Connect with us


      




ದೇಶ

38 ವರ್ಷಗಳ ನಂತರ ಯೋಧನ ಮೃತದೇಹ ಪತ್ತೆ

Lakshmi Vijaya

Published

on

ಹಲ್ದ್ವಾನಿ: ಆಗಸ್ಟ್ 15 (ಯು.ಎನ್.ಐ.) ಗಸ್ತಿನಲ್ಲಿದ್ದಾಗ ಹಿಮಕುಸಿತದಲ್ಲಿ ನಾಪತ್ತೆಯಾಗಿದ್ದ ಸೇನಾ ಯೋಧನ ಶವ 38 ವರ್ಷಗಳ ಬಳಿಕ ಸಿಯಾಚಿನ್‌ನ ಹಳೆಯ ಬಂಕರ್‌ನಲ್ಲಿ ಪತ್ತೆಯಾಗಿದೆ. 19 ಕುಮಾವ್ ರೆಜಿಮೆಂಟ್‌ನ ಚಂದ್ರಶೇಖರ್ ಹರ್ಬೋಲಾ ಅವರ ಶವವೆಂದು ರಾನಿಖೇತ್‌ನಲ್ಲಿರುವ ಸೈನಿಕ್ ಗ್ರೂಪ್ ಸೆಂಟರ್ ಗುರುತಿಸಿದೆ.

ಚಂದ್ರಶೇಖರ್ ಹರ್ಬೋಲಾ, 1984 ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಲು ‘ಆಪರೇಷನ್ ಮೇಘದೂತ್’ ಗಾಗಿ ವಿಶ್ವದ ಅತಿ ಎತ್ತರದ ಯುದ್ಧಭೂಮಿಗೆ ಕಳುಹಿಸಲ್ಪಟ್ಟ 20 ಸದಸ್ಯರ ಪಡೆಗಳ ಭಾಗವಾಗಿದ್ದರು. ಗಸ್ತು ತಿರುಗುತ್ತಿದ್ದಾಗ ಅವರು ಹಿಮದ ಬಿರುಗಾಳಿಗೆ ಸಿಲುಕಿದರು. ಆ ವೇಳೆ 15 ಸೈನಿಕರ ಶವಗಳು ಪತ್ತೆಯಾಗಿದ್ದವು.  ಇತರ ಐವರ ಶವಗಳು ಪತ್ತೆಯಾಗಿರಲಿಲ್ಲ. ಅದರಲ್ಲಿ ಹರ್ಬೋಲಾ ಕೂಡ ಒಬ್ಬರು.

ಚಂದ್ರಶೇಖರ್ ಹರ್ಬೋಲಾ ಅವರ ಅಲ್ಮೋರಾ ಮೂಲದ ಅವರ ಪತ್ನಿ ಶಾಂತಿ ದೇವಿ ಪ್ರಸ್ತುತ ಸರಸ್ವತಿ ವಿಹಾರ್ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಹರ್ಬೋಲಾ ಅವರ ಪಾರ್ಥಿವ ಶರೀರ ಸೋಮವಾರ ತಡರಾತ್ರಿ ಇಲ್ಲಿಗೆ ತಲುಪುವ ನಿರೀಕ್ಷೆಯಿದೆ.

ಹರ್ಬೋಲಾ ಅವರ ಮನೆಗೆ ಆಗಮಿಸಿದ ಹಲ್ದ್ವಾನಿ ಸಬ್ ಕಲೆಕ್ಟರ್ ಮನೀಶ್ ಕುಮಾರ್ ಮತ್ತು ತಹಸೀಲ್ದಾರ್ ಸಂಜಯ್ ಕುಮಾರ್ ಅಂತಿಮ ವಿಧಿವಿಧಾನಗಳನ್ನು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಹೇಳಿದರು.

ದುರಂತದ ಸಮಯದಲ್ಲಿ ಶಾಂತಿ ದೇವಿ ಅವರು ಮದುವೆಯಾಗಿ ಒಂಬತ್ತು ವರ್ಷಗಳಾಗಿದ್ದು ಆಕೆಗೆ 28 ​​ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ಅವರ ಹಿರಿಯ ಮಗಳಿಗೆ ನಾಲ್ಕು ವರ್ಷ ಮತ್ತು ಕಿರಿಯವ ಮಗಳಿಗೆ ಒಂದೂವರೆ ವರ್ಷವಾಗಿತ್ತು. ಹರ್ಬೋಲಾ ಅವರು ಜನವರಿ 1984 ರಲ್ಲಿ ಕೊನೆಯ ಬಾರಿಗೆ ಮನೆಗೆ ಬಂದಿದ್ದರು. ಆ ಸಮಯದಲ್ಲಿ ಅವರು ಶೀಘ್ರದಲ್ಲೇ ಹಿಂತಿರುಗುವುದಾಗಿ ಭರವಸೆ ನೀಡಿದ್ದರು ಎಂದು ಶಾಂತಿ ದೇವಿ ಹೇಳಿದರು. ಆದಾಗ್ಯೂ ಶಾಂತಿ ದೇವಿ ಅವರು ಕುಟುಂಬಕ್ಕೆ ನೀಡಿದ ಭರವಸೆಗಿಂತ ದೇಶಕ್ಕಾಗಿ ತನ್ನ ಸೇವೆಗೆ ಆದ್ಯತೆ ನೀಡಿದ್ದರಿಂದ ತನ್ನ ಪತಿ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದರು.

ಲಭ್ಯ ಮಾಹಿತಿ ಪ್ರಕಾರ ಅಲ್ಮೋರಾದ ದ್ವಾರಹತ್ ನಿವಾಸಿ ಹರ್ಬೋಲಾ 1975ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದರು.

ವರದಿಯ ಪ್ರಕಾರ, ಮತ್ತೊಬ್ಬ ಯೋಧನ ಶವವೂ ಪತ್ತೆಯಾಗಿದೆ ಆದರೆ ಆವರ ಗುರುತು ಇನ್ನೂ ಪತ್ತೆಯಾಗಿಲ್ಲ.

Share