Connect with us


      




ಬೆಂಗಳೂರು

ವೆಚ್ಚ ಕಡಿತಕ್ಕಾಗಿ ಬಿಎಂಟಿಸಿ ಡಿಪೋಗಳಲ್ಲಿ ಸೋಲಾರ್ ಅಳವಡಿಕೆ

UNI Kannada

Published

on

BMTC DEPO (FILE)

ಬೆಂಗಳೂರು : ಜನವರಿ 10 (ಯು.ಎನ್.ಐ.) ನೌಕರರಿಗೆ ಸಂಬಳ ನೀಡಲಾಗದಷ್ಟು ಆರ್ಥಿಕವಾಗಿ ದಿವಾಳಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ತನ್ನ ಡಿಪೋಗಳಲ್ಲಿ ಸೋಲಾರ್ ಸ್ಥಾಪಿಸುವ ಮೂಲಕ ಹಣ ಉಳಿಕೆಗೆ ಮುಂದಾಗಿದೆ. ಇದರಿಂದ ಮಾಸಿಕ ವಿದ್ಯುತ್‌ ಶುಲ್ಕದಲ್ಲಿ ಲಕ್ಷಾಂತರ ರೂ. ಉಳಿತಾಯವಾಗುತ್ತಿದೆ.
ಬಿಎಂಟಿಸಿ ಡಿಪೋಗಳಲ್ಲಿ ಖರ್ಚನ್ನ ಕಡಿಮೆ ಮಾಡಿ ಆರ್ಥಿಕ ಉಳಿತಾಯಕ್ಕಾಗಿ ಬಿಎಂಟಿಸಿ ಡಿಪೊಗಳ ಚಾವಣಿಯಲ್ಲಿ ಸೌರ ವಿದ್ಯುತ್‌ ಉತ್ಪಾದನಾ ಸ್ಥಾವರಗಳನ್ನು ನಿರ್ಮಿಸುವ ಮೂಲಕ ವೆಚ್ಚಕ್ಕೆ ಕಡಿವಾಣ ಹಾಕಲು ಯೋಚಿಸಿದೆ.

ಬಿಎಂಟಿಸಿ ಉಪಾಧ್ಯಕ್ಷ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತವು(ಬೆಸ್ಕಾಂ) ಕೇಂದ್ರ ಸರಕಾರದ 13ನೇ ಹಣಕಾಸು ಆಯೋಗದ ಅನುದಾನದಲ್ಲಿ 22 ಬಸ್‌ ಡಿಪೊಗಳು ಹಾಗೂ 3 ಕೇಂದ್ರೀಯ ಕಾರ್ಯಾಗಾರಗಳ ಚಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುತ್ತಿದೆ. ಈಗಾಗಲೇ 17 ಡಿಪೊಗಳಲ್ಲಿ ಸೌರಶಕ್ತಿ ವಿದ್ಯುತ್‌ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಉಳಿದೆಡೆ ಕಾಮಗಾರಿ ಪ್ರಗತಿಯಲ್ಲಿದೆ. ಕಲವೊಂದು ಡಿಪೊಗಳಲ್ಲಿ 2021ರ ಏಪ್ರಿಲ್‌ನಿಂದಲೇ ವಿದ್ಯುತ್‌ ಉತ್ಪಾದನೆ ಆರಂಭವಾಗಿದೆ. ಈ ಸೌರ ವಿದ್ಯುತ್‌ನಿಂದಲೇ ಡಿಪೊಗಳಲ್ಲಿ ದೀಪಗಳು ಬೆಳಗುತ್ತಿವೆ.

ಡಿಪೊಗಳ ಮೇಲ್ಭಾಗದ ಚಾವಣಿಯಲ್ಲಿ ನವೀಕರಿಸಬಹುದಾದ ಸೋಲಾರ್‌ ವಿದ್ಯುತ್‌ ಉತ್ಪಾದನೆಯ ಘಟಕ ನಿರ್ಮಾಣಕ್ಕೆ ಬಿಎಂಟಿಸಿ ನಯಾ ಪೈಸೆ ಖರ್ಚು ಮಾಡುತ್ತಿಲ್ಲ. ಕೇಂದ್ರ ಸರಕಾರವೇ 13ನೇ ಹಣಕಾಸು ಆಯೋಗದಲ್ಲಿ ಅನುದಾನ ಒದಗಿಸಿದೆ. ಬೆಸ್ಕಾಂ ಸಂಸ್ಥೆಯು, ಅಮ್‌ಪೋಲ್ಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ ಟೆಂಡರ್‌ ನೀಡಿ, 22 ಡಿಪೋ ಹಾಗೂ 3 ಕೇಂದ್ರೀಯ ಕಾರ್ಯಾಗಾರಗಳಲ್ಲಿ 1642 ಕಿಲೋ ವ್ಯಾಟ್‌(1.642 ಮೆ.ವ್ಯಾಟ್‌) ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಫಲಕಗಳನ್ನು ಅಳವಡಿಸುತ್ತಿದೆ.

ಪ್ರತಿಯೊಂದು ಡಿಪೊದಲ್ಲಿ ನಿತ್ಯ 43ರಿಂದ 50 ಕಿಲೋ ವ್ಯಾಟ್‌ ಹಾಗೂ ಕೇಂದ್ರೀಯ ಕಾರ್ಯಾಗಾರಗಳಲ್ಲಿ 170 ಕಿಲೋ ವ್ಯಾಟ್‌ ಉತ್ಪಾದನಾ ಸಾಮರ್ಥ್ಯದ ಸೌರಶಕ್ತಿ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಬೈರತಿ ಡಿಪೊದಲ್ಲಿ 2021ರ ಏ.21ರಿಂದ ಆ.1ರವರೆಗೆ 11468 ಯೂನಿಟ್‌ ಉತ್ಪಾದಿಸಿ, ಬಳಸಿಕೊಳ್ಳಲಾಗಿದೆ. ಇದರಿಂದ 91,175 ರೂ. ಶುಲ್ಕ ಉಳಿತಾಯವಾಗಿದೆ. ಸದ್ಯ 17 ಡಿಪೊಗಳಲ್ಲಿ ಇಲ್ಲಿಯವರೆಗೆ 42,844 ಯೂನಿಟ್‌ ನಷ್ಟು ಸೌರ ವಿದ್ಯುತ್‌ ಉತ್ಪಾದನೆಯಾಗಿದ್ದು, ಸಾರಿಗೆ ಸಂಸ್ಥೆಗೆ 3,36,188 ರೂ. ವಿದ್ಯುತ್‌ ಶುಲ್ಕ ಉಳಿದಿದೆ. ನವೆಂಬರ್‌ ಅಂತ್ಯದವರೆಗೆ ಮಳೆ, ಮೋಡ ಕವಿದ ವಾತಾವರಣವಿದ್ದ ಕಾರಣ ಹೆಚ್ಚಿನ ಪ್ರಮಾಣದ ಸೌರ ವಿದ್ಯುತ್‌ ಉತ್ಪಾದನೆ ಆಗಿಲ್ಲ. ಈ ಬೇಸಿಗೆಯಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದನೆಯಲ್ಲಿ ನಿರೀಕ್ಷಿತ ಗುರಿ ಮುಟ್ಟುವ ಸಾಧ್ಯತೆ ಇದೆ.

ಬಿಎಂಟಿಸಿಯು 45 ಡಿಪೊಗಳನ್ನು ಹೊಂದಿದ್ದು, ಪ್ರತಿ ಘಟಕದಲ್ಲಿ ತಿಂಗಳಿಗೆ ಸುಮಾರು 8 ಸಾವಿರ ಯೂನಿಟ್‌ ವಿದ್ಯುತ್‌ ಬಳಸಲಾಗುತ್ತಿದೆ. ಬಸ್‌ ನಿಲ್ದಾಣಗಳು, ಕಾರ್ಯಾಗಾರಗಳು, ಟಿಟಿಎಂಸಿ ಕಟ್ಟಡಗಳೂ ಸೇರಿದಂತೆ ಎಲ್ಲೆಡೆ ಪ್ರತಿ ತಿಂಗಳು 16,06,057 ಯೂನಿಟ್‌ ವಿದ್ಯುತ್‌ ಅನ್ನು ಬಳಕೆ ಮಾಡುತ್ತಿದ್ದು, 1,79,13,704 ರೂ. ವಿದ್ಯುತ್‌ ಶುಲ್ಕ ಪಾವತಿಸಲಾಗುತ್ತಿದೆ.

ಸಂಸ್ಥೆಯ ಎಲ್ಲ ಡಿಪೊ, ಕೇಂದ್ರೀಯ ಕಾರ್ಯಾಗಾರ, ತರಬೇತಿ ಸಂಸ್ಥೆಗಳು, ಬಸ್‌ ನಿಲ್ದಾಣಗಳು, ಟಿಟಿಎಂಸಿ ಕಟ್ಟಡಗಳಲ್ಲಿ 1.08 ಲಕ್ಷ ಚದರ ಮೀಟರ್‌ ಸ್ಥಳಾವಕಾಶವಿದ್ದು, ಮಾಸಿಕ 10.56 ಮೆ.ವ್ಯಾಟ್‌ ಸೌರ ವಿದ್ಯುತ್‌ ಉತ್ಪಾದಿಸಬಹುದಾಗಿದೆ. ಇದರಿಂದ ತಿಂಗಳಿಗೆ 61.92 ಲಕ್ಷ ರೂ. ಶುಲ್ಕ ಉಳಿತಾಯ ಮಾಡಬಹುದು. ಇದರಂತೆ ವರ್ಷಕ್ಕೆ 7.43 ಕೋಟಿ ರೂ. ಉಳಿಯಲಿದೆ. ಆದರೆ, ಬೆಸ್ಕಾಂ ಸದ್ಯ 22 ಘಟಕ, 3 ಕೇಂದ್ರೀಯ ಕಾರ್ಯಾಗಾರಗಳಲ್ಲಷ್ಟೇ ಸೌರ ವಿದ್ಯುತ್‌ ಉತ್ಪಾದಿಸಲು ಕ್ರಮ ವಹಿಸಿದೆ. ಟಿಟಿಎಂಸಿಗಳಲ್ಲಿ ವಾಣಿಜ್ಯ ಮಳಿಗೆಗಳು ಇರುವ ಕಾರಣ ಸೌರ ವಿದ್ಯುತ್‌ ಫಲಕ ಅಳವಡಿಸಲು ಕೇಂದ್ರ ಸಹಾಯಧನ ನೀಡುತ್ತಿಲ್ಲ.

ಬಿಎಂಟಿಸಿಯು ನಗರ ಮತ್ತು ಹೊರವಲಯದಲ್ಲಿ ಕೋಟ್ಯಂತರ ರೂ. ಮೌಲ್ಯದ 643 ಎಕರೆ ಭೂಮಿಯನ್ನು ಹೊಂದಿದೆ. ಈ ಖಾಲಿ ಜಮೀನಿನ ಶೇ.70ರಷ್ಟು ಜಾಗದಲ್ಲಿ 196 ಮೆ.ವ್ಯಾಟ್‌ ಸೌರ ವಿದ್ಯುತ್‌ ಉತ್ಪಾದಿಸಲು ಅವಕಾಶವಿದೆ. ಬೆಸ್ಕಾಂ ಪ್ರತಿ ಯೂನಿಟ್‌ ಸೋಲಾರ್‌ ವಿದ್ಯುತ್‌ಗೆ 3.77 ರೂ. ದರ ನಿಗದಿಪಡಿಸಿದೆ. ಈ 196 ಮೆ.ವ್ಯಾಟ್‌ ವಿದ್ಯುತ್‌ ಅನ್ನು ಮಾರಾಟ ಮಾಡಿದರೆ ತಿಂಗಳಿಗೆ 8.86 ಕೋಟಿ ರೂ. ಆದಾಯ ಗಳಿಸಬಹುದಾಗಿದೆ. ಹೀಗಾಗಿ, ಸೌರಶಕ್ತಿ ವಿದ್ಯುತ್‌ ಉತ್ಪಾದನೆ ಮೂಲಕ ಸ್ವಾವಲಂಬನೆ ಸಾಧಿಸಲು ಹಾಗೂ ನಷ್ಟದ ಭಾರವನ್ನು ಕಡಿಮೆ ಮಾಡಿಕೊಳ್ಳಲು ಬಿಎಂಟಿಸಿಯು, ಇನ್ನಿಲ್ಲದ ಹರಸಾಹಸ ಮಾಡುತ್ತಿದೆ. ಬೆಸ್ಕಾಂಗೆ ಪಾವತಿಸುತ್ತಿರುವ ವಿದ್ಯುತ್‌ ಶುಲ್ಕ ಉಳಿಸುವ ಜತೆಗೆ ಹೆಚ್ಚುವರಿ ವಿದ್ಯುತ್‌ ಅನ್ನು ಮಾರಾಟ ಮಾಡಿ ವರಮಾನ ಹೆಚ್ಚಿಸಿಕೊಳ್ಳಲು ಉದ್ದೇಶಿಸಿದೆ.

ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಬಸ್‌ ಡಿಪೊ, ಕಾರ್ಯಾಗಾರ, ನಿಲ್ದಾಣ, ಟಿಟಿಎಂಸಿ ಕಟ್ಟಡಗಳ ಚಾವಣಿಯಲ್ಲಿ ಸೋಲಾರ್‌ ಪ್ಯಾನಲ್‌ ಅಳವಡಿಸಿ, ವಿದ್ಯುತ್‌ ಉತ್ಪಾದನೆ ಮೂಲಕ ಸ್ವಾವಲಂಬನೆ ಸಾಧಿಸಬೇಕೆಂಬ ಸಲಹೆಯನ್ನು ಪರಿಗಣಿಸಿ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಕಾಳಜಿ ವಹಿಸಿದ್ದರಿಂದ 25 ಕಡೆ ಸೌರ ವಿದ್ಯುತ್‌ ಉತ್ಪಾದಿಸಲು ಸಾಧ್ಯವಾಗುತ್ತಿದೆ. ಉಳಿದ ಡಿಪೊ, 10 ಟಿಟಿಎಂಸಿ, ಕಾರ್ಯಾಗಾರ, ಬಸ್‌ ನಿಲ್ದಾಣಗಳ ಮೇಲ್ಭಾಗದಲ್ಲೂ ಸೌರ ಫಲಕ ಅಳವಡಿಸಲು ಇಂಧನ ಸಚಿವರಿಗೆ ಮನವಿ ಮಾಡಿಕೊಳ್ಳಾಗಿದೆ ಎಂದರು.

Share