Connect with us


      




ಕರ್ನಾಟಕ

ಅತಿ ದೊಡ್ಡ ಕೇಕ್ ಪ್ರದರ್ಶನ ಸಿದ್ಧತೆ

Kumara Raitha

Published

on

ಬೆಂಗಳೂರು ಡಿಸೆಂಬರ್ 15 (ಯು.ಎನ್.ಐ.)  ಕ್ರಿಸ್ ಮಸ್ ಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಏಷ್ಯಾದ ಅತಿ ದೊಡ್ಡ ಕೇಕ್ ಪ್ರದರ್ಶನಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

ಈ ಬಾರಿ ಹತ್ತಾರು ವಿಶೇಷ ಆಕರ್ಷಣೆಗಳೊಂದಿಗೆ ಮಕ್ಕಳನ್ನು ಕೈ ಬೀಸಿ ಕರೆಯಲು ಸೇಂಟ್ ಜೋಸೆಫ್ಸ್ ಶಾಲಾ ಆವರಣದಲ್ಲಿ ಪೂರ್ವ ತಯಾರಿ ಆರಂಭಿಸಲಾಗಿದೆ. 10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಕೇಕ್‍ನ ಮಾದರಿಗಳು ಅನಾವರಣಗೊಳಲಿವೆ.
ಡಿ.17ರಿಂದ ಜ.2ರವರೆಗೆ 47ನೇ ಕೇಕ್ ಶೋ ನಡೆಯಲಿದೆ. ಶುಗರ್ ಸ್ಕಲ್ಟ್ ಅಕಾಡೆಮಿ ಹಾಗೂ ಬಾಣಸಿಗರಾದ ಸ್ಯಾಮಿ ಜೆ. ರಾಮಚಂದ್ರನ್ ಅವರ ವಿದ್ಯಾರ್ಥಿಗಳ ತಂಡ ಸತತ 4 ತಿಂಗಳು ಶ್ರಮಪಟ್ಟು 21 ಬಗೆಯ ಕೇಕ್‍ನ ವಿನ್ಯಾಸಗಳನ್ನು ತಯಾರಿಸಿದ್ದಾರೆ.
ಜಗತ್ತನ್ನು ಬೆಳಗಿಸುವ ಸ್ವಾತಂತ್ರ್ಯದ ದ್ಯೋತಕವಾದ ಸ್ಟ್ಯಾಚ್ಯು ಆಫ್ ಲಿಬಿರ್ಟಿ, ಡಿಸ್ನಿ ಪ್ರಿನ್ಸೆಸ್, ವಿಂಟೇಜ್ ಕೇಕ್, ದಿ ಲಿಟಲ್ ಮೆರ್ಮೇಯ್ಡ್ 4ನೇ ಡಿಸ್ನಿ ರಾಜಕುಮಾರಿ ಮತ್ತು ಮೊದಲ ಮತ್ಸ್ಯಕನ್ಯೆ, ಸ್ಪಿಯರ್ ಟವರ್ ಕೇಕ್, ಶ್ಯಾಂಡಲಿಯರ್ ವೆಡ್ಡಿಂಗ್ ಕೇಕ್, ಪೆಂಗ್ವಿನ್ಸ್ ಆಫ್ ಮೆಡಗಾಸ್ಕರ್, ಜೀನಿ ಆಫ್ ದಿ ಲ್ಯಾಂಪ್, ಗೇಟ್ ವೇ ಆಫ್ ಡ್ರೀಮ್ ಲ್ಯಾಂಡ್ ವೆಡ್ಡಿಂಗ್ ಕೇಕ್, ಆಲಿಸ್ ಇನ್ ವಂಡರ್ ಲ್ಯಾಂಡ್, ಕ್ಲಾಸಿಕ್ ಜಂಗಲ್ ಬುಕ್, ಮಿನಿಯನ್ಸ್ ಟೇಕಿಂಗ್ ಸೆಲ್ಫಿ, ಆಂಟಿಕ್ ಫ್ಲವರ್ ವಾಸ್, ರಿವರ್ಸ್ ಪಿರಮಿಡ್ ವೆಡ್ಡಿಂಗ್ ಕೇಕ್, ಪ್ರಿನ್ಸೆಸ್ ಮಿನಿಯೇಚರ್ ಪೇಂಟಿಂಗ್, ಸ್ನೋ ಮ್ಯಾನ್ ಹೀಗೆ 21 ಕೇಕ್‍ನ ಮಾದರಿಗಳು ಈ ಬಾರಿಯ ಪ್ರದರ್ಶನದಲ್ಲಿರಲಿವೆ.

ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಒಂದು ಬಾರಿಗೆ 100 ರಿಂದ 150 ಜನರನ್ನು ಮಾತ್ರ ಒಳಗಡೆ ಬಿಡಲಾಗುವುದು. ಒಳ ಹೋದವರು ನೋಡಿಕೊಂಡು ಹೊರ ಹೋದ ಬಳಿಕ ಇತರರನ್ನು ಒಳ ಬಿಡಲಾಗುವುದು. ಕೇಕ್ ಪ್ರದರ್ಶನದ ಜತೆಗೆ ಹಲವು ಮಾರಾಟ ಮಳಿಗೆಗಳನ್ನೂ ತೆರೆಯಲಾಗುತ್ತಿದೆ ಎಂದು ಹೇಳಲಾಗಿದೆ.
ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಈ ಕೇಕ್ ಪ್ರದರ್ಶನ ಏರ್ಪಡಿಸಲಾಗಿದೆ. ಎಂದಿನಂತೆ ಮಕ್ಕಳನ್ನು ರಂಜಿಸುವ ವಿಶೇಷ ಪ್ರದರ್ಶನ ಇದಾಗಿದೆ.
ಸ್ಥಳ: ಸೇಂಟ್ ಜೋಸೆಫ್ ಶಾಲಾ ಮೈದಾನ, ಯುಬಿಸಿಟಿ ಎದುರು. ಸಮಯ: ಪ್ರತಿದಿನ ಬೆಳಗ್ಗೆ 11 ರಿಂದ ರಾತ್ರಿ 9ರವರೆಗೆ ನಡೆಯಲಿದೆ.

Share