Connect with us


      




ಕರ್ನಾಟಕ

ಮೇಕೆದಾಟು ಕೇಂದ್ರ ಸಚಿವರ ಹೇಳಿಕೆ ಖಂಡಿಸಿ ಪತ್ರ ಬರೆಯಲು ಸಿದ್ದರಾಮಯ್ಯ ಆಗ್ರಹ

Iranna Anchatageri

Published

on

ವಿಧಾನಸಭೆ/ಬೆಂಗಳೂರು: ಮಾರ್ಚ್ 08 (ಯು.ಎನ್.ಐ.) ಮೇಕೆದಾಟು ಯೋಜನೆಯ ಕುರಿತು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರು ನೀಡಿರುವ ಹೇಳಿಕೆಯನ್ನು ರಾಜ್ಯ ಸರ್ಕಾರ ಖಂಡಿಸಿ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊೊಂಡು ಮಾತನಾಡಿದ ಅವರು, ತಮಿಳುನಾಡಿನವರು ರಾಜಕಾರಣಕ್ಕೆ ಮೇಕೆದಾಟು ಯೋಜನೆಗೆ ತಕರಾರು ತೆಗೆಯುತ್ತಿದ್ದಾರೆ. ಅವರಿಗೆ ಕಾನೂನು ಪ್ರಕಾರ ಯಾವುದೇ ಅವಕಾಶವಿಲ್ಲ, ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಪಾದಯಾತ್ರೆ ನಡೆಸಿದ ನಂತರ ಸಿಎಂ ಬೊಮ್ಮಾಯಿಯವರು ಬಜೆಟ್ನಲ್ಲಿ 1 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ಈ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಪ್ರಯತ್ನ ಮಾಡಬೇಕು. ಕೇಂದ್ರ ಸಚಿವರು ಎರಡೂ ರಾಜ್ಯಗಳ ಜೊತೆ ಮಾತುಕತೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾರೆ. ಕೇಂದ್ರ ಸಚಿವರ ಆ ರೀತಿಯ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರು ಹೇಳಿರುವುದನ್ನು ಮುಖ್ಯಮಂತ್ರಿಗಳು ಕೇಳಿಸಿಕೊಂಡು ಸುಮ್ಮನೆ ಬಂದಿದ್ದಾರೆ ಎಂದು ಆಕ್ಷೇಪಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರು ನಾನು ಹಾಜರಿದ್ದ ಸಂದರ್ಭದಲ್ಲಿ ಮೇಕೆದಾಟು ವಿಷಯ ಪ್ರಸ್ತಾಪ ಮಾಡಿಲ್ಲ. ನಾನು ಸಭೆಯಿಂದ ಹೋದ ಮೇಲೆ ಅವರು ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲಿ ಮೇಕೆದಾಟು ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಅಲ್ಲದೇ, ಮೇಕೆದಾಟು ಯೋಜನೆಯ ಕುರಿತು ವಿಸ್ತೃತ ಚರ್ಚೆಯಾಗಬೇಕು. ಯಾವ ಸಂದರ್ಭದಲ್ಲಿ ಈ ಯೋಜನೆಗೆ ಅನುಮತಿ ನೀಡಲಾಗಿದೆ. ಮುಂದೆ ಯಾರ ಕಾಲದಲ್ಲಿ ಏನಾಗಿದೆ ಎನ್ನುವುದು ಚರ್ಚೆಯಾಗಬೇಕು. 2012 ರಿಂದಲೂ ಮೇಕೆದಾಟು ಯೋಜನೆ ಆರಂಭಿಸಲು ಪ್ರಯತ್ನ ನಡೆದಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ಮುಂದೆ ಡಿಪಿಆರ್ ಅನುಮತಿಗಾಗಿ ಮನವಿ ಮಾಡಲಾಗಿದೆ. ಇದರ ಜೊತೆಗೆ ಪರಿಸರ ಇಲಾಖೆ ಅನುಮತಿ ಪಡೆಯಬೇಕಿದೆ. ಜೊತೆಗೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ. ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಸರ್ವ ಪಕ್ಷಗಳ ನಾಯಕರ ಸಭೆ ಕರೆಯುತ್ತೇನೆ. ಈ ಬಗ್ಗೆ ಎಲ್ಲರೂ ಸೇರಿ ವಿಸ್ತೃತವಾಗಿ ಚರ್ಚಿಸಿ ಯಾವ ರೀತಿ ಮುಂದಿನ ಹೋರಾಟ ಮಾಡಬೇಕು ಎನ್ನುವುದನ್ನು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಆದರೆ, ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಎಚ್.ಕೆ. ಪಾಟೀಲ್, ಕೇಂದ್ರ ಸಚಿವರು ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸರಿಯಲ್ಲ. ತಕ್ಷಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಅವರ ಸಲಹೆಗೆ ರಾಜ್ಯ ಸರ್ಕಾರದ ಸಹಮತ ಇಲ್ಲ ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.

ಅದಕ್ಕೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ ನಾನು ಸಿಎಂ ಆದ ಮೇಲೆ ಈ ಕುರಿತು ಎರಡು ಬಾರಿ ಪತ್ರ ಬರೆದಿದ್ದೇನೆ. ನಮಗೆ ಡಿಪಿಆರ್‌ಗೆ ಅನುಮತಿ ಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇವೆ ಎಂದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನೀವು ಕೇಂದ್ರ ಸಚಿವರ ಹೇಳಿಕೆಯನ್ನು ಖಂಡಿಸಬೇಕಿತ್ತು. ಅವರಿಗೆ ಈ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಡಿಸುವ ಮನಸ್ಥಿತಿ ಇದ್ದಹಾಗೆ ಇಲ್ಲ. ತಮಿಳುನಾಡು ಕರ್ನಾಟಕ ನಡುವೆ ಜಗಳ ಇದೆ ಎಂದು ಪರಿಸರ ಇಲಾಖೆಯ ಅನುಮತಿಯನ್ನೂ ನೀಡುವುದಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿ ಕೇಂದ್ರದ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟರೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.

Share