Connect with us


      




ಶಿಕ್ಷಣ

ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಸಲು ಮೊದಲ ಆದ್ಯತೆ ನೀಡಿ: ಟಿ.ಎಸ್ ನಾಗಾಭರಣ ಅಭಿಮತ

Vanitha Jain

Published

on

ಬೆಂಗಳೂರು: ಜನೆವರಿ 07(ಯು.ಎನ್.ಐ.) ಅಂಗನವಾಡಿ, ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸಲು ಮೊದಲ ಆದ್ಯತೆ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟರು.

ಪೂರ್ವ ಪ್ರಾಥಮಿಕ ಶಿಕ್ಷಣ, ಅಂಗನವಾಡಿ ಹಾಗೂ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾಷಾ ಶಿಕ್ಷಣದ ರೂಪುರೇಷೆಗಳ ಕುರಿತು ಸಚಿವ ಬಿ.ಸಿ. ನಾಗೇಶ್ ಅಧ್ಯಕ್ಷತೆಯಲ್ಲಿ ಸಮಗ್ರ ಶಿಕ್ಷಣ-ಕರ್ನಾಟಕ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಶುಕ್ರವಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾಷೆ ತಿಳಿಯದ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಮಗುವಿನ ಪರಿಸರ ಭಾಷೆಯ ಬದಲಿಗೆ ಅನ್ಯ ಭಾಷೆಯನ್ನು ಹೇರುವುದು ಸರಿಯಾದ ಕ್ರಮವಲ್ಲ. ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗೆ ರಾಜ್ಯ ಪರಿಸರದ ಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಮಕ್ಕಳು ನಮ್ಮ ನೆಲದ ಸಂಸ್ಕøತಿಯಿಂದ ಬೇರೆಡೆಗೆ ವಲಸೆ ಹೋಗುವುದು ತಪ್ಪುವುದರೊಂದಿಗೆ ಕನ್ನಡ ನಾಡು, ನುಡಿ ಸಂಸ್ಕøತಿ ಉಳಿಯಲಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕನ್ನಡ ಕಡ್ಡಾಯವಾಗಿರಬೇಕೇ ಹೊರತು ಆಯ್ಕೆಯಾಗಬಾರದು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು. ಸಿಬಿಎಸ್‍ಇ, ಐಸಿಎಸ್‍ಇ ಹಾಗೂ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಸರಕಾರಿ ಶಾಲೆಗಳಲ್ಲಿಯೂ ಇಂಗ್ಲಿಷ್ ಮಾಧ್ಯಮ ಅನುಷ್ಠಾನಕ್ಕೆ ಮುಂದಾಗಬಾರದು. ಸಿಬಿಎಸ್‍ಇ, ಐಸಿಎಸ್‍ಇ ಹಾಗೂ ಖಾಸಗಿ ಶಾಲೆಗಳಲ್ಲಿ ಕನ್ನಡದ ಪರಿಸರ ಸೃಷ್ಟಿಸುವ ರೀತಿಯಲ್ಲಿ ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು ಎಂದರು.

ಸರಕಾರಿ ಶಾಲೆಗಳ ಪಕ್ಕದಲ್ಲಿಯೇ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುವುದರಿಂದ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಲಿದೆ. ಇದರಿಂದ ಸರಕಾರಿ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುವಾಗ ಅದರ ಆಸುಪಾಸಿನಲ್ಲಿ ಯಾವುದೇ ಸರಕಾರಿ ಶಾಲೆಗಳು ಇಲ್ಲದಿರುವುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ಕಲಿಕಾ ಅಧಿನಿಯಮ-2015 ಅನ್ನು ಪಾಲಿಸುವ ನಿಟ್ಟಿನಲ್ಲಿ ಖಾಸಗಿ ಶಾಲೆಗಳಿಗೆ 2015ರಿಂದ ನೀಡಿರುವ ಎನ್‍ಓಸಿ ಆರ್‍ಆರ್‍ಗಳನ್ನು ಹಾಗೂ ಎನ್‍ಓಸಿಗಳನ್ನು ನೀಡಲು ಇರುವ ಮಾನದಂಡಗಳು ಮತ್ತು ಈಗ ಎನ್‍ಓಸಿಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಿರುವ ಶಾಲೆಗಳ ಪಟ್ಟಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಬೇಕು ಎಂದು ಹೇಳಿದರು.

ಎನ್‍ಇಪಿ ಪಠ್ಯಕ್ರಮಕ್ಕೆ ಅನುಗುಣವಾಗಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳನ್ನು ಕನ್ನಡಮಯವಾಗಿಸಲು ಸಂಬಂಧಪಟ್ಟವರೊಂದಿಗೆ ಸಭೆಗಳನ್ನು ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಆನ್‍ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿ, ಎನ್‍ಇಪಿ ಪ್ರಕಾರ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸುವ ಭರವಸೆ ನೀಡಿದರು. ಕನ್ನಡವನ್ನು ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಎಲ್ಲ ಖಾಸಗಿ ಶಾಲೆಗಳು ಕಲಿಸುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಸಿಡಿಎಸ್‍ನ ಜಂಟಿ ನಿರ್ದೇಶಕಿ ಡಾ. ಬಿ. ಉಷಾ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿ ಎ.ಆರ್. ರವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

Share