ಬೆಂಗಳೂರು : ಜನೆವರಿ 10 (ಯು.ಎನ್.ಐ.) ಅಂಗವಿಕಲರ ಹಕ್ಕುಗಳ ಕಾಯಿದೆ 2016ರ ಅಡಿ ರಾಜ್ಯ ನಿಯಮಗಳನ್ನು 2019ರ ಸೆಪ್ಟೆಂಬರ್ 5ರಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ ಎಂದು ರಾಜ್ಯ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್ ಗೆ ತಿಳಿಸಿತು.
ನಿಯಮಗಳ ಜಾರಿಗೆ ಸಂಬಂಧಿಸಿದಂತೆ ಚಂದ್ರಶೇಖರ್ ಪುಟ್ಟಪ್ಪ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
“ಅಂಗವಿಕಲರ ಹಕ್ಕುಗಳ ಕಾಯಿದೆ ಅಡಿ ವಿಶೇಷ ನ್ಯಾಯಾಲಯಗಳನ್ನು ಸೃಷ್ಟಿಸಲಾಗಿದೆಯೇ” ಎಂದು ಪೀಠವು ಸರ್ಕಾರದ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಸರ್ಕಾರ ಪ್ರತಿನಿಧಿಸುವ ರಾಜಶೇಖರ್ ಅವರು “ಇನ್ನೂ ವಿಶೇಷ ನ್ಯಾಯಾಲಯಗಳನ್ನು ಸೃಷ್ಟಿಸಲಾಗಿಲ್ಲ” ಎಂದರು.
ಅಂತಿಮವಾಗಿ ಪೀಠವು “ಅಂಗವಿಕಲರ ಹಕ್ಕುಗಳ ಕಾಯಿದೆ 2016ರ ಅಡಿ ರಾಜ್ಯ ನಿಯಮಗಳನ್ನು 2019ರ ಸೆಪ್ಟೆಂಬರ್ 5ರಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಈ ಕಾಯಿದೆಯ 13ನೇ ಅಧ್ಯಾಯದ ಪ್ರಕಾರ ವಿಶೇಷ ನ್ಯಾಯಾಲಯಗಳನ್ನು ಸೃಷ್ಟಿಸಬೇಕಿದೆ. ಮುಂದಿನ ವಿಚಾರಣೆಯಲ್ಲಿ ಯಾವಾಗ ವಿಶೇಷ ನ್ಯಾಯಾಲಯಗಳನ್ನು ಸೃಷ್ಟಿಸಲಾಗುತ್ತದೆ ಎಂದು ಸರ್ಕಾರ ತಿಳಿಸಬೇಕು” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ