Connect with us


      




ವಿದೇಶ

ಪಾಕ್‌ನಲ್ಲಿ ಅವಿಶ್ವಾಸ ತಿರಸ್ಕರಿಸಲು ಬಳಸಿದ್ದು 5ನೇ ವಿಧಿ: ಏನಿದರ ಮಹತ್ವ?

Iranna Anchatageri

Published

on

ಇಸ್ಲಾಮಾಬಾದ್; ಏಪ್ರಿಲ್ 03 (ಯು.ಎನ್.ಐ.) ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟು ಬಗೆಹರಿಯುವಂತೆ ಕಾಣುತ್ತಿಲ್ಲ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ. ಡೆಪ್ಯೂಟಿ ಸ್ಪೀಕರ್ ಪ್ರಸ್ತಾವನೆಯನ್ನು ತಿರಸ್ಕರಿಸಿ, ಇದು ಅಸಾಂವಿಧಾನಿಕ ಎಂದು ಹೇಳಿದರು. ನಿರ್ಣಯವನ್ನು ರದ್ದುಗೊಳಿಸುವುದಕ್ಕೂ ಮೊದಲು ಮಾತನಾಡಿದ ಸಚಿವ ಫವಾದ್ ಚೌಧರಿ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಸ್ತಾಪಿತ ನಿರ್ಣಯ ವಿದೇಶಿ ಪಿತೂರಿ ಆಗಿದೆ. ಇದನ್ನು ಡೆಪ್ಯುಟಿ ಸ್ಪೀಕರ್ ವಜಾಗೊಳಿಸಬೇಕೆಂದು ಒತ್ತಾಯಿಸಿದರು. ಆರ್ಟಿಕಲ್ 5 (1) ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನು ದೇಶಕ್ಕೆ ನಿಷ್ಠೆ ತೋರುವುದು ಮೂಲಭೂತ ಕರ್ತವ್ಯವಾಗಿದೆ. ಸರ್ಕಾರವನ್ನು ಪದಚ್ಯುತಗೊಳಿಸುವ ಕ್ರಮದ ಹಿಂದೆ ವಿದೇಶಿ ಪಿತೂರಿ ಇದೆ ಎಂಬ ಪ್ರಧಾನಿಯ ನೀಡಿದ್ದ ಹೇಳಿಕೆಯನ್ನು ಸಚಿವ ಪವಾದ್ ಪುನರುಚ್ಚರಿಸಿದರು.

ಮುಂದುವರಿದ ಫವಾದ್ ಚೌಧರಿ, “ಮಾರ್ಚ್ 7 ರಂದು ನಮ್ಮ ಅಧಿಕೃತ ರಾಯಭಾರಿಯನ್ನು ಸಭೆಯೊಂದಕ್ಕೆ ಆಹ್ವಾನಿಸಲಾಗಿತ್ತು, ಇದರಲ್ಲಿ ಇತರೆ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಧಾನಿ ಇಮ್ರಾನ್ ವಿರುದ್ಧ ನಿರ್ಣಯ ಮಂಡಿಸಲಾಗುತ್ತಿದೆ ಎಂದು ಸಭೆಯಲ್ಲಿ ಚರ್ಚೆಯಾಯಿತು. ಪಾಕಿಸ್ತಾನದೊಂದಿಗಿನ ಸಂಬಂಧವು ಅವಿಶ್ವಾಸ ನಿರ್ಣಯದ ಯಶಸ್ಸಿನ ಮೇಲೆ ಅವಲಂಬಿತವಾಗಿದೆ ಎಂದು ವಿದೇಶಿ ಪ್ರತಿನಿಧಿಗಳು ಹೇಳಿದರು. ಪ್ರಸ್ತಾವನೆ ವಿಫಲವಾದರೆ, ಪಾಕಿಸ್ತಾನದ ಮುಂದಿನ ಹಾದಿ ತುಂಬಾ ಕಷ್ಟಕರವಾಗಲಿದೆ ಎಂದು ನಮ್ಮ ಪ್ರತಿನಿಧಿಗೆ ತಿಳಿಸಿದ್ದಾರೆ ಎಂಬ ವಿಚಾರವನ್ನು ಅಧಿವೇಶನದಲ್ಲಿ ಫವಾದ್ ಚೌಧರಿ ಹೇಳಿದರು. ಇದು ವಿದೇಶಿ ಸರ್ಕಾರದ ಪಿತೂರಿ ಆಗಿದೆ ಎಂದು ಚೌಧರಿ ಆರೋಪಿಸಿದರು. ಸಚಿವ ಚೌಧರಿ ಹೇಳಿಕೆ ಆಧಾರದ ಮೂಲಕ ಅವಿಶ್ವಾಸ ಗೊತ್ತುವಳಿಯನ್ನು ವಿದೇಶಿ ಷಡ್ಯಂತ್ರ ಎಂದು ಉಪಸಭಾಪತಿ ತಿರಸ್ಕರಿಸಿದರು.

ಪಾಕ್‌ ಸಂವಿಧಾನದ ವಿಧಿ 5ರಲ್ಲಿ ಏನು ಬರೆಯಲಾಗಿದೆ?
1. ರಾಜ್ಯ ನಿಷ್ಠೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ.
2. ಸಂವಿಧಾನ ಮತ್ತು ಕಾನೂನನ್ನು ಅನುಸರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅದು ಎಲ್ಲೇ ಇರಲಿ ಮತ್ತು ಅದು ಪಾಕಿಸ್ತಾನದೊಳಗಿನ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ.

ಸಂಸತ್ ವಿಸರ್ಜಿಸಲು ಇಮ್ರಾನ್ ಶಿಫಾರಸು
ಅವಿಶ್ವಾಸ ಗೊತ್ತುವಳಿ ತಿರಸ್ಕೃತಗೊಂಡ ಬಳಿಕ ಇಮ್ರಾನ್ ಖಾನ್ ದೇಶವನ್ನುದ್ದೇಶಿಸಿ ಮಾತನಾಡಿದರು. “ನಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವುದು ವಿದೇಶಿ ಷಡ್ಯಂತ್ರ ಎಂದರು. ಡೆಪ್ಯುಟಿ ಸ್ಪೀಕರ್ ನಿರ್ಧಾರದಿಂದ ದೇಶವೇ ಸಂತಸಗೊಂಡಿದೆ. ದೇಶದ ವಿರುದ್ಧದ ಷಡ್ಯಂತ್ರ ವಿಫಲವಾಗಿದೆ. ಷಡ್ಯಂತ್ರ ರೂಪಿಸಲು ಹಣ ತೆಗೆದುಕೊಂಡವರು ಅದನ್ನು ಜನರ ಒಳಿತಿಗಾಗಿ ವಿನಿಯೋಗಿಸಬೇಕು. ಚುನಾವಣೆಗೆ ಸಿದ್ಧರಾಗಿರುವಂತೆ ಪಾಕಿಸ್ತಾನದ ಜನತೆಗೆ ನಾನು ಮನವಿ ಮಾಡುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಜನರ ಬಳಿಗೆ ಹೋಗಬೇಕು. ಯಾರನ್ನು ಆಯ್ಕೆ ಮಾಡಬೇಕೆಂದು ಜನರು ನಿರ್ಧರಿಸಬೇಕು. ಭ್ರಷ್ಟರು ಮತ್ತು ಈಗಾಗಲೇ ಪ್ರಮಾಣ ವಚನಕ್ಕೆ ಬಟ್ಟೆ ಹೊಲಿಸಿ ರೆಡಿಯಾಗಿ ಕುಳಿತಿರುವವರಿಗೆ ಅಧಿಕಾರ ನೀಡಬಾರದು ಎಂದು ಇಮ್ರಾನ್ ಖಾನ್ ಹೇಳಿದರು.

ವಿದೇಶಿ ಶಕ್ತಿಗಳು ಜನರನ್ನು ಖರೀದಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಈ ಹಣ ವ್ಯರ್ಥವಾಗುತ್ತದೆ. ಯಾರು ಅಧಿಕಾರ ನಡೆಸಬೇಕು ಎಂಬುದನ್ನು ದೇಶದ ಜನ ನಿರ್ಧರಿಸಬೇಕು. ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆಯ ನಂತರ ಯಾವುದೇ ಪ್ರಕ್ರಿಯೆ ನಡೆಯಬಹುದು. 22 ಕೋಟಿ ಸಮುದಾಯದಿಂದ ಚುನಾಯಿತ ಸರ್ಕಾರವನ್ನು ಬೀಳಿಸಲು ಪ್ರಯತ್ನಗಳು ನಡೆಯುತ್ತಿವೆ. ಇಂದು ಆ ಸಂಚು ವಿಫಲವಾಗಿದೆ ಎಂದು ಇಮ್ರಾನ್ ಖಾನ್ ತಿಳಿಸಿದರು.

ಉಪಸಭಾಪತಿ ಹೇಳಿದ್ದೇನು?
ನ್ಯಾಶನಲ್ ಅಸೆಂಬ್ಲಿಯ ಅಧಿವೇಶನ ಪ್ರಾರಂಭವಾದ ತಕ್ಷಣ ಉಪ ಸ್ಪೀಕರ್ ಖಾಸಿಮ್ ಸೂರಿ ಅವರು ಅವಿಶ್ವಾಸ ನಿರ್ಣಯವು ಕಾನೂನಿನ ಪ್ರಕಾರ ನಡೆಯಬೇಕು. ಪಿತೂರಿಯ ಅಡಿಯಲ್ಲಿ ಪಾಕಿಸ್ತಾನದ ಸರ್ಕಾರವನ್ನು ಉರುಳಿಸುವ ಹಕ್ಕು ಯಾವುದೇ ವಿದೇಶಕ್ಕೆ ಇಲ್ಲ. ಕಾನೂನು ಸಚಿವರು ಸರಿಯಾದ ವಿಷಯ ಪ್ರಸ್ತಾಪಿಸಿ, ನಿಯಮಗಳ ವಿರುದ್ಧವಾಗಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿದೆ. ಹೀಗಾಗಿ ಅವಿಶ್ವಾಸ ಗೊತ್ತುವಳಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದರು.

Share