Connect with us


      
ಕ್ರೀಡೆ

ಧೋನಿ ದಾಖಲೆ ಮುರಿದ ರಿಷಬ್ ಪಂತ್!

Iranna Anchatageri

Published

on

ಜೋಹಾನ್ಸ್ ಬರ್ಗ್, ಜನೆವರಿ 05 (ಯು.ಎನ್.ಐ.) ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಬ್ ಪಂತ್ ಬ್ಯಾಟ್ ನಿಂದ ರನ್ ಮಾಡದೇ ಇರಬಹುದು. ಆದರೆ, ಸ್ಟಂಪ್ ಗಳ ಹಿಂದೆ ನಿಂತು ಅದ್ಭುತ ಪ್ರದರ್ಶನ ಮಾಡಿದ್ದಾರೆ. ಭಾರತ ತಂಡದ ವಿಕೆಟ್ ಕೀಪರ್ ಗಳ ಪೈಕಿ ದೆಹಲಿಯ ಪಂತ್ ಅತ್ಯಂತ ವೇಗವಾಗಿ 100 ಕ್ಯಾಚ್ ಗಳನ್ನು ಪಡೆದ ಆಟಗಾರನಾಗಿದ್ದಾರೆ. ಇದು ಭಾರತ ತಂಡದ ಪಾಲಿಗೆ ಹೊಸ ದಾಖಲೆಯಾಗಿದೆ.

ಜೋಹಾನ್ಸ್‌ಬರ್ಗ್ ಟೆಸ್ಟ್‌ನ ಎರಡನೇ ದಿನದಂದು, ಆಫ್ರಿಕನ್ ಇನ್ನಿಂಗ್ಸ್‌ನ ಕೊನೆಯ ಕ್ಯಾಚ್ ಅನ್ನು ತೆಗೆದುಕೊಂಡ ತಕ್ಷಣ ಪಂತ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 100 ಕ್ಯಾಚ್‌ಗಳನ್ನು ಪೂರ್ಣಗೊಳಿಸಿದರು. ವಿಕೆಟ್ ಹಿಂದೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ವಿಕೆಟ್ ಕೀಪರ್ ಆಗಿದ್ದಾರೆ. ಪಂತ್ ಗಿಂತ ಮೊದಲು ಮಹೇಂದ್ರ ಸಿಂಗ್ ಧೋನಿ, ಸೈಯದ್ ಕಿರ್ಮಾನಿ ಮತ್ತು ಕಿರಣ್ ಮೋರೆ ಮಾತ್ರ ಈ ಪಟ್ಟಿಯಲ್ಲಿ ಇದ್ದರು.

ರಿಷಬ್ ಪಂತ್ 26 ಪಂದ್ಯಗಳಲ್ಲಿ ಅತ್ಯಂತ ವೇಗವಾಗಿ 100 ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದಾರೆ. ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅದ್ಭುತ ಸಾಧನೆಯಾಗಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 100 ಕ್ಯಾಚ್‌ಗಳನ್ನು ಹಿಡಿಯಲು 36 ಟೆಸ್ಟ್‌ಗಳನ್ನು ತೆಗೆದುಕೊಂಡಿದ್ದರು. ಧೋನಿ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 256 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇನ್ನು ಉಳಿದಂತೆ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ 160, ಕಿರಣ್ ಮೋರೆ ಟೆಸ್ಟ್ ಕ್ರಿಕೆಟ್‌ನಲ್ಲಿ 110 ಕ್ಯಾಚ್‌ಗಳನ್ನು ಪಡೆದುಕೊಂಡಿದ್ದಾರೆ. ಪಂತ್ ತಮ್ಮ 26ನೇ ಟೆಸ್ಟ್ ಪಂದ್ಯದಲ್ಲಿ ಕ್ಯಾಚ್‌ಗಳ ಶತಕವನ್ನು ಗಳಿಸಿದ್ದಾರೆ. ಈ ದಾಖಲೆಯನ್ನು ವಿಶ್ವ ಕ್ರಿಕೆಟ್ ಗೆ ಹೋಲಿಕೆ ಮಾಡಿದರೆ, ಪಂತ್ ಟೆಸ್ಟ್‌ನಲ್ಲಿ 100 ಕ್ಯಾಚ್‌ಗಳನ್ನು ಪಡೆದ 42 ನೇ ವಿಕೆಟ್‌ಕೀಪರ್ ಆಗಿದ್ದಾರೆ.

Share