Connect with us


      
ದೇಶ

ಇಂದು ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿ : ಇಂಡಿಯಾ-ರಷ್ಯಾ ಒಡಂಬಡಿಕೆ ಮೇಲೆ ಹದ್ದಿನಕಣ್ಣಿಟ್ಟ ಅಮೆರಿಕ

Iranna Anchatageri

Published

on

ಹೊಸದಿಲ್ಲಿ/ಮಾಸ್ಕೋ, ಡಿ 6 (ಯುಎನ್ಐ) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಂದು ದಿನದ ಭಾರತ ಪ್ರವಾಸಕ್ಕೆ ಆಗಮಿಸುತ್ತಿದ್ದಾರೆ. ಪುಟಿನ್ ಇಂದು ಬೆಳಗ್ಗೆ ಭಾರತ ತಲುಪಲಿದ್ದು, ಸಂಜೆ ತಡವಾಗಿ ಮಾಸ್ಕೋಗೆ ವಾಪಸ್ ಆಗಲಿದ್ದಾರೆ.

ಮೂಲಗಳ ಪ್ರಕಾರ, ಪುಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳು ಏರ್ಪಡಲಿವೆ. ಪುಟಿನ್ ಅವರ ಈ ಭೇಟಿಯ ಮೇಲೆ ಅಮೆರಿಕ ಕಣ್ಣಿಟ್ಟಿದ್ದು, ಭಾರತ ಮತ್ತು ರಷ್ಯಾ ಮೊದಲ ಬಾರಿಗೆ 2+2 ಮಾತುಕತೆ ನಡೆಸಲಿವೆ.

ಪುಟಿನ್ ಭೇಟಿಯಲ್ಲಿ, ವ್ಯಾಪಾರ, ಇಂಧನ, ಸಂಸ್ಕೃತಿ, ರಕ್ಷಣೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉಭಯ ದೇಶಗಳು ಸುಮಾರು 10 ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಭಾರತ ಹಾಗೂ ರಷ್ಯಾ ನಡುವಿನ ರಕ್ಷಣಾ ಕ್ಷೇತ್ರದ ಮೇಲೆ ವಿಶ್ವದ ಕಣ್ಣು ನೆಟ್ಟಿದ್ದು, ಈಗಾಗಲೇ ಅಮೆರಿಕ ಸ್ವಲ್ಪಮಟ್ಟಿಗೆ ಅಸಮಾಧಾನಗೊಂಡಿದೆ. ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ಇನ್ನೊಂದು ಅಮೇಥಿಯಲ್ಲಿ ಎಕೆ-203 ರೈಫಲ್‌ಗಳ ಉತ್ಪಾದನೆ ಬಗ್ಗೆ ಅಮೆರಿಕ ಅಸಮಾಧಾನ ಹೊಂದಿದೆ. ಏಳೂವರೆ ಲಕ್ಷ  ಎಕೆ-203 ರೈಫಲ್ ಗಳನ್ನು ಈ ಘಟಕದಲ್ಲಿ ಉತ್ಪಾದನೆ ಮಾಡಬೇಕಿದೆ. ವಿಶ್ವದಲ್ಲೇ ಮೊದಲ ಬಾರಿಗೆ, ಈ ರೈಫಲ್‌ಗಳನ್ನು ರಷ್ಯಾದ ಹೊರ ಭಾಗದಲ್ಲಿ ತಯಾರಿಸಲಾಗುತ್ತಿದೆ.

ಭಾರತದ ಮೇಲೆ ಅಮೆರಿಕದ ಒತ್ತಡ

ಭಾರತ ಮತ್ತು ರಷ್ಯಾ S-400 ಒಪ್ಪಂದ ಮಾಡಿಕೊಂಡಾಗ ಅಮೆರಿಕ ಸಿಟ್ಟಾಗಿತ್ತು. ಬೈಡನ್ ಸರ್ಕಾರ, ತಮ್ಮ ವಿಶೇಷ ಕಾಯ್ದೆಯನ್ನು ಬಳಸಿಕೊಂಡು ಭಾರತದ ಮೇಲೆ ನಿರ್ಬಂಧ ಹೇರುವ ಬೆದರಿಕೆಯೊಡ್ಡಿತ್ತು. ಆದ್ರೆ, ಈ ಬಗ್ಗೆ ಇನ್ನೂ ಅಮೆರಿಕದಲ್ಲಿ ಚರ್ಚೆ ಸಾಗುತ್ತಿದೆ. ಈ ಮಧ್ಯೆ ಎಸ್-400 ವ್ಯವಸ್ಥೆಯನ್ನು ಖರೀದಿಸಿರುವ ಟರ್ಕಿ ಮೇಲೆ ಅಮೆರಿಕ ಈಗಾಗಲೇ ದಿಗ್ಬಂಧನ ವಿಧಿಸಿದೆ. ಅಮೆರಿಕದ ಸವಾಲಿನ ಮಧ್ಯೆಯೂ ಭಾರತ ಎದೆಗುಂದಿಲ್ಲ. ರಷ್ಯಾದಿಂದ S-400ಗೆ ಸಂಬಂಧಿಸಿದ ಉಪಕರಣಗಳು ಭಾರತಕ್ಕೆ ಆಗಮಿಸುತ್ತಿವೆ. ಸದ್ಯ ಹೊಸ ವಿಚಾರ ಏನೆಂದರೆ, S-400 ಖರೀದಿ ಬೆನ್ನಲ್ಲೇ, ಮೋದಿ ಸರ್ಕಾರ ರಷ್ಯಾದಿಂದ S-500 ಖರೀದಿಗಾಗಿ ಒಪ್ಪಂದ ಮಾಡಿಕೊಳ್ಳಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಕ್ವಾಡ್ ನಲ್ಲಿ ಭಾರತ ಇರೋದು ರಷ್ಯಾಗೆ ಇಷ್ಟವಿಲ್ಲ

ಇದುವರೆಗೆ ಕೇವಲ ಮೂರು ದೇಶಗಳೊಂದಿಗೆ ಭಾರತ 2+2 ಮಾತುಕತೆ ನಡೆಸಿದೆ. ಕ್ವಾಡ್ ಪಾಲುದಾರ ರಾಷ್ಟ್ರಗಳಾಗಿರುವ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಹಲವು ಚರ್ಚೆಗಳು ನಡೆದಿವೆ. ಈ ಮಧ್ಯೆ ಭಾರತದ ಜೊತೆ ರಷ್ಯಾ 2+2 ಮಾತುಕತೆ ನಡೆಸುತ್ತಿರುವುದು ಅಮೆರಿಕಕ್ಕೆ ಸುತಾರಾಂ ಇಷ್ಟವಿಲ್ಲ. ಆದರೆ, ಭಾರತ ಮತ್ತು ರಷ್ಯಾ ಈಗಾಗಲೇ ಹಲವು ದಶಕಗಳಿಂದ ರಕ್ಷಣಾ ಪಾಲುದಾರ ರಾಷ್ಟ್ರಗಳಾಗಿವೆ. ಈ ಮಧ್ಯೆ ಭಾರತ ಕ್ವಾಡ್ ನ ಪಾಲುದಾರ ರಾಷ್ಟ್ರವಾಗಿರುವುದು ಪುಟಿನ್ ಗೆ ಇಷ್ಟವಿಲ್ಲ. ಇಂದು ಮೋದಿ ಹಾಗೂ ಪುಟೀನ್ ಭೇಟಿ ವೇಳೆ ಕ್ವಾಡ್ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ.

ಕೆಲವೇ ಗಂಟೆಗಳ ಕಾಲ ಪುಟಿನ್ ಭಾರತ ಭೇಟಿ

ಪುಟಿನ್ ಭಾರತಕ್ಕೆ ಬರುವುದು ಕೆಲವೇ ಗಂಟೆಗಳ ಕಾಲ ಎಂದು ಕೆಲವು ವರದಿಗಳು ಹೇಳುತ್ತವೆ. ಆದರೆ,  ಇದು ಸಣ್ಣ ಪ್ರವಾಸವಾದ್ರೂ ಪರವಾಗಿಲ್ಲ ಅಂತಾ ಎರಡೂ ರಾಷ್ಟ್ರಗಳ ವಿದೇಶಾಂಗ ಇಲಾಖೆಗಳು ಹೇಳುತ್ತಿವೆ. ಇಂಧನ ಕ್ಷೇತ್ರದಲ್ಲಿ ಪ್ರಸ್ತುತ ಉಭಯ ದೇಶಗಳ ನಡುವೆ $ 30 ಬಿಲಿಯನ್ ಹೂಡಿಕೆ ಇದೆ. 2025 ರ ವೇಳೆಗೆ ಇದನ್ನು $ 50 ಶತಕೋಟಿಗೆ ಹೆಚ್ಚಿಸುವ ಆಲೋಚನೆ ಕೂಡ ಇದೆ. 2019ರಲ್ಲಿ ಮೋದಿ ರಷ್ಯಾಕ್ಕೆ ಹೋದಾಗ ಚೆನ್ನೈ-ವ್ಲಾಡಿವೋಸ್ಟಾಕ್ ಮಧ್ಯದ 10 ಸಾವಿರದ 300 ಕಿಮೀ ಮಾರ್ಗದ ಬಗ್ಗೆ ಚರ್ಚೆ ಮಾಡಿದ್ದರು. ಈ ವಿಚಾರದ ಬಗ್ಗೆ ಒಪ್ಪಂದಗಳು ಏರ್ಪಟ್ಟರೆ, ಎರಡೂ ಕಡೆಯ ಹಡಗುಗಳು ಪರಸ್ಪರ ತಲುಪಲು 24 ರಿಂದ 40 ದಿನಗಳು ಕಡಿಮೆಯಾಗಲಿವೆ. ಕೋವಿಡ್ ಯುಗದಲ್ಲಿ ಪುಟಿನ್ ಅವರ ಎರಡನೇ ವಿದೇಶಿ ಪ್ರವಾಸ ಇದಾಗಿದೆ. ಅವರ ವಿದೇಶಾಂಗ ಮತ್ತು ರಕ್ಷಣಾ ಸಚಿವರು ಒಂದು ದಿನ ಮುಂಚಿತವಾಗಿ ಭಾರತಕ್ಕೆ ಆಗಮಿಸಿದ್ದಾರೆ.

Continue Reading
Share