Connect with us


      
ಸಾಮಾನ್ಯ

ಹಸಿರ ಹಿಂದಿನ ಕಥೆ

Kumara Raitha

Published

on

ಶ್ರೀದೇವಿ ಕೆರೆಮನೆ

ಅಂಕಣ: ಮುಖಗಳು

ಗಿಡಗಳನ್ನು ಬೆಳೆಸುವುದೊಂದು ಹುಚ್ಚು. ಬಹಳಷ್ಟು ಓದುಗರು ಮಾತಿಗೆ ವಿರೋಧ ಹೇಳಬಹುದಾದರೂ ನಮ್ಮೂರಿನ ವೃಕ್ಷ ಮಾತೆ ತುಳಸಿ ಗೌಡ ಈ ಮಾತನ್ನು ಒತ್ತಿ ಒತ್ತಿ ಹೇಳುತ್ತಾರೆ. ಯಾಕೆಂದರೆ ಅವರ ಗಿಡಬೆಳೆಸುವ ಹುಚ್ಚಿನಿಂದಾಗಿಯೇ ಪದ್ಮಶ್ರಿ ಪುರಸ್ಕಾರ ಅವರನ್ನು ಹುಡುಕಿಕೊಂಡು ಬಂದಿದ್ದು. ಸುಮಾರು ಒಂದು ವರ್ಷದ ಹಿಂದೆ ಕಾರವಾರದ ರಂಗಮಂದಿರದಲ್ಲಿ ಯಾವುದೋ ಕಾರ್ಯಕ್ರಮಕ್ಕೆಂದು ಬಂದಿದ್ದ ಈರ್ವರು ಪದ್ಮಶ್ರಿಗಳ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತ, ಅವರ ಊರೂರು ಸುತ್ತುವ ಅನುಭವಗಳಿಗೆ ಕಿವಿಯಾಗಿದ್ದೆ.

ವಯಸ್ಸಿನಲ್ಲಿ ಹಿರಿಯರಾದ ಸುಕ್ರಿ ಬೊಮ್ಮುಗೌಡ ತಮ್ಮ ಅನುಭವಗಳನ್ನು ಚಂದದ ಪದಗಳಲ್ಲಿ ವರ್ಣಿಸಬಲ್ಲವರು. ಆದರೆ ತುಳಸಿ ಗೌಡ ಅವರದು ಸ್ವಭಾವತಃ ಮಾತು ಕಡಿಮೆ. ಆದರೆ ಹಿರೇಗುತ್ತಿಯ ಸಮೀಪದ ನುಸಿಕೋಟೆಯಲ್ಲಿ ತಮ್ಮ ಮೂಲವಿದೆ ಎನ್ನುತ್ತ ಹಿರೇಗುತ್ತಿಯವಳು ಎನ್ನುವ ಕಾರಣಕ್ಕಾಗಿ ಒಂದಿಷ್ಟು ಮಾತಿಗೆ ತೆರೆದುಕೊಂಡಿದ್ದರು. ಹೀಗೆ ಮಾತು ಎತ್ತೆತ್ತಲೋ ಸುತ್ತಿ ಗಿಡದ ವಿಷಯಕ್ಕೆ ಬಂದಿತ್ತು. ಮೂಲತಃ ಹಾಲಕ್ಕಿಗಳು ಕಾಡು ಪ್ರಿಯರು. ಅವರ ಕಾಡಿನ ಜ್ಞಾನದ ಎದುರು ಸಸ್ಯಶಾಸ್ತ್ರಜ್ಞರ ಜ್ಞಾನವೂ ಸಪ್ಪೆಯೇ. ಅದರಲ್ಲೂ ವೃಕ್ಷಮಾತೆ ಎನ್ನಿಸಿಕೊಂಡ ತುಳಸಿ ಅರಣ್ಯ ಇಲಾಖೆಯ ದಿನಗೂಲಿ ನೌಕರರಾಗಿ ಗಿಡನೆಡುವ ಕೈಂಕರ್ಯದಲ್ಲಿ ತೊಡಗಿಸಿಕೊಂಡವರು.

ಸುಕ್ರಿ ಬೊಮ್ಮುಗೌಡ, ತುಳಸಿ ಗೌಡ ಅವರೊಂದಿಗೆ ಲೇಖಕಿ ಶ್ರೀದೇವಿ ಕೆರೆಮನೆ

ಅವರ ಅನುಭವಗಳನ್ನು ಹೇಳುತ್ತ ತುಳಸಿ ಗೌಡರು ‘ಗಿಡ ಬೆಳ್ಸೂದು ಒಂಥರಾ ಹುಚ್ಚು.’ ಎಂದು ನಕ್ಕಾಗ ನಾನು ಒಂದು ಕ್ಷಣ ದಂಗಾಗಿದ್ದೆ. ಗಿಡಗಳ ಕಾರಣಕ್ಕಾಗಿ ಪದ್ಮಶ್ರಿ ಪಡೆದವರು ಹೇಳುವ ಮಾತೆ ಇದು? ಆದರೆ ಅವರು ಮಾತು ಮುಂದುವರೆಸಿದ್ದರು. ‘ಇಕಾ, ನಿಮ್ಮನೆಲಿ ಗಿಡ ಬೆಳ್ಸೂರಿ ಅಂದ್ಕಣಿ. ಹೋದಲ್ಲೆಲ್ಲ ಚಂದದ ಗಿಡಾನೇ ಕಾಣ್ತೀದು ನಿಮಗೆ. ಸಂಬಂಧಿಕರ ಮನಿಗೆ ಹೋದ್ರೂ ಅವ್ರ ಕೂಡೆ ಮಾತಾಡುಕ್ಕಿಂತ ಮುಂಚೆ ಗಿಡ ನೋಡ್ಕಂಡೆ ನಂಗೆ ಆ ಗಿಡ ಕುಡ ಅಂತೀರಿ. ಅವ್ರಿಗೂ ಹಂಗೇ ಗಿಡ ಬೆಳ್ಸೂ ಗುಣ ಇದ್ರೆ ಬೇರೆಲ್ಲ ಮಾತು ಮರ್ತಕ್ಕಂಡೆ ಗಿಡದ್ದೇ ಮಾತಾಡ್ತೀರಿ.’ ಎಂದುಬಿಟ್ಟರು. ನನಗ್ಯಾಕೋ ಇವರು ಇದನ್ನೆಲ್ಲ ನನ್ನನ್ನು ಹಿಂಬಾಲಿಸಿಕೊಂಡು ನನ್ನ ವರ್ತನೆ ನೋಡಿಯೇ ಹೇಳಿದ್ದಾರೆ ಎನ್ನಿಸಿ ಬಿಟ್ಟಿತು.

ನಿಜ ಗಿಡ ಬೆಳೆಸುವುದೊಂದು ಹುಚ್ಚು. ನೀವೇನಾದರೂ ಹಸಿರಿನ ಹುಚ್ಚು ಹಿಡಿಸಿಕೊಂಡು ಬಿಟ್ಟರೆ ಅದು ಯಾವತ್ತಿಗೂ ವಾಸಿ ಆಗದ ಹುಚ್ಚಾಗಿ ನಿಮ್ಮಲ್ಲಿ ಉಳಿದುಕೊಂಡು ಬಿಡುತ್ತದೆ.ಇತ್ತಿಚೆಗೆ ಇದೊಂದು ತರಹದ ಟ್ರೆಂಡ್ ಎಂಬಂತೆ ಎಲ್ಲ ಕಡೆಗೆ ಹಬ್ಬಿಕೊಳ್ಳುತ್ತಿದೆ. ಉಳ್ಳವರ ಮನೆಗಳಲ್ಲಿ ನರ್ಸರಿಗಳಿಂದ ಭಾರಿ ಹಣ ತೆತ್ತು ದೊಡ್ಡ ದೊಡ್ಡ ಕುಂಡಗಳನ್ನು ತಂದು ಮನೆಯಲ್ಲಿ ಜೋಡಿಸಿ ಅವುಗಳನ್ನು ನೋಡಿಕೊಳ್ಳಲು ಒಂದು ಆಳನ್ನು ಇಟ್ಟು ಬಿಡುವುದು. ಇನ್ನು ಮಧ್ಯಮ ವರ್ಗಗಳಲ್ಲಿ ಮಾತ್ರ ಇದು ಅತಿರೇಕದ ಹುಚ್ಚಾಗಿ ಪರಿಣಮಿಸುತ್ತದೆ. ಯಾರೇ ಸಂಬಂಧಿಕರ ಮನೆಗೆ ಹೋದರೂ ಚಂದದ ಗಿಡ ಕಂಡರೆ ಅದರ ಗೆಲ್ಲೊಂದನ್ನು ಬೇಡಿಕೊಂಡು ಜತನದಿಂದ ಮನೆಗೆ ತಂದು ತಪಸ್ಸಿನಂತೆ ಏಕಾಗ್ರತೆಯಿಂದ ಆ ಗಿಡವನ್ನು ನೆಡುವುದು ಮತ್ತು ಪ್ರತಿ ದಿನವೂ ಗಿಡ ಹುಟ್ಟಿದಎಯೆ? ಚಿಗುರೊಡೆಯುತ್ತಿದೆಯೆ ಎಂದು ಗಮನಿಸುವುದು, ಒಂದು ಚಿಕ್ಕ ಚಿಗುರಿನ ಸುಳಿ ಕಂಡರೂ ಮನೆಯಲ್ಲಿ ಹಬ್ಬವಾದಂತೆ ಸಂಭ್ರಮಿಸುವುದು, ಅದು ಬೆಳೆದು ಶೋ ಗಿಡವಾದರೆ ಹಬ್ಬಿಕೊಳ್ಳುವವರೆಗೆ ಕಾಯುವುದು ಅಥವಾ ಹೂವಿನ ಗಿಡವಾದರೆ ಹೂ ಬಿಟ್ಟ ತಕ್ಷಣ ಆ ಗಿಡವನ್ನು ತಂದು ಮನೆಯ ಮುಂದೆ ಎಲ್ಲರೂ ಕಾಣುವಂತೆ ಇಡುವುದು. ಇದೊಂದು ತರಹ ಜೀವನ ಪ್ರೀತಿಯನ್ನು ಉಳಿಸಿಕೊಳ್ಳುವ ಜೀವಪರತೆಯ ಚಟುವಟಿಕೆಯಾಗಿ ಕಾಣಿಸುತ್ತದೆ.

ಅಂಕೋಲಾದ ಶಿಕ್ಷಣ ಕ್ಷೇತ್ರದ ಮಾತೆ ಎನ್ನಿಸಿಕೊಂಡಿದ್ದ ಪ್ರೊ ನಿರ್ಮಲಾ ಗಾಂವಕರ ಈ ಮಾತನ್ನು ಸದಾ ಹೇಳುತ್ತಿದ್ದರು. ಅಂಕೋಲಾದ ಗೋಖಲೆ ಸೆಂಟಿನರಿ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಅವರು ಹಿಂದುಳಿದ, ಬಡ ಮಕ್ಕಳಿಗಾಗಿ ಆಶ್ರಮ ನಡೆಸುತ್ತಿದ್ದರು. ಕೇವಲ ತನ್ನ ವೃತ್ತಿಯಿಂದ ಬಂದ ಹಣವನ್ನು ಆಧರಿಸಿ. ಯಾರೋ ಉದಾರ ದಾನಿಗಳು ಸಹಾಯ ಮಾಡಿದರೆ ಮುಜುಗರದಿಂದಲೆ ಹಣ ತೆಗೆದುಕೊಳ್ಳುತ್ತಿದ್ದುದನ್ನು ಗಮನಿಸಿದ್ದೇನೆ. ಎಷ್ಟೇ ದೂರ ಹೋಗುವುದಿದ್ದರೂ ನಡೆದೆ ಹೋಗುತ್ತಿದ್ದ ಪ್ರೊ. ನಿರ್ಮಲಾ ಗಾಂವಕರ ತಾನು ಆಟೋಕ್ಕಾಗಿ ಬಳಸುವ ಹಣದಿಂದ ತನ್ನ ಜೊತೆಯಿರುವ ಒಂದು ಬಡ ಮಗುವಿಗಾದರೂ ನೋಟ್ ಬುಕ್ ಕೊಡಿಸಬಹುದು ಎಂದು ಯೋಚಿಸುತ್ತಿದ್ದರು. ‌

ಅಂಕೋಲಾ ನಗರದ ನಡುವಿನ ಗಾಂಧಿಭವನದ ಜಾಗದಲ್ಲಿ ನಡೆಸುತ್ತಿದ್ದ ಅವರ ಹಾಸ್ಟೇಲ್ ‘ಆಶ್ರಮ’ ಎಂದೇ ಕರೆಯಿಸಿಕೊಳ್ಳುತ್ತಿತ್ತು. ‘ಆಶ್ರಮ’ ಎಂಬ ಹೆಸರು ಆ ಕಾಲದಲ್ಲಿ ಅಂಕೋಲಾದ ಎಲ್ಲರಿಗೂ ಆಪ್ಯಾಯಮಾನವಾದ ಹೆಸರಾಗಿತ್ತು. ಅವರ ಕುಟುಂಬಕ್ಕೇ ಸೇರಿದ್ದ ಗಾಂಧಿಭವನದ ಜಾಗಕ್ಕಾಗಿ ನಡೆದ ವಾಗ್ವಾದಕ್ಕೆ ನೊಂದು ಆ ಜಾಗವನ್ನು ಸಹೋದರರಿಗೆ ಬಿಟ್ಟುಕೊಟ್ಟು ಅವರು ಅಂಕೋಲಾದ ಹೊರಭಾಗದಲ್ಲಿ ಜಾಗ ಖರೀದಿಸಿ ನಿವೃತ್ತಿಯ ನಂತರ ಜೀವಮಾನದಲ್ಲಿ ತಾವು ದುಡಿದ ಹಣವನ್ನೆಲ್ಲ ಕಲೆಹಾಕಿ ಒಂದು ಅಲ್ಲಿ ಶಾಲೆ ಹಾಗು ಆಶ್ರಮ ಕಟ್ಟಿದ್ದರು. ಹಣಕೊಡಲು ಸಾಧ್ಯವಿದ್ದವರು ಹಣ ಕೊಡಬಹುದು, ಆಗದೆ ಇದ್ದವರು ಚೆನ್ನಾಗಿ ಓದಿ ಫೀ ಸಂದಾಯ ಮಾಡಬಹುದು ಎನ್ನುವ ಉದಾತ್ತ ಧೋರಣೆಯಿಂದ ಪ್ರಾರಂಭವಾದ ಆ ಶಾಲೆ ತನ್ನ ಶೈಕ್ಷಣಿಕ ಕಾರ್ಯಗಳಿಗೆ ಒಂದಿಷ್ಟು ಹೆಸರು ಪಡೆದುಕೊಳ್ಳುತ್ತಿದ್ದಂತೆ ಫಟ್ಟಭದ್ರರ ಕಣ್ಣಿಗೆ ಕುಕ್ಕಿ ಅಕಾಲವಾಗಿ ಶಾಲೆ ನಡೆಸಲಾಗದ ಸ್ಥಿತಿ ತಲುಪಿದ್ದಕ್ಕೆ ನಿಜಕ್ಕೂ ವಿಷಾದವಿದೆ.

ಸುತ್ತಮುತ್ತಲ ಹಳ್ಳಿಗಳ ಮಕ್ಕಳಿಗೆ ಇದೊಂದು ದೊಡ್ಡ ಅನ್ಯಾಯ. ಅಂಕೋಲಾದ ಹೊರವಲಯದ ಅಷ್ಟು ದೂರದಿಂದಲೂ ತನ್ನ ಬಳಿ ಇರುವ ಮಕ್ಕಳಿಗಾಗಿ ದಿನಸಿ ಸಾಮಾನು, ತರಕಾರಿ ತರಲು ನಡೆದುಕೊಂಡೆ ಬರುತ್ತಿದ್ದರು ತಮ್ಮ ಎಪ್ಪತ್ತರ ಇಳಿ ವಯಸ್ಸಿನಲ್ಲಿ. ಭಾರ ಹೊರಲಾಗದೆ ಹೊತ್ತು ನಡೆಯುವ ಅವರನ್ನು ಕಂಡು ಅವರ ಶಿಷ್ಯಂದಿರು ಯಾರಾದರೂ, ಆಟೋದವರು ಒತ್ತಾಯಿಸಿ ತಾನು ಅವರ ಶಿಷ್ಯ ಎಂದು ನೆನಪಿಸಿ ಕರೆದುಕೊಂಡು ಹೋಗುತ್ತಿದ್ದುದು ನನಗೆ ಕಣ್ಣಿಗೆ ಕಟ್ಟಿದಂತಿದೆ. ಇಂದು ಅಂಕೋಲಾದ ಬಹುತೇಕರು ಸಾದಾ ಬಿಳಿಯ ಹತ್ತಿಯ ಅಥವಾ ಖಾದಿ ಸೀರೆ ಉಡುತ್ತಿದ್ದ ಆ ತಪಸ್ವಿನಿಯ ಶಿಷ್ಯರು.

ಶಾಲೆ ಚಂದವಾಗಿ ನಡೆಯುತ್ತಿದ್ದ ದಿನಗಳಲ್ಲಿ ಅಲ್ಲಿರುವ ಗಿಡಗಳನ್ನು ನೋಡುವುದಕ್ಕೆಂದೇ ಮೀನು ಪ್ರೀಯರಾಗಿದ್ದ ಅವರಿಗೆ ಮೀನು ತೆಗೆದುಕೊಂಡು ಹೋಗುವ, ಅಥವಾ ಹಿರೇಗುತ್ತಿಯ ಬೆಲ್ಲ ಕೊಡುವ ನಾನಾ ನೆಪ ಹುಡುಕಿಕೊಂಡು ಹೋಗುತ್ತಿದ್ದೆ. ಒಳಗೆ ಬಾರೆ ಎಂದು ಅವರೆಷ್ಟು ಕರೆಯುತ್ತಿದ್ದರೂ ನನಗೆ ಶಾಲೆಯ ಮುಂದಿನ ಪುಟ್ಟ ಹೂದೋಟ ನೋಡುವುದೇ ಇಷ್ಟವಾಗಿ ಕೊನೆಗೆ ಅವರೇ ಹೊರಗೆ ಬಂದು ಜೊತೆಯಾಗುತ್ತಿದ್ದರು. ‘ಈ ಗಿಡ ಚಂದಿದೆ. ಎಲ್ಲಿಂದ ತಂದಿದ್ದು’ ಎಂದೇನಾದರೂ ಒಂದು ಪ್ರಶ್ನೆ ಕೇಳಿದರೂ ಸಾಕು, ತಮ್ಮ ಮೆಲುವಾದ ಸಂಗೀತದ ಆಲಾಪನೆಯ ಧ್ವನಿಯಲ್ಲಿ ಗಿಡಗಳ ಪೂರ್ವಾಪರಗಳನ್ನು ವಿವರಿಸತೊಡಗುತ್ತಿದ್ದರು.

ಅವರು ಹೇಳುತ್ತಿದ್ದ ಒಂದು ಮಾತು ಈಗಲೂ ನನ್ನ ಕಿವಿಯಲ್ಲಿದೆ. ‘ಈ ಗಿಡಗಳ ಹುಚ್ಚು ನನ್ನನ್ನು ನಾಚಿಕೆ ಬಿಟ್ಟು ಬೇಡುವಂತೆ ಮಾಡಿದೆ.’ ಎನ್ನುತ್ತ ತನ್ನ ಮಾತುಗಳಿಂದ ಎದುರಿಗೆ ಇರುವ ಗಿಡಗಳಿಗೆ ನೋವಾಗಬಾರದು ಎಂಬಷ್ಟು ಮೃದುವಾಗಿ ಮಾತು ಮುಂದುವರೆಸುತ್ತಿದ್ದರು. ‘ನಾನು ಈ ಗಿಡಗಳಿಗಾಗಿ ಸಾವಿರಾರು ರೂಪಾಯಿಗಳನ್ನು ಸುರಿಯುವಷ್ಟು ಶ್ರೀಮಂತೆಯಲ್ಲ. ಒಂದಿಷ್ಟು ಹಣ ಉಳಿದರೆ ನನ್ನ ಜೊತೆ ಇರುವ ಮಕ್ಕಳಿಗೆ ಎರಡು ದಿನ ಚಂದದ ಊಟ ಹಾಕಬಹುದು ಎನ್ನುವ ಆಸೆ ನನ್ನದು. ಆದರೆ ಈ ಗಿಡಗಳ ಹುಚ್ಚು ನನ್ನನ್ನು ಸುಮ್ಮನೆ ಬಿಡುವುದಿಲ್ಲ. ಯಾರ ಮನೆಯಲ್ಲಾದರೂ ಚಂದದ ಗಿಡಗಳನ್ನು ಕಂಡರೆ ಸಾಕು, ನನಗೆ ಅರಿವಿಲ್ಲದಂತೆ ಕಾಲು ನಿಂತುಬಿಡುತ್ತದೆ. ನಂತರ ನಾಚಿಕೆ ಬಿಟ್ಟು ಆ ಮನೆಯ ಬಾಗಿಲಿಗೆ ಹೋಗಿ ಗಿಡ ಬೇಡುತ್ತೇನೆ.

ನನ್ನ ಪುಣ್ಯ. ಇಡೀ ಅಂಕೋಲಾದಲ್ಲಿ ಯಾವ ಮನೆಯವರೂ ನನ್ನನ್ನು ಅವಮಾನ ಮಾಡಿ ಕಳಿಸಿಲ್ಲ. ಗಿಡ ಕೊಡು ಎಂದು ಬೇಡಲು ಹೋದವಳನ್ನು ಒಳಗೆ ಕರೆದು ಗಿಡಗಳ ಜೊತೆಗೆ ಚಹಾವನ್ನೂ ಕೊಟ್ಟು ಕಳಿಸಿದ್ದಾರೆ. ಕೆಲವರಂತೂ ತಾವೇ ಆಶ್ರಮಕ್ಕೆ ಬರಬೇಕೆಂದುಕೊಂಡಿದ್ದೆ ಆಗಲಿಲ್ಲ ಎನ್ನುತ್ತ ಆಶ್ರಮದ ಖರ್ಚಿಗಾಗಿ ಹಣವನ್ನೂ ಕೊಟ್ಟು ಕಳಿಸಿದವರಿದ್ದಾರೆ. ಎಂದು ಹನಿಗಣ್ಣಾಗುತ್ತಿದ್ದರು. ‘ಈ ಗಿಡಗಳು ನನ್ನನ್ನು ಎಲ್ಲರ ಜೊತೆ ಬೆರೆಯುವಂತೆ ಮಾಡಿವೆ’ ಎನ್ನುವ ಅವರ ಮಾತಿನಲ್ಲಿರುವ ಸತ್ಯ ತಿಳಿಯಲು ನಾನೂ ಗಿಡ ಬೆಳೆಸುವ ಹುಚ್ಚನ್ನು ಅಂಟಿಸಿಕೊಳ್ಳಬೇಕಾಯ್ತು.

ಯಾರ ಜೊತೆಯೂ ಮಾತನಾಡಲಾರೆ ಎನ್ನುವ, ಗಿಡ ಕೇಳುವುದರಿಂದ ತನ್ನ ಅಹಂಗೆ ಧಕ್ಕೆಯಾಗುತ್ತದೆ ಎಂಬ ಭಾವನೆಯುಳ್ಳವರು ಗಿಡಗಳನ್ನು ಬೆಳೆಸುವ ಹುಚ್ಚನ್ನು ಅಂಟಿಸಿಕೊಳ್ಳಬಾರದು. ಯಾಕೆಮದರೆ ಈ ಹುಚ್ಚು ನಮ್ಮನ್ನು ಎಲ್ಲೆಂದರಲ್ಲಿ ನಿಲ್ಲುವಂತೆ ಮಾಡಿಬಿಡುತ್ತದೆ. ಯಾರದ್ದೋ ಮನೆಯ ಬಾಗಿಲನ್ನು ಕಾಯುವಂತೆ ಮಾಡುತ್ತದೆ. ಅವಸರದಿಂದ ತುರ್ತು ಕೆಲಸಕ್ಕೆಂದು ಹೊರಟವರೂ ಗಿಡ ನೋಡಿದ ತಕ್ಷಣ ಕೆಲಸ ಮರೆತು ಗಿಡ ಕೇಳಬೇಕು ಎನ್ನಿಸುವ ತುಡಿತಕ್ಕೆ ದೂಡಿಬಿಡುತ್ತದೆ. ಎಲ್ಲಕ್ಕಿಂತ ಹೆಚ್ಚಿನ ಅಪಾಯದ್ದೆಂದರೆ, ಯಾವುದೋ ಪಾರ್ಕ್, ಹೊಟೆಲ್ ಗಳಲ್ಲಿ ಕಾಣಿಸುವ ಗಿಡಗಳು ‘ಎಷ್ಟು ಚಂದ ಉಂಟು ಅಲಾ?’ ಅನ್ನಿಸಿ ಬೇಕೇ ಬೇಕು ಎಂಬ ಆಸೆ ಹುಟ್ಟಿಬಿಡುತ್ತದೆ.

ಕೇಳುವ ಹಾಗಿಲ್ಲ. ಹಾಗಂತ ಸುಮ್ಮನೆ ಬಿಟ್ಟು ಬಂದು ಬಿಡುವ ಹಾಗೂ ಇಲ್ಲ. ಕೊನೆಗೆ ಯಾರೂ ಕಾಣದಂತೆ ಸಣ್ಣ ಗೆಲ್ಲೊಂದನ್ನು ಮುರಿದುಕೊಂಡು ಬ್ಯಾಗಿನೊಳಗೆ ಇಟ್ಟುಕೊಂಡು ಬಿಡುವ ಕಳ್ಳತನಕ್ಕೂ ಪ್ರೇರೇಪಿಸುತ್ತದೆ. ನಾನು ಗಮನಿಸಿದಂತೆ ಗಿಡಗಳನ್ನು ಬೆಳೆಸುವ ಹುಚ್ಚಿರುವ 98% ಜನರು ಇಂತಹ ಕೆಲಸ ಮಾಡಿದವರೇ ಮತ್ತು ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಕೂಡ.

ಇತ್ತೀಚೆಗೆ ಬೋನ್ಸಾಯ್ ಗಿಡಗಳನ್ನು ಬೆಳೆಸುವ ಹುಚ್ಚು ವಿಪರೀತ ಎನ್ನುವ ಮಟ್ಟಕ್ಕೆ ಹೋಗಿದೆ. ಮನೆಯ ವರಾಂಡದ ಟೀಪಾಯಿಯ ಮೇಲೆ ಒಂದು ಬೋನ್ಸಾಯ್ ಗಿಡವಿದ್ದರೆ ಮನೆಯ ಲುಕ್ ಬೇರೇನೆ ಎಂದುಕೊಳ್ಳುತ್ತ ತರೆಹವಾರಿ ಗಿಡಗಳನ್ನು, ಅದರಲ್ಲೂ ಹಣ್ಣಿನ ಬೋನ್ಸಾಯ್ ಗಿಡಗಳನ್ನು ಇಡುವುದು ಒಂದು ಫ್ಯಾಶನ್. ಸ್ನೇಹಿತರೊಬ್ಬರ ಮನೆಯಲ್ಲಿ ಅವರ ತಾಯಿಯದ್ದು ಒಂದೇ ವರಾತ. ‘ಎಷ್ಟು ಬೇಡ ಎಂದರೂ ಕೇಳದೆ ಸ್ಮಶಾನದಲ್ಲಿರುವ ಅಶ್ವಥ ಮರವನ್ನು ತಂದು ಮನೆ ಒಳಗೆ ಇಟ್ಕೊಂಡಿದ್ದಾರೆ. ಏನು ಅನಾಹುತವಾಗುತ್ತೋ’?’ ಎಂದು ಬೋನ್ಸಾಯ್ ಅಶ್ವಥ ಮರವನ್ನು ಕಂಡು ಆತಂಕ ಪಟ್ಟುಕೊಳ್ಳುತ್ತಿದ್ದರು. ಇಂತಹ ಬೋನ್ಸಾಯ್ ತರುವುದಿದ್ದರೆ ಸಾವಿರಗಟ್ಟಲೆ ದುಡ್ಡು ಸುರಿಯುವ ಹುಚ್ಚಿರಬೇಕು ಅಷ್ಟೇ.

ಮನೆಯನ್ನು ವಾಸ್ತು ಪ್ರಕಾರ ಇಡಬೇಕು ಎನ್ನುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿದೆ. ಹೀಗಾಗಿ ವಾಸ್ತು ಗಿಡ ಎಂದು ಕೆಲವು ಗಿಡಗಳು ಮನೆಯ ಡೈನಿಂಗ್ ಟೇಬಲ್ ನ್ನು ಆಕ್ರಮಿಸುತ್ತಿರುವುದನ್ನು ಕಾಣಬಹುದು. ಅಗ್ನಿ ಮೂಲೆಯಲ್ಲಿ ಇಂತಹುದ್ದೇ ಗಿಡ ಇಡಬೇಕು, ವಾಯು ಮೂಲೆಯಲ್ಲಿ ಇಡಬೇಕಾದ ಗಿಡ ಬೇರೆಯದ್ದೇ, ಮನಿಪ್ಲಾಂಟ್ ನ್ನು ಬೇಕಾಬಿಟ್ಟಿ ಬೆಳೆಸದೆ ನಿರ್ದಿಷ್ಟ ದಿಕ್ಕಿನಲ್ಲಿಯೇ ಇಡಬೇಕು ಎನ್ನುತ್ತ ವಾಸ್ತು ಹೇಳುವವರ ಕಾಟವೂ ಈಗ ಹೆಚ್ಚಾಗಿದೆ. ಇಷ್ಟೆಲ್ಲ ಹೇಳಿದ ನಂತರವೂ ನನಗೆ ಮಧ್ಯಮವರ್ಗದವರು ಗಿಡಬೆಳೆಸುವಾಗಿನ ಸಂಭ್ರಮ ನೋಡುವುದೇ ಒಂದು ಹುಚ್ಚು.

ಲೇಖಕರ ಪರಿಚಯ:

ಕನ್ನಡ ಸಾರಸ್ವತ ಲೋಕದಲ್ಲಿ ಶ್ರೀದೇವಿ ಕೆರೆಮನೆ ಚಿರಪರಿಚಿತ ಹೆಸರು. ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡನಾಡಿನ ಕರಾವಳಿಯವರು (ಉತ್ತರ ಕನ್ನಡ) ಹೊಸ ರೀತಿಯಲ್ಲಿ ಬರೆಯುತ್ತಿರುವ ಅವರು ಕಾವ್ಯ ಕಟ್ಟುವ ಕ್ರಿಯೆಯಲ್ಲಿ ಸಿದ್ಧಹಸ್ತರು.  ಕಥೆ, ಕಾದಂಬರಿ – ಲಲಿತ ಪ್ರಬಂಧ ಏನೇ ಬರೆದರೂ ಅವುಗಳು ಸಮಾಜದ ಒಳಿತು ಕೆಡುಕಗಳ ಬಗ್ಗೆ ಪಾತಾಳ ಗರಡಿ ಹಾಕಿ ಬರೆದವುಗಳೇ ಆಗಿರುತ್ತವೆ. ತೇಲಿಸಿ ಬರೆಯುವುದು ಅವರಿಗೆ ಗೊತ್ತಿಲ್ಲ. ದಿಟ್ಟ ಬರೆಹಗಳು. ಇವರ ಕೃತಿಗಳು ಜನಮೆಚ್ಚುಗೆ ಜೊತೆಜೊತೆಗೆ ವಿರ್ಮಶಕರ ಮೆಚ್ಚುಗೆಯನ್ನೂ, ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಗಳಿಸಿವೆ. ಇವರ ಅಂಕಣ ಬರೆಹಗಳು “ಮುಖಗಳು” ಹೆಸೆರಿನಲ್ಲಿ ಪ್ರತಿವಾರ ದೇಶದ ಪ್ರತಿಷ್ಠಿತ ಸುದ್ದಿಸಂಸ್ಥೆ ಯು.ಎನ್.ಐ. ಯಲ್ಲಿ ಪ್ರಕಟವಾಗುತ್ತವೆ ಎಂದು ತಿಳಿಸಲು ಸಂತೋಷವಾಗುತ್ತದೆ.

Share