Connect with us


      
ದೇಶ

ಜನರಲ್ ನರವಣೆ ಹೊಸ ಸಿಡಿಎಸ್? ಸಿಸಿಎಸ್ ಸಭೆ ನಡೆಸಿದ ಪ್ರಧಾನಿ ಮೋದಿ

Iranna Anchatageri

Published

on

ಹೊಸದಿಲ್ಲಿ, ಡಿ 9 (ಯುಎನ್ಐ) ಡಿಸೆಂಬರ್ 8 ದೇಶಕ್ಕೆ ದೊಡ್ಡ ಆಘಾತ ಕೊಟ್ಟ ದಿನ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರ ಸಾವಿನ ಸುದ್ದಿ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ದೇಶದ ಭದ್ರತೆ ಅನ್ನೋದು ಅತ್ಯಂತ ಮಹತ್ವದ ಜವಾಬ್ದಾರಿ. ಈಗ ಬಿಪಿಎನ್ ರಾವತ್ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಬಿಪಿನ್ ರಾವತ್ ಅವರ ಸಾವಿನ ಸುದ್ದಿಯಿಂದ ಸರ್ಕಾರ ಮತ್ತು ದೇಶ ಎರಡೂ ಆಘಾತಕ್ಕೊಳಗಾಗಿದೆ. ಆದರೆ ದೇಶದ ಭದ್ರತೆಯ ಪ್ರಶ್ನೆಯಾಗಿದೆ. ಈ ಅಪಘಾತದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ 6:30 ರ ಸುಮಾರಿಗೆ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆಸಿದರು. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಮೂಲಗಳ ಪ್ರಕಾರ, ಬಿಪಿನ್ ರಾವತ್ ಬದಲಿಗೆ ಹೊಸ ಸಿಡಿಎಸ್ ಹೆಸರನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಅಂತಾ ಮೂಲಗಳು ತಿಳಿಸಿವೆ. ಹಿರಿತನದ ಪ್ರಕಾರ, ಜನರಲ್ ಎಂ.ಎಂ.ನರವಾಣೆ ಅವರ ಹಕ್ಕು ಪ್ರಬಲವಾಗಿದೆ.

ರಕ್ಷಣಾ ತಜ್ಞ ಸುಶಾಂತ್ ಸರಿನ್ ಅವರ ಹೇಳಿಕೆ ಪ್ರಕಾರ, “ಮುಂದಿನ ರಕ್ಷಣಾ ಸಿಬ್ಬಂದಿಯಾಗಿ ಸರ್ಕಾರ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಸಾಧ್ಯತೆಯನ್ನು ಖಂಡಿತವಾಗಿ ವ್ಯಕ್ತಪಡಿಸಬಹುದು. ಈ ಹುದ್ದೆಯು ಎಷ್ಟು ಮಹತ್ವದ್ದಾಗಿದೆ ಎಂದರೆ ಹಿರಿಯ ಮತ್ತು ಅನುಭವಿ ಅಧಿಕಾರಿಯನ್ನು ಮಾತ್ರ ಇದಕ್ಕೆ ಆಯ್ಕೆ ಮಾಡಬಹುದು. ಈ ದೃಷ್ಟಿಕೋನದಿಂದ, ಮೂರು ಸೇನೆಗಳ ಮುಖ್ಯಸ್ಥರು, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಅದರ ಪ್ರಬಲ ಸ್ಪರ್ಧಿಗಳಾಗಿರುತ್ತಾರೆ” ಅಂತಾ ತಿಳಿಸಿದರು.

“ಯಾರನ್ನು ಆಯ್ಕೆ ಮಾಡಬೇಕೆಂಬುದರ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಆದರೆ ಸಾಧ್ಯತೆಗಳ ಆಧಾರದ ಮೇಲೆ, ಮೂರು ಸೇನಾ ಮುಖ್ಯಸ್ಥರಲ್ಲಿ ಅತ್ಯಂತ ಹಿರಿಯ ಮತ್ತು ಅನುಭವಿ ವ್ಯಕ್ತಿಯನ್ನು ಆಯ್ಕೆ ಮಾಡಬಹುದು ಎಂದು ಹೇಳಬಹುದು. ನೌಕಾಪಡೆಯ ಅಧಿಕಾರಿ ಅಡ್ಮಿರಲ್ ಕರಮ್ವೀರ್ ಸಿಂಗ್ ಈ ವಿಷಯದಲ್ಲಿ ಅತ್ಯಂತ ಕಿರಿಯರಾಗಿದ್ದಾರೆ.”

“ಸೇನಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಮುಕುಂದ್ ನರವಣೆ ಮತ್ತು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ. ಇವೆರಡರ ಅನುಭವ ಮತ್ತು ಹಿರಿತನವನ್ನು ನೋಡಿದರೆ ಎಂ.ಎಂ.ನರವಣೆಯವರು ಆಗುವ ಸಾಧ್ಯತೆ ಇದೆ ಎಂದು ತೋರುತ್ತದೆ. ನರವಣೆ ಅವರಿಗೆ 60 ವರ್ಷ. ಜನರಲ್ ಬಿಪಿನ್ ರಾವತ್ ನಂತರ ಅವರನ್ನು ಸೇನಾ ಮುಖ್ಯಸ್ಥರಾಗಿ  ನೇಮಿಸಬಹುದಾಗಿದೆ. ನರವಣೆ ಮಿಲಿಟರಿ ಯುದ್ಧದಲ್ಲಿ ದೊಡ್ಡ ಪರಿಣಿತಿ ಪಡೆದವರಾಗಿದ್ದಾರೆ” ಅಂತಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಎಂ.ಎಂ ನರವಣೆ ಯಾರು?

ಜನರಲ್ ನರವಣೆ ಪ್ರಸ್ತುತ ಸೇನಾ ಮುಖ್ಯಸ್ಥರಾಗಿದ್ದಾರೆ. ಇದಕ್ಕೂ ಮುನ್ನ ಅವರು ಸೇನೆಯ ಉತ್ತರ ಕಮಾಂಡ್ ನ ಮುಖ್ಯಸ್ಥರಾಗಿದ್ದರು. ಸೇನೆಯ 4 ದಶಕಗಳ ಅವಧಿಯಲ್ಲಿ ನರವಣೆ ಅವರು ಹಲವು ಸವಾಲಿನ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಕಾಶ್ಮೀರದಿಂದ ಹಿಡಿದು ಈಶಾನ್ಯ ರಾಜ್ಯಗಳಲ್ಲಿರುವ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ನರವಣೆ 1987 ರಲ್ಲಿ ಶ್ರೀಲಂಕಾದಲ್ಲಿ ನಡೆಸಲಾದ ಆಪರೇಷನ್ ಪವನ್‌ನಲ್ಲಿ ಶಾಂತಿ ಪಾಲನಾ ಪಡೆಯ ಭಾಗವಾಗಿದ್ದರು. ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಜನರಲ್ ಎಂಎಂ ನರವಣೆ ಅವರು ಸೆಪ್ಟೆಂಬರ್ 1 ರಂದು ಅಧಿಕಾರ ವಹಿಸಿಕೊಂಡರು.

ಎಂ ಎಂ ನರವಣೆ, ಸೇನಾ ಮುಖ್ಯಸ್ಥ

ನರವಣೆ ಅವರ ತಂದೆ ಕೂಡ ಮಾಜಿ ಸೈನಿಕ

ನರವಣೆ ಮಹಾರಾಷ್ಟ್ರದ ಪುಣೆಗೆ ಸೇರಿದವರಾಗಿದ್ದಾರೆ. ನರವಣೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ದೇಶ ಸೇವೆಗೆ ನೇಮಕಗೊಂಡರು. ಜೂನ್ 1980 ರಲ್ಲಿ ಸಿಖ್ ಲೈಟ್ ಇನ್‌ಫಾಂಟ್ರಿ ರೆಜಿಮೆಂಟ್‌ನ 7 ನೇ ಬೆಟಾಲಿಯನ್‌ಗೆ ನರವಣೆ ಸೇರ್ಪಡೆಯಾದರು. ನರವಣೆ ಅವರು ಅತ್ಯಂತ ಸವಾಲಿನ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರ ತಂದೆ ಮುಕುಂದ್ ನರವಾಣೆ ಅವರು ಭಾರತೀಯ ವಾಯುಪಡೆಯಿಂದ ನಿವೃತ್ತರಾಗಿದ್ದಾರೆ. ಅವರ ತಾಯಿ ಸುಧಾ ನರವಣೆ ಲೇಖಕಿ ಮತ್ತು ಸುದ್ದಿ ಪ್ರಸಾರಕರಾಗಿದ್ದರು. ಪುಣೆಯ ಆಲ್ ಇಂಡಿಯಾ ರೇಡಿಯೊದೊಂದಿಗೆ ಸಂಬಂಧ ಹೊಂದಿದ್ದ ನರವಣೆ ಅವರ ತಾಯಿ ಕಳೆದ ವರ್ಷವಷ್ಟೇ ತೀರಿಕೊಂಡರು. ಲೆಫ್ಟಿನೆಂಟ್ ಜನರಲ್ ನರವಣೆ ಅವರು ಪುಣೆಯ ಜ್ಞಾನ ಪ್ರಬೋಧಿನಿ ಪ್ರಾಶಾಲಾದಲ್ಲಿ ಅಧ್ಯಯನ ಮಾಡಿದ್ದಾರೆ. ಶಾಲಾ ದಿನಗಳಲ್ಲಿ ಚಿತ್ರಕಲೆ, ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದರು.

Share