಭೂಮಿಯನ್ನು ಸಂಘ-ಸಂಸ್ಥೆಗಳಿಗೆ ಮಾರಾಟ ಮಾಡಲು ಮುಂದಾಗಿದೆ. ಇದು ಸೂಕ್ತವಾದ ನೀತಿಯಲ್ಲ ಎಂದು ಸಮಿತಿ ಹೇಳಿದೆ.
ಇಂಥ ಸ್ಥಳಗಳನ್ನು  ಮಾರಾಟ ಮಾಡಲು  ಉನ್ನತ ಮಟ್ಟದ ಮಂತ್ರಿಗಳ ಸಮಿತಿಯನ್ನೇ ರಚಿಸಿರುವುದನ್ನು ನೋಡಿದರೆ ಆಘಾತವಾಗುತ್ತದೆ. ಸರ್ಕಾರ ಇನ್ನು ಮುಂದೆ ಭೂಮಿಗಳನ್ನು ಮಾರಾಟ ಮಾಡಲು ಈ ಸಮಿತಿಯು ಇನ್ನು ಮುಂದೆ “ರಿಯಲ್ ಎಸ್ಟೇಟ್” ಸಮಿತಿ‌ಯಾಗಿ ಕೆಲಸ ಮಾಡಬಹುದು  ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.
ಕಂದಾಯ ಮಂತ್ರಿ, ಕಾನೂನು ಮಂತ್ರಿ, ಗೃಹ ಮಂತ್ರಿ, ಕೃಷಿ ಮಂತ್ರಿ, ನಗರಾಭಿವೃದ್ಧಿ ಹಾಗೂ ಪಶುಸಂಗೋಪಾನಾ ಮಂತ್ರಿಗಳನ್ನು ಸೇರಿಸಿ ಭೂಮಿ ಮಂಜೂರಾತಿಗಾಗಿ ಸಂಪುಟ ಉಪ ಸಮಿತಿಯನ್ನು ಮಾಡುವ ಮೂಲಕ ರಾಜ್ಯದ ಮರ್ಯಾದೆಯನ್ನು ಹರಾಜಾಕಿದಂತಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ರಾಜ್ಯದಲ್ಲಿ ಈಗಾಗಲೇ ಲಕ್ಷಾಂತರ ಭೂರಹಿತರು ಇದೇ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.  ಸೊಪ್ಪಿನ ಬೆಟ್ಟವನ್ನು ಅವಲಂಭಿಸಿ ಕೃಷಿಯನ್ನು ನಡೆಸುತ್ತಾ ಸಮುದಾಯದ ಅಸ್ತಿಯನ್ನಾಗಿ ಜನರು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಹುಲ್ಲುಗಾವಲುಗಳು ರಾಜ್ಯದ ಉದ್ದಗಲ್ಲಕ್ಕೂ ಬಯಲು ಸೀಮೆ, ಮಲೆನಾಡಿನಲ್ಲಿ ನೀರಿನ ಟ್ಯಾಂಕ್ ಮಾದರಿ ಇವೆ.

ದನಕರುಗಳಿಗೆ, ಮೇಕೆ,ಕುರಿಗಳಿಗೆ ಇವುಗಳೇ ಆದಾರ. ಗ್ರಾಮಕ್ಕೆ ಅಗತ್ಯವಿರುವಷ್ಟು ಗಾಯರಾಣ-ಗೋಮಾಳ ಭೂಮಿಯನ್ನು ಉಳಿಸಿಕೊಂಡು ಉಳಿದದ್ದನ್ನು ಭೂರಹಿತರು ಸಾಗುವಳಿ ಮಾಡುತ್ತಾ ಜೀವನೊಪಾಯವಾಗಿಸಿಕೊಂಡಿದ್ದಾರೆ. ಜನರ ಬದುಕಿಗೆ ಪೂರಕವಾಗಿ ಬಳಸಿಕೊಂಡು ಭೂಮಿ ಎಂಬ ಸಂಪತ್ತನ್ನು ಕಾಪಾಡಿಕೊಂಡು ಬರುತ್ತಿದ್ದಾರಲ್ಲದೆ ಮುಂದಿನ ಪೀಳಿಗೆ ಕಾಪಿಟ್ಟುಕೊಂಡು ಬರುತ್ತಿರುವುದು ವಿಶೇಷವೇ ಆಗಿದೆ ಎಂದು ಸಮಿತಿ ವಿವರಿಸಿದೆ.
ಈಗ ಅದೇ ಭೂಮಿಯನ್ನೇ ಗುರಿಯಾಗಿಟ್ಟುಕೊಂಡು ದೊಡ್ಡ ದೊಡ್ಡ ಕಂಪನಿಗಳಿಗೆ, ಸಂಘ- ಸಂಸ್ಥೆಯ ಹೆಸರುಗಳಿಗೆ ಮಾರಾಟ ಮಾಡಲು ಹೊರಟಿರುವ ಸರ್ಕಾರದ ಕ್ರಮ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿರುವ ಸಮಿತಿ ಕೂಡಲೇ ಸರ್ಕಾರ ಸಮಿತಿಯನ್ನು‌ ರದ್ದುಗೊಳಿಸುವುದರ ಜೊತೆಗೆ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.
ಸರ್ಕಾರ ಭೂಮಿಗಳನ್ನು ಮಾರಾಟ ಮಾಡುತ್ತಿರುವುದರ ಹಿಂದೆ ಕಂಪನಿಗಳ ಹಿತಾಸಕ್ತಿ ಇದೆ ಎಂಬುದಕ್ಕೆ ಭೂಸುಧಾರಣಾ ಕಾಯ್ದೆಯ ತಿದ್ದುಪಡಿ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಂತಹ ಇತ್ತೀಚೆನ ಸರ್ಕಾರದ ನೀತಿಗಳೇ ಸಾಕ್ಷಿಯಾಗಿವೆ. ಪ್ರಜಾಪ್ರಭುತ್ವದ ಮೌಲ್ಯಗಳಲ್ಲೊಂದಾದ ಸಂಪತ್ತಿನ ಹಂಚಿಕೆಗೆ ವಿರುದ್ದವಾಗಿ ನಡೆದುಕೊಳ್ಳುತ್ತಾ ದೇಶದ ಪ್ರಧಾನ ಸಂಪತ್ತಾದ ಭೂಮಿಯನ್ನೂ ಸರ್ಕಾರದ ಮಾಲೀಕತ್ವದಿಂದ ಹಿಂದೆ ಸರಿದು ಬಂಡವಾಳಿಗರಿಗೆ ಮಾರಾಟ ಮಾಡುವ ಮೂಲಕ ಅಪಚಾರ ಮಾಡಲಾಗುತ್ತಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಹಲವು ದಶಕಗಳ ಕಾಲದಿಂದಲೂ ಗಾಯರಾಣ, ಗೋಮಾಳ, ಸೊಪ್ಪಿನ ಬೆಟ್ಟ, ಹುಲ್ಲುಬನ್ನಿ ಹೆಸರಿನಲ್ಲಿರುವ ಭೂಮಿಗಳಲ್ಲಿ ಬದುಕಿಗಾಗಿ ತುಂಡು ಭೂಮಿಯನ್ನು ಅವಲಂಭಿಸಿ ಲಕ್ಷಾಂತರ ದಲಿತ, ಆದಿವಾಸಿ, ಹಿಂದುಳಿದ, ಅಲೆಮಾರಿ ಹಾಗೂ‌ ಇನ್ನಿತರೆ ಸಮುದಾಯಗಳು ಫಾರಂ.ನಂ.50,53 ಹಾಗೂ 57 ರಲ್ಲಿ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ತಮ್ಮ ಜೀವನವನ್ನೇ ಸವೆಸುತ್ತಿದ್ದಾರೆ ಎಂದು ಸಮಿತಿ ವಿವರಿಸಿದೆ.

ಭೂಮಿಯ ಮಂಜೂರಾತಿಗಾಗಿ‌ ಎರಡು-ಮೂರು ತಲೆ ಮಾರುಗಳು ನಿರೀಕ್ಷೆ ಮಾಡಿವೆ.  ಈಗ ಸರ್ಕಾರದ ಈ ನೀತಿಗಳು ಲಕ್ಷಾಂತರ ಜನರ ನಿರೀಕ್ಷೆ ಹುಸಿಯಾಗುತ್ತದೆ ಎಂದು ಸಮಿತಿಯ ಕುಮಾರ್ ಸಮತಳ, ಕೆಜೆಎಸ್ ಮರಿಯಪ್ಪ, ಡಿ.ಎಚ್.ಪೂಜಾರ್, ಸಿರಿಮನೆ ನಾಗರಾಜ್, ಸ್ವರ್ಣಭಟ್, ಸಿದ್ದರಾಜ್, ಸಿ.ಜಿ.ಗಂಗಪ್ಪ, ಕರಿಯಪ್ಪ ಗುಡಿಮನಿ, ಡಿ.ಎಸ್‌.ನಿರ್ವಾಣಪ್ಪ, ಅಮೀನ್ ಮೊಹಿಸೀನ್, ಕಂದೇಗಾಲ ಶ್ರೀನಿವಾಸ್, ಬಸವರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share