Connect with us


      
ಕರ್ನಾಟಕ

ಸರ್ಕಾರಿ ಶಾಲೆಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಿ: ಅರವಿಂದ ಬೆಲ್ಲದ

UNI Kannada

Published

on

ಬೆಂಗಳೂರು : ಮಾರ್ಚ್ 21 (ಯು.ಎನ್.ಐ.) ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಬೇಕು. ಇದರಿಂದ ಸಾಮಾನ್ಯ ಜನರಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಸರ್ಕಾರಿ ಶಾಲೆಗೆ ಮಕ್ಕಳನ್ನೂ ಕಳುಹಿಸುತ್ತಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸಲಹೆ ನೀಡಿದರು.

ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಇಲ್ಲದಿರುವುದರಿಂದ ಪಾಲಕರು ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಎಲ್‌ಕೆಜಿ ಯುಕೆಜಿ 1 ಸಾವಿರ ಶಾಲೆಗಳನ್ನು ತೆರೆಯುವುದಾಗಿ ಹೇಳಿತ್ತು. ಆದರೆ, ಇದುವರೆಗೂ ತೆರೆಯಲಾಗಿಲ್ಲ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಅಲ್ಲದೇ ಉರ್ದು ಶಾಲೆ ಮತ್ತು  ಕನ್ನಡ ಶಾಲೆಗಳನ್ನು ಪ್ರತ್ಯೇಕ ನಿರ್ಮಾಣ ಮಾಡುವುದರಿಂದ ಮಕ್ಕಳಲ್ಲಿ  ಭೇದಭಾವ ಮೂಡಿಸಿದಂತಾಗುತ್ತದೆ. ಅದರ ಬದಲು ಒಂದೇ ಶಾಲೆಯಲ್ಲಿ ಮಕ್ಕಳು ಕಲಿಯುವಂತಾಗಬೇಕು. ಉರ್ದು ವಿಷಯ ಕಲಿಯುವಾಗ  ಆ ವಿಷಯ ಕಲಿಯುವ ಮಕ್ಕಳು ಹಾಜರಾಗಲು ಅವಕಾಶ ಕಲ್ಪಿಸಬೇಕು. ಇದರಿಂದ ಶಿಕ್ಷಕರು ಉಳಿಯುತ್ತಾರೆ. ಅವರನ್ನು ಖಾಲಿ ಇರುವ ಶಾಲೆಗಳಲ್ಲಿ ಬಳಸಿಕೊಳ್ಳಬಹುದು.

ಸರ್ಕಾರಿ ಶಿಕ್ಷಕರು ಸರ್ಕಾರಿ ಶಾಲೆಗಳನ್ನು ಸುಧಾರಿಸದಿದ್ದರೆ, ಪರಿಸ್ಥಿತಿ ಗಂಭೀರವಾಗಲಿದೆ. ಶಿಕ್ಷಕರ ಹಾಗೂ ಪದವಿದರ ಕ್ಷೇತ್ರಗಳ ಸದಸ್ಯರ ಆಯ್ಕೆಗೆ ಆ ಶಾಲೆಗಳಲ್ಲಿ ಅಧ್ಯಯನ ಮಾಡುವ ಮಕ್ಕಳ ಪಾಲಕರು ಮತ ಹಾಕುವ ವ್ಯವಸ್ಥೆ ಜಾರಿಗೆ ಬರಬೇಕು. ಆಗ ಪಾಲಕರು ಶಾಲೆಗಳ ಬಗ್ಗೆ ಆಲೋಚನೆ ಮಾಡುತ್ತಾರೆ.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಎ.ಎಸ್.ಪಾಟೀಲ್ ನಡಹಳ್ಳಿ, ಸಮಗ್ರ ಶಿಕ್ಷಣ ವ್ಯವಸ್ಥೆ ಸುಧಾರಿಸುವ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಿದೆ ಎಂದರು.

ಮಾತು ಮುಂದುವರೆಸಿದ ಅರವಿಂದ ಬೆಲ್ಲದ,  ನಮ್ಮ ರಾಜ್ಯದ ಸಂಪತ್ತು ಸೃಷ್ಠಿಸುವ ಶಿಕ್ಷಣ ಇಲಾಖೆಗೆ ಬಜೆಟ್‌ನಲ್ಲಿ  ಕೇವಲ ಶೇ 12% ರಷ್ಟು ಅನುದಾನ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಸ್ಥಿತಿ ಸುಧಾರಿಸಬೇಕಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕವಾಗಬೇಕು. ಸರ್ಕಾರಿ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ವಾರ್ಷಿಕ 40 ಸಾವಿರ ರೂ. ಖರ್ಚು ಮಾಡುತ್ತಿದ್ದೇವೆ. ಆದರೆ, ಅದರ ಫಲ ಎಷ್ಟು ಬರುತ್ತಿದೆ ಎನ್ನುವುದನ್ನು ಗಮನಿಸಬೇಕು.

ಶಿಕ್ಷಣ ಇಲಾಖೆಯನ್ನು ಶಿಕ್ಷಕರ ಇಲಾಖೆಯನ್ನು ಪ್ರತ್ಯೇಕ ಮಾಡಬೇಕು. ಶಿಕ್ಷಣ ಇಲಾಖೆಯಲ್ಲಿರುವ ಅಧಿಕಾರಿಗಳೀಗೆ ಶಿಕ್ಷಣದ ಬಗ್ಗೆ ಆಲೋಚನೆ ಮಾಡುವುದಿಲ್ಲ. ಬರೀ ಶಿಕ್ಷಕರ ಬಗ್ಗೆಯೇ ಯೋಚನೆ ಮಾಡುತ್ತಾರೆ ಎಂದರು.

Share