Connect with us


      
ಕರ್ನಾಟಕ

ಪಿಎಂ ಕಿಸಾನ್ ಕರ್ನಾಟಕ: ವರ್ಷದ ಎರಡನೇ ಕಂತಿನ ನೆರವು- 1007.18 ಕೋಟಿ ರೂ. ಬಿಡುಗಡೆ

Kumara Raitha

Published

on

ಬೆಂಗಳೂರು: ಜನವರಿ 1 (ಯು.ಎನ್.ಐ.)  ಪಿಎಂ ಕಿಸಾನ್ ಕರ್ನಾಟಕ ಯೋಜನೆಯಡಿ ಪಿಎಂ-ಕಿಸಾನ್ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ವಾರ್ಷಿಕ 4 ಸಾವಿರ ರೂ. ನೆರವು ನೀಡುವ ಯೋಜನೆಯಡಿ ಈ ಆರ್ಥಿಕ ವರ್ಷದ ಎರಡನೇ ಕಂತಿನ ನೆರವಿಗಾಗಿ ರಾಜ್ಯ ಸರ್ಕಾರ 1007.18 ಕೋಟಿ ರೂ. ಬಿಡುಗಡೆ ಮಾಡಿದ್ದು, ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತಿನ ನೆರವು ಬಿಡುಗಡೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಂದು ರಾಜ್ಯದ 34.26 ಲಕ್ಷ ರೈತರಿಗೆ 685.28 ಕೋಟಿ ರೂ. ನೆರವು ಬಿಡುಗಡೆ ಮಾಡಲಾಗಿದೆ.

ಈ ವರ್ಚುವಲ್ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿದ್ದರು. ರಾಜ್ಯದಲ್ಲಿ ಒಟ್ಟು 54.52 ಲಕ್ಷ ರೈತರು ಈ ವರೆಗೆ ಕನಿಷ್ಠ ಒಂದು ಕಂತಿನ ನೆರವನ್ನು ಪಡೆದಿದ್ದಾರೆ.

ಈ ಯೋಜನೆಯಡಿ ಕೇಂದ್ರ ಸರ್ಕಾರವು ಒಟ್ಟು 8022.69 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರವು 2850.54 ಕೋಟಿ ಬಿಡುಗಡೆ ಮಾಡಿದೆ.

ಸಾಧ್ಯವಾದಷ್ಟು, ಈ ಯೋಜನೆಯಡಿ ಎಲ್ಲ ಪಾವತಿಗಳನ್ನು ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಮಾಡಬೇಕೆಂದು ಭಾರತ ಸರ್ಕಾರ ಬಯಸುತ್ತದೆ. ಎಲ್ಲಾ ರಾಜ್ಯಗಳ ಪೈಕಿ, ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೇಕಡಾವಾರು ಆಧಾರ್ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಭಾರತ ಸರ್ಕಾರದಿಂದಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ಸಹ ದೊರೆತಿರುತ್ತದೆ.

ಇದೇ ಸಂದರ್ಭದಲ್ಲಿ ರಾಜ್ಯದ 30 ರೈತ ಉತ್ಪಾದಕ ಸಂಸ್ಥೆಗಳಿಗೆ 1.21 ಕೋಟಿ ರೂ. ನೆರವು ಬಿಡುಗಡೆ ಮಾಡಲಾಯಿತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ , ಕೃಷಿ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share