Connect with us


      




ದೇಶ

ಶಾಲಾ ಸಮವಸ್ತ್ರ ಬದಲಾಯಿಸಲು ಹೊರಟ ರಾಜಸ್ಥಾನ ಸರ್ಕಾರ; ನಾಚಿಕೆಗೇಡಿನ ಕೆಲಸ ಎಂದ ಬಿಜೆಪಿ

Vanitha Jain

Published

on

ಜೈಪುರ, ಡಿಸೆಂಬರ್ 10(ಯು.ಎನ್..ಐ) ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರವು ಶಾಲಾ ವಿದ್ಯಾರ್ಥಿಗಳ ಸಮವಸ್ತ್ರ ಬದಲಾಯಿಸಲು ಮುಂದಾಗಿದ್ದು, ಈ ಮೂಲಕ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸಲು ಹೆಣೆದಿರುವ ತಂತ್ರ ಎಂದು ಬಿಜೆಪಿ ಹೇಳಿದೆ.

ಈ ಹಿಂದೆ ವಸುಂಧರೆ ರಾಜೆ ನೇತೃತ್ವದ ಬಿಜೆಪಿ ಸರ್ಕಾರವು 2017ರಲ್ಲಿ ಕಂದು ಬಣ್ಣದ ಸಮವಸ್ತ್ರವನ್ನು ಜಾರಿಗೆ ತಂದಿತ್ತು. ಆಗ ಕಾಂಗ್ರೆಸ್ ಸರ್ಕಾರವು ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮವಸ್ತ್ರವನ್ನು ಹೋಲುತ್ತದೆ ಎಂದು ಟೀಕಿಸಿದ್ದರು.

ಡಿಸೆಂಬರ್ 2018 ರಲ್ಲಿ ಅಧಿಕಾರಕ್ಕೆ ಬಂದ ಸುಮಾರು ಮೂರು ವರ್ಷಗಳ ನಂತರ, ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮುಂದಿನ ಶೈಕ್ಷಣಿಕ ವರ್ಷದಿಂದ ಸಮವಸ್ತ್ರದ ಬಣ್ಣಗಳನ್ನು ಪರಿಷ್ಕರಿಸಲು ಆದೇಶ ಹೊರಡಿಸಿದೆ.

ಡಿಸೆಂಬರ್ 8ರ ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ, ಹುಡುಗರಿಗೆ ಸರ್ಫ್ ನೀಲಿ ಶರ್ಟ್ ಮತ್ತು ಕಡು ಬೂದು ಬಣ್ಣದ ಪ್ಯಾಂಟ್ ಮತ್ತು ಹುಡುಗಿಯರಿಗೆ ಸರ್ಫ್ ಬ್ಲೂ ಕುರ್ತಾ ಅಥವಾ ಶರ್ಟ್, ಕಡು ಬೂದು ಬಣ್ಣದ ಸಲ್ವಾರ್ ಅಥವಾ ಸ್ಕರ್ಟ್ ಧರಿಸುತ್ತಾರೆ ಎಂದು ಹೇಳಿದೆ.

ಈ ಹಿಂದೆ ಸಮವಸ್ತ್ರ ಜಾರಿಗೆ ತರುವ ಮೊದಲು ಸರ್ಕಾರವು ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿತ್ತು. ತದ ನಂತರ ಸಮವಸ್ತ್ರದಲ್ಲಿ ಬದಲಾವಣೆ ತರಲಾಯಿತು. ಆದರೆ ಗೆಹ್ಲೋಟ್ ನೇತೃತ್ವದ ಸರ್ಕಾರ ಈ ಯಾವ ಕ್ರಮವನ್ನು ಅನುಸರಿಸದೆ ತನ್ನ ನಿರ್ಣಯದಂತೆ ಮುಂದುವರೆಯುತ್ತಿದೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ಕರೆದ ಮಾಜಿ ಶಿಕ್ಷಣ ಸಚಿವ ವಾಸುದೇವ್ ದೇವನಾನಿ, ಇದು ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಮಾಡುತ್ತಿರುವ ಕೆಲಸ ಎಂದು ಹೇಳಿದರು.

ಸರ್ಕಾರದ ಈ ನಿರ್ಧಾರದಿಂದ 98 ಲಕ್ಷ ಪೋಷಕರ ಮೇಲೆ ಹೊರೆಬೀಳಲಿದೆ. ಅಲ್ಲದೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಶಿಕ್ಷಣ ಮಟ್ಟ ಹದಗೆಡುತ್ತಿದೆ. ಆದರೆ, ಸರ್ಕಾರದ ಗಮನ ಮಾತ್ರ ಸೈಕಲ್, ಸಮವಸ್ತ್ರ ಮತ್ತು ಪಠ್ಯಕ್ರಮದ ಬದಲಾವಣೆಯತ್ತ ಮಾತ್ರ ಕೇಂದ್ರೀಕೃತವಾಗಿದೆ” ಎಂದು ದೂರಿದರು.

Share