Connect with us


      
ಕ್ರೀಡೆ

ಟೆನಿಸ್ ತಾರೆ ಪೆಂಗ್ ಶೂಯಿ ನಾಪತ್ತೆ ; ತಿಪ್ಪೆ ಸಾರಿಸಲು ನಿಂತ ಕಮ್ಯೂನಿಸ್ಟ್ ರಾಷ್ಟ್ರ!

Iranna Anchatageri

Published

on

ಹೊಸದಿಲ್ಲಿ, ನ 21 (ಯುಎನ್ಐ) ಟೆನಿಸ್ ತಾರೆ ಪೆಂಗ್ ಶೂಯಿ ಎಲ್ಲಿದ್ದಾರೆ ಅಂತಾ ಇಡೀ ಜಗತ್ತೇ ಚೀನಾವನ್ನು ಪ್ರಶ್ನೆ ಮಾಡುತ್ತಿದೆ. ಆದ್ರೆ, ಕಮ್ಯೂನಿಸ್ಟ್ ರಾಷ್ಟ್ರ ತನ್ನ ಕಪಿಮುಷ್ಠಿಯಲ್ಲಿರುವ ಗ್ಲೋಬಲ್ ಟೈಮ್ಸ್ ನಲ್ಲಿ ಸಣ್ಣದೊಂದು ವಿಡಿಯೋ ಹಾಕುವ ಮೂಲಕ ತಿಪ್ಪೆ ಸಾರಿಸುವ ಕಾರ್ಯಕ್ಕೆ ಕೈ ಹಾಕಿದೆ.

ಪೆಂಗ್ ಶೂಯಿ, ನಾಪತ್ತೆಯಾಗಿರುವ ಚೀನಾ ಟೆನಿಸ್ ಆಟಗಾರ್ತಿ

ಹೌದು., ಟೆನಿಸ್ ತಾರೆ ಪೆಂಗ್ ಶೂಯಿ ಕಣ್ಮರೆಯಾದಾಗಿನಿಂದ ಡ್ರ್ಯಾಗನ್ ರಾಷ್ಟ್ರದಲ್ಲಿ ಕಂಪನ ಸೃಷ್ಟಿಯಾಗಿದೆ. ನವೆಂಬರ್ 2 ರಂದು ಅರ್ಥಾತ್ ಕಳೆದ 20 ದಿನಗಳ ಹಿಂದೆ ಚೀನಾದ ಸೋಷಿಯಲ್ ಮೀಡಿಯಾದ ವೀಬೋದಲ್ಲಿ ಚೀನಾದ ಮಾಜಿ ಉಪ ಪ್ರಧಾನಿ ಎನ್ನಲಾಗುತ್ತಿರುವ ಜಾಂಗ್ ಗೌಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಅಂತಾ ಆರೋಪಿಸಿ ಸುದೀರ್ಘ ಪೋಸ್ಟ್ ವೊಂದನ್ನು ಪೆಂಗ್ ಶೂಯಿ ಬರೆದುಕೊಂಡಿದ್ದರು. ಅದಾದ ಬಳಿಕ ಚಿಟಿಕೆ ಹೊಡೆಯೋದ್ರಲ್ಲಿ ಆ ಪೋಸ್ಟನ್ನು ಡಿಲಿಟ್ ಮಾಡಿ, ಟೆನಿಸ್ ಆಟಗಾರ್ತಿಯನ್ನು ಅಪಹರಣ ಮಾಡಲಾಗಿತ್ತು.
ಚೀನಾದ ಕೆಲವು ಮೂಲಗಳು ಹೇಳಿಕೆ ಪ್ರಕಾರ, ನಿಗೂಢ ಸ್ಥಳದಲ್ಲಿ ಪೆಂಗ್ ಶೂಯಿ ಬಂಧಿಯಾಗಿರಬಹುದು. ಇಲ್ಲವೇ ಹತ್ಯೆಯಾಗಿರಬಹುದೆಂದು ಹೇಳಲಾಗುತ್ತಿದೆ. ಆದ್ರೆ ಇದು ಎಷ್ಟರಮಟ್ಟಿಗೆ ಸರಿ ಅನ್ನೋದು ಇನ್ನೂ ತಿಳಿದುಬಂದಿಲ್ಲ. ಏಕೆಂದ್ರೆ ಚೀನಾದಲ್ಲಿ ವಿದೇಶಿ ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ. ಹೀಗಾಗಿ, ಚೀನಾದಲ್ಲಿ ಸದ್ಯಕ್ಕೆ ಏನಾಗುತ್ತಿದೆ ಅನ್ನೋದು ಜಗತ್ತಿನ ರಾಷ್ಟ್ರಗಳಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ.
ಆದ್ರೆ ಇದೀಗ ನಾಪತ್ತೆಯಾಗಿರುವ ಪೆಂಗ್ ಶುಯಿ ಪಂದ್ಯ ವೀಕ್ಷಿಸುತ್ತಿದ್ದಾರೆ ಅನ್ನೋ ವಿಡಿಯೋವೊಂದು ಪೋಸ್ಟ್ ಮಾಡಲಾಗಿದೆ. ಚೀನಾದ ಆಡಳಿತರೂಢ ಕಮ್ಯುನಿಸ್ಟ್ ಪಕ್ಷದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಸಂಪಾದಕರು ಇದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದ್ರೆ, ಈ  ದೃಶ್ಯವನ್ನು ಟ್ವಿಟ್ಟರ್ ನಲ್ಲಿ ಹಾಕಿರೋದ್ರಿಂದ ಚೀನಾದ ಹೆಚ್ಚಿನ ಜನ ಈ ವಿಡಿಯೋ ನೋಡಲು ಸಾಧ್ಯವಾಗಲ್ಲ. ಈ ಚಿಕ್ಕ ವಿಡಿಯೋದಲ್ಲಿ ಪೆಂಗ್ ಶೂಯಿ ಇತರ ಐದು ಜನರೊಂದಿಗೆ ನಿಂತಿರುವುದನ್ನು ಕಾಣಬಹುದಾಗಿದೆ. ಈ ದೃಶ್ಯ ಭಾನುವಾರ ಬೀಜಿಂಗ್ ನಲ್ಲಿ ನಡೆದ ಯುವ ಚಾಂಪಿಯನ್ ಶಿಪ್ ಕಾರ್ಯಕ್ರಮದಾಗಿದ್ದು, ಈ ವಿಡಿಯೋವನ್ನು ಗ್ಲೋಬಲ್ ಟೈಮ್ಸ್ ಫೋಟೋ ರಿಪೋರ್ಟರ್ ಸ್ಯೂ ಮೆಂಗ್ ಸೆರೆಹಿಡಿದಿದ್ದಾರೆ ಅಂತಾ ಹೂ ಜಿನ್ ಬರೆದುಕೊಂಡಿದ್ದಾನೆ.
ಈ ವಿಡಿಯೋದ ಮೂಲಕ ವಿಶ್ವದೆಲ್ಲೆಡೆ ನಡೆಯುತ್ತಿರುವ ಚರ್ಚೆ ಮೇಲೆ ತಿಪ್ಪೆ ಸಾರಿಸುವ ಪ್ರಯತ್ನ ಚೀನಾದಿಂದ ನಡೆಯುತ್ತಿದೆ ಅನ್ನೋದು ದಿಗ್ಗಜ ಟೆನಿಸ್ ಆಟಗಾರರ ವಾದ. ಸರ್ವಾಧಿಕಾರಿ ರಾಷ್ಟ್ರದ ಹಿರಿಯ ನಾಯಕರೊಬ್ಬರ ಮೇಲಿರುವ ಲೈಂಗಿಕ ಕಿರುಕುಳದ ಆರೋಪವನ್ನು ಹೋಗಲಾಡಿಸಲು ಕಮ್ಯೂನಿಸ್ಟ್ ಸರ್ಕಾರ ಯತ್ನಿಸುತ್ತಿದೆ. ಈ ಮಧ್ಯೆ ಕಳೆದ ಶನಿವಾರ, ಟೆನಿಸ್ ಆಟಗಾರ್ತಿ ಪೆಂಗ್ ಶೂಯಿ ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಅಂತಾ ಹು ಜಿನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದ.
ಪೆಂಗ್ ಶೂಯಿ ಕಣ್ಮರೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಚೀನಿ ಸರ್ಕಾರ ಮೌನವಹಿಸಿದೆ. ಈ ಬೆನ್ನಲ್ಲೇ ಕಮ್ಯೂನಿಸ್ಟ್ ರಾಷ್ಟ್ರಕ್ಕೆ ಪ್ರತಿಷ್ಠಿತ ಪಂದ್ಯಾವಳಿಯಾದ ಬೀಜಿಂಗ್ ನ ಚಳಿಗಾಲದ ಕ್ರೀಡಾಕೂಟವನ್ನು ಬಹಿಷ್ಕರಿಸುವ ಲೆಕ್ಕಾಚಾರಗಳು ಸಾಗಿವೆ.


ಇನ್ನು ಮಹಿಳಾ ಟೆನಿಸ್ ಅಸೋಸಿಯೇಷನ್ ​​(ಡಬ್ಲ್ಯೂಟಿಎ) ಮಾಜಿ ನಂಬರ್ ಒನ್ ಡಬಲ್ಸ್ ಆಟಗಾರ್ತಿ ಕಣ್ಮರೆಯಾಗಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಪೆಂಗ್ ಶೂಯಿ ಸುರಕ್ಷಿತವಾಗಿದ್ದಾರೆ ಅನ್ನೋ ಭರವಸೆಯನ್ನು ವಿಶ್ವಕ್ಕೆ ನೀಡದಿದ್ದರೆ ಎಲ್ಲ ಟೂರ್ನಿಗಳಿಂದ ಚೀನಾವನ್ನು ಹೊರಗಿಡುವುದಾಗಿ ಡಬ್ಲ್ಯೂಟಿಎ ಬೆದರಿಕೆ ಹಾಕಿದೆ.
35 ವರ್ಷದ ಪೆಂಗ್ ಶೂಯಿ ಟೆನಿಸ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಸದ್ಯ ಪೆಂಗ್ ಶೂಯಿ 2 ಗ್ರ್ಯಾನ್‌ಸ್ಲಾಮ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಬಾರಿಗೆ 2013 ರಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನು ಅವರು ಮುಡಿಗೇರಿಸಿಕೊಂಡ್ರು. ನಂತ್ರ, 2014 ರಲ್ಲಿ ಫ್ರೆಂಚ್ ಓಪನ್ ಅನ್ನು ಗೆದ್ದರು. ಫೆಬ್ರವರಿ 2014 ರಲ್ಲಿ, ಮಹಿಳೆಯರ ಡಬಲ್ಸ್‌ನಲ್ಲಿ ನಂಬರ್ ಒನ್ ಸ್ಥಾನವನ್ನು ತಲುಪುವಲ್ಲಿ ಪೆಂಗ್ ಶೂಯಿ ಯಶಸ್ವಿಯಾಗಿದ್ದರು.


ಮಹಿಳಾ ಟೆನಿಸ್ ಅಸೋಸಿಯೇಷನ್ ​​ಅಧ್ಯಕ್ಷ ಮತ್ತು ಸಿಇಒ ಸ್ಟೀವ್ ಸೈಮನ್, ಚೀನಾ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಪೆಂಗ್ ಶೂಯಿ ನಾಪತ್ತೆ ಕುರಿತು ಸರಿಯಾದ ಉತ್ತರ ಸಿಗುವವರೆಗೆ ಚೀನಾ ರಾಷ್ಟ್ರವನ್ನು ಟೆನಿಸ್ ನಿಂದ ಬ್ಯಾನ್ ಮಾಡುತ್ತೇವೆ ಅಂತಾ ತಿಳಿಸಿದ್ದಾರೆ. ಅಲ್ಲದೆ, ಸೆರಿನಾ ವಿಲಿಯಮ್ಸ್ ಸೇರಿದಂತೆ ಹಲವು ಕ್ರೀಡಾಪಟುಗಳು ಕೂಡ ಶೂಯಿ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಅಲ್ಲದೆ, ‘ವೇರ್ ಈಸ್ ಪೆಂಗ್ ಶೂಯಿ’ (#WhereIsPengShuai) ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದು, ಚೀನಾದ ನೀತಿ ವಿರುದ್ಧ ಕಟು ಶಬ್ದಗಳಲ್ಲಿ ಟೀಕೆ ಮಾಡಲಾಗುತ್ತಿದೆ.

Share