Connect with us


      
ಕರ್ನಾಟಕ

ಬೆಳೆ ಹಾನಿ ಪರಿಹಾರ ನೀಡಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಿ: ಸಿದ್ದರಾಮಯ್ಯ

Iranna Anchatageri

Published

on

ಬೆಳಗಾವಿ: (ಸುವರ್ಣ ವಿಧಾನಸೌಧ) ಡಿಸೆಂಬರ್ 15 (ಯು.ಎನ್.ಐ.)  ಬೆಳೆ ಹಾನಿ ಪರಿಹಾರ ಕುರಿತು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿರುವ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಕೇಂದ್ರ ಸಚಿವರ ವೈಫಲ್ಯವನ್ನು ಎತ್ತಿತೋರಿಸಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯವನ್ನು ಪ್ರತಿನಿಧಿಸುತ್ತಾರೆ. 25 ಸಂಸದರು ರಾಜ್ಯದಿಂದ ಆಯ್ಕೆಯಾಗಿದ್ದೀರಿ. ನೀವು ಸಂಸತ್ತಿನಲ್ಲಿ ಪ್ರಶ್ನೆ ಮಾಡಿದ್ದೀರಾ? ಬೆಳೆ ಹಾನಿ, ಮನೆ ಕಳೆದುಕೊಂಡವರಿಗೆ ಈವರೆಗೆ ರಾಜ್ಯ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಯುಪಿಎ ಹಾಗೂ ಮೋದಿ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು  ಪಾಲು ಸಿಕ್ಕಿದೆ ಅನ್ನೋದನ್ನ ಅಂಕಿ-ಅಂಶಗಳ ಆಧಾರದ ಮೇಲೆ ಸಭೆಯ ಮುಂದೆ ಇಟ್ಟರು. ಮನಮೋಹನ್ ಸಿಂಗ್ ಅವಧಿಯಲ್ಲಿ ಕೇಂದ್ರ ಸರ್ಕಾರದ ಪಾಲು 726 ಕೋಟಿ ಬಂದಿದೆ. ಮೋದಿ ಸರ್ಕಾರವಿದ್ದಾಗ ಕೇಂದ್ರ ಸರ್ಕಾರದ ಪಾಲು ಎಸ್ ಡಿ ಆರ್ ಎಫ್ ಅಡಿ 2,916 ಕೋಟಿ ರೂಪಾಯಿ ಬಂದಿದೆ. ಆರು ವರ್ಷಗಳ ಅವಧಿಯ ಹೋಲಿಕೆ ಮಾಡಿದಾಗ ಮೋದಿ ಸರ್ಕಾರ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಅಶೋಕ್ ತಿಳಿಸಿದರು.

ಮನಮೋಹನ್ ಸಿಂಗ್ ಅವಧಿಯಲ್ಲಿ  2,669 ಕೋಟಿ ಎನ್ ಡಿ ಆರ್ ಎಫ್  ಪಾಲನ್ನು ನೀಡಲಾಗಿತ್ತು. ಮೋದಿ ಅವಧಿಯಲ್ಲಿ 10,597 ಕೋಟಿ ರೂಪಾಯಿ. 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಎಸ್ ಡಿ ಆರ್ ಎಫ್  ಅಡಿಯಲ್ಲಿ 2015-19 ಸಾಲಿನಲ್ಲಿ 200-240 ಕೋಟಿ ಅನುದಾನ ಬಿಡುಗಡೆಗೊಳಿಸಲಾಯಿತು. ಆಮೇಲೆ 15ನೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟ ಮೇಲೆ 790 ಕೋಟಿ ಪರಿಷ್ಕೃತ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.

ಕೇಂದ್ರ ಸರ್ಕಾರದಿಂದ ಬರುವ ಹಣ ಕಡಿಮೆಯಾಗಿದೆ. ಹೀಗಾದ್ರೆ ರಾಜ್ಯದ ಅಭಿವೃದ್ಧಿ ಹೇಗೇ ಆಗಲು ಸಾಧ್ಯ. ಯಾವುದಕ್ಕೂ ಕೇಳಿದರೂ ಹಣ ಇಲ್ಲ ಎಂದು ಮಂತ್ರಿಗಳು ಹೇಳುತ್ತಿದ್ದಾರೆ. ಹೀಗಾಗಿ ನೀವು ತೊಲಗಿ. ನಾವು ಅಧಿಕಾರಕ್ಕೆ ಬಂದು ಏನಾದರೂ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು. ಇನ್ನು ಅಧಿಕಾರದಲ್ಲಿ 20 ವರ್ಷ ನಾವೇ ಇರುತ್ತೇವೆ ಎಂದು ಅಶೋಕ್ ಹೇಳಿದಾಗ ಸಿದ್ದರಾಮಯ್ಯ ಆಕ್ರೋಶಗೊಂಡು 20 ವರ್ಷ ಉಳಿದುಕೊಳ್ಳಲು ಗೂಟ ಹೊಡೆದುಕೊಂಡು ಇರಕ್ಕಲ್ಲ. ಇದು ಪ್ರಜಾಪ್ರಭುತ್ವ ಎಂದು ತಿರುಗೇಟು ನೀಡಿದರು.

2019-20ರಲ್ಲಿ ಬಿಜೆಪಿ ಸರ್ಕಾರ ಇತ್ತು. 39,806 ಕೋಟಿ ಬರುತ್ತದೆ ಎಂದು ಬಜೆಟ್ ನಲ್ಲಿ ಬರೆದುಕೊಂಡಿದ್ದೀರಿ. ಆದರೆ, ಬಂದಿದ್ದು 30,919 ಕೋಟಿ ರೂಪಾಯಿ. 9 ಸಾವಿರ ಕೋಟಿ ಕಡಿಮೆಯಾಯಿತು. ಅದೇ ರೀತಿ 2020-2021 ಸಾಲಿನಲ್ಲಿ 28,500 ಕೋಟಿ ಹೇಳಿದ್ದೀರಿ. ಆದರೆ, ಬಂದಿದ್ದು 21,495 ಕೋಟಿ ರೂಪಾಯಿ. ರಾಜ್ಯಕ್ಕೆ ಬರಬೇಕಾದ 18 ಸಾವಿರ ಕೋಟಿ ರೂಪಾಯಿ ನಮ್ಮ ಪಾಲಿನ ಹಕ್ಕು ಆಗಿದ್ದು, ರಾಜ್ಯದಿಂದ ಕೇಂದ್ರ ಸಂಗ್ರಹಿಸಿದೆ. ಆದರೆ, ಕೇಂದ್ರ ಸರ್ಕಾರ ಅನುದಾನ ಕೊಡಲಿಲ್ಲ. ಈ ಹಣ ಬಂದಿದ್ದರೇ ಬೆಳೆ ಹಾನಿಗೊಳಗಾದ ರೈತರಿಗೆ 3 ಪಟ್ಟು ಪರಿಹಾರ ಕೊಡಬಹುದಾಗಿತ್ತಲ್ಲವೇ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.

21 ಲಕ್ಷ ರೈತರಿಗೆ ಪರಿಹಾರ ಕೊಡುತ್ತೇವೆ ಎಂದಿದ್ದರು. ಎಷ್ಟು ರೈತರಿಗೆ ಪರಿಹಾರ ಕೊಟ್ಟಿದ್ದೀರಿ? ಕೈಲಾಗದವರು ಮೈ ಪರಿಚಿಕೊಂಡ್ರು ಅನ್ನೋ ಹಾಗೆ ಏನೋ ಕಾರಣ ಹೇಳೋದಲ್ಲ. ರಾಜ್ಯ ಸರ್ಕಾರದಿಂದ ಪರಿಹಾರ ಕೊಡಲಾಗುತ್ತಿಲ್ಲ. ಕೇಂದ್ರದಿಂದ 1 ಪೈಸೆ ಬಂದಿಲ್ಲ. ಮನೆ ಕಳೆದುಕೊಂಡವರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ ಸಿದ್ದರಾಮಯ್ಯ ಸಭೆಗೆ ತಿಳಿಸಿದರು.

Share