Connect with us


      




ವಿದೇಶ

ಸೌದಿ ಅರೇಬಿಯಾದಲ್ಲಿ ತಬ್ಲಿಘಿ ಜಮಾತ್ ನಿಷೇಧ ; ಪ್ರಾರ್ಥನೆ ವೇಳೆ ಜನರಲ್ಲಿ ಜಾಗೃತಿ ಮೂಡಿಸಿ

Iranna Anchatageri

Published

on

ರಿಯಾದ್, ಡಿಸೆಂಬರ್ (ಯು.ಎನ್.ಐ) ಪ್ರಮುಖ ಇಸ್ಲಾಂ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ತಬ್ಲಿಘಿ ಜಮಾತ್ ಮೇಲೆ ನಿಷೇಧ ಹೇರಿದೆ. ತಬ್ಲಿಘಿ ಜಮಾತ್ ಭಯೋತ್ಪಾದನೆಯ ದ್ವಾರವಾಗುವ ಸಾಧ್ಯತೆ ಎಂದಿರುವ ಸೌದಿ ಅರೇಬಿಯಾ ಸರ್ಕಾರ, ಆ ಸಂಘಟನೆಯನ್ನು ಬ್ಯಾನ್ ಮಾಡಿರುವುದಾಗಿ ತಿಳಿಸಿದೆ. ಅಲ್ಲದೆ, ಮುಂದಿನ ಶುಕ್ರವಾರದ ಪ್ರಾರ್ಥನೆಯಲ್ಲಿ ತಬ್ಲಿಘಿ ಜಮಾತ್ ನಿಂದ ದೇಶಕ್ಕಾಗುವ ಹಾನಿಯ ಬಗ್ಗೆ ಧರ್ಮೋಪದೇಶದಲ್ಲಿ ಜನರಿಗೆ ತಿಳಿಹೇಳಬೇಕು ಅಂತಾ ಮಸೀದಿಗಳಿಗೆ ಸೂಚನೆ ನೀಡಿದೆ.

ತಬ್ಲಿಘಿಯನ್ನ ನಿಷೇಧಿಸಿರುವ ವಿಚಾರವನ್ನು ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿ ತಿಳಿಸಿದೆ. ಸಚಿವ ಅಬ್ದುಲ್ ಅತಿಫ್ ಅಲ್ ಶೇಖ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಶುಕ್ರವಾರದ ನಮಾಜ್ ವೇಳೆ ತಬ್ಲಿಘಿ ಮತ್ತು ದವಾಹ ಸಂಘಟನೆಗಳ ವಿರುದ್ಧ ಜಾಗ್ರತೆ ಮೂಡಿಸಲು ಎಲ್ಲಾ ಮಸೀದಿಗಳಲ್ಲಿ ತಾತ್ಕಾಲಿಕವಾಗಿ ಸಮಯ ನಿಗದಿಪಡಿಸಬೇಕು ಎಂದು ಧರ್ಮ ಬೋಧಕರಿಗೆ ಸೂಚಿಸಿರುವ ಸಚಿವ, “ತಬ್ಲಿಘಿ ಮತ್ತು ದಾವಾ ಸಂಘಟನೆಯಿಂದ ದಾರಿತಪ್ಪುವಿಕೆ, ತಪ್ಪುಗಳು, ಸಮಾಜಕ್ಕೆ ಆಗುವ ಅಪಾಯ ಹಾಗೂ ಈ ಗುಂಪುಗಳೊಂದಿಗೆ ಸಂಬಂಧ ಇರಿಸಿಕೊಳ್ಳುವುದನ್ನು ಸೌದಿ ಸರ್ಕಾರ ನಿಷೇಧಿಸಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು” ಅಂತಾ ಮಸೀದಿಗಳಿಗೆ ಸೌದಿ ಸರ್ಕಾರ ಸೂಚನೆ ರವಾನಿಸಿದೆ.

ಸೌದಿ ಸರ್ಕಾರದ ಪ್ರಕಾರ, ತಬ್ಲಿಘಿ ಜಮಾತ್ ಜನರಲ್ಲಿ ತಪ್ಪು ಸಂದೇಶಗಳನ್ನು ನೀಡುತ್ತಾ ಹೋದಂತೆ ಅದರ ಮೌಲ್ಯ ಕಡಿಮೆಯಾಗುತ್ತಲೇ ಹೋಗುತ್ತದೆ ಅಂತಾ ಹೇಳಿದೆ. ಅಲ್ಲದೆ, ಸೌದಿ ಅರೇಬಿಯಾ ಸರ್ಕಾರ ಕೈಗೊಂಡಿರುವ ಈ ಕಠಿಣ ನಿರ್ಧಾರದಿಂದಾಗಿ ತಬ್ಲಿಘಿ ಜಮಾತ್ ಗೆ ಭಾರೀ ಹಿನ್ನೆಡೆಯಾಗಿದೆ.

Share