Connect with us


      
ದೇಶ

ಮಳೆ, ಹಿಮಪಾತದಿಂದ ಕಾಶ್ಮೀರ ಹೆದ್ದಾರಿ ಬಂದ್; ಸಂಚಾರ ಶುರುವಾಗಲು ಬೇಕಿದೆ 2 ದಿನ

Lakshmi Vijaya

Published

on

ಶ್ರೀನಗರ: ಜೂನ್ 22 (ಯು.ಎನ್.ಐ.) ಎನ್ ಹೆಚ್ 44 ನಲ್ಲಿ ಹಲವೆಡೆ ಭೂಕುಸಿತದಿಂದ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.  ರಸ್ತೆಯಲ್ಲಿ ಮತ್ತೆ ಸಂಚಾರ ಆರಂಭಕ್ಕೆ ಕನಿಷ್ಠ ಎರಡು ದಿನ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಭಾರೀ ಮಳೆಯ ನಂತರ ಭೂಕುಸಿತದಿಂದಾಗಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಪ್ರಮುಖ ರಸ್ತೆಗಳನ್ನು ಮುಚ್ಚಲಾಗಿದೆ. ಪವಿತ್ರ ಅಮರನಾಥ ಗುಹೆ ಸೇರಿದಂತೆ ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗ್ತಿದೆ.

ಉಧಂಪುರ ಜಿಲ್ಲೆಯ ಸಂರೋಲಿಯಲ್ಲಿ ಹೆದ್ದಾರಿಯುದ್ದಕ್ಕೂ, ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದಾಗಿ ರಸ್ತೆಯ ಹೆಚ್ಚಿನ ಭಾಗವು ಕೊಚ್ಚಿಹೋಗಿದೆ. ರಾಂಬನ್‌ನ ಪೀರಾದಲ್ಲಿ ಹೆದ್ದಾರಿಯ ಉದ್ದಕ್ಕೂ ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಹಾನಿಯಾಗಿದೆ.

ಅಲೆಮಾರಿ ಬಕರ್ವಾಲ್ ಕುಟುಂಬಗಳಿಗೆ ಪ್ರವಾಹವು ಹಲವಾರು ಸ್ಥಳಗಳಲ್ಲಿ ಅವರ ಜಾನುವಾರುಗಳು ಮತ್ತು ಆಶ್ರಯಗಳಿಗೆ ಹಾನಿಯನ್ನುಂಟುಮಾಡಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬಯಲು ಸೀಮೆಯ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನಿನ್ನೆ ಶ್ರೀನಗರದಲ್ಲಿ ಗರಿಷ್ಠ ತಾಪಮಾನ 15 ಡಿಗ್ರಿಗೆ ಕುಸಿದಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಜೂನ್‌ನಲ್ಲಿ ಅತ್ಯಂತ ಚಳಿಯ ದಿನವಾಗಿತ್ತು.

ಪವಿತ್ರ ಅಮರನಾಥ ಗುಹೆಯಲ್ಲಿ ಮತ್ತು ಗುಹೆಗೆ ಹೋಗುವ ಮಾರ್ಗದಲ್ಲಿ ಹಿಮಪಾತವಾಗಿದೆ. ವಾರ್ಷಿಕ ಯಾತ್ರೆಯು ಮುಂದಿನ ವಾರ ಜೂನ್ 30 ರಂದು ಪ್ರಾರಂಭವಾಗಲಿದೆ. ಗುಲ್ಮಾರ್ಗ್‌ನ ಅಫ್ರಾವತ್ ಬೆಟ್ಟಗಳಲ್ಲಿ 10 ಇಂಚುಗಳಷ್ಟು ಹಿಮಪಾತವು ದಾಖಲಾಗಿದೆ.  ಮಧ್ಯಾಹ್ನದ ನಂತರ, ಹವಾಮಾನ ಸುಧಾರಿಸಲು ಪ್ರಾರಂಭಿಸಿದ್ದು ನೀರಿನ ಮಟ್ಟವು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ

Share