Connect with us


      
ಬೆಂಗಳೂರು

ಪುತ್ರಿ ಸಹಿತ ಧರಣಿಗೆ ಮುಂದಾದ ರಾಮಲಿಂಗಾರೆಡ್ಡಿ

UNI Kannada

Published

on

CONGRESS RAMLINGAREDDI

ಬೆಂಗಳೂರು,ಜನೆವರಿ.07 (ಯು.ಎನ್.ಐ.)ಬಿಜೆಪಿ ಸರ್ಕಾರದ ಅನುದಾನ ತಾರತಮ್ಯವನ್ನು ಖಂಡಿಸುತ್ತಲೇ ಬಂದಿರುವ ಬಿಟಿಎಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಪುತ್ರಿ ಜಯನಗರ ಕೈ ಶಾಸಕಿ ಸೌಮ್ಯಾರೆಡ್ಡಿ ಸಹಿತ ಪ್ರತಿಭಟನೆಗಿಳಿಯುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

ಬಿಜೆಪಿ ಸರ್ಕಾರ ಪಕ್ಷದ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ಅಭಿವೃದ್ಧಿಗೆ ಮಾತ್ರ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿದ್ದು,ಕಾಂಗ್ರೆಸ್ ಜೆಡಿಎಸ್ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಲೇಯಿದೆ.ಹಿಂದೆ ಅನುದಾನ ತಾರತಮ್ಯ ವಿರೋಧಿಸಿ ಆಗಿನ ಸಿಎಂ ಯಡಿಯೂರಪ್ಪ ನಿವಾಸ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಎಚ್ಚರಿಸಿ ಪ್ರತಿಭಟನೆ ಹಿಂಪಡೆದಿದ್ದರು. ಸ್ವಲ್ಪ ದಿನಗಳಲ್ಲಿಯೇ ಯಡಿಯೂರಪ್ಪ ರಾಮನಗರ,ಚನ್ನಪಟ್ಟಣ ಸೇರಿದಂತೆ ಇನ್ನೂ ಕೆಲವು ಕ್ಷೇತ್ರಗಳಿಗೆ ಅನುದಾನ ಹೆಚ್ಚಿಸಿದ್ದರು.ಇದೇ ರೀತಿ ಹಿಂದೆ ಒಮ್ಮೆ ರಾಮಲಿಂಗಾರೆಡ್ಡಿ ಕೂಡ ಪ್ರತಿಭಟಿಸಿದ್ದರು.ಇದೀಗ ಮತ್ತೆ ಪುತ್ರಿ ಸಹಿತ ಸರ್ಕಾರದ ತಾರತಮ್ಯ ವಿರೋಧಿಸಿ ಸಿಎಂ ಬೊಮ್ಮಾಯಿ ನಿವಾಸದ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ , ಬಿಜೆಪಿ ಸರ್ಕಾರ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದೆ. ಒಂದೊಂದು ರೀತಿ ಅನುದಾನ ಕೊಟ್ಟಿದ್ದಾರೆ.9 ಕಾಂಗ್ರೆಸ್ ಶಾಸಕರಿಗೆ 248 ಕೋಟಿ ರೂ. ಕೊಟ್ಟಿದ್ದರೆ, 15 ಬಿಜೆಪಿ ಶಾಸಕರಿಗೆ 1100 ಕೋಟಿ ರೂ. ಹಾಗೂ ಒಬ್ಬ ಜೆಡಿಎಸ್ ಶಾಸಕರಿಗೆ 125 ಕೋಟಿ ರೂ. ಕೊಡಲಾಗಿದೆ. ಆದರೆ, ಬಿಟಿಎಂ ಹಾಗೂ ಜಯನಗರ ಕ್ಷೇತ್ರಕ್ಕೆ ನಯಾ ಪೈಸೆ ಕೊಟ್ಟಿಲ್ಲ.

ಈ ಸಂಬಂಧ ಪಾಲಿಕೆ ಮುಖ್ಯ ಆಯುಕ್ತ ಹಾಗೂ ಆಡಳಿತಾಧಿಕಾರಿಯನ್ನು ಭೇಟಿ ನೀಡಿ ಮಾತನಾಡಿದ್ದೇನೆ. ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಯನಗರ ಶಾಸಕಿ ಪುತ್ರಿ ಸೌಮ್ಯಾ ರೆಡ್ಡಿ ಪ್ರತಿಭಟನೆ ಮಾಡುತ್ತೇವೆ. ಸೋಮವಾರ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟಿಸುತ್ತೇವೆ.ಆಗಲೂ ಸಮಸ್ಯೆ ಬಗೆಹರಿಸಿಲ್ಲವಾದರೆ, ಬುಧವಾರದಂದು ಸಿಎಂ ಮನೆ ಮುಂದೆ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮಳೆ ಬಿದ್ದಾಗ ಸಿಎಂ ಸಿಟಿ ರೌಂಡ್ಸ್ ಮಾಡಿದ್ದರು. ಮಳೆ ಬಂದರೆ 100 ಕಡೆ ನೀರು ನಿಲ್ಲುತ್ತದೆ. ಅಪಾರ್ಟ್​ಮೆಂಟ್​ಗಳಿಗೆ ನೀರು ನುಗ್ಗಿತ್ತು. 1500 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಬೆಂಗಳೂರು ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದರು.ಆದರೆ ಸಿಎಂಗೆ ಬರೀ ಬಿಜೆಪಿ ಶಾಸಕರು ಮಾತ್ರ ಕಣ್ಣಿಗೆ ಕಾಣುತ್ತಾರೆ.ಅವರ ಕ್ಷೇತ್ರಗಳಿಗೆ ಮಾತ್ರ ಅನುದಾನ ನೀಡುತ್ತಿದ್ದಾರೆ. ತಮ್ಮ ಮತ ಕ್ಷೇತ್ರದ ಸಮಸ್ಯೆ ಬಗ್ಗೆ ಪತ್ರ ಬರೆದಿದ್ದೆ. ಈಗ 1500 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. 298 ಕಾಮಗಾರಿಗಳಿಗೆ ಅವಕಾಶ ಕೊಟ್ಟಿದ್ದಾರೆ. 1479 ಕೋಟಿಯಷ್ಟು ಕೆಲಸ ನೀಡಿದ್ದಾರೆ. ಬಿಟಿಎಂ, ಜಯನಗರಕ್ಕೆ ಒಂದು ಪೈಸೆ ಕೊಟ್ಟಿಲ್ಲ. ನಮ್ಮ ಕ್ಷೇತ್ರಗಳಲ್ಲಿನ ಜನರ ಮನೆಗೆ ಮಳೆ ನೀರು ನುಗ್ಗಿದೆ, ರಸ್ತೆ, ಬ್ರಿಡ್ಜ್ ಹಾಳಾಗಿದೆ.

ಇನ್ನು ಒಂದೂವರೆ ವರ್ಷ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ರಾಮಲಿಂಗಾರೆಡ್ಡಿ,ಆಗ ನಾವು ಇದೇ ರೀತಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಕಾಗುತ್ತದೆಂದು ಪ್ರತಿಕಾರದ ಎಚ್ಚರಿಕೆ ನೀಡಿದರು.

Share