Connect with us


      
ದೇಶ

ದೆಹಲಿಯಲ್ಲಿರುವ ಜನರಲ್ ರಾವತ್ ಅವರ ನಿವಾಸದ ಸುತ್ತ ಭದ್ರತೆ ಹೆಚ್ಚಳ

Bindushree Hosuru

Published

on

ನವದೆಹಲಿ: ಡಿ. 09 (ಯುಎನ್ಐ) ರಾಷ್ಟ್ರರಾಜಧಾನಿಯ ಕುಮಾರಸ್ವಾಮಿ ಕಾಮರಾಜ್ ಮಾರ್ಗದಲ್ಲಿರುವ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ನಿವಾಸಕ್ಕೆ ಭಾರೀ ಭದ್ರತೆ ಒದಗಿಸಲಾಗಿದ್ದು, ಹಲವಾರು ವಿವಿಐಪಿಗಳು ಆಗಮಿಸಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.

ಬುಧವಾರ ತಮಿಳುನಾಡಿನ ಕೂನೂರ್ ಬಳಿ ಬಿಪಿನ್​ ರಾವತ್​​ ಮತ್ತು ಅವರ ಪತ್ನಿ ಪ್ರಯಾಣಿಸುತ್ತಿದ್ದ ಐಎಎಫ್ ಹೆಲಿಕಾಪ್ಟರ್ ಪತನವಾಗಿದ್ದು, ಈ ಅಪಘಾತದಲ್ಲಿ ಜನರಲ್ ರಾವತ್ (63), ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಮಂದಿ ಸಾವನ್ನಪ್ಪಿದ್ದರು.

ಜನರಲ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರು ಇಬ್ಬರು ಹೆಣ್ಣುಮಕ್ಕಳಾದ ಕೃತಿಕಾ ಮತ್ತು ತಾರಿಣಿ ಅವರನ್ನು ಅಗಲಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಂತರ ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಬುಧವಾರ ಸಂಜೆ ಜನರಲ್ ರಾವತ್ ಅವರ ನಿವಾಸಕ್ಕೆ ಭೇಟಿ ನೀಡಿದರು. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್ ಕೂಡ ದುಃಖತಪ್ತ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಜನರಲ್ ರಾವತ್ ಅವರ ನಿವಾಸ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಆಯ್ದ ಕೆಲವರಿಗೆ ಮಾತ್ರ ಮನೆಯೊಳಗೆ ಬಿಡಲಾಗುತ್ತಿದೆ.

ರಾವತ್ ಅವರ ಕುಟುಂಬ ನಾಲ್ಕು ತಲೆಮಾರುಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದೆ. ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ಲೆಫ್ಟಿನೆಂಟ್-ಜನರಲ್ ಹುದ್ದೆಗೆ ಏರಿದ್ದರು.

ರಾವತ್​​ ಅವರ ಪತ್ನಿ ಮಧುಲಿಕಾ ಅವರು ಸೇನಾ ಪತ್ನಿಯರ ಕಲ್ಯಾಣ ಸಂಘದ (AWWA)ಅಧ್ಯಕ್ಷರಾಗಿದ್ದರು. AWWA ಎಂಬುದು ಸೇನೆಯ ಸಿಬ್ಬಂದಿಯ ಹೆಂಡತಿಯರು, ಮಕ್ಕಳು ಮತ್ತು ಅವಲಂಬಿತರ ಕಲ್ಯಾಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿದೊಡ್ಡ NGOಗಳಲ್ಲಿ ಒಂದಾಗಿದೆ.

ಮಧುಲಿಕಾ ಅವರು ಸೇನಾ ವಿಧವೆಯರು, ಅಂಗವಿಕಲ ಮಕ್ಕಳು, ಕ್ಯಾನ್ಸರ್ ರೋಗಿಗಳು ಮತ್ತು ಸೇನಾ ಸಿಬ್ಬಂದಿಯ ಅವಲಂಬಿತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದರು.

Share