Connect with us


      




ಕರ್ನಾಟಕ

ಭೂಮಾಫಿಯಾಗೆ ಆರ್‌.ಅಶೋಕ್‌ ರಕ್ಷಣೆ: ಎಎಪಿ

Iranna Anchatageri

Published

on

ಬೆಂಗಳೂರು: ಮಾರ್ಚ್ 29 (ಯು.ಎನ್.ಐ.) ಬೆಂಗಳೂರಿನ ಭೂಮಾಫಿಯಾಗೆ ಕಂದಾಯ ಸಚಿವ ಆರ್‌.ಅಶೋಕ್‌ ಬೆನ್ನೆಲುಬಾಗಿದ್ದು, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಆರೋಪಿಸಿದೆ.

ಪ್ರೆಸ್‌ಕ್ಲಬ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ಬೆಂಗಳೂರು ವಕೀಲರ ಘಟಕದ ಅಧ್ಯಕ್ಷ ಮಂಜುನಾಥ್‌ ಸ್ವಾಮಿ, “ಬೆಂಗಳೂರು ದಕ್ಷಿಣದ ಉಪವಿಭಾಗಾಧಿಕಾರಿ ಎಂ.ಜಿ.ಶಿವಣ್ಣ ಹಾಗೂ ತಹಸೀಲ್ದಾರ್‌ ಶಿವಪ್ಪ ಲಮಾಣಿಯವರು ಮುನಿರಾಜು ಹಾಗೂ ಇತರೆ ಭೂಗಳ್ಳರ ಜೊತೆಗೂಡಿ ಅಕ್ರಮ ಎಸಗಿದ್ದಾರೆ. ಕಾನೂನುಬಾಹಿರವಾಗಿ ಮನೆ ಹಾಗೂ ಮಳಿಗೆಗಳನ್ನು ಕೆಡವಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡತೋಗುರು ಗ್ರಾಮದ ಸರ್ವೇ ನಂಬರ್‌ 152/1ರಲ್ಲಿ ಈ ಘಟನೆ ನಡೆದಿದೆ. ಪ್ರಕರಣದ ಸಂತ್ರಸ್ತರು ಹೈಕೋರ್ಟ್‌ ಮೆಟ್ಟಿಲೇರಿದಾಗ, ಇಬ್ಬರು ಅಧಿಕಾರಿಗಳು ಅಕ್ರಮ ಎಸಗಿರುವುದು ಸಾಬೀತಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೈಕೋರ್ಟ್‌ ಆದೇಶ ನೀಡಿದೆ. ಆದರೆ ಕಂದಾಯ ಸಚಿವ ಆರ್‌.ಅಶೋಕ್‌ರವರ ಪ್ರಭಾವದಿಂದಾಗಿ ತಪ್ಪಿತಸ್ಥ ಅಧಿಕಾರಿಗಳಿಗೆ ಯಾವುದೇ ಶಿಕ್ಷೆಯಾಗಿಲ್ಲ” ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಮಾತನಾಡಿ, “ಆರ್‌.ಅಶೋಕ್‌ರವರು ಸಚಿವರಾದಾಗಿನಿಂದ ಬೆಂಗಳೂರಿನಲ್ಲಿ ಭೂಮಾಫಿಯಾ ಹಾವಳಿ ಜಾಸ್ತಿಯಾಗುತ್ತಿದೆ. ಅಕ್ರಮವಾಗಿ ಜಮೀನನ್ನು ವಶಪಡಿಸಿಕೊಳ್ಳುವುದು, ಬೆದರಿಕೆ ಒಡ್ಡಿ ಒಕ್ಕಲೆಬ್ಬಿಸುವುದು ಮುಂತಾದ ಅಕ್ರಮಗಳು ಎಗ್ಗಿಲ್ಲದೇ ಸಾಗುತ್ತಿವೆ. ಕಂದಾಯ ಇಲಾಖೆಯ ಅಧಿಕಾರಿಗಳೇ ಭೂಮಾಫಿಯಾಗೆ ಸಹಕಾರ ನೀಡುತ್ತಿದ್ದಾರೆ. ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಸಾಮಾನ್ಯ ಜನರು ಆತಂಕದಲ್ಲಿ ಬದುಕುವಂತಾಗಿದೆ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಕೀಲರಾದ ಕಾರ್ತಿಕೇಯ, ಗುರುಪ್ರಸಾದ್‌, ಸೆಂತಿಲ್‌ ಕುಮಾರ್‌, ತೇಜಸ್ವಿನಿ, ವರ್ಷಿಕಾ ಮತ್ತಿತರರು ಉಪಸ್ಥಿತರಿದ್ದರು.

Share