Connect with us


      
ಸಿನೆಮಾ

ಪಕ್ಕದ್ಮನೆ ಹುಡುಗನಂತಿದ್ದ ಪುನೀತ್

pratham

Published

on

ವಿಶೇಷ ಬರೆಹ: ಮ ಶ್ರೀ ಮುರಳಿ ಕೃಷ್ಣ

(ಯು.ಎನ್.ಐ.) ಅದು 1976ರ ಸಮಯ. ಕನ್ನಡ ಚಲನಚಿತ್ರರಂಗದ ದಿಗ್ಗಜ ಡಾ. ರಾಜಕುಮಾರ್ ರ ಕೊನೆಯ ಮಗ ಲೋಹಿತ್ ಗೆ ಆರು ತಿಂಗಳು. ಆಗಲೇ ತೆರೆಕಂಡ ‘ ಪ್ರೇಮದ ಕಾಣಿಕೆ’ ಚಲನಚಿತ್ರದಲ್ಲಿ ಪಾತ್ರ ವಹಿಸುವ ಮೂಲಕ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಲೋಹಿತ್ ಪುನೀತ್ ಆದರು.

ರಾಜಕುಮಾರ್ ತಮ್ಮ ಚಲನಚಿತ್ರಗಳ ಶೂಟಿಂಗಿಗೆ ಮಗಳು ಪೂರ್ಣಿಮ ಮತ್ತು ಪುನೀತ್ ರನ್ನು ಕರೆದುಕೊಂಡು ಹೋಗುತ್ತಿದ್ದರು. ಮುಂದೆ ಪುನೀತ್ ,’ ಸನಾದಿ ಅಪ್ಪಣ್ಣ ‘, ‘ ತಾಯಿಗೆ ತಕ್ಕ ಮಗ ‘, ‘ ವಸಂತ ಗೀತ ‘, ‘ ಭೂಮಿಗೆ ಬಂದ ಭಗವಂತ ‘, ‘ ಭಾಗ್ಯವಂತರು ‘ ಮುಂತಾದ ಚಲನಚಿತ್ರಗಳಲ್ಲಿ ನಟಿಸಿ ಒಬ್ಬ ಯಶಸ್ವಿ ಬಾಲನಟನಾಗಿ ಗುರುತಿಸಲ್ಪಟ್ಟರು.

ನಂತರ ಪುನೀತ್ ತಮ್ಮ ಹಾಡುಗಳ ಮೂಲಕ ಚಲನಚಿತ್ರ ಆಸಕ್ತರ ಗಮನವನ್ನು ‌ಸೆಳೆದರು. 1981-1989ರ ಅವಧಿಯಲ್ಲಿ ‘ ಭಾಗ್ಯವಂತರು ‘, ‘ ಚಲಿಸುವ ಮೋಡಗಳು ‘, ‘ ಭಕ್ತ ಪ್ರಹ್ಲಾದ ‘, ‘ ಎರಡು ನಕ್ಷತ್ರಗಳು ‘, ‘ ಯಾರಿವನು ‘, ‘ ಬೆಟ್ಟದ ಹೂವು ‘, ‘ ಪರಶುರಾಮ ‘ ಚಲನಚಿತ್ರಗಳಲ್ಲಿ ಫುನೀತ್ ಹಾಡಿದ ಹಾಡುಗಳು ಮುಂದೆ ಅವರು ಪ್ಲೇಬ್ಯಾಕ್ ಸಿಂಗರ್ ಕೂಡ ಆಗುವ ಕುರುಹುಗಳನ್ನು ಅನಾವರಣಗೊಳಿಸಿದವು. ‘ಭಾಗ್ಯವಂತರು ‘ ಚಲನಚಿತ್ರದ ‘ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ….’ ‘ ಚಲಿಸುವ ಮೋಡಗಳು,’ ಚಲನಚಿತ್ರದ ‘ ಕಾಣದಂತೆ‌ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು…..’, ‘ ಬೆಟ್ಟದ ಹೂವು ,’ ಚಲನಚಿತ್ರದ ‘ ಬಿಸಿಲೇ ಇರಲಿ ಮಳೆಯೇ ಬರಲಿ…’ ಮುಂತಾದ ಅವರು ಹಾಡಿದ ಹಾಡುಗಳು ಹಿಟ್ ಆದವು. ಬೇರೆ ನಟರು ಸೇರಿದಂತೆ, ಅವರು ಸುಮಾರು 95 ಚಲನಚಿತ್ರ ಗೀತೆಗಳನ್ನು ಹಾಡಿದರು.

1985ರಲ್ಲಿ ಕನ್ನಡ ಚಲನಚಿತ್ರರಂಗದ ನವಅಲೆಯ ಹರಿಕಾರರೆಂದೇ ಕೆಲವು ವಿಮರ್ಶಕರಿಂದ ಗುರುತಿಸಲ್ಪಡುವ ನಿರ್ದೇಶಕರಾದ ಎನ್ ಲಕ್ಷ್ಮಿನಾರಾಯಣ ‘ ಬೆಟ್ಟದ ಹೂವು ‘ ಕನ್ನಡ ಚಲನಚಿತ್ರವನ್ನು ನಿರ್ದೇಶಿಸಿದರು. ಈ ಮಕ್ಕಳ ಚಲನಚಿತ್ರಕ್ಕೆ ಪಾರ್ವತಮ್ಮ ರಾಜಕುಮಾರ್ ನಿರ್ಮಾಪಕಿಯಾಗಿದ್ದರು. ಶಿರ್ಲೆ ಎಲ್ ಅರೋರಾ ಅವರ ಕಾದಂಬರಿ ‘ ವಾಟ್ ದೆನ್ , ರಾಮನ್? ‘ ಆಧಾರಿತ ಈ ಚಲನಚಿತ್ರದಲ್ಲಿ ಪುನೀತ್, ರಾಮು ಎಂಬ ಬಾಲಕನ ಪಾತ್ರವನ್ನು ವಹಿಸಿದ್ದರು. ಇದಕ್ಕೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಲಭಿಸಿತು. ಆಗ ಅವರಿಗೆ ಹತ್ತು ವರ್ಷ ವಯಸ್ಸಾಗಿತ್ತು!

ನಂತರ ಅವರು 2002ರಲ್ಲಿ ‘ಅಪ್ಪು’ ಚಲನಚಿತ್ರದ ಮೂಲಕ ನಾಯಕನಟನಾಗಿ ಹಲವು‌ ಚಲನಚಿತ್ರಗಳಲ್ಲಿ ನಟಿಸಿದರು. ‘ ಅರಸು’, ‘ ಮಿಲನ ‘, ‘ ಜಾಕಿ ‘, ‘ ಪೃಥ್ವಿ ‘, ‘ ಪರಮಾತ್ಮ ‘ ಮುಂತಾದ ಚಲನಚಿತ್ರಗಳಲ್ಲಿನ ಅವರ ನಟನೆ ವೀಕ್ಷಕರ ಮತ್ತು ವಿಮರ್ಶಕರ ಪ್ರಶಂಸೆಗೆ ಪಾತ್ರವಾದವು. ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾದರು. ಆದರೆ ಅವರು ಒಬ್ಬ ಸೂಪರ್ ಸ್ಟಾರ್ ಆದುದರಿಂದ, ಅವರಿಗೆ ತಮ್ಮ ನಟನಾ ಕೌಶಲ್ಯಕ್ಕೆ ಸವಾಲನ್ನು ಒಡ್ಡುವ ಭಿನ್ನ ಪಾತ್ರಗಳನ್ನು ಮಾಡುವ ತಹತಹವಿತ್ತೇನೋ. ಆದುದರಿಂದ ಅವರು 2015ರಲ್ಲಿ ಬಿ ಎಂ ಗಿರಿರಾಜ್ ನಿರ್ದೇಶನದ ‘ ಮೈತ್ರಿ ‘ ಚಲನಚಿತ್ರದಲ್ಲಿ ನಟಿಸಿದರು. ಈ ಚಲನಚಿತ್ರದಲ್ಲಿ ಮಲಯಾಳಂ ಚಲನಚಿತ್ರರಂಗದ ಸೂಪರ್ಸ್ಟಾರ್ ಮೋಹನ್ ಲಾಲ್ ಕೂಡ ನಟಿಸಿದ್ದರು.

ಮುಖ್ಯವಾಹಿನಿಯ ಚಲನಚಿತ್ರಗಳ ಚೌಕಟ್ಟಿನ ಒಳಗೆಯೇ ಭಿನ್ನ ಕಥೆಗಳು, ನಿರೂಪಣೆಗಳು ಮತ್ತು ನವ ಪ್ರತಿಭೆಗಳಿಗೆ ಅವಕಾಶಗಳು ದೊರಕಲಿ ಎಂಬ ಸದುದ್ದೇಶದಿಂದ ಕೆಲವು ವರ್ಷಗಳ ಹಿಂದೆ ಪಿಆರ್ ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಶುರುಮಾಡಿದ್ದರು. ಈ ಸಂಸ್ಥೆಯಿಂದ ‘ ಕವಲುದಾರಿ’, ‘ಮಾಯಾಬಝಾರ್’, ‘ ಫ್ರೆಂಚ್ ಬಿರಿಯಾನಿ, ‘ಲಾ’ ಚಲನಚಿತ್ರಗಳು ತಯಾರಾದವು. ಕೊನೆಯ ಎರಡು ಚಲನಚಿತ್ರಗಳು ಕೋವಿಡ್ ಕಾರಣದಿಂದ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದವು. ಪಕ್ಕದ ತಮಿಳು ಚಲನಚಿತ್ರರಂಗದಲ್ಲಿ ಧನುಷ್, ವೆಟ್ರಿಮಾರನ್, ವಿಜಯ್ ಸೇತುಪತಿ ಮುಂತಾದವರು ಕೂಡ ಇಂತಹ ಪ್ರಯತ್ನಗಳಿಗೆ ಒತ್ತಾಸೆಯನ್ನು ನೀಡುತ್ತಿರುವುದು ಗಮನಾರ್ಹ ಸಂಗತಿ. ಒಬ್ಬ ಚಲನಚಿತ್ರ ರಸಿಕನಾಗಿ ನನಗೆ ಪುನೀತರ ಇಂತಹ ಪ್ರಯತ್ನಗಳು ಮೆಚ್ಚುಗೆಯಾಗಿದ್ದವು. ಅಲ್ಲದೆ, ನನಗಿರುವ ಮಾಹಿತಿಯ ಅನ್ವಯ ಅವರು ವಿಶ್ವ ಸಿನಿಮಾಗಳನ್ನು ವೀಕ್ಷಿಸುತ್ತಿದ್ದರು. ಇದು ಕೂಡ ಕನ್ನಡ ಚಲನಚಿತ್ರರಂಗದಲ್ಲಿ ಅವರು ಹೊಸ ಪ್ರಯತ್ನಗಳಿಗೆ ಉತ್ತೇಜನವನ್ನು ನೀಡುವಂತೆ ಪ್ರೇರೇಪಿಸಿರಬಹುದು. ಅವರು ಟಿವಿ ಆಂಕರಾಗಿಯೂ ಕೆಲಸ ಮಾಡಿದ್ದರು.

ಒಬ್ಬ ಸೂಪರ್ ಸ್ಟಾರ್, ಉತ್ತಮ ನಟ ಮುಂತಾದುವುಗಳನ್ನು ಮೀರಿ, ಪುನೀತ್ ಒಬ್ಬ ಮಾನವೀಯ ವ್ಯಕ್ತಿಯಾಗಿದ್ದರು. ಅನೇಕ ಸಮಾಜಮುಖಿ ಕೆಲಸಗಳಲ್ಲಿ ಸದ್ದುಗದ್ದಲವಿಲ್ಲದೆ ತೊಡಗಿಸಿಕೊಂಡಿದ್ದರು. ಪಕ್ಕದ್ಮನೆ ಹುಡುಗನಂತೆ, ಅಂತಸ್ತುಗಳನ್ನು ಪರಿಗಣಿಸದೇ ಎಲ್ಲರೊಡನೆ ಬೆರೆಯುತ್ತಿದ್ದರು.

ಪುನೀತರದು ಅಕಾಲಿಕ ಸಾವು. ನನ್ನ ಸಂತಾಪಗಳು.

ಬರೆದವರು :

ಮ ಶ್ರೀ ಮುರಳಿ ಕೃಷ್ಣ , ಬೆಂಗಳೂರು.

ಚಲನಚಿತ್ರ ವೀಕ್ಷಕರು ಮತ್ತು ವಿಮರ್ಶಕರು

Share