Connect with us


      
ಕರ್ನಾಟಕ

ಆರ್.ವಿ ವಿಶ್ವವಿದ್ಯಾಲಯ ಉದ್ಘಾಟನಾ ಸಮಾರಂಭ: ಶಿಕ್ಷಣದ ಅಭಿವೃದ್ಧಿಯ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣ: ಸಿಎಂ ಕರೆ

Bindushree Hosuru

Published

on

ಬೆಂಗಳೂರು: ಡಿ, 8 (ಯುಎನ್ಐ) ರಾಷ್ಟ್ರೀಯ ವಿದ್ಯಾಲಯದಂತಹ ಶಿಕ್ಷಣ ಸಂಸ್ಥೆ ಸರ್ಕಾರದೊಂದಿಗೆ ಕೈಜೋಡಿಸಿ ಸಮಾಜದ ಹಾಗೂ ರಾಜ್ಯದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.

ಅವರು ಇಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟಿನ ಆರ್.ವಿ.ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.

ಭಗವದ್ಗೀತೆಯಲ್ಲಿ ಒಂದು ಶ್ಲೋಕವನ್ನು ಉಲ್ಲೇಖಿಸಿ, ಮರದಲ್ಲಿ ಅಶ್ವಥದಂತೆ, ಮುನಿಗಳಲ್ಲಿ ನಾರದ, ಗಂಧರ್ವಗಳಲ್ಲಿ ಚಿತ್ರರಥ, ಸಿದ್ಧರಲ್ಲಿ ಕಪಿಲ ಮುನಿ ಇದ್ದಂತೆ ಆರ್.ವಿ.ಸಂಸ್ಥೆ ಶ್ರೇಷ್ಠರಲ್ಲಿ ಶ್ರೇಷ್ಠವಾದ ಸಂಸ್ಥೆ ಎಂದು ಬಣ್ಣಿಸಿದರು. ದೈವೀಕ ಆಲೋಚನೆ, ಅತ್ಯುತ್ತಮ ನಿರ್ವಹಣಾ ಸಾಮಥ್ರ್ಯ, ತತ್ವಾಧಾರಿತ ಆಡಳಿತ, ಆರ್ಥಿಕತೆಯಲ್ಲಿ ತತ್ವವನ್ನು ತರುವ ಕೆಲಸವನ್ನು ಆರ್.ವಿ ಕಳೆದ ಹಲವಾರು ದಶಕಗಳಿಂದ ಸಾಧಿಸಿದೆ. ಸಾಧಿಸಿ ತೋರಿಸಿದ ನಂತರ ಮಾತನಾಡುವ ಪರಂಪರೆಯನ್ನು ಸಂಸ್ಥೆ ಮುಂದುವರೆಸಿದೆ. ಸರ್ಕಾರಗಳು ಇಂತಹ ಹೆಚ್ಚಿನ ಸಾಧನೆ ಮಾಡಿರುವ, ಉತ್ತಮ ಭವಿಷ್ಯ ರೂಪಿಸುವ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರಬೇಕು. ಪ್ರಜಾಪ್ರಭುತ್ವದಲ್ಲಿ ದೇಶದ ಎಲ್ಲ ಪ್ರಜೆಗಳೂ ಭಾಗವಹಿಸುವಂತಾಗಬೇಕು. ತನ್ನ ಶ್ರಮ ಹಾಗೂ ಚಿಂತನೆಯಿಂದ ಆರ್.ವಿ.ಸಂಸ್ಥೆ ಶಿಕ್ಷಣದ ಅಭಿವೃದ್ಧಿಯಲ್ಲಿ ಭಾಗವಹಿಸುತ್ತಿದೆ. ಇಂತಹ ಸಂಸ್ಥೆಯೊಂದಿಗೆ ಸರ್ಕಾರ ಕೈಜೋಡಿಸಿದಾಗ ಅಭಿವೃದ್ಧಿಯ ಜೊತೆಗೆ ದೇಶದ ಭದ್ರ ಭವಿಷ್ಯದ ನಾಂದಿಯಾಗುತ್ತದೆ ಎಂದು ತಿಳಿಸಿದರು.

ಆರ್.ವಿ ಸಂಸ್ಥೆ, ಸಣ್ಣ ಶಾಲೆಯಿಂದ ಪ್ರಾರಂಭವಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ಲಕ್ಷಗಟ್ಟಲೆ ಜನ ಈ ಸಂಸ್ಥೆಗೆ ಕೊಡುಗೆ ನೀಡಿದ್ದಾರೆ. ಇಂದು ಈ ಸಂಸ್ಥೆಯನ್ನು ಕಟ್ಟಲು ಕೊಡುಗೆ ನೀಡಿದ ಎಲ್ಲರನ್ನು ಇಂದು ಸ್ಮರಿಸುವುದಾಗಿ ಹೇಳಿದರು.

ಮೇಧಾ ಶಕ್ತಿ:

ಶಿಕ್ಷಣ ಎನ್ನುವುದು ಮಾನವಕುಲಕ್ಕೆ ದೊರೆತ ಬಹುದೊಡ್ಡ ಕೊಡುಗೆ. ವೈಜ್ಞಾನಿಕ ಸಂಶೋಧನೆಗಳು ಕ್ರಿಯೆಗೆ ನೀಡುವ ಪ್ರತಿಕ್ರಿಯೆಗಳೇ. ಸಂಸ್ಥೆಗಳಿಗಿಂತ ಹೆಚ್ಚು ಸಾಧನೆ ಮಾಡಲು ವ್ಯಕ್ತಿಗಳಿಂದ ಸಾಧ್ಯ. ಅವರಿಗೆ ನಿರ್ದಿಷ್ಟವಾದ ಗುರಿ ಇರುತ್ತದೆ. ಅವರ ಮೇಧಾಶಕ್ತಿಯೂ ಅನಂತವಾದುದು. ಶೇ 80 ರಷ್ಟು ಮೇಧಾಶಕ್ತಿಯನ್ನು ಮಾನವ ಇನ್ನೂ ಬಳಕೆ ಮಾಡಬೇಕಿದೆ. ಈ ಮೇಧಾಶಕ್ತಿಯ ಬಳಕೆಯನ್ನು ಮಾಡುವ ಸವಾಲು, ಶಿಕ್ಷಣ ಸಂಸ್ಥೆಗಳ ಮುಂದಿದೆ ಎಂದರು.

ಆಚರಣೆ, ಸಮನ್ವಯ, ಚಾರಿತ್ರ್ಯವನ್ನು ರೂಢಿಸಬೇಕು
ಶಿಕ್ಷಣವನ್ನು ವಿಭಿನ್ನವಾಗಿ ನಿಭಾಯಿಸಬೇಕು. ಜ್ಞಾನದೊಂದಿಗೆ ತರ್ಕವೂ ಸೇರಿರುವ ಶಿಕ್ಷಣ ಭಾರತದಂತಹ ಅಭಿವೃದ್ಧಿಯಾಗುತ್ತಿರುವ ದೇಶಕ್ಕೆ ಅಗತ್ಯ. ಯಾಕೆ, ಏನು, ಎತ್ತು, ಎಲ್ಲಿ ಎಷ್ಟು ಪ್ರಶ್ನೆಗಳನ್ನು ಕೇಳುವಂತ ಹಕ್ಕು ವಿದ್ಯಾರ್ಥಿಗಳದ್ದು. ಪ್ರಶ್ನೆ ಕೇಳುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ತರ್ಕದ ಜೊತೆಗೆ ನೈತಿಕತೆಯೂ ಅಗತ್ಯ. ನೈತಿಕತೆಯ ಬಗ್ಗೆ ಮಾತನಾಡುವುದೇ ಇಂದು ಕಷ್ಟ ಎನಿಸುವ ಆಷಾಡಭೂತಿತನ ಸಮಾಜದಲ್ಲಿ ಇದೆ. ನಮ್ಮ ದೇಶದಲ್ಲಿ ಆಚಾರ್ಯರಿದ್ದಾರೆ- ಆಚರಣೆ ಇಲ್ಲ. ಸಂಘರ್ಷ ಇದೆ -ಸಮನ್ವಯ ಇಲ್ಲ. ಚರಿತ್ರೆ ಇದೆ- ಚಾರಿತ್ರ್ಯ ಇಲ್ಲ. ಇದನ್ನು ಜಾರಿಗೆ ತರಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನ ಮಾಡಬೇಕಿದೆ. ಒಳ್ಳೆ ಕೆಲಸವನ್ನು ಆತ್ಮಸಾಕ್ಷಿಯಿಂದ ಮಾಡಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.

ಬಡ ವಿದ್ಯಾರ್ಥಿಗೂ ಅತ್ಯುತ್ತಮ ತಾಂತ್ರಿಕ ಶಿಕ್ಷಣ ದೊರಕಬೇಕು:

ನಮ್ಮ ಸರ್ಕಾರ ತೆರೆದ ಮನದಿಂದ ಎಲ್ಲೆಡೆಯಿಂದ ಉತ್ತಮ ಸಲಹೆಗಳನ್ನು ಪಡೆಯಲು ಸಿದ್ಧವಿದೆ, ನಮಗೆ ಮುನ್ನೋಟವಿದೆ, ಜನರ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಬಗೆಹರಿಸಬೇಕು ಎನ್ನುವ ಚಿಂತನೆಯೂ ಇದೆ. 150 ಐಟಿಐ ಗಳನ್ನು ಅಭಿವೃದ್ಧಿಯನ್ನು ತಲಾ ಅಭಿವೃದ್ಧಿಗೆ 33 ಕೋಟಿ ರೂ.ಗಳನ್ನು ವೆಚ್ಚಮಾಡಿ ಅಭಿವೃದ್ಧಿಗೊಳಿಸಿದೆ. ಅತ್ಯುತ್ತಮ ತಾಂತ್ರಿಕ ಶಿಕ್ಷಣವನ್ನು ರಾಜ್ಯದ ಅತಿ ಬಡವನೂ ಪಡೆಯುವಂತಾಗಬೇಕು. ಆರ್.ವಿ ವಿಶ್ವವಿದ್ಯಾಲಯ ಸಹ ಈ ನಿಟ್ಟಿನಲ್ಲಿ ಕೊಡುಗೆ ನೀಡಬೇಕು. ಸರ್ಕಾರ ನಿಮ್ಮೊಂದಿಗಿದೆ. ತರಬೇತಿ ಹಾಗೂ ತಾಂತ್ರಿಕ ಚಟುವಟಿಕೆಗಳನ್ನು ಸರ್ಕಾರ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಸಮನ್ವಯದಲ್ಲಿ ಮಾಡಿ ತೋರಿಸಿದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ಉಂಟುಮಾಡಲು ಸಾಧ್ಯವೆಂದರು.

ಸಂಶೋಧನೆ ಮತ್ತು ಅಭಿವೃದ್ಧಿ:

ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನು ನಮ್ಮ ಸರ್ಕಾರ ರೂಪಿಸುತ್ತಿದೆ. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಹುಬ್ಬಳ್ಳಿಯ ತಾಂತ್ರಿಕ ಕಾಲೇಜಿನಲ್ಲಿ ಇಲೆಕ್ಟ್ರಿಕ್ ಸೆಮಿ ಕಂಡಕ್ಟರ್ ಮೋಟಾರ್ ಅಭಿವೃದ್ಧಿಪಡಿಸಿ, ಈಗಾಗಲೇ ಬಳಕೆಗೆಯಾಗುತ್ತಿದೆ. ಇದಕ್ಕೆ ಪೇಟೆಂಟ್ ಸಹ ಪಡೆಯಲಾಗಿದೆ. ಗ್ಯಾರೇಜಿನಿಂದ ಸಂಸ್ಥೆಯವರೆಗೆ ಎಂಬ ಆಧಾರದಲ್ಲಿ ನಮ್ಮ ಆರ್ ಅಂಡ್ ಡಿ ನೀತಿಯು ಬರಲಿದೆ. ಆರ್ ಅಂಡ್ ಡಿ ಅಗತ್ಯ ಬೆಂಬಲವನ್ನು ಸರ್ಕಾರ ನೀಡಲಿದೆ. ಈ ನಿಟ್ಟಿನಲ್ಲಿ ಸಾಧನೆ ಮಾಡುವ ಶಕ್ತಿ ಆರ್.ವಿ. ವಿಶ್ವವಿದ್ಯಾಲಯಕ್ಕಿದೆ. ಆರ್.ವಿ ಶಿಕ್ಷಣ ಸಂಸ್ಥೆಯಿಂದ ಬಹಳಷ್ಟು ನಿರೀಕ್ಷೆ ಇರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಆರ್ ಅಂಡ್ ಡಿ ಯಲ್ಲಿ ಸಾಕಷ್ಟು ಪ್ರಗತಿ ಮಾಡಿ ಇಡೀ ಜಗತ್ತೇ ಈ ಸಂಸ್ಥೆಯ ಕಡೆಗೆ ನೋಡುವಂತಾಗಬೇಕು ಎಂದು ಆಶಿಸಿದರು.

Share