Published
6 months agoon
By
Vanitha Jainಮುಂಬೈ, ಡಿಸೆಂಬರ್ 8, (ಯು.ಎನ್.ಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೋದರ (ಬಡ್ಡಿದರ) ದಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆ ಮಾಡದೆ ಪ್ರಸ್ತುತ ದರವನ್ನು ಮುಂದುವರೆಸುವ ಮೂಲಕ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೋದರಲ್ಲಿ ಯಾವುದೇ ಬದಲಾವಣೆಗಳನ್ನು ಕೈಗೊಳ್ಳದೇ ಇರುವಿಕೆಯನ್ನೇ ಮುಂದುವರೆಸಿರುವುದು ಇದು ಒಂಭತ್ತನೇ ಬಾರಿ.
ಈಗ ಶೇ 4ರ ಬಡ್ಡಿದರವನ್ನೇ ಮುಂದುವರೆಸುವುದಾಗಿ ಆರ್ಬಿಐ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ಬುಧವಾರ ನಿರ್ಧರಿಸಲಾಗಿದೆ. ಕೊರೋನಾ ವೈರಸ್ ಹೊಸ ರೂಪಾಂತರ ತಳಿ ಓಮೈಕ್ರಾನ್ ಕಾರಣ ಮುಂದಿನ ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಯಥಾಸ್ಥಿತಿಯನ್ನು ನಿಲುವನ್ನು ಮುಂದುವರಿಸಲು ನಿರ್ಣಯಿಸಲಾಗಿದೆ.
ಎಂಪಿಸಿ ಬೆಂಚ್ಮಾರ್ಕ್ ಮರುಖರೀದಿ (ರೆಪೋ) ದರವನ್ನು ಶೇಕಡಾ 4ರಷ್ಟು ಇರಿಸಿಕೊಳ್ಳಲು ನಿರ್ಧರಿಸಿದೆ ಎಂದು ದ್ವೈ-ಮಾಸಿಕ ಹಣಕಾಸು ನೀತಿ ವರದಿಯನ್ನು ಸಲ್ಲಿಸುವ ವೇಳೆ ದಾಸ್ ಈ ಮಾಹಿತಿ ತಿಳಿಸಿದರು.
ಚಿಲ್ಲರೆ ಹಣದುಬ್ಬರವು ಹೆಚ್ಚಿದ ಇಂಧನ ಮತ್ತು ಖಾದ್ಯ ತೈಲ ಬೆಲೆಗಳ ಕಾರಣ ಸೆಪ್ಟೆಂಬರ್ನಲ್ಲಿ ಶೇಕಡಾ 4.35 ರಿಂದ ಅಕ್ಟೋಬರ್ನಲ್ಲಿ ಶೇಕಡಾ 4.48 ಕ್ಕೆ ಏರಿತ್ತು.