Connect with us


      
ವಿದೇಶ

ಶ್ರೀಲಂಕಾ ಉದ್ಯೋಗಿಯ ಸಜೀವ ದಹನ ; ಪಾಕಿಸ್ತಾನವನ್ನು ಪರಿಹಾರ ಕೇಳಿದ ಶ್ರೀಲಂಕಾ ಸರ್ಕಾರ

Iranna Anchatageri

Published

on

ಪಾಕಿಸ್ತಾನದಲ್ಲಿ ಹತ್ಯೆಯಾದ ಶ್ರೀಲಂಕಾ ಮ್ಯಾನೇಜರ್  

ಕೊಲಂಬೊ, ಡಿ 7 (ಯುಎನ್ಐ) ಪಾಕಿಸ್ತಾನದ ಸಿಯೋಲ್ ಕೋಟ್ ನಲ್ಲಿ ನಡೆದ ಶ್ರೀಲಂಕಾ ಮ್ಯಾನೇಜರ್ ಮೇಲೆ ಹಲ್ಲೆ ಹಾಗೂ ಸಜೀವವಾಗಿ ಸುಟ್ಟು ಹಾಕಿರುವ ಘಟನೆಯನ್ನು ಶ್ರೀಲಂಕಾ ಸರ್ಕಾರ ಕಟುವಾಗಿ ಟೀಕಿಸಿದೆ. ಪಾಕಿಸ್ತಾನದಲ್ಲಿ ಪ್ರಿಯಾಂತಾ ದೀಯವದನಾ ಅವರನ್ನು ಬರ್ಬರವಾಗಿ ಹತ್ಯೆಗೈದಿರುವುದನ್ನು ವಿರೋಧಿಸಿ ಶ್ರೀಲಂಕಾದಲ್ಲಿ ಪ್ರತಿಭಟನೆ ಹೆಚ್ಚಾಗತೊಡಗಿದೆ. ಶ್ರೀಲಂಕಾದಲ್ಲಿನ ಜನರು ರಸ್ತೆಗಿಳಿಯುವ ಮೂಲಕ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.

ಈ ಮಧ್ಯೆ, ಶ್ರೀಲಂಕಾ ಸರ್ಕಾರ ಪಾಕಿಸ್ತಾನದಿಂದ ಪರಿಹಾರವನ್ನು ಕೇಳಿದೆ. ಕೈಗಾರಿಕಾ ಸಚಿವ ವಿಮಲ್ ವೀರವಂಶ ಪತ್ರಿಕಾಗೋಷ್ಠಿ ನಡೆಸಿ ಮೃತರ ಕುಟುಂಬಕ್ಕೆ ಇಮ್ರಾನ್ ಖಾನ್ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಶುಕ್ರವಾರ, ಲಾಹೋರ್‌ನಿಂದ 100 ಕಿಮೀ ದೂರದಲ್ಲಿರುವ ಸಿಯಾಲ್‌ಕೋಟ್‌ನಲ್ಲಿ ಶ್ರೀಲಂಕಾದ ಪ್ರಜೆಯಾದ ಪ್ರಿಯಾಂತಾ ದಿಯವದನಾ ಅವರನ್ನು ಹೊಡೆದು ಸಾಯಿಸಲಾಗಿತ್ತು. ಇದಾದ ಬಳಿಕ ಆತನ ದೇಹವನ್ನು ಸುಟ್ಟು ಹಾಕಲಾಗಿತ್ತು. ಮೃತನ ಮೇಲೆ ಇಸ್ಲಾಂ ಧರ್ಮದ ರಕ್ಷಣೆಗಾಗಿರುವ ಬ್ಲಾಷ್ಪೆಮಿ ಕಾಯ್ದೆಯ ಉಲ್ಲಂಘನೆಯ ಆರೋಪವಿದೆ. ವರದಿಗಳ ಪ್ರಕಾರ, ಶ್ರೀಲಂಕಾ ಪ್ರಜೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಜನಸಮೂಹವು ಕಾರ್ಖಾನೆಯ ಮೇಲೆ ದಾಳಿ ಮಾಡಿ ಶ್ರೀಲಂಕಾದ ಪ್ರಜೆಯನ್ನು ಕೊಂದಿದ್ದರು.

ಪಾಕಿಸ್ತಾನದಲ್ಲಿ ಈವರೆಗೆ 118 ಜನರ ಬಂಧನ

ಪಾಕ್ ನ ಮೂಲಭೂತವಾದಿ ಸಂಘಟನೆ TLP ಯ ಪೋಸ್ಟರ್ ಅನ್ನು ಶ್ರೀಲಂಕಾ ಪ್ರಜೆ ಹರಿದು ಹಾಕಿದ್ದಾರೆ ಅಂತಾ ಆರೋಪಿಸುತ್ತಿದೆ. ಈ ಪೋಸ್ಟರ್‌ನಲ್ಲಿ ಖುರಾನ್ ಪದ್ಯಗಳನ್ನು ಬರೆಯಲಾಗಿತ್ತು. ಈ ವಿಷಯ ಬೆಳಕಿಗೆ ಬಂದ ತಕ್ಷಣ, ಟಿಎಲ್‌ಪಿ ಬೆಂಬಲಿಗರು ಶ್ರೀಲಂಕಾ ವ್ಯಕ್ತಿಯನ್ನು ಸುತ್ತುವರೆದು ಥಳಿಸಿ ಕೊಂದಿದ್ದಾರೆ. ಈ ಪ್ರಕರಣದಲ್ಲಿ 800 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅದೇ ಸಮಯದಲ್ಲಿ, 118 ಜನರನ್ನು ಬಂಧಿಸಲಾಗಿದೆ, ಅದರಲ್ಲಿ 13 ಮಂದಿ ಪ್ರಮುಖ ಆರೋಪಿಗಳಾಗಿದ್ದಾರೆ.

ಕೃತ್ಯವನ್ನು ಕಟುವಾಗಿ ಟೀಕಿಸಿದ ರಾಜಪಕ್ಸೆ

ಮಹೇಂದ ರಾಜಪಕ್ಸೆ, ಶ್ರೀಲಂಕಾ ಪ್ರಧಾನಮಂತ್ರಿ

ಪಾಕಿಸ್ತಾನದಲ್ಲಿನ ಕೃತ್ಯವನ್ನು ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ತೀವ್ರವಾಗಿ ಖಂಟಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ನ್ಯಾಯಾಂಗದ ತನಿಖೆ ಹಾಗೂ ಅಲ್ಲಿರುವ ಶ್ರೀಲಂಕಾ ನಾಗರಿಕರ ಸುರಕ್ಷತೆಯನ್ನು ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಘಟನೆಯ ನಂತರ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದು, ಘಟನೆಯಿಂದಾಗಿ ಪಾಕಿಸ್ತಾನಕ್ಕೆ ಅವಮಾನವಾಗಿದೆ ಅಂತಾ ತಿಳಿಸಿದ್ದರು. ಅಲ್ಲದೆ, ಬ್ಲಾಷ್ಪೆಮಿ ಕಾಯ್ದೆ ವಿರುದ್ಧ ವಿಶ್ವದ ರಾಷ್ಟ್ರಗಳು ಸಹ ಟೀಕಿಸಿದ್ದು, ಪಾಕಿಸ್ತಾನ ಸರ್ಕಾರ, ಈ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಪ್ರಪಂಚದ ರಾಷ್ಟ್ರಗಳು ಆಗ್ರಹಿಸಿವೆ.

ಇಮ್ರಾನ್ ಖಾನ್, ಪಾಕಿಸ್ತಾನದ ಪ್ರಧಾನ ಮಂತ್ರಿ

Share