Connect with us


      
ಕರ್ನಾಟಕ

ಮೂರು ಪಟ್ಟು ಪರಿಹಾರ ನೀಡಬೇಕು – ಸಿದ್ದರಾಮಯ್ಯ

Iranna Anchatageri

Published

on

ಬೆಳಗಾವಿ (ಸುವರ್ಣ ವಿಧಾನಸೌಧ) ಡಿಸೆಂಬರ್ 14 (ಯು.ಎನ್.ಐ.) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳೆ ಹಾನಿ ಕುರಿತಂತೆ ನಿಲುವಳಿ ಸೂಚನೆ 69ರಡಿ ವಿಧಾನಸಭೆಯಲ್ಲಿ ಮಾತನಾಡಿದರು. ನಿನ್ನೆಯ ಪ್ರಾಸ್ತಾವಿಕವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಇಂದು ಅತಿವೃಷ್ಟಿ ಕುರಿತಂತೆ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಸಭೆಯ ಮುಂದಿಟ್ಟರು.

ರಾಜ್ಯದಲ್ಲಿ ಕೊಯ್ಲಿಗೆ ಬಂದ ಬೆಳೆ ಹಾನಿಯಾಗಿದೆ. ಕೈಗೆ ತುತ್ತು ಬಾಯಿಗೆ ಬರದಂತಾಗಿದೆ ಅಂತಾ ಮಾತು ಆರಂಭಿಸಿದ ಸಿದ್ದರಾಮಯ್ಯ, ಕಲಾಪದಲ್ಲಿ ಪ್ರಮುಖ ಸಚಿವರುಗಳೇ ಇಲ್ಲದಿರುವುದನ್ನು ಸಹ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ವಿಪಕ್ಷ ನಾಯಕರು ಪ್ರಮುಖ ವಿಚಾರವನ್ನು ಎತ್ತಿದಾಗ ಸದನದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಸಚಿವರು ಗೈರಾಗಿರುವುದನ್ನು ಪ್ರಶ್ನೆ ಮಾಡಿದರು. ಈ ವೇಳೆ, ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ಕಂದಾಯ ಸಚಿವ ಅಶೋಕ್ ಅವರು ಪರಿಷತ್ ಕಲಾಪದಲ್ಲಿ ಭಾಗಿಯಾಗಿದ್ದಾರೆ. ಪ್ರಶ್ನೋತ್ತರ ಮುಗಿಸಿಕೊಂಡು ಸಭೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಮೂರು ವರ್ಷಗಳಲ್ಲಿ ಅಂದರೆ 2019, 2020 ಹಾಗೂ 2021 ರಲ್ಲಿ ಪ್ರವಾಹ, ಅತಿವೃಷ್ಟಿ, ಬರಗಾಲ ಕಾಣಿಸಿಕೊಂಡಿದೆ. ಕಳೆದ 60 ವರ್ಷಗಳಲ್ಲಿ ಕಾಣದಂತಹ ಮಳೆಯನ್ನು ಈ ಬಾರಿ ರಾಜ್ಯ ಕಂಡಿದೆ ಎಂದು ಸಿದ್ದರಾಮಯ್ಯ ಸಭೆಯ ಗಮನ ಸೆಳೆದರು.

2019ರಲ್ಲಿ ಮನೆ ಕಳೆದುಕೊಂಡವರಿಗೆ ಸಿಕ್ಕಿಲ್ಲ ಪರಿಹಾರ

2019ರಲ್ಲಿ ಉತ್ತರ ಕರ್ನಾಟಕದಲ್ಲಿ ಅತ್ಯಧಿಕ ಮಳೆ ಬಿದ್ದಿದೆ. ಈ ವೇಳೆ 2 ಲಕ್ಷ 76 ಸಾವಿರ ಮನೆಗಳು ಮಳೆ ಹಾನಿಗೆ ತುತ್ತಾಗಿವೆ. ಆದರೆ, ಮನೆ ಕಳೆದುಕೊಂಡ 1 ಲಕ್ಷ 33 ಸಾವಿರ ಕುಟುಂಬಗಳಿಗೆ ಪರಿಹಾರ ಸಿಕ್ಕಿದೆ. ಉಳಿದವರಿಗೆ ನೆರವು ದೊರೆತಿಲ್ಲ ಎಂದು ಆಪಾದಿಸಿದರು.

ಗೋಕಾಕ್, ರಾಯಭಾಗ ತಾಲೂಕುಗಳಿಗೆ ಭೇಟಿ ನೀಡಿದಾಗ 50ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿ ಅರ್ಜಿ ನೀಡಿದರು. 2019ರಲ್ಲಿ ನಾವು ಮನೆ ಕಳೆದುಕೊಂಡಿದ್ದೇವೆ. ಆದರೆ, ಇದುವರೆಗೂ 5 ಲಕ್ಷ ರೂಪಾಯಿ ಪರಿಹಾರ ಸಿಕ್ಕಿಲ್ಲ ಎಂದು ತಮಗೆ ದೂರಿದ್ದಾರೆ. ಅಲ್ಲದೆ, ಪರಿಹಾರ ಸಿಗದಿದ್ದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯರು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಎನ್ ಡಿ ಆರ್ ಎಫ್ ನಿಯಮ ಪರಿಷ್ಕರಿಸಬೇಕು

ಎನ್ ಡಿ ಆರ್ ಎಫ್ ನಿಯಮದ ಪ್ರಕಾರ ಶೇಕಡಾ 33ಕ್ಕಿಂತ ಅಧಿಕ ಬೆಳೆ ಹಾನಿಯಾಗಿದ್ದರೆ ಮಾತ್ರ ಪರಿಹಾರ ನೀಡಲು ಪರಿಗಣಿಸುತ್ತದೆ. 32.99ರಷ್ಟು ಹಾನಿಯಾದರೆ ಎನ್ ಡಿ ಆರ್ ಎಫ್ ಪರಿಗಣಿಸಲ್ಲ. ಅಲ್ಲದೆ, ಕೇವಲ ಜಮೀನಿನಲ್ಲಿ ಬೆಳೆದು ನಿಂತ  ಬೆಳೆಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಆದರೆ, ರಾಶಿ ಮಾಡಿದ (ಕಣದಲ್ಲಿ ಮಳೆ ಬಂದು ಬೆಳೆ ಹಾನಿ) ಧಾನ್ಯಗಳು ಮಳೆಗೆ ತುತ್ತಾದರೆ ರೈತರಿಗೆ ಪರಿಹಾರ ಸಿಗಲ್ಲ. ಈ ನಿಯಮಗಳು ಬದಲಾಗಬೇಕೆಂದ ಸಿದ್ದರಾಮಯ್ಯ, 20 ವರ್ಷಗಳ ಹಿಂದೆ ಜಾರಿಗೆ ಬಂದಿರುವ ಎನ್ ಡಿ ಆರ್ ಎಫ್ ಅನ್ನು ಈವರೆಗೆ ಪರಿಷ್ಕರಣೆ ಮಾಡಿಲ್ಲ. ರಾಜ್ಯ ಸರ್ಕಾರ ಇದನ್ನು ಪರಿಷ್ಕರಣೆ ಮಾಡಲು ಮುಂದಾಗಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.

ಕಾಂಗ್ರೆಸ್ ಅಧಿಕಾರವಿದ್ದಾಗ ತೊಗರಿ, ದ್ರಾಕ್ಷಿ, ಕಬ್ಬು, ಭತ್ತ ಹಾನಿ ಸಂಭವಿಸಿದಾಗ ಎನ್ ಡಿ ಆರ್ ಎಫ್ ನಿಯಮ ಮೀರಿ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ಪ್ರತಿ ಹೆಕ್ಟೇರ್ ಗೆ ಎಷ್ಟೆಷ್ಟು ಪರಿಹಾರ ಸಿಗುತ್ತೆ?

ಎನ್ ಡಿ ಆರ್ ಎಫ್ ಕೊಡುತ್ತಿರುವ ಬೆಳೆ ಹಾನಿ ರೈತರಿಗೆ ಸಾಲುತ್ತಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಒಣ ಬೇಸಾಯದಲ್ಲಿನ 1 ಹೆಕ್ಟೇರ್ ಜಮೀನಿಗೆ 6,800 ರೂ. ಪರಿಹಾರ, ನೀರಾವರಿ 1 ಹೆಕ್ಟೇರ್ ಜಮೀನಿಗೆ 13,500 ರೂ. ಪರಿಹಾರ, ತೋಟಗಾರಿಕೆ ಬೇಸಾಯದಲ್ಲಿನ 1 ಹೆಕ್ಟೇರ್ ಜಮೀನಿಗೆ 18 ಸಾವಿರ ಪರಿಹಾರ ನೀಡಲಾಗುತ್ತಿದೆ. ಇದನ್ನು ಮೂರು ಪಟ್ಟ ಹೆಚ್ಚಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರದ ಮುಂದೆ  ಬೇಡಿಕೆ ಇಟ್ಟರು.

ಕ್ರಮವಾಗಿ ಪ್ರತಿ ಹೆಕ್ಟೇರ್ ಒಣ ಬೇಸಾಯಕ್ಕೆ 3 ಪಟ್ಟು ಅಂದರೆ 20,400, ನೀರಾವರಿಗೆ 40,500 ಹಾಗೂ ತೋಟಗಾರಿಕೆ ಬೆಳೆಗಳಿಗೆ 54 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು. ಎನ್ ಡಿ ಆರ್ ಎಫ್ ನಿಯಮದ ಪ್ರಕಾರ ಗರಿಷ್ಠ 2 ಹೆಕ್ಟೇರ್ ಗೆ ಮಾತ್ರ ಪರಿಹಾರ ನೀಡುತ್ತಿದೆ. ಆದ್ದರಿಂದ ಈಗಿರುವುದಕ್ಕಿಂತ ಬೆಳೆಹಾನಿ ಪರಿಹಾರವನ್ನು 3 ಪಟ್ಟು ಹೆಚ್ಚಿಸಬೇಕು. ಇದರಿಂದ ರೈತರಿಗೆ ಬಿತ್ತನೆ ಬೀಜದ ಖರ್ಚಾದ್ರೂ ವಾಪಸ್ ಬರುತ್ತದೆ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಎನ್ ಡಿ ಆರ್ ಎಪ್ ನಿಯಮಗಳನ್ನು ಮೀರಿ ಪರಿಹಾರ ನೀಡಬೇಕಾದ ಪರಿಸ್ಥಿತಿ ಈಗ ಉದ್ಭವಿಸಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಯುವಕರು ಕೃಷಿಯಿಂದ ಹಿಂದೆ ಸರಿಯುತ್ತಾರೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಆಹಾರ ಕೊರತೆ ಉಂಟಾಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಇಲ್ಲ!

ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೇ ಇಲ್ಲ ಎಂದು ರಾಜ್ಯ ಸರ್ಕಾರವನ್ನು ಚುಚ್ಚಿದ ಸಿದ್ದರಾಮಯ್ಯ, “ಆರ್ ಅಶೋಕ್ ನೀನು ಯಾವ ಜಿಲ್ಲಾ ಮಂತ್ರಿಪಾ” ಎಂದು ಪ್ರಶ್ನೆ ಮಾಡಿದರು. ಕೋಲಾರ ಜಿಲ್ಲಾ ಮಂತ್ರಿ ಯಾರು ಎಂದು ಪ್ರಶ್ನೆ ಮಾಡಿದಾಗ ಮುನಿರತ್ನ ಎಂದು ಅಶ್ವಥ್ ನಾರಾಯಣ ಉತ್ತರಿಸಿದರು. ಮುನಿರತ್ನ ಹೆಸರಿನಲ್ಲಿ ಗೊಂದಲ ಅಡಗಿದೆ. ಮುನಿ.. ರತ್ನ ಒಂದೊಕ್ಕೊಂದು ಹೊಂದಾಣಿಕೆನೆ ಇಲ್ಲ ಎಂದ ಸಿದ್ದರಾಮಯ್ಯ, ಮುನಿರತ್ನ ಕೋಲಾರಕ್ಕೆ ಭೇಟಿ ಕೊಟ್ಟಿದ್ದಾರೆಯೇ ಎಂದು ತಿವಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಮಂತ್ರಿಗಳು ಇದ್ದಾರೆ. ಆದರೆ, ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಚಿವರುಗಳು ಭೇಟಿ ನೀಡಿಲ್ಲ. ಆದರೆ, ಮುಖ್ಯಮಂತ್ರಿ, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಸಚಿವರಿಗೆ ಮಾತ್ರ ಭೇಟಿ ನೀಡುವ ಅವಕಾಶವಿದೆ ಎಂದು ಅಶೋಕ್ ಸಮರ್ಥನೆ ಮಾಡಿಕೊಂಡರು.

ಇದಕ್ಕೆ ಪ್ರತ್ಯುತ್ತ ನೀಡಿದ ಸಿದ್ದರಾಮಯ್ಯ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಚಿವರುಗಳು ಜಿಲ್ಲೆಗಳಿಗೆ ಭೇಟಿ ನೀಡಬಹುದು. ಆದರೆ, ಅಧಿಕಾರಿಗಳಿಂದ ಮಾಹಿತಿ ಪಡೆಯುವಂತಿಲ್ಲ ಅನ್ನೋ ನಿಯಮ ನನಗೆ ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ನೀವು ಹೋಗಿ ಪ್ರಚಾರ ಮಾಡಿದ್ದು ತಮ್ಗೂ ಗೊತ್ತಿದೆಯಲ್ಲವೇ ಎಂದು ಅಶೋಕ್ ಹಾಸ್ಯ ಚಟಾಕಿ ಹಾರಿಸಿದರು.

ರಾಜ್ಯದ 31 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ಅತಿವೃಷ್ಟಿ ಸಂಭವಿಸಿದೆ. ಹನ್ನೆರಡೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ನಿನ್ನೆ ಹೇಳಿದ್ದೆ ಆದರೆ, ರಾಜ್ಯದಲ್ಲಿ ಆಗಿದ್ದು 13 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಎಂಬುದು ಅಧಿಕಾರಿಗಳು ಇಂದು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ರಾಗಿಯನ್ನು 6.9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 13 ಲಕ್ಷ ಟನ್ ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಆದರೆ, ಶೇಕಡ 75ರಷ್ಟು ಹಾನಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಹೀಗಾಗಿ ಎನ್ ಡಿ ಆರ್ ಎಫ್ ನಿಯಮಗಳನ್ನು ಮೀರಿ ರಾಜ್ಯ ಸರ್ಕಾರ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ರಾಜ್ಯದಲ್ಲಿ 33 ಸಾವಿರ ಮನೆಗಳು ಬಿದ್ದು ಹೋಗಿವೆ. 12 ರಿಂದ 13 ಲಕ್ಷ ಎಕರೆ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಇನ್ನೊಂದು ಬಾರಿ ಅಧಿಕಾರಿಗಳು ಸರಿಯಾಗಿ ಸರ್ವೇ ಕಾರ್ಯವನ್ನು ಮಾಡಬೇಕು. ಅಲ್ಲದೆ, ಅದನ್ನು ನಮೋದಿಸಬೇಕು ಎಂದು ಸಿದ್ದರಾಮಯ್ಯ ಬೇಡಿಕೆ ಇಟ್ಟರು.

ಈವರೆಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನಾಲ್ಕು ಬಾರಿ ಮೆಮೋರಾಂಡಮ್ ಬರೆಯಲಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಒಂದು ಪೈಸೆ ಬಂದಿಲ್ಲ. 2019ರಲ್ಲಿ 1,652 ಕೋಟಿ ರೂಪಾಯಿ ಪರಿಹಾರ ನೀಡಲಾಗಿತ್ತು. ಆದರೆ ಎಸ್ ಡಿ ಆರ್ ಎಫ್ ರಾಜ್ಯದಲ್ಲಿ ಆಗಿರುವ ಹಾನಿ 3,891 ಕೋಟಿ ರೂಪಾಯಿ ಎಂದು ಅಂದಾಜು ಮಾಡಿತ್ತು. 2020ರಲ್ಲಿ 1,318 ಪರಿಹಾರ ನೀಡಲಾಗಿದೆ. ಎರಡು ವರ್ಷಗಳು ಸೇರಿ ಒಟ್ಟು 2,971 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಸಭೆಗೆ ಸಿದ್ದರಾಮಯ್ಯ ತಿಳಿಸಿದರು.

Share