Connect with us


      




ದೇಶ

ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು – ಸಚಿವ ಪ್ರಲ್ಹಾದ್‌ ಜೋಶಿ ಸ್ವಾಗತ

Iranna Anchatageri

Published

on

ಹೊಸದಿಲ್ಲಿ: ಜೂನ್ 22 (ಯು.ಎನ್.ಐ.) ಅತಿ ಕುತೂಹಲ ಮೂಡಿಸಿದ ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟ ಅಚ್ಚರಿಯ ಅಭ್ಯರ್ಥಿ ಆಯ್ಕೆಯನ್ನ ಮಾಡಿದೆ.

ಜುಲೈನಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಮುಂದಿನ ರಾಷ್ಟ್ರಪತಿಯ ಆಯ್ಕೆ ನಡೆಯಬೇಕಿದ್ದು, ಇದಕ್ಕೆ ಈಗಾಗಲೇ ವಿಪಕ್ಷಗಳು ಮಾಜಿ ಕೇಂದ್ರ ಸಚಿವ, ಟಿಎಂಸಿ ಧುರೀಣ ಯಶವಂತ್‌ ಸಿನ್ಹಾ ಅವರ ಹೆಸರನ್ನು ಅಂತಿಮಗೊಳಿಸಿವೆ. ಇತ್ತ ಎನ್‌ಡಿಎ ಮೈತ್ರಿಕೂಟ ಮಂಗಳವಾರ ಸಭೆ ಸೇರಿದ್ದು, ಸಚಿವರಾಗಿ, ಜಾರ್ಖಂಡ್‌ ರಾಜ್ಯಪಾಲರಾಗಿ ಅನುಭವ ಹೊಂದಿದ ದ್ರೌಪದಿ ಮುರ್ಮು ಅವರನ್ನು ಅಚ್ಚರಿಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ಬುಡಕಟ್ಟು ಸಮುದಾಯದಿಂದ ಬಂದ ದ್ರೌಪದಿ ಮುರ್ಮು ಅವರು ಒಡಿಶಾ ಮೂಲದ ಪ್ರಸಿದ್ಧ ಬುಡಕಟ್ಟು ನಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಸಚಿವರಾಗಿ ಸಮರ್ಥ ಆಡಳಿತ ನಡೆಸಿದವರು. ರಾಜ್ಯಪಾಲ ಸ್ಥಾನದಲ್ಲಿದ್ದಾಗಲೂ ಎಲ್ಲ ಪಕ್ಷಗಳ ವಿಶ್ವಾಸ ಸಂಪಾದಿಸಿ, ಅತ್ಯುತ್ತಮ ಕಾರ್ಯವೈಖರಿ ನಡೆಸಿದ ಹಿರಿಮೆ ಇವರ ಹೆಸರಲ್ಲಿದೆ.

ದ್ರೌಪದಿ ಮುರ್ಮು ಅವರ ಆಯ್ಕೆಯನ್ನು ಬಿಜೆಪಿ ಸೇರಿದಂತೆ ಎನ್‌ಡಿಎ ಪಕ್ಷಗಳ ಎಲ್ಲ ನಾಯಕರೂ ಸ್ವಾಗತಿಸಿದ್ದಾರೆ. ರಾಮನಾಥ ಕೋವಿಂದ್‌ ಅವರ ಬಳಿಕ ರಾಷ್ಟ್ರಪತಿ ಸ್ಥಾನವನ್ನು ದ್ರೌಪದಿ ಅವರು ಸಮರ್ಥವಾಗಿ ತುಂಬಲಿದ್ದಾರೆ ಎಂಬ ವಿಶ್ವಾಸ ಹೊಂದಲಾಗಿದೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದು, ಅವರೊಬ್ಬ ಶ್ರೇಷ್ಠ ರಾಷ್ಟ್ರಪತಿಯಾಗುವ ವಿಶ್ವಾಸವಿದೆ. ಅವರು ಬಡವರಿಗಾಗಿ, ತುಳಿತಕ್ಕೆ ಒಳಗಾದವರ ಏಳ್ಗೆಗೆ, ಸಬಲೀಕರಣಕ್ಕೆ ಇಡೀ ಜೀವನ ಮೀಸಲಿಟ್ಟವರು. ದ್ರೌಪದಿ ಅವರ ಜೀವನ ಲಕ್ಷಾಂತರ ಮಂದಿ ವಿಶೇಷವಾಗಿ ಬಡತನವನ್ನು, ಕಷ್ಟಗಳನ್ನು ಅನುಭವಿಸಿದವರಿಗೆ ಆದರ್ಶವಾಗಲಿದೆ. ನೀತಿ ವಿಚಾರಗಳಲ್ಲಿ ಅವರ ತಿಳಿವಳಿಕೆ ಮತ್ತು ಸಹಾನುಭೂತಿ ಸ್ವಭಾವ ನಮ್ಮ ದೇಶಕ್ಕೆ ಹೆಚ್ಚಿನ ಪ್ರಯೋಜನ ನೀಡಲಿದೆ ಎಂದು ಮೋದಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ದ್ರೌಪದಿ ಅವರ ಆಯ್ಕೆಯನ್ನು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ಸಚಿವರಾದ ಪ್ರಲ್ಹಾದ್‌ ಜೋಶಿಯವರೂ ಸ್ವಾಗತಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದು ಒಡಿಶಾದ ಆದಿವಾಸಿ ನಾಯಕಿ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದು, ಈ ನಿರ್ಧಾರವನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಇದು ವಿಭಿನ್ನ ಹಿನ್ನೆಲೆಯ ಜನರಿಗೆ ಸರ್ಕಾರ ಸಮಾನ ಅವಕಾಶಗಳನ್ನು ನೀಡುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

ಯಾರಿವರು ದ್ರೌಪದಿ ಮುರ್ಮು?

ದ್ರೌಪದಿ ಅವರು 1958 ಜೂ.20ರಂದು ಒಡಿಶಾದ ಮಯೂರ್‌ ಭಂಜ್‌ನಲ್ಲಿ ಜನಿಸಿದ್ದಾರೆ. 1997ರಲ್ಲಿ ರಾಯ್‌ರಂಗ್‌ಪುರ್‌ ನಗರ ಪಂಚಾಯತ್‌ನ ಕೌನ್ಸಿಲರ್‌ ಆಗಿ ಆಯ್ಕೆಯಾದ ಇವ್ರು, ಭಾರತೀಯ ಜನತಾ ಪಾರ್ಟಿಯ ಪರಿಶಿಷ್ಟ ಜನಾಂಗ ಮೋರ್ಚಾದ ಉಪಾಧ್ಯಕ್ಷರಾಗಿದ್ರು. ಬಳಿಕ ಶಾಸಕರಾಗಿ ಆಯ್ಕೆಯಾಗಿದ್ದು,  ಬಿಜೆಪಿ, ಬಿಜು ಜನತಾದಳ ಸಮ್ಮಿಶ್ರ ಸರ್ಕಾರದ ವೇಳೆ ವಾಣಿಜ್ಯ ಮತ್ತು ಸಾರಿಗೆ ಸಚಿವರಾಗಿ ಮತ್ತು ಮೀನುಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅತ್ಯುತ್ತಮ ಶಾಸಕರಾಗಿದ್ದಕ್ಕೆ ನೀಲಕಂಠ ಪ್ರಶಸ್ತಿಯನ್ನ 2007ರಲ್ಲಿ ಪಡೆದುಕೊಂಡಿದ್ದಾರೆ.

2015ರಲ್ಲಿ ಜಾರ್ಖಂಡ್‌ ರಾಜ್ಯಪಾಲರಾಗಿ ನಿಯುಕ್ತರಾಗಿದ್ದು 2021ರವರೆಗೆ ಸೇವೆ ಸಲ್ಲಿಸಿದ್ದಾರೆ.

64 ವರ್ಷದ ದ್ರೌಪದಿ ಮುರ್ಮು ಅವರು ಬಾಲ್ಯದಲ್ಲಿ ಶಿಕ್ಷಣಕ್ಕೆ ಅತ್ಯಂತ ಕಷ್ಟಪಟ್ಟಿದ್ದು, ತೀವ್ರ ಬಡತನ ಕಷ್ಟದಿಂದಲೇ ಮೇಲೆ ಬಂದವರು. ಅವರು ಶ್ಯಾಮ್‌ ಚರಣ್‌ ಮುರ್ಮು ಎಂಬವರನ್ನು ವಿವಾಹವಾಗಿದ್ದು ಮೂವರು ಮಕ್ಕಳನ್ನು ಹೊಂದಿದ್ದರು. ಇವರಲ್ಲಿ ಪತಿ ಮತ್ತು ಇಬ್ಬರು ಗಂಡುಮಕ್ಕಳನ್ನು ಕಳೆದುಕೊಂಡಿದ್ದು, ಈಗ ಪುತ್ರಿ ಇದ್ದಾರೆ.

ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಅವರು ಆಯ್ಕೆಯಾಗಿದ್ದಲ್ಲಿ ಆದಿವಾಸಿ ಜನಾಂಗದಿಂದ ಬಂದ ಮೊದಲ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ. ಅಲ್ಲದೇ ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ. ಒಡಿಶಾದಿಂದ ಆಯ್ಕೆಯಾಗಿರುವ ಮೊದಲ ರಾಷ್ಟ್ರಪತಿ ಎಂಬ ಅಭಿದಾನಕ್ಕೂ ಪಾತ್ರರಾಗಲಿದ್ದಾರೆ.

ಹಾಗೆ ನೋಡಿದರೆ, ಹಲವು ಪ್ರಥಮಗಳನ್ನು ದ್ರೌಪದಿ ಅವರು ಮಾಡಿದ್ದಾರೆ. ಜಾರ್ಖಂಡ್ ನ ರಾಜ್ಯಪಾಲರಾಗಿ ಅವಧಿಯನ್ನು ಸಂಪೂರ್ಣಗೊಳಿಸಿದ ಒಡಿಶಾದ ಮೊದಲ ಆದಿವಾಸಿ ಮಹಿಳೆಯಾಗಿದ್ದಾರೆ. ಶ್ರೀ ಅರಬಿಂದೋ ಇಂಟಗ್ರಲ್‌ ಎಜುಕೇಶನ್‌ ಸೆಂಟರ್‌ನಲ್ಲಿ ಇತಿಹಾಸ ಮತ್ತು ಸಾಮಾಜಿಕ ಸೇವೆ ಬಗ್ಗೆ ಅಧ್ಯಾಪಕರಾಗಿಯೂ ಇದ್ದ ದ್ರೌಪದಿ ಅವರು ಒಂದು ರೂಪಾಯಿ ಸಂಬಳವನ್ನೂ ಪಡೆಯದೇ ನಿಸ್ವಾರ್ಥ ಮನೋಭಾವದಿಂದ ಪಾಠ ಮಾಡಿದ್ದಾರೆ. ಆಡಳಿತದ ವಿಚಾರದಲ್ಲಿ, ರಾಜಕೀಯ ವಿಚಾರದಲ್ಲಿ ಅತ್ಯುತ್ತಮ ಅರಿವನ್ನು ಹೊಂದಿದ್ದಾರೆ.

Share