Connect with us


      
ಕರ್ನಾಟಕ

ಅಕ್ರಮ ದಾಖಲೆ ಸೃಷ್ಟಿಸಿ ಜಮೀನು ಮಂಜೂರು-ಕೆ.ರಂಗನಾಥ್ ಅಮಾನತು-ಎಸ್‌ಐಟಿ ರಚನೆ: ಸಿಎಂ

Iranna Anchatageri

Published

on

ವಿಧಾನಸಭೆ/ಬೆಂಗಳೂರು: ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಿ ಜಮೀನು ಮಂಜೂರು ಮಾಡಿಸಿಕೊಂಡಿರುವ ಪ್ರಕರಣಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ವಿಧಾನಸಭೆಯಲ್ಲಿ ನಿಯಮ69 ರಡಿ ಜೆಡಿಎಸ್ ಸದಸ್ಯ ಎ.ಟಿ. ರಾಮಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಭೂಗಳ್ಳರ ವಿರುದ್ಧ ಎ.ಟಿ.ರಾಮಸ್ವಾಮಿ ಅವರು ಧ್ವನಿ ಎತ್ತಿ ಬೇತಾಳನ್ನಂತೆ ಬೆನ್ನು ಹತ್ತಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಯಡಿಯೂರಪ್ಪ ಅವರು ಸಿಎಂ ಆದ ಮೇಲೆ ಭೂಕಬಳಿಕೆ ವಿರುದ್ಧ ತನಿಖೆ ನಡೆಸಲು ಸಮಿತಿ ರಚನೆ ಮಾಡಿದರು. ನಕಲಿ ದಾಖಲೆ ಸೃಷ್ಠಿಸುವವರು ಅಧಿಕಾರಿಗಳೊಂದಿಗೆ ಶಾಮೀಲಾಗಿ ಅಕ್ರಮ ಸೃಷ್ಠಿಸುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ದ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಲಿದೆ.

ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಜಮೀನು ಮಂಜೂರು ಮಾಡಿರುವ ವಿಭಾಗಾಧಿಕಾರಿ ಕೆ. ರಂಗನಾಥ ಅವರು ಅಕ್ರಮವಾಗಿ ಜಮೀನು ಮಂಜೂರು ಮಾಡಿರುವ ಪ್ರಕರಣಗಳನ್ನು ಎಸಿಬಿಯಿಂದ ತನಿಖೆ ನಡೆಸಲು ಆದೇಶ ನೀಡುವುದಾಗಿ ತಿಳಿಸಿದರು. ಅಲ್ಲದೇ ತಕ್ಷಣ ಕೆ. ರಂಗನಾಥ ಅವರನ್ನು ಅಮಾನತು ಮಾಡಲಾಗುವುದು ಎಂದರು. ಇನ್ನು ರಾಜ್ಯದಲ್ಲಿ ಅಕ್ರಮ ದಾಖಲೆ ಸೃಷ್ಠಿಗೆ ಸಹಕಾರ ನೀಡಿರುವ ಯಾವುದೇ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ತನಿಖೆ ನಡೆಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚನೆ ಮಾಡಲಾಗುವುದು. ಎ.ಟಿ.ರಾಮಸ್ವಾಾಮಿ ಅವರ ಶ್ರಮ ವ್ಯರ್ಥವಾಗಲು ಸರ್ಕಾರ ಬಿಡುವುದಿಲ್ಲ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಜೆಡಿಎಸ್ ಸದಸ್ಯ ಎ.ಟಿ. ರಾಮಸ್ವಾಮಿ, ಬೆಂಗಳೂರಿನ ವಿವಿಧ ತಾಲೂಕು ವ್ಯಾಪ್ತಿಯಲ್ಲಿ ಕೆ. ರಂಗನಾಥ ಎನ್ನುವ ಬೆಂಗಳೂರು ಉತ್ತರ ತಾಲೂಕಿನ ಉಪ ವಿಭಾಗಾಧಿಕಾರಿ ಅಕ್ರಮ ದಾಖಲೆ ಸೃಷ್ಠಿಸಿ ಭೂಮಿ ಮಂಜೂರು ಮಾಡಿರುವ ಬಗ್ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಜುನಾಥ ಪ್ರಸಾದ್ ಮುಖ್ಯಕಾರ್ಯದರ್ಶಿಗೆ ದಾಖಲೆ ಸಮೇತ ವರದಿ ಸಲ್ಲಿಸಿದರೂ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರ ಇದಿಯಾ ಎಂದು ಪ್ರಶ್ನಿಸಿದರು. ಅವರ ಪ್ರಸ್ತಾಪಕ್ಕೆ ಬೆಂಬಲಿಸಿ ನಗರ ಪ್ರದೇಶಗಳಲ್ಲಿ ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಿ ಜಮೀನು ಒತ್ತುವರಿ ಮಾಡಿರುವವರ ವಿರುದ್ಧ ಸಮಗ್ರ ತನಿಖೆ ನಡೆಸುವಂತೆ ವಿಧಾನಸಭೆಯಲ್ಲಿ ಪಕ್ಷ ಬೇಧ ಮರೆತು ಶಾಸಕರು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಎಸಿ ದರ್ಜೆಯ ಅಧಿಕಾರಿಗಳು ನಿಯಮ ಬಾಹಿರವಾಗಿ ಜಮೀನು ಮಂಜೂರು ಮಾಡಿಕೊಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿದರೂ, ಮುಖ್ಯಕಾರ್ಯದರ್ಶಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಅವರೂ ಶಾಮೀಲಾಗಿದ್ದಾಾರೆ ಎಂದು ಭಾವಿಸಬೇಕಾ ಎಂದು ರಾಮಸ್ವಾಮಿ ಪ್ರಶ್ನಿಸಿದರು. ಭಾರತ ಮಾತೆಯ ಹೆಸರಿನಲ್ಲಿ ಅತ್ಯಾಚಾರ, ಅನಾಚಾರ ಮಾಡಿಕೊಂಡು ಭೂತಾಯಿಯನ್ನು ಬೇಕಾಬಿಟ್ಟಿಯಾಗಿ ಪರಭಾರೆ ಮಾಡಿಕೊಂಡು ಹೋಗುತ್ತಿದ್ದರೂ, ನಾವೆಲ್ಲ ಏನೂ ಮಾಡದಿದ್ದರೆ ಇಲ್ಲಿಗೆ ಏನಕ್ಕೆ ಬಂದಿದ್ದೇವೆ ಎಂದು ಪ್ರಶ್ನಿಸಿದರು.

ಸರ್ಕಾರವೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರ ಜೀವಂತವಾಗಿದಿಯಾ ಎಂದು ಪ್ರಶ್ನಿಸಿದರು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ವರದಿ ನೀಡಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಏನು ಎಂದು ಪ್ರಶ್ನಿಸಿದರು. ಈ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿದರೆ ರಾಜ್ಯ ಸರ್ಕಾರಕ್ಕೆ ಸುಮಾರು 5 ಲಕ್ಷ ಕೋಟಿ ರೂ. ಆದಾಯ ಬರಲಿದ್ದು, ಎರಡು ವರ್ಷಗಳ ಬಜೆಟ್ ಹಣ ಬರಲಿದೆ ಎಂದು ಹೇಳಿದರು.

ನಕಲಿ ದಾಖಲೆ ಸೃಷ್ಠಿಸಿದವರನ್ನು ಭೂಮಾಲಿಕರಂತೆ ಪರಿಗಣಿಸಲಾಗುತ್ತಿದೆ. ಅಂತಹವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಅವರನ್ನು ಒಳಗೆ ಹಾಕಬೇಕು ಎಂದು ಆಗ್ರಹಿಸಿದರು.

ರಮೇಶ್‌ಕುಮಾರ್ ಅಭಿಪ್ರಾಯ
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆೆಸ್ ಸದಸ್ಯ ರಮೇಶ್ ಕುಮಾರ್, ನೀವು ಎಸಿಗಳ ಬಗ್ಗೆ ಮಾತನಾಡುತ್ತಿದ್ದೀರಿ, ದೊಡ್ಡ ದೊಡ್ಡ ವ್ಯಕ್ತಿಗಳ ವಿರುದ್ಧ ಅಕ್ರಮ ದಾಖಲೆ ಸೃಷ್ಟಿಸಿ ಜಮೀನು ನುಂಗಿರುವ ಪ್ರಕರಣದ ಕುರಿತು ತನಿಖೆಗೆ ಆದೇಶ ನೀಡಿರುವುದಕ್ಕೂ ಸುಪ್ರಿಂ ಕೊರ್ಟ್ ಮಟ್ಟದಲ್ಲಿ ತಡೆಯಾಜ್ಞೆ ತಂದು ಬಹಿರಂಗವಾಗಿ ಹೊರಗೆ ತಿರುಗಾಡುತ್ತಿದ್ದಾರೆ ಎಂದರು.

ಯತ್ನಾಳ್ ಆಗ್ರಹ
ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸರ್ಕಾರಿ ಭೂ ಕಬಳಿಕೆ ದೊಡ್ಡ ಮಾಫಿಯಾ ಇದೆ. ಈಗಲ್‌ಟನ್ ರೆಸಾರ್ಟ್ ಮಾಲಿಕರು ಯಾರೋ ಗೊತ್ತಿಲ್ಲ. ಅದನ್ನು ತೆರವುಗೊಳಿಸಿ ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಆದೇಶ ಮಾಡಿದರೂ, ಇದುವರೆಗೂ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಕಂದಾಯ ಜಮೀನು, ವಕ್ಫ್ ಆಸ್ತಿ ಕಬಳಿಕೆಯಾಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಸರ್ಕಾರ ವಶಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಇದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿದೆ ಎಂದು ಹೇಳಿದರು.

ಕ್ರಮಕ್ಕೆ ತೀರ್ಮಾನ ಅಶೋಕ್
ಕಂದಾಯ ಸಚಿವ ಆರ್. ಅಶೋಕ್, ಅಕ್ರಮ ಭೂ ಮಂಜೂರು ಮಾಡಲು ಆದೇಶಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ತೀರ್ಮಾನಿಸಿದ್ದೇವೆ. ತಹಸೀಲ್ದಾರ್ ಮಟ್ಟದ ಅಧಿಕಾರಿಗಳ ಮೇಲೆ ನಾನು ನೇರವಾಗಿ ಕ್ರಮ ಕೈಗೊಳ್ಳಲು ಅಧಿಕಾರ ಇದೆ. ಎಸಿ ದರ್ಜೆಯ ಅಧಿಕಾರಿಗಳು ಡಿಪಿಎಆರ್ ವ್ಯಾಪ್ತಿಗೆ ಬರುತ್ತಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದರು.

Share