Connect with us


      
ಅಂಕಣ

ದೌರ್ಜನ್ಯಗಳೆಲ್ಲ ಮುಗಿದು ಬದುಕು ಸುಖಮಯ ಆಗುವುದು ಯಾವಕಾಲಕ್ಕೋ?

Kumara Raitha

Published

on

ಶ್ರೀದೇವಿ ಕೆರೆಮನೆ

ಅಂಕಣ: ಮುಖಗಳು – ೨

ಪುನೀತ್ ರಾಜಕುಮಾರ್‌  ಅಕಾಲಿಕ ಮರಣದ ನಂತರ  ಅವರು ಭಾಗವಹಿಸಿದ್ದ ವಿಡಿಯೋಗಳನ್ನು ನೋಡುತ್ತಿದ್ದೆ. ಅದೊಂದು ವಿಡಿಯೋದಲ್ಲಿ ಇಬ್ಬರು ಸಿದ್ದಿ ಮಹಿಳೆಯರು ವೇದಿಕೆಯಲ್ಲಿ ಹಾಡುತ್ತಿದ್ದರು. ಬಹುಶಃ ಸಲಗದ ಪ್ರೊಮೋ ಇರಬಹುದು. ಹಾಡಿ ಮುಗಿಸಿದ ನಂತರ ಪುನೀತ್ ರಾಜಕುಮಾರ ಅವರ ಜೊತೆ ಫೋಟೊ ತೆಗೆಸಿಕೊಳ್ಳಬೇಕೆಂಬ ಆಸೆ ವ್ಯಕ್ತಪಡಿಸಿದರು. ಫೋಟೊ ತೆಗೆಸಿಕೊಂಡದ್ದೂ ಆಯಿತು. ಆ ವಿಡಿಯೋ ಮುಗಿಯಿತು. ಆದರೆ ಹಾಡಿನ ನಡುವಿನ ಒಂದು ಸಾಲು ವಿಪರೀತ ಕಾಡಲಾರಂಭಿಸಿತು.
“ಕಾ ಚಲಿಗೇ,
ಮಂಚಿಕೇರಿ ದೇಖನಿಕೆ ,
ಮಂಚಿಕೇರಿ ಸಾವುಕಾರ ಮುಝೆ ಅಂದರ್ ಬುಲಾಯಾ,
ದರವಾಜಾ ಲಗಾಯ.
ಎನ್ನುವುದು ಆ ಸಾಲು. ಬಹುಶಃ ಅದರ ಮುಂದಿನ ಟಿಣಿಂಗ್ ಮಿಣಿಂಗ್ ಟಿಷ್ಯಾ ಎಂಬ ಆಕರ್ಷಕ ಶಬ್ಧಗಳ ನಡುವೆ ಹುದುಗಿ ಹೋಗಿರಬಹುದು ಆ ಸಾಲು. ಡಮಾಮಿ ಎನ್ನುವುದು ಸಿದ್ದಿಗಳ ಜನಪದ ಹಾಡು. ಆದರೆ ಅದರಲ್ಲಿ ಬಹುತೇಕವಾಗಿ ಆ ಸಮಾಜದ ಕಷ್ಟ ಕಾರ್ಪಣ್ಯಗಳೇ ಇರುತ್ತವೆ.
ಒಂದು ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ಕಷ್ಟಗಳಾದರೂ ಎಷ್ಟು? ಹಿಂದೆಲ್ಲ ಕೂಲಿಗೆ ಹೋಗುತ್ತಿದ್ದ ಹೆಂಗಸು ತನ್ನ ತಾನು ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲಿ ಅನುಭವಿಸುತ್ತಿದ್ದ ಲೈಂಗಿಕ ಶೋಷಣೆಯನ್ನು ಗಮನಿಸಿದರೆ ಈ ಸಾಲುಗಳ ಅರ್ಥ ಖಂಡಿತವಾಗಿಯೂ ಆಗುತ್ತದೆ. ಕೆಲಸವಿದೆ ಎಂದು ಕರೆಯುವ ತೋಟದ ಮಾಲಿಕ ಥವಾ ಗದ್ದೆಯ ಯಜಮಾನ, ಮನೆಯ ಹಿರಿಯ. ಯಾರೂ ಇಲ್ಲದ ಸಮಯದಲ್ಲಿ ಎಸಗಿದ ದೌರ್ಜನ್ಯಕ್ಕೆ ಬಹುಶಃ ಲೆಕ್ಕ ಇಡಲಾಗುವುದಿಲ್ಲ. ಬಹುತೇಕವಾಗಿ ಸಾಮಾಜಿಕ ಸ್ತರಗಳಲ್ಲಿ ಮೇಲುಜಾತಿ ಎಂದು ಗುರುತಿಸಿಕೊಂಡ ಜನ ತಮಗಿಂತ ಕೆಳ ಹಂತದ ಜನರನ್ನು ತೀರಾ ನಿಕೃಷ್ಟವಾಗಿ ದುಡಿಸಿಕೊಂಡಿದ್ದು, ಅವರನ್ನು ಶೋಷಣೆಗೊಳಪಡಿಸಿದ್ದು ಮೇಲ್ನೋಟಕ್ಕೆ ಎಲ್ಲ ಸಮಾಜ ವಿಜ್ಞಾನ ತರಗತಿಯ ಪಾಠಗಳಲ್ಲಿ ದಾಖಲಾಗಿರುತ್ತವೆ.

ಗುಲಾಮಿಗಿರಿ ಪದ್ದತಿ, ಮುಂತಾದವುಗಳನ್ನು ಒಂದು ಪಾಠವನ್ನಾಗಿಯೇ ಅಧ್ಯಯನ ಮಾಡಿರುತ್ತೇವೆ. ಆದರೆ ಅಂತಹ ಸಾಮಾಜಿಕ ಸಂರಚನೆಯಲ್ಲಿ ಹೆಣ್ಣು ಅನುಭವಿಸುತ್ತಿರುವ ದೌರ್ಜನ್ಯಗಳು ಎಲ್ಲಿಯೂ ದಾಖಲಾಗುವುದಿಲ್ಲ. ಋಗ್ವೇದ ಕಾಲದಲ್ಲಿ ಮಹಿಳೆಯರ ಸ್ಥಾನಮಾನ ಎಂಬ ಒಂದು ಸಣ್ಣ ಟಿಪ್ಪಣಿ ಎಂಟನೆ ತರಗತಿಯ ಸಮಾಜವಿಜ್ಞಾನ ಪುಸ್ತಕದಲ್ಲಿ ಕಾಣಸಿಗುತ್ತದೆಯದರೂ ಅದು ನಾಲ್ಕು ಸಾಲಿಗೂ ಮೀರುವುದಿಲ್ಲ. ಆದರೆ ವಿಷಾದದ ಸಂಗತಿ ಎಂದರೆ ಅದರ ನಂತರದ ಹೆಣ್ಣುಗಳೆಲ್ಲ ಏನಾದರು ಎನ್ನುವುದರ ಬಗ್ಗೆ ಇತಿಹಾಸ ದಿವ್ಯಮೌನವನ್ನು ವಹಿಸಿಬಿಡುತ್ತದೆ. ಮತ್ತೆಲ್ಲೋ ಮುಂದುವರೆದು ಹನ್ನೆರಡನೆಯ ಶತಮಾನದ ವಚನ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರ ಸಮಾನತೆಯನ್ನು ಉದಾಹರಿಸಿ ತನ್ನ ಪಾಪವನ್ನು ತೊಡೆದುಕೊಳ್ಳುತ್ತದೆ.

ಉಳಿದಂತೆ ಎಲ್ಲೂ ಮಹಿಳೆಯರ ಸ್ಥಿತಿಗತಿ, ಸ್ಥಾನಮಾನದ ಕುರಿತು ಈಗಿನ ಇತಿಹಾಸದ ಪಠ್ಯ ಪುಸ್ತಕಗಳು ಚಕಾರ ಎತ್ತುವುದಿಲ್ಲ. ಯಾವ ರಾಜರ ಕಾಲದಲ್ಲೂ ಮಹಿಳೆಯರ ಸ್ಥಾನ ಬದಲಾಗುವುದಿಲ್ಲ ಎಂಬುದು ಇತಿಹಾಸಕಾರರಿಗೂ ಗೊತ್ತು. ಹೀಗಾಗಿ ಬೀದಿ ಬದಿಯಲ್ಲಿ ಕೊಳಗದಲ್ಲಿ ಮುತ್ತು ರತ್ನವನ್ನು ಅಳತೆ ಮಾಡಿ ಮಾರುತ್ತಿದ್ದ ವಿಜಯನಗರ ಸಾಮ್ರಾಜ್ಯದ ಕಾಲವೇ ಇರಬಹುದು ಅಥವಾ ರಜಾಕಾರರ ಆಳ್ವಿಕೆಯೇ ಇರಬಹುದು. ಹೆಣ್ಣು ಯಾವತ್ತಿದ್ದರೂ ಒಳಮನೆಯ ಅಲಂಕಾರವಾಗಿ ಮಾತ್ರ ಬದುಕಬೇಕಾದವಳು ಎಂದು ತೀರ್ಮಾನಿಸಿಕೊಂಡಂತಿದೆ. ಆದರೆ ಇಂತಹ ಜನಪದ ಹಾಡುಗಳು ಮಾತ್ರ ಹೆಣ್ಣಿನ ಗೋಳನ್ನು ವಿವರಿಸುತ್ತವೆ. ಆದರೆ ದುರಂತವೆಂದರೆ ಇಂತಹ ಶೋಷಣೆಯ ಹಾಡುಗಳನ್ನೂ ತುಂಬ ವೈಭವಿಕರಿಸಿ ಶೃಂಗಾರಭರಿತವಾಗಿ ಹಾಡುವುದು.
ಸಿದ್ದಿನಾಸ ಎಂದು ಕರೆಯಲ್ಪಡುವ ಸಿದ್ದಿಗಳ ಮಹಾಕೂಟ ನಡೆಯುತ್ತದೆ. ಅಲ್ಲಿ ಪ್ರಸ್ತುತ ವಿವಿಧ ಧರ್ಮಗಳಲ್ಲಿ ಹರಿದು ಹಂಚಿ ಹೋಗಿರುವ ಎಲ್ಲ ಸಿದ್ದಿಗಳೂ ಸೇರುತ್ತಾರೆ. ಧಮ ಬೇರೆ ಬೇರೆಯಾದರೂ ಅವರ ಮೂಲ ಆಚರಣೆಗಳು ಇಂದಿಗೂ ಹಾಗೆಯೇ ಉಳಿದಿವೆ. ಮತ್ತೆ ಅವುಗಳನ್ನು ಸಿದ್ದಿ ನಾಸಾದಲ್ಲಿ ನೋಡಬಹುದು ಕೂಡ. ನಾಸಾಕ್ಕೆ ಬನ್ನಿ ಎಂದು ಜೂಲಿಯಾನಾ ಪದೇ ಪದೇ ಹೇಳುತ್ತಿದ್ದಾಗಲೂ ನನಗೆ ಹೋಗಲಾಗಿರಲೇ ಇಲ್ಲ, ಈಗಂತೂ ಕೊರೊನಾ ದೆಸೆಯಿಂದಾಗಿ ಸಿದ್ದಿನಾಸಾ ನಡೆಯುತ್ತಿದೆಯೋ ಇಲ್ಲವೋ ಅದೂ ಗೊತ್ತಾಗುತ್ತಿಲ್ಲ. ಸಿದ್ದಿನಾಸಾವು ಸಿದ್ದಿಗಳ ಬುಡಕಟ್ಟು ಸಂಪ್ರದಾಯ ಅಳಿಸಿ ಹೋಗದಂತೆ ಯುವಸಮುದಾಯಕ್ಕೆ ತನ್ನತನದ ಪರಿಚಯ ಮಾಡಿಕೊಡುತ್ತಿದೆ.
ಈ ಹಾಡು ಟಿಣಿಂಗ್ ಮಿಣಿಂಗ್ ಟಿಶ್ಯಾದಲ್ಲಿ ಹಳ್ಳಿ ಹೆಂಗಸು ಬೆಂಗಳೂರು ನೋಡಲು ಹೊರಡುತ್ತಾಳೆ. ಅಲ್ಲಿರುವ ಮಾಲಿಕ ಅವಳನ್ನು ಒಳಗೆ ಕರೆದುಕೊಂಡು ಬಾಗಿಲು ಹಾಕಿಕೊಳ್ಳುತ್ತಾನೆ. ಹುಬ್ಬಳ್ಳಿ ನೋಡುವ ಆಸೆಯಿಂದ ಹೋದರೆ ಅಲ್ಲೂ ಅದೇ ಕಥೆ. ಕೊನೆಗೆ ಊರಿನ ಸಮೀಪದ ಅತ್ತ ಪಟ್ಟಣವೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಅರೆ ಪಟ್ಟಣ ಮಂಚಿಕೇರಿ ಪಟ್ಟಣ ನೋಡಲು ಹೋದರೂ ಮಂಚಿಕೇರಿಯಲ್ಲಿರುವ ಮೇಲ್ವರ್ಗದ ಗಂಡಸು ಕೂಡ ಒಳಗೆ ಕರೆದು ಬಾಗಿಲು ಹಾಕಿಕೊಳ್ಳುತ್ತಾನೆ. ಪ್ರತಿ ಸೊಲ್ಲಿನ ನಂತರ ಬರುವ ಈ ವಿಶಿಷ್ಟ ಪದ ಟಿಣಿಂಗ ಮಿಣಿಂಗ ಟಿಶ್ಯಾ ಆ ಮುಚ್ಚಿದ ಬಾಗಿಲಿನ ಹಿಂದೆ ನಡೆದಿರಬಹುದಾದ ದೌರ್ಜನ್ಯವನ್ನು ರಂಜನೀಯವಾಗಿ ಹೇಳುತ್ತಿದೆ. ಇತಿಹಾಸದುದ್ದಕ್ಕೂ ರಾಮಾಯಣದ ಶೂರ್ಪನಖಿಯಿಂದ ಹಿಡಿದು ಇಂದಿನ ದಾನವ್ವಳವರೆಗೂ ಅಂದರೆ ಅಲ್ಲಿಂದ ಇಲ್ಲಿಯವರೆಗೆ ಕಾಣುವಂತೆ ಸಾಮಾಜಿಕವಾಗಿ ಕೆಳಸ್ತರದ ದಲಿತ, ಶೂದ್ರ ಮಹಿಳೆಯರ ಮೇಲೆ ತಮ್ಮ ಬಲವಂತದ ದೇಹಸುಖವನ್ನು ಹೊಂದುವುದು ತೋರಿಸುವುದು ಪೌರುಷ ಎಂದುಕೊಂಡಿರುವ ಗಂಡಸರ ಹಪಾಹಪಿತನ ಇಲ್ಲಿ ಗೋಚರವಾಗುತ್ತದೆ.
ಇನ್ನೂ ನಾಗರಿಕ ಪ್ರಪಂಚಕ್ಕೆ ಅಂಬೆಗಾಲಿಡುತ್ತಿರುವ ಸಿದ್ದಿ ಜನಾಂಗ ಅನುಭವಿಸಿರಬಹುದಾದ ಯಾತನೆಯನ್ನು ಹಾಡಿನಲ್ಲಿ ವ್ಯಕ್ತಪಡಿಸಿದಂತೆ, ಕರಾವಳಿಯುದ್ದಕ್ಕೂ ಹಬ್ಬಿಕೊಂಡಿರುವ ಆಗೇರ, ಮುಕ್ರಿ, ಹಳ್ಳೇರ ಮುಂತಾದ ದಲಿತಕೇರಿಯ ಮಹಿಳೆಯರು ಹಾಡುವ ಹಾಡೊಂದಿದೆ.
ಸೋಮಿ ಸುಕ್ರಿ ಬೆಡ್ಕೋಗಿತ್ರೋ
ಅಲ್ಲೊಂದ್ ಕೋಡಾ ಘೂಕ್ ಎಂದೀತೋ
ಸದಾ ಕಾಡಿನ ಉತ್ಪನ್ನಗಳನ್ನು ಹುಡುಕುತ್ತ ಅಲೆದಾಡುವ ಈ ದಲಿತ ಸಮಾಜದ ಮಹಿಳೆಯರು ತಮ್ಮ ಯಾವುದೋ ಕೆಲಸಕ್ಕಾಗಿ ವೆಟ್ಟಕ್ಕೆ ಹೋಗಿರಬಹುದು. ಅಥವಾ ತಮ್ಮ ದೈನಂದಿನ ತುರ್ತಿಗಾಗಿಯೂ ಹೋಗಿರಬಹುದು. ಅಲ್ಲಿ ಒಂದು ಮಂಗ ಘೂಕ್ ಎಂದು ಕೂಗಿರಬಹುದು. ಇದು ಪ್ರಕೃತಿ ಸಹಜ ಎಂದು ಭಾವಿಸಿಕೊಂಡರೆ ಅದು ತಪ್ಪು ಕಲ್ಪನೆ. ಯಾಕೆಂದರೆ ಬೆಟ್ಟದಲ್ಲಿ ಹಾಗೆ ಹಿಂಬಾಲಿಸಿಕೊಂಡು ಹೋಗಿ ಘೂಕ್ ಎಂದು ಹೆದರಿಸಿ ವಶಪಡಿಕೊಂಡ ನಾಗರಿಕ ಎನ್ನಿಸಿಕೊಂಡ ದೊಡ್ಡ ದೊಡ್ಡ ಕುಳಗಳನ್ನು ಹೆಸರಿಸಲಾಗದ ಅಸಹಾಯಕತೆ ಇದು.
ಇದು ತಳುಕಿನ ಕಾಲ. ಇನ್ನೊಬ್ಬರ ಅಸಹಾಯಕತೆಯನ್ನು ಹಣ ಮಾಡಿಕೊಳ್ಳಲು ಬಳಸುವ ಕಾಲ.ಸಿದ್ದಿ ಮಹಿಳೆಯರ ಸಾವಕಾರ ಅಂದರ ಬುಲಾಯಾ, ದರವಾಜಾ ಲಗಾಯ ಎನ್ನುವುದೀಗ ರಸಮಯ ಹಾಡಾಗಿದೆ. ಆದರೆ ದೌರ್ಜನ್ಯಗಳೆಲ್ಲ ಮುಗಿದು ಬದುಕೂ ಸುಖಮಯ ಆಗುವುದು ಯಾವಕಾಲಕ್ಕೋ?

ಲೇಖಕರ ಪರಿಚಯ:

ಕನ್ನಡ ಸಾರಸ್ವತ ಲೋಕದಲ್ಲಿ ಶ್ರೀದೇವಿ ಕೆರೆಮನೆ ಚಿರಪರಿಚಿತ ಹೆಸರು. ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡನಾಡಿನ ಕರಾವಳಿಯವರು (ಉತ್ತರ ಕನ್ನಡ) ಹೊಸ ರೀತಿಯಲ್ಲಿ ಬರೆಯುತ್ತಿರುವ ಅವರು ಕಾವ್ಯ ಕಟ್ಟುವ ಕ್ರಿಯೆಯಲ್ಲಿ ಸಿದ್ಧಹಸ್ತರು.  ಕಥೆ, ಕಾದಂಬರಿ – ಲಲಿತ ಪ್ರಬಂಧ ಏನೇ ಬರೆದರೂ ಅವುಗಳ ಸಮಾಜದ ಒಳಿತು ಕೆಡುಕಗಳ ಬಗ್ಗೆ ಪಾತಾಳ ಗರಡಿ ಹಾಕಿ ಬರೆದವುಗಳೇ ಆಗಿರುತ್ತವೆ. ತೇಲಿಸಿ ಬರೆಯುವುದು ಅವರಿಗೆ ಗೊತ್ತಿಲ್ಲ. ದಿಟ್ಟ ಬರೆಹಗಳು. ಇವರ ಕೃತಿಗಳು ಜನಮೆಚ್ಚುಗೆ ಜೊತೆಜೊತೆಗೆ ವಿರ್ಮಶಕರ ಮೆಚ್ಚುಗೆಯನ್ನೂ, ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಗಳಿಸಿವೆ. ಇವರ ಅಂಕಣ ಬರೆಹಗಳು “ಮುಖಗಳು” ಹೆಸೆರಿನಲ್ಲಿ ಪ್ರತಿವಾರ ದೇಶದ ಹಳೆಯ, ಪ್ರತಿಷ್ಠಿತ ಯು.ಎನ್.ಐ. ಯಲ್ಲಿ ಪ್ರಕಟವಾಗುತ್ತವೆ ಎಂದು ತಿಳಿಸಲು ಸಂತೋಷವಾಗುತ್ತದೆ.

Share