Connect with us


      
ವಿದೇಶ

ರಷ್ಯಾದ ಬಾಕಿ ಪಾವತಿಸದ ಪಾಕಿಸ್ತಾನ ಏರ್‌ಲೈನ್ಸ್!

Iranna Anchatageri

Published

on

ಇಸ್ಲಾಮಾಬಾದ್: ಜೂನ್ 23 (ಯು.ಎನ್.ಐ.) ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಮ್ಮೆ ಅಂತರಾಷ್ಟ್ರೀಯ ಮುಖಭಂಗ ಉಂಟಾಗಿದೆ. ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನಿಂದ ಬಾಕಿ ಪಾವತಿಸದ ಕಾರಣ ವಿಮಾನಕ್ಕೆ ಓವರ್‌ಫ್ಲೈಯಿಂಗ್ ಕ್ಲಿಯರೆನ್ಸ್ ನೀಡಲು ರಷ್ಯಾ ನಿರಾಕರಿಸಿದೆ. ಇದಾದ ಬಳಿಕ ಇಸ್ಲಾಮಾಬಾದ್‌ನಿಂದ ಟೊರಾಂಟೊಗೆ ತೆರಳುತ್ತಿದ್ದ ವಿಮಾನ ಮಾರ್ಗ ಬದಲಿಸಿ ಪ್ರಯಾಣಿಕರನ್ನು ನಿಗದಿತ ಸ್ಥಳಕ್ಕೆ ತಲುಪಿಸಿದೆ.

ಪಾಕಿಸ್ತಾನ ಸುದ್ದಿ ಚಾನೆಲ್ ಪ್ರಕಾರ ಈ ಘಟನೆ ಜೂನ್ 17 ರಂದು ನಡೆದಿದ್ದು, ಇಸ್ಲಾಮಾಬಾದ್‌ನಿಂದ ಟೊರೊಂಟೊಗೆ ತೆರಳುತ್ತಿದ್ದ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ವಿಮಾನಕ್ಕೆ ಓವರ್‌ಫ್ಲೈಯಿಂಗ್ ಕ್ಲಿಯರೆನ್ಸ್ ಸಿಕ್ಕಿಲ್ಲ. ಇದಾದ ಬಳಿಕ ಪಿಐಎ ಪಿಕೆ 781 ವಿಮಾನದಲ್ಲಿ 250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನವನ್ನು ಮೊದಲು ಕರಾಚಿಗೆ ವಾಪಸ್ ತರಲಾಯಿತು. ಅಲ್ಲಿಂದ ವಿಮಾನವು ಯುರೋಪಿಯನ್ ದೇಶಗಳ ವಾಯುಪ್ರದೇಶವನ್ನು ಬಳಸಿ ಟೊರೊಂಟೊ ತಲುಪಿತು.

ಇದಕ್ಕೆ ಮುಖ್ಯ ಕಾರಣ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (SBP) ಹಣವನ್ನು ವರ್ಗಾಯಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದೆ. ಅಲ್ಲದೆ, ಜಾಗತಿಕ ನಿರ್ಬಂಧಗಳಿಂದ ರಷ್ಯಾ ಹಣ ಪಾವತಿಯನ್ನು ಸ್ವೀಕರಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದೆ ಎಂದು ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ ಹೇಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಿಐಎ ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳಬೇಕಾಗಿದೆ.

ಪಾಕಿಸ್ತಾನದಿಂದ ಟೊರೊಂಟೊಗೆ ತೆರಳಬೇಕಿರುವ ವಿಮಾನಗಳು ಇರಾನ್, ಟರ್ಕಿ ಮತ್ತು ಯುರೋಪ್ ಮಾರ್ಗವನ್ನು ಬಳಸಬೇಕೆಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಮತ್ತೊಂದೆಡೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ “ನಾಚಿಕೆಗೇಡಿನ ಪರಿಸ್ಥಿತಿ”ಗೆ ಕಾರಣವೇನು ಎಂದು ಪಾಕಿಸ್ತಾನ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಪಾಕಿಸ್ತಾನವು ಭಾರೀ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಘಟನ ನಡೆದಿದೆ. ಈ ಮಧ್ಯೆ, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹವು ಮಾರ್ಚ್ ಅಂತ್ಯಕ್ಕೆ USD 2.915 ಶತಕೋಟಿಗಳಷ್ಟು ಕುಸಿತಕಂಡಿದೆ. ಹಣದುಬ್ಬರವು 13.8% ರಷ್ಟಿದೆ. ಇನ್ನು ಕಳೆದ ಒಂದು ತಿಂಗಳಲ್ಲಿ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ 186 ರಿಂದ 202 ಕ್ಕೆ ಏರಿದ್ದು, ಬೆಲೆಯೇರಿಕೆಯಿಂದಾಗಿ ಸಾರ್ವಜನಿಕರು ಹೈರಾಣಾಗಿದ್ದಾರೆ.

Share