Connect with us


      
ವಿದೇಶ

ಚೀನಾದಲ್ಲಿ ಪ್ರತಿ ಸೆಕೆಂಡ್ ಗೆ 583 ಮಂದಿಗೆ ಕೋವಿಡ್ ಪರೀಕ್ಷೆ!

Iranna Anchatageri

Published

on

ಬೀಜಿಂಗ್ : ಜನೆವರಿ 09 (ಯು.ಎನ್.ಐ.) ಪ್ರತಿ ಸೆಕೆಂಡ್ ಗೆ ಚೀನಾದಲ್ಲಿ 583 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಚೀನಾದ ಹೆನಾನ್ ಪ್ರಾಂತ್ಯದ ರಾಜಧಾನಿಯಲ್ಲಿ ದಾಖಲೆಯ 1 ಕೋಟಿ 26 ಲಕ್ಷ ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಝೆಂಗ್ಝೌ ನಗರದಲ್ಲಿ ಈ ದಾಖಲೆಯ ಪರೀಕ್ಷೆ ನಡೆಸಲಾಗಿದ್ದು, 6 ಗಂಟೆಗಳಲ್ಲಿ 1 ಕೋಟಿ 26 ಲಕ್ಷ ಜನರನ್ನು ಟೆಸ್ಟ್ ಗೆ ಗುರಿಪಡಿಸಲಾಗಿದೆ.

ಫೆಬ್ರವರಿ 4ರಿಂದ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಗಳು ಚೀನಾದಲ್ಲಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಹತೋಟಿಗೆ ತರಲು ಎಲ್ಲಿಲ್ಲದ ಕಸರತ್ತನ್ನು ಡ್ರ್ಯಾಗನ್ ರಾಷ್ಟ್ರ ಮಾಡುತ್ತಿದೆ. ಚೀನಾ ಮಾಧ್ಯಮಗಳ ವರದಿ ಪ್ರಕಾರ ಪ್ರತಿ ಸೆಕೆಂಡಿಗೆ 583 ಜನರ ಪರೀಕ್ಷೆಯ ಅಂದರೆ, ಪ್ರತಿ ಗಂಟೆಗೆ ಸುಮಾರು 21 ಲಕ್ಷ ಜನರ ಕೋವಿಡ್ ಪರೀಕ್ಷೆ ಮಾಡಿರುವುದಾಗಿ ತಿಳಿಸಿವೆ.

ಪ್ರಪಂಚದಾದ್ಯಂತ ಕೊರೊನಾ ಸೋಂಕಿನ ವೇಗ ತೀವ್ರವಾಗಿ ಹೆಚ್ಚತೊಡಗಿದೆ. ಕಳೆದ 24 ಗಂಟೆಗಳಲ್ಲಿ ವಿಶ್ವದಾದ್ಯಂತ 21 ಲಕ್ಷ 89 ಸಾವಿರ ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೋವಿಡ್ ಸೋಂಕಿನಿಂದಾಗಿ 4,771 ಮಂದಿ ಸಾವಿಗೀಡಾಗಿದ್ದಾರೆ. ಇನ್ನು ಕಳೆದ ಶುಕ್ರವಾರ ವಿಶ್ವಾದ್ಯಂತ 26.96 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, 6,369 ಜನರು ಇಹಲೋಕ ತ್ಯಜಿಸಿದ್ದಾರೆ.

ಶನಿವಾರ ಅಮೆರಿಕದಲ್ಲಿ ಅತಿ ಹೆಚ್ಚು 4 ಲಕ್ಷ 68 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಅಂದರೆ, ಪ್ರಪಂಚದಾದ್ಯಂತದ ಒಟ್ಟು ಪ್ರಕರಣಗಳಲ್ಲಿ ಕಾಲು ಭಾಗದಷ್ಟು ಪ್ರಕರಣಗಳು ಅಮೆರಿಕದಲ್ಲಿ ಮಾತ್ರ ಕಂಡುಬಂದಿವೆ. ಫ್ರಾನ್ಸ್‌ನಲ್ಲಿ 3.03 ಲಕ್ಷ, ಇಟಲಿಯಲ್ಲಿ 1.97 ಲಕ್ಷ, ಭಾರತದಲ್ಲಿ 1.59 ಲಕ್ಷ, ಯುಕೆಯಲ್ಲಿ 1.46 ಲಕ್ಷ, ಆಸ್ಟ್ರೇಲಿಯಾದಲ್ಲಿ 1.15 ಲಕ್ಷ ಮತ್ತು ಅರ್ಜೆಂಟೀನಾದಲ್ಲಿ 1.01 ಲಕ್ಷ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಡೀ ವಿಶ್ವದಲ್ಲಿ ಕೊರೊನಾ ಸಾವಿನ ಸಂಖ್ಯೆ 55 ಲಕ್ಷದ ಗಡಿ ದಾಟಿದೆ.

ಜಗತ್ತಿನಲ್ಲಿ ಈವರೆಗೆ ಕೋವಿಡ್ ನಿಂದಾಗ ಸಾವು-ನೋವು

ಒಟ್ಟು ಸೋಂಕಿತರ ಸಂಖ್ಯೆ   : 30.59 ಕೋಟಿ

ಸಕ್ರಿಯ ಪ್ರಕರಣಗಳು         : 4.15 ಕೋಟಿ

ಒಟ್ಟು ಸಾವುಗಳು               : 55.02 ಲಕ್ಷ

Share