Connect with us


      




ದೇಶ

ಒಬಿಸಿ ಮೀಸಲಾತಿಯೊಂದಿಗೆ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಆದೇಶ

Iranna Anchatageri

Published

on

ಭೋಪಾಲ್: ಮೇ 18 (ಯು.ಎನ್‌.ಐ.) ಮಧ್ಯಪ್ರದೇಶದಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯೊಂದಿಗೆ ಸ್ಥಳೀಯ ಚುನಾವಣೆಗಳನ್ನು ನಡೆಸುವಂತೆ ಸುಪ್ರೀಂ ಕೋರ್ಟ್‌ನ ಇಂದಿನ ಆದೇಶದ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಸ ವ್ಯಕ್ತಪಡಿಸಿದ್ದಾರೆ. ಒಬಿಸಿ ಮೀಸಲಾತಿಗಾಗಿ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಇಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಚೌಹಾಣ್, ಬಿಜೆಪಿ ಸರ್ಕಾರವು ಒಬಿಸಿ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಸಂಗತಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತಪಡಿಸಿದೆ. ಈ ಸಂಬಂಧ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ವರದಿಯನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇದರ ಆಧಾರದ ಮೇಲೆ ಒಬಿಸಿ ವರ್ಗದ ಮೀಸಲಾತಿಯೊಂದಿಗೆ ಸ್ಥಳೀಯ ಚುನಾವಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.

ಒಬಿಸಿ ವರ್ಗದಿಂದ ಬಂದ ಚೌಹಾಣ್ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮತ್ತು ಕಾಂಗ್ರೆಸ್ ಉದ್ದೇಶಗಳ ಬಗ್ಗೆ ತಿರುಗೇಟು ನೀಡಿದರು. ಒಬಿಸಿ ಮೀಸಲಾತಿಯನ್ನು ಒದಗಿಸಲು ಗಂಭೀರ ಪ್ರಯತ್ನಗಳನ್ನು ಇಬ್ಬರೂ ಮಾಡಲಿಲ್ಲ. ಇವರಿಬ್ಬರೂ ಈ ವಿಚಾರದಲ್ಲಿ ಕೇವಲ ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದರು. ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಚೌಹಾಣ್ ಅವರು, ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಹೇಳಿದರು.

Share