Connect with us


      




ವಿದೇಶ

ಚೀನಾ ವಿಮಾನ ಅಪಘಾತ: 20 ಗಂಟೆಗಳ ನಂತರವೂ ಯಾರೂ ಬದುಕುಳಿದಿಲ್ಲ

Iranna Anchatageri

Published

on

ಬೀಜಿಂಗ್: ಮಾರ್ಚ್ 22 (ಯು.ಎನ್.ಐ.) ಚೀನಾದಲ್ಲಿ ಸೋಮವಾರ ನಡೆದ ವಿಮಾನ ಅಪಘಾತದ 20 ಗಂಟೆಗಳ ನಂತರ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿ ಜೀವಂತವಾಗಿ ಪತ್ತೆಯಾಗಿಲ್ಲ. ಈ ಭೀಕರ ವಿಮಾನ ಅಪಘಾತದಲ್ಲಿ ಯಾರಾದ್ರೂ ಜೀವಂತವಾಗಿರುವ ಭರವಸೆ ಬಹಳ ಕಡಿಮೆಯಾಗಿದೆ.

ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶಿಸಿದ್ದಾರೆ. ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ ಈ ಬೋಯಿಂಗ್ 737-800 ವಿಮಾನವು ಸೋಮವಾರ ಮಧ್ಯಾಹ್ನ ಗುವಾಂಗ್‌ಕ್ಸಿಯಲ್ಲಿ ಪತನಗೊಂಡಿತ್ತು. ಕುನ್ಮಿಂಗ್‌ನಿಂದ ಟೇಕ್ ಆಫ್ ಆಗಿದ್ದ ಈ ವಿಮಾನ ಚೀನಾದ ಕೈಗಾರಿಕಾ ನಗರವಾದ ಗುವಾಂಗ್‌ಝೌಗೆ ತೆರಳುತ್ತಿತ್ತು. ಫ್ಲೈಟ್ ರಾಡಾರ್‌ನಿಂದ ಪಡೆದ ಮಾಹಿತಿಯ ಪ್ರಕಾರ, ಅಪಘಾತಕ್ಕೀಡಾದ ವಿಮಾನವು ಸ್ಥಳೀಯ ಕಾಲಮಾನ ಮಧ್ಯಾಹ್ನ 1:11ಕ್ಕೆ ಕುನ್ಮಿಂಗ್ ವಿಮಾನ ನಿಲ್ದಾಣದಿಂದ ಹೊರಟಿತ್ತು. ಮಧ್ಯಾಹ್ನ 2:20ಕ್ಕೆ 29,100 ಅಡಿ ಎತ್ತರದಲ್ಲಿ ಹಾರುತ್ತಿತ್ತು. ಅದೇ ಸಮಯದಲ್ಲಿ ಅಂದರೆ 2.20ರ ಸುಮಾರಿಗೆ ರಾಡಾರ್ ನಿಂದ ಸಂಪರ್ಕ ಕಡಿತಗೊಂಡಿದೆ.

ತಕ್ಷಣವೇ ಚೀನಾದ ಪರಿಹಾರ ಮತ್ತು ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿತು. ಚೀನಾದ ಸ್ಟೇಟ್ ಬ್ರಾಡ್‌ಕಾಸ್ಟರ್ ಸಿಸಿಟಿವಿ ವರದಿಯ ಪ್ರಕಾರ, ವಿಮಾನದಲ್ಲಿದ್ದ 132 ಪ್ರಯಾಣಿಕರು ಹಾಗೂ ಸಿಬ್ಬಂದಿ ಪೈಕಿ ಯಾರೂ ಜೀವಂತವಾಗಿ ಪತ್ತೆಯಾಗಿಲ್ಲ ಎಂದು ಹೇಳಿದೆ.

ಅಪಘಾತದ ಬಳಿಕ ವಿಮಾನ ಹಾಗೂ ಪರ್ವತ ಪ್ರದೇಶದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಎಷ್ಟು ದೊಡ್ಡದಾಗಿದೆ ಎಂದರೆ ಅದು ನಾಸಾ ಉಪಗ್ರಹಗಳ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಸಿಸಿಟಿವಿ ಚಿತ್ರಗಳ ಪ್ರಕಾರ, ಘಟನೆಯ ಸ್ಥಳದಲ್ಲಿ ಅವಶೇಷಗಳನ್ನು ಕಾಣಬಹುದು, ಆದರೆ ವಿಮಾನದಲ್ಲಿದ್ದ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸಲಾಗಿಲ್ಲ. ಮತ್ತು ಯಾರೂ ಜೀವಂತವಾಗಿ ಇರುವ ಬಗ್ಗೆಯೂ ಮಾಹಿತಿ ಇಲ್ಲ.

ಅಪಘಾತ ಸಂಭವಿಸಿದ ತಕ್ಷಣ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸ್ಥಳಕ್ಕೆ ಪರಿಹಾರ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಲು ಸೂಚನೆ ನೀಡಿದರು. ಅಪಘಾತದ ಬಗ್ಗೆ ಜಿನ್‌ಪಿಂಗ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಪಘಾತದ ಕಾರಣವನ್ನು ತನಿಖೆ ಮಾಡಲು ಮತ್ತು ನಾಗರಿಕ ವಿಮಾನಯಾನ ವಲಯದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲು ಅವರು ನಿರ್ದೇಶನ ನೀಡಿದರು. ಬೋಯಿಂಗ್ 737-800 ಅನ್ನು ಸುರಕ್ಷಿತ ವಿಮಾನವೆಂದು ಪರಿಗಣಿಸಲಾಗಿದೆ. ಚೀನಾದ ನಾಗರಿಕ ವಿಮಾನಯಾನ ಇಲಾಖೆಯ ನೇತೃತ್ವದ ತನಿಖೆಯಲ್ಲಿ ನಮ್ಮ ತಾಂತ್ರಿಕ ತಜ್ಞರು ಸಹಾಯ ಮಾಡಲು ಸಿದ್ಧರಾಗಿದ್ದಾರೆ ಎಂದು ಏರೋಸ್ಪೇಸ್ ಸಂಸ್ಥೆ ಹೇಳಿದೆ.

Share