Published
6 months agoon
ಪೋರಬಂದರ್ : ನ. 8 (ಯುಎನ್ಐ) ಗುಜರಾತ್ ಕರಾವಳಿಯ ಅರೇಬಿಯನ್ ಸಮುದ್ರದ ಗಡಿರೇಖೆ ಬಳಿ ಪಾಕಿಸ್ತಾನದ ಭದ್ರತಾ ಸಿಬ್ಬಂದಿ, ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಸಂಬಂಧ ಇದೀಗ 10 ಪಾಕ್ನ ನೌಕಾ ನೆಲೆಯ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪೋರಬಂದರ್ನ ನವಿಬಂದರ್ ಪೊಲೀಸರು ಓರ್ವ ಮೀನುಗಾರನನ್ನು ಕೊಲ್ಲುವುದರಲ್ಲಿ ಭಾಗಿಯಾಗಿರುವ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಪಡೆಗಳ ಎರಡು ದೋಣಿಗಳಲ್ಲಿದ್ದ 10 ಸಿಬ್ಬಂದಿ ವಿರುದ್ಧ ಆರೋಪ ಹೊರಿಸಲಾಗಿದೆ.
ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ (IMBL)ಬಳಿ ಪಾಕಿಸ್ತಾನದ ಕಡಲ ಭದ್ರತಾ ಸಿಬ್ಬಂದಿ ಎರಡು ಭಾರತೀಯ ಮೀನುಗಾರಿಕಾ ದೋಣಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗುಜರಾತ್ನ ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಕರಾವಳಿಯಲ್ಲಿ ಜಲ್ಪಾರಿ ಎಂಬ ದೋಣಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.
ಈ ಪ್ರಕರಣದಲ್ಲಿ 10 ಸಿಬ್ಬಂದಿ ವಿರುದ್ಧ ಐಪಿಸಿ 302, 307, 114, 25 (1) ಎ, 37 ಅಡಿ ಪ್ರಕರಣ ದಾಖಲಿಸಲಾಗಿದೆ. ಪಾಕಿಸ್ತಾನದ ನೌಕಾನೆಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ಮೀನುಗಾರ ಮೃತಪಟ್ಟಿದ್ದ ಘಟನೆ ಖಂಡಿಸಿ ವದ್ರಾಯಿ ಗ್ರಾಮದ ಜನರು ಸೋಮವಾರ ಬಂದ್ ನಡೆಸಿದರು.