Connect with us


      
ಸಾಮಾನ್ಯ

ಸರಳ ಜೀವನ ಶೈಲಿಗೆ ಪಲ್ಲಟವಾಗಲು ಸುಸಂದರ್ಭ

Kumara Raitha

Published

on

ಡಾ. ಜ್ಯೋತಿ ಎಸ್.

‌ಅಂಕಣ: ಖಚಿತನೋಟ -೪

(ಯು.ಎನ್.‌ಐ.) ಪ್ರಸಕ್ತ ಜಗತ್ತಿನ ಆರ್ಥಿಕ ಸಂಕಷ್ಟ ಹಾಗು ನಿರುದ್ಯೋಗ, ಸೂಕ್ಷ್ಮ ಮನಸ್ಥಿತಿಯುಳ್ಳ ಹೆಚ್ಚಿನ ಜನರನ್ನು ಗಾಢವಾಗಿ ಕಾಡುತ್ತಿರುವುದಂತೂ ನಿಜ. ನಮ್ಮ ಕೈಯಿಂದ ಆಗುವಷ್ಟು ಜನಸಹಾಯ ಮಾಡುತ್ತಾ, ಜೊತೆಗೆ ನಾವು ನಮ್ಮ ಜೀವನ ಶೈಲಿಯ ಕುರಿತಾಗಿ ಒಂದಿಷ್ಟು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆಯೆನಿಸುತ್ತದೆ. ಮೊದಲನೆಯದಾಗಿ, ಈ ಕೊರೊನಾ ಸಾಂಕ್ರಾಮಿಕದ ಅಬ್ಬರಕ್ಕೆ ಸಿಲುಕದೆ ನಾವು ಸುರಕ್ಷಿತವಾಗಿದ್ದಲ್ಲಿ, ಹಾಗು ದೈನಂದಿನ ಬದುಕನ್ನು ತೊಂದರೆ ಇಲ್ಲದೆ ಮುಂದುವರಿಸಿಕೊಂಡು ಹೋಗಲು ಸಮರ್ಥರಿದ್ದೇವೆಂದರೆ, ಕೃತಜ್ಞರಾಗಿರಲೇಬೇಕು.

ಪ್ರಾಪಂಚಿಕ ಸಿದ್ದ ಮಾದರಿಯ ಆದರ್ಶ ಬದುಕಿನ ಚಿತ್ರಣದ ಭ್ರಮೆಗಳಿಂದ ಕಳಚಿಕೊಂಡು ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮಲ್ಲಿ ಬಹಳಷ್ಟು ಮಂದಿಗೆ ತಮ್ಮ ಆದಾಯಕ್ಕೆ ಅನುಗುಣವಾಗಿ, ದೈನಂದಿನ ಅಗತ್ಯಗಳನ್ನು ನಿರ್ವಹಿಸಲು ಸಾಧ್ಯವೆನಿಸುತ್ತದೆ.  ಆದರೆ ನಾವು ಹೆಚ್ಚಾಗಿ ಸೋಲುವುದು, ಜಾಹಿರಾತು ಪ್ರಪಂಚ ನಮ್ಮ ಮುಂದೆ ಆಕರ್ಷಕವಾಗಿ ಮುಂದಿಡುವ, ನಮ್ಮ ಜೀವನದ ಸಫಲತೆಗೆ ಅತ್ಯಗತ್ಯದಂತೆ ಕಾಣಿಸುವ ವಸ್ತುಗಳ ಖರೀದಿಯ ಪೈಪೋಟಿಯಲ್ಲಿ. ಇವುಗಳನ್ನು ಅರಸುತ್ತಾ ಜೀವನ ಸಾಗಿಸಲು ನಮ್ಮ ಮುಖ್ಯ ಪ್ರೇರಣೆ,

ಇವುಗಳಿಂದ ಸಿಗುವ ಸಾಮಾಜಿಕ ಪ್ರತಿಷ್ಠೆ, ವೈಯಕ್ತಿಕ ಮತ್ತು ಕೌಟುಂಬಿಕ ಸಂತೋಷ. ಆದರೆ, ಇವುಗಳು ತಮ್ಮ ಉದ್ದೇಶವನ್ನು ನಿಜವಾಗಿಯೂ ಈಡೇರಿಸುತ್ತವೆಯೇ, ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಅಥವಾ ನಾವು ಇದನ್ನು ಪ್ರಶ್ನಿಸುವ ಗೊಡವೆಗೆ ಹೋಗುವುದಿಲ್ಲವೆನಿಸುತ್ತದೆ.

ಹಾಗಿದ್ದಲ್ಲಿ, ಜಾಹಿರಾತುಗಳಿಗೂ, ನಮ್ಮ ವಸ್ತು ಖರೀದಿ ಸಾಮರ್ಥ್ಯಕ್ಕೂ ಸಂಬಂಧವೇನು, ಎನ್ನುವುದು ಮೊದಲ ಪ್ರಶ್ನೆ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನದಲ್ಲಿ, ಜಾಹಿರಾತು ಉದ್ಯಮದ ಉಗಮದತ್ತ ಗಮನಹರಿಸುವುದು ಉತ್ತಮ. ಬೃಹತ್ ಕೈಗಾರೀಕರಣದ ಫಲವಾಗಿ ಉದ್ಭವಿಸಿದ ಸಮೂಹ ಉತ್ಪಾದನೆ, ಒಂದೇ ರೀತಿಯ ಉತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ಮಾರುಕಟ್ಟೆಗೆ ತಂದ ಪರಿಣಾಮವಾಗಿ, ಕಂಪನಿಗಳ ನಡುವೆ ಸ್ಪರ್ಧೆ ತಂದಿಕ್ಕಿತು. ಉಳಿದೆಲ್ಲದಕ್ಕಿಂತ ತಮ್ಮ ಉತ್ಪನ್ನವೇ ಶ್ರೇಷ್ಠವೆಂದು ಗ್ರಾಹಕರ ಮುಂದಿಡುವ ಮಾರ್ಗವೇ, ಜಾಹೀರಾತು. ಇತ್ತೀಚಿಗಿನ ದಿನಗಳಲ್ಲಿ, ಈ ಜಾಹಿರಾತುಗಳ ಪ್ರಭಾವ ಎಷ್ಟಾಗಿದೆಯೆಂದರೆ, ಒಂದು ವಸ್ತುವಿನ ಮೂಲ ಬೆಲೆಗಿಂತ ಅದರ ಬ್ರಾಂಡಿಂಗ್ ದರ ದುಪ್ಪಟ್ಟಾಗಿರುತ್ತದೆ.

ಒಂದು ಮಾತಿನಲ್ಲಿ ಹೇಳುವುದಾದರೆ, ಜಾಹಿರಾತುಗಳು ಜನಸಾಮಾನ್ಯರನ್ನು ಸ್ವವಿಮರ್ಶೆ ಮಾಡದ, ಸಂಭಾವ್ಯ ಗ್ರಾಹಕರನ್ನಾಗಿ ಪರಿವರ್ತಿಸುತ್ತವೆ. ಕಂಪೆನಿಗಳು ಶೀಘ್ರ ಲಾಭಗಳಿಸುವ ಸಲುವಾಗಿ, ಅಗಾಧ ಪ್ರಮಾಣದಲ್ಲಿ ಉತ್ಪಾದಿಸಿದ ವಸ್ತುಗಳನ್ನು, ಜನರಿಗೆ ಹೇಗಾದರೂ ಮಾಡಿ ತಲುಪಿಸುತ್ತೇವೆಂದು ಪಣ ತೊಡುವ ಈ ಜಾಹಿರಾತು ಕಂಪನಿಗಳು, ತಾವು ಪ್ರಚಾರ ಪಡಿಸುವ ವಸ್ತುಗಳು ಜೀವನಕ್ಕೆ ಅತ್ಯಗತ್ಯವೆಂದು ಬಿಂಬಿಸುತ್ತವೆ. ಯಾಕೆಂದರೆ, ಜಾಹೀರಾತು ಜಗತ್ತು ಕೋಟ್ಯಂತರ ಡಾಲರು ವ್ಯವಹಾರದ ಪ್ರಭಾವಿ ಕೇಂದ್ರ ಮತ್ತು ಎಲ್ಲ ಉತ್ಪಾದಕರು, ಇವುಗಳ ಪೋಷಕರು. ಹಾಗಾಗಿ, ಇವು ಮಾರುಕಟ್ಟೆಯಲ್ಲಿರುವ ವಸ್ತುಗಳಿಗೆ ತಕ್ಕಂತೆ ಜನರ ಅಭಿರುಚಿ, ಆಸಕ್ತಿ, ಜೀವನಶೈಲಿ ಮತ್ತು ಜೀವನದೃಷ್ಟಿಯನ್ನು ಸಂಪೂರ್ಣವಾಗಿ ಮಾರ್ಪಡಿಸುತ್ತವೆ.

ಇನ್ನೂ ಮುಂದುವರಿದು, ಚುನಾವಣೆಗಳಲ್ಲಿ ಯಾರನ್ನು ಆಯ್ಕೆ ಮಾಡಬೇಕೆನ್ನುವುದನ್ನು ನಿರ್ಧರಿಸುವಲ್ಲಿಯೂ ಜನಾಭಿಪ್ರಾಯ ರೂಪಿಸುತ್ತವೆ. ಹಾಗಾಗಿಯೇ, ಎಲ್ಲ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಜಾಹೀರಾತು ಕಂಪನಿಗಳ ಮೊರೆಹೋಗುವುದನ್ನು ನಾವು ಕಾಣಬಹುದು. ಹಾಗಾಗಿ, ಹೆಚ್ಚಿನ ರಾಜಕಾರಣಿಗಳು ತಮ್ಮ ಸಾರ್ವಜನಿಕ ಇಮೇಜ್ ಬಗ್ಗೆ ಹೆಚ್ಚು ಗಮನಕೊಡುತ್ತಾರೆ.  ಒಟ್ಟಿನಲ್ಲಿ, ಜಾಹಿರಾತುಗಳು, ಒಂದು ವಸ್ತು ಅಥವಾ ವ್ಯಕ್ತಿಯ ಬಗ್ಗೆ, ವಸ್ತುನಿಷ್ಠವಲ್ಲದ ಗುಣಾತ್ಮಕ ಚಿತ್ರಣ ಕೊಡುವಲ್ಲಿ ಮಹತ್ತರ ಪಾತ್ರವಹಿಸುತ್ತವೆ.

ಈ ನಿಟ್ಟಿನಲ್ಲಿ, ನಮಗೀಗ ಈ ಜಾಹೀರಾತು ವ್ಯಾಪ್ತಿಯ ಜೀವನದೃಷ್ಟಿಯಿಂದ ಕಳಚಿಕೊಳ್ಳುವ ಸುಸಂದರ್ಭ, ಕೊರೊನ ಸಂಬಂಧಿತ ನಿರ್ಬಂಧಿತ ಜೀವನ ಒದಗಿಸಿದೆ. ಹೇಗೆಂದರೆ, ಯಾವಾಗಲೂ ಸಿದ್ದಮಾದರಿಯ ಜೀವನಕ್ರಮವನ್ನು ಸ್ವಲ್ಪವೂ ಪ್ರಶ್ನಿಸಿದೇ ರೂಢಿಸಿಕೊಳ್ಳುವ ನಮಗೆ, ದೈನಂದಿನ ಅಗತ್ಯಗಳ ಹೊಸ ಅರಿವು ಮೂಡಿದೆ. ಜೊತೆಗೆ, ಅಷ್ಟೇನೂ ಅಗತ್ಯವೆನಿಸದ, ಆದರೆ ದುಬಾರಿ ವಸ್ತುಗಳಿಗಾಗಿ ನಾವು ಜೀವನಪರ್ಯಂತ ಅನಗತ್ಯ ಹೆಣಗಾಡುವ ಜೀವನಶೈಲಿಯನ್ನು ಪ್ರಶ್ನಿಸುವ ಸಮಯ ದಯಪಾಲಿಸಿದೆ.

ಮನಃಶಾಸ್ತ್ರಜ್ಞ ಅಬ್ರಹಾಂ ಮಾಸ್ಲೋ, ಮನುಷ್ಯ ಜೀವನದ ಐದು ಅಗತ್ಯಗಳನ್ನು ಕ್ರಮಾನುಗತವಾಗಿ ಹೀಗೆ ವಿಂಗಡಿಸಿದ್ದಾನೆ; ದೈಹಿಕ, ಭದ್ರತೆ, ಸಾಮಾಜಿಕ, ಗೌರವ ಮತ್ತು ಸ್ವಯಂ ಬೆಳವಣಿಗೆ.  ಮನುಷ್ಯ, ತನ್ನ ಜೀವನದ ಮೊದಲ ನಾಲ್ಕು ಹಂತಗಳನ್ನು ವೇಗವಾಗಿ ದಾಟಿ, ಕೊನೆಯ ಹಂತದಲ್ಲಿ ಹೆಚ್ಚಿನ ಸಮಯ ಕಳೆದು, ಉನ್ನತ ಸಾಧನೆ, ಪ್ರತಿಭಾ ಪ್ರದರ್ಶನ, ವೈಯಕ್ತಿಕ ಬೆಳವಣಿಗೆ, ಗರಿಷ್ಠ ಜ್ಞಾನಪ್ರಾಪ್ತಿ, ಅನುಭವ ವಿಸ್ತರಣೆ ಮತ್ತು ಸೃಜನಶೀಲತೆಯ ಉದ್ದೀಪನದಲ್ಲಿ ಜೀವನದ ಅರ್ಥ ಕಂಡುಕೊಂಡರೆ, ತನ್ನ ಬದುಕನ್ನು ಸಾರ್ಥಕಗೊಳಿಸಿದಂತೆ.

ಈ ದೆಸೆಯಲ್ಲಿ ಕೂಲಂಕುಷವಾಗಿ ನಮ್ಮ ಸರಳ ಜೀವನದ ಅಗತ್ಯಗಳನ್ನು ವಿಮರ್ಶಿಸಿದರೆ, ಅವುಗಳ ಪಟ್ಟಿ ಬಹಳ ಚಿಕ್ಕದಿದೆ ಮತ್ತು ದುಬಾರಿಯಲ್ಲ. ಇವುಗಳಲ್ಲಿ ಸಂತೃಪ್ತಿ ಹೊಂದುವ ಮನೋಭಾವ ಬೆಳೆಸಿಕೊಂಡರೆ, ಬದುಕಿನ ಅತ್ಯುನ್ನತ ಹಂತಕ್ಕೆ ಬಹಳ ವೇಗವಾಗಿ ತಲುಪಿ, ಸಾಧನೆಯತ್ತ ಗಮನ ಕ್ರೋಡೀಕರಿಸಬಹುದು.

ಆದರೆ, ಈ ವರ್ಣರಂಜಿತ ಜಾಹಿರಾತು ಪ್ರಪಂಚ ನಮ್ಮ ಬದುಕಿನ ಸಾಧ್ಯತೆಗಳನ್ನು ಕೇವಲ ನಾಲ್ಕನೇ ಹಂತದಲ್ಲಿಯೇ ಅಂತ್ಯಗೊಳಿಸುತ್ತವೆ. ಕೆಲವೇ ಮಂದಿ, ಈ ಮಾಯೆಯಿಂದ ಕಳಚಿಕೊಂಡು ಉನ್ನತ ಸಾಧನೆಗೈಯುತ್ತಾರೆ. ಉದಾಹರಣೆಗೆ, ಜಾಹಿರಾತುಗಳು ನಮ್ಮ ಮುಂದಿಡುವ ಸಾರ್ಥಕ ಬದುಕಿನ ಚಿತ್ರಣದಲ್ಲಿ, ಇಂತಹದೇ ಬ್ರಾಂಡಿನ ಕಾರು, ಬೈಕು, ಮನೆಯ ವಿನ್ಯಾಸ, ಶರ್ಟ್, ಕೋಟ್, ವಾಚು, ಆಭರಣ, ಚಪ್ಪಲಿ, ಪೀಠೋಪಕರಣ, ಸೋಪು, ಇತ್ಯಾದಿಗಳು ಕೂಡಿವೆ. ಅದರಂತೆ, ನಾವು ಜೀವನವಿಡಿ ಅವುಗಳನ್ನು ಗಳಿಸುವುದರಲ್ಲಿಯೇ ಕಲಹರಣಮಾಡುತ್ತೇವೆ. ಮಾತ್ರವಲ್ಲ, ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು ಅಸಂತೃಪ್ತಿಯ ಬದುಕು ನಡೆಸುತ್ತೇವೆ. ಯಾಕೆಂದರೆ, ಇಂತಹ ವಸ್ತುಸಂಗ್ರಹಕ್ಕೆ ಕೊನೆಯೇನೆಂಬುವುದಿಲ್ಲ. ಅಲ್ಲದೆ, ಜಗತ್ತಿನಲ್ಲಿ ದಿನವೂ ನವನವೀನ ವಿನ್ಯಾಸದ ಆಕರ್ಷಕ ವಸ್ತುಗಳು ಜಾಹಿರಾತುಗಳ ಮೂಲಕ ನಮ್ಮನ್ನು ನಿರಂತರವಾಗಿ ಸೆಳೆಯುತ್ತಲೇ ಇರುತ್ತವೆ.

ಎಷ್ಟೋ ದಶಕಗಳಿಂದ ಮನುಷ್ಯನ ಬದುಕನ್ನು ಯಶಸ್ವಿಯಾಗಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದ ಜಾಹಿರಾತುಗಳ ಶಕ್ತಿಗೆ, ಈಗ ಕೊರೊನಾ ದೊಡ್ಡ ಹೊಡೆತ ನೀಡಿ, ಜನರನ್ನು ಭ್ರಮೆಯಿಂದ ಮುಕ್ತರನ್ನಾಗಿಸಿದೆ. ಈ ಸಂದರ್ಭದಲ್ಲಿ, ನಾವು ಎಚ್ಛೆತ್ತು ಈ ಶೋಕಿಯ ‘ಅನಗತ್ಯ’ಗಳಿಂದ ಕಳಚಿಕೊಂಡು ಮನುಷ್ಯ ಜೀವನದ ಉನ್ನತ ಅಗತ್ಯಗಳತ್ತ ಗಮನಹರಿಸುವ ಇಚ್ಚಾಶಕ್ತಿ ವ್ಯಕ್ತಪಡಿಸಿದರೆ, ನಮ್ಮ ಸ್ವಯಂ ಏಳ್ಗೆಗೂ ಉತ್ತಮ, ಜೊತೆಗೆ ಮನುಷ್ಯ ಕುಲಕ್ಕೂ ಹಿತ. ಯಾಕೆಂದರೆ, ಇಂದು, ನಮ್ಮ ಸುತ್ತಮುತ್ತಲು, ತಮ್ಮ ದೈನಂದಿನ ಜೀವನ ನಿರ್ವಹಣಾ ಅಗತ್ಯಗಳ ಹಂತದಲ್ಲಿಯೇ ಹೆಣಗಾಡುವವರ ಸಂಖ್ಯೆ ಹೆಚ್ಚಾಗಿದೆ.

ಗಾಂಧಿ ತನ್ನ ಸುತ್ತಲಿನ ದೇಶವಾಸಿಗಳ ಕಷ್ಟಗಳಿಗೆ ಸ್ಪಂದಿಸಿ ತಾನೂ ಅವರಂತೆ ಸರಳ ಜೀವನಕ್ಕೆ ಪಲ್ಲಟವಾದಂತೆ, ನಾವೂ ಕೂಡ ಸರಳ ಜೀವನಶೈಲಿಗೆ ಬದಲಾದರೆ, ಸಂಕಷ್ಟದಲ್ಲಿರುವವರಿಗೆ ಮನಸ್ಥೈಯ ತುಂಬೀತು. ಇದು ಪ್ರಸಕ್ತ ಆರ್ಥಿಕ ಸಂಕಷ್ಟದ ದಿನಗಳಲ್ಲಿ, ಸಹಪಯಣಿಗರ ಆಧ್ಯ ಕರ್ತವ್ಯ ಮತ್ತು ಸಾಮಾಜಿಕ ಜವಾಬ್ದಾರಿ ಕೂಡ ಹೌದು.

ಲೇಖಕರ ಪರಿಚಯ:

ಡಾ.ಜ್ಯೋತಿ ಎಸ್. ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರು.  ಸಾಹಿತ್ಯ – ಸಾಮಾಜಿಕ – ಆರ್ಥಿಕ – ರಾಜಕೀಯ ವಿಷಯಗಳ ನಿಷ್ಪಕ್ಷಪಾತ ವಿಮರ್ಶಕರು. ಕಥೆಗಾರರು, ಕವಿ. ಇವರು ದೇಶದ ಹಳೆಯ, ವಿಶ್ವಾಸಾರ್ಹ ಸುದ್ದಿಸಂಸ್ಥೆ ಯು.ಎನ್.ಐ. ಯಲ್ಲಿ ಅಂಕಣ ಆರಂಭಿಸಿರುವುದು ಸಂತಸದ ಸಂಗತಿ. ಪ್ರತಿ ಭಾನುವಾರ ಇವರ ಅಂಕಣ ಪ್ರಕಟವಾಗುತ್ತದೆ ಎಂದು ತಿಳಿಸಲು ಹರ್ಷವಾಗುತ್ತದೆ.

Share