Connect with us


      
ದೇಶ

ಪಂಜಾಬ್ “ಸ್ಟೇಟ್ ಐಕಾನ್” ಹುದ್ದೆಗೆ ಗುಡ್ ಬೈ ಹೇಳಿದ ಸೋನು ಸೂದ್‌

UNI Kannada

Published

on

ಚಂಡೀಗಢ, ಜ 8(ಯುಎನ್‌ ಐ) ಬಾಲಿವುಡ್ ನಟ ಸೋನು ಸೂದ್ ಕೊರೊನಾ ವೈರಸ್, ಲಾಕ್‌ ಡೌನ್ ಸಮಯದಲ್ಲಿ ಅನೇಕ ವಲಸೆ ಕೂಲಿ, ಕಾರ್ಮಿಕರಿಗೆ ನೆರವಿಗೆ ನಿಂತಿದ್ದು ಎಲ್ಲರಿಗೂ ತಿಳಿದಿದೆ. ಅಲ್ಲದೆ ಕೋವಿಡ್‌ ಕಾರಣದಿಂದ ತೀವ್ರ ಅಸ್ವಸ್ಥಗೊಂಡ ರೋಗಿಗಳಿಗೆ ವೈದ್ಯಕೀಯ ಸೇವೆ ಕಲ್ಪಿಸಿ ಹಲವರ ಜೀವಗಳನ್ನು ಕಾಪಾಡಿದ್ದರು. ಆದರೆ, ಅವರು ಈಗ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಮುಂದೆ ಪಂಜಾಬ್‌ “ಸ್ಟೇಟ್ ಐಕಾನ್” ಆಗಿ ಮುಂದುವರಿಯುವುದಿಲ್ಲ ಎಂದು ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.

ಪಂಜಾಬ್ ಚುನಾವಣೆಯ ಭಾಗವಾಗಿ ಚುನಾವಣಾ ಆಯೋಗ ಕಳೆದ ವರ್ಷ ಸೋನು ಸೂದ್ ಅವರನ್ನು ‘ಸ್ಟೇಟ್ ಐಕಾನ್’ ಆಗಿ ಆಯ್ಕೆ ಮಾಡಿತ್ತು. ಆದರೆ, ಅವರ ಸಹೋದರಿ ಮಾಳವಿಕಾ ಸೂದ್‌ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು “ಸ್ಟೇಟ್‌ ಐಕಾನ್” ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ ಸ್ಟೇಟ್‌ ಐಕಾನ್ ಆಗಿ ನನ್ನ ಪ್ರಯಾಣವನ್ನು ಕೊನೆಗೊಳಿಸುತ್ತಿದ್ದೇನೆ. ಸ್ವಯಂಪ್ರೇರಿತರಾಗಿ ಆ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ಜಂಟಿಯಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಸಹೋದರಿ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಸೋನು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ನವೆಂಬರ್‌ನಲ್ಲಿಯೇ ಅವರ ಸಹೋದರಿ ಮಾಳವಿಕಾ ಸೂದ್ ಪಂಜಾಬ್ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬುದನ್ನು ಅವರು ಇನ್ನೂ ಸ್ಪಷ್ಟಪಡಿಸಿಲ್ಲ. ಅವರು ಪಂಜಾಬ್ ಮುಖ್ಯಮಂತ್ರಿ ಚರಣ್‌ ಜಿತ್ ಚನ್ನಿ ಅವರನ್ನು ಕೂಡ ಭೇಟಿ ಮಾಡಿದ್ದರು. ಆದರೆ, ಅವರ ಸಹೋದರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ ಎಂದು ಮಾಧ್ಯಮಗಳು ವರದಿಮಾಡಿವೆ. ಅದೇ ರೀತಿ ದೆಹಲಿಯಲ್ಲಿ ನಡೆಯಲಿರುವ ‘ದೇಶ್ ಕಾ ಮೆಂಟರ್ಸ್’ ಎಂಬ ವಿದ್ಯಾರ್ಥಿ ಕಾರ್ಯಕ್ರಮಕ್ಕೆ ಸೋನು ಸೂದ್ ಅವರನ್ನು ರಾಯಭಾರಿ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇಮಿಸಿದ್ದಾರೆ.

Share