Connect with us


      
ದೇಶ

ಪಂಜಾಬ್‌ನ ನೂತನ ಸಚಿವ ಸಂಪುಟ: 10 ಶಾಸಕರು ಪ್ರಮಾಣ ವಚನ ಸ್ವೀಕಾರ

Iranna Anchatageri

Published

on

ಚಂಡೀಗಢ: ಮಾರ್ಚ್ 19 (ಯು.ಎನ್.ಐ.) ಪಂಜಾಬ್‌ನ ನೂತನ ಸಚಿವ ಸಂಪುಟ ಸದಸ್ಯರು ಇಂದು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) 10 ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಅವರ ಎಲ್ಲಾ ಶಾಸಕರು ಉಪಸ್ಥಿತರಿದ್ದರು.

ಹೊಸ ಮಂತ್ರಿಗಳಲ್ಲಿ ಹರ್ಪಾಲ್ ಸಿಂಗ್ ಚೀಮಾ (ದಿಡ್ಬಾ), ಡಾ. ಬಲ್ಜಿತ್ ಕೌರ್ (ಮಾಜಿ ಸಂಸದ ಪ್ರೊ. ಸಾಧು ಸಿಂಗ್ ಅವರ ಮಗಳು), ಹರ್ಭಜನ್ ಸಿಂಗ್ ಇಟಿಒ (ಜಾಂಡಿಯಾಲಾ), ವಿಜಯ್ ಸಿಂಗ್ಲಾ ( ಮಾನ್ಸಾ), ಲಾಲ್‌ಚಂದ್ ಕತರುಚಕ್ (ಭೋವಾ) ಗುರ್ಮೀತ್ ಸಿಂಗ್ ಮೀಟ್ ಹೇರ್ (ಯುವ ಮುಖ ಮತ್ತು ಎರಡನೇ ಬಾರಿಗೆ ಬರ್ನಾಲಾದಿಂದ ಗೆದ್ದಿದ್ದಾರೆ), ಕುಲದೀಪ್ ಸಿಂಗ್ ಧಲಿವಾಲ್ (ಅಜ್ನಾಲಾ), ಲಾಲ್‌ಜಿತ್ ಸಿಂಗ್ ಭುಲ್ಲರ್ (ಪಟ್ಟಿ), ಬ್ರಹ್ಮ್ ಶಂಕರ್ ಜಿಂಪಾ (ಹೊಶಿಯಾರ್‌ಪುರ್), ಹರ್ಜೋತ್ ಸಿಂಗ್ ಬೈನ್ಸ್ (ಕಿರಿಯ ಮತ್ತು ಆನಂದಪುರ ಸಾಹಿಬ್) ಸೇರಿದ್ದಾರೆ.

ಹತ್ತು ಸಚಿವರಲ್ಲಿ ಐವರು ಮಾಲ್ವಾ, ನಾಲ್ವರು ಮೀಸಲು ಸ್ಥಾನಗಳಿಂದ ಬಂದವರಾಗಿದ್ದರೆ, ನಾಲ್ವರು ಮಜಾ, ಒಬ್ಬರು ದೋಬಾ ಪ್ರದೇಶದವರಾಗಿದ್ದಾರೆ.

117 ವಿಧಾನಸಭಾ ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಬಂದಿದ್ದ ಎಎಪಿ ಈ ಬಾರಿ ಅಧಿಕಾರ ಹಿಡಿಯುತ್ತಾರೆ ಎಂದು ಯಾರೂ ಊಹಿಸಿರಿರಲಿಲ್ಲ. ಕಳೆದ ಚುನಾವಣೆಯಲ್ಲಿ ಎಎಪಿ 20 ಸ್ಥಾನಗಳನ್ನು ಪಡೆದಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿಯ ಪರಿಸ್ಥಿತಿ ಎಷ್ಟು ಕೆಟ್ಟದಾಗಿತ್ತೆಂದರೆ, ಭಗವಂತ್ ಮಾನ್ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಮಾತ್ರ ಗೆದ್ದು ಬಂದಿದ್ದರು.

ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಕಚ್ಚಾಟ ಆರಂಭವಾಗಿತ್ತು. ಅನೇಕ ಮಂತ್ರಿಗಳು ಮತ್ತು ಶಾಸಕರು ಸೇರಿಕೊಂಡು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ನಂತರ ಚರಂಜಿತ್ ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಅದಾದ ನಂತರ ಮುಖ್ಯಮಂತ್ರಿಯಾಗಬೇಕೆಂಬ ಹೆಬ್ಬಯಕೆ ಹೊಂದಿದ್ದವರ ವಾಸ್ತವಿಕತೆ ಬಯಲಿಗೆ ಬಂದಿತ್ತು.

ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ನವಜೋತ್ ಸಿಂಗ್ ಸಿಧು ಅವರು ಚುನಾವಣೆ ಮುಗಿಯುವವರೆಗೂ ತಮ್ಮ ಸರ್ಕಾರವನ್ನು ವಿರೋಧಿಸುತ್ತಲೇ ಇದ್ದರು. ಈ ಮೂಲಕ ಕಾಂಗ್ರೆಸ್ ನ ಆಂತರಿಕ ಕಚ್ಚಾಟದಿಂದ ಜನ ಭ್ರಮನಿರಸನಗೊಂಡರು. ಇದರೊಂದಿಗೆ ಪಂಜಾಬಿಗಳು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ನಲ್ಲಿ ನಂಬಿಕೆ ಇಡಲು ಪ್ರಾರಂಭಿಸಿದರು. ಚುನಾವಣೆಯಲ್ಲಿ ಎಎಪಿ ಎಲ್ಲಾ ಪಕ್ಷಗಳನ್ನು ಹಿಂದಿಕ್ಕಿ ವಿಜಯದ ಪತಾಕೆಯನ್ನು ಹಾರಿಸಿತು. ಅಕಾಲಿದಳ ಮೂರು, ಬಿಎಸ್‌ಪಿ ಒಂದು, ಬಿಜೆಪಿ ಎರಡು ಮತ್ತು ಕಾಂಗ್ರೆಸ್‌ ಹೆಣಗಾಡಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.

Share