Connect with us


      




ದೇಶ

ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಸಿಗಲಿಲ್ಲ ಕಾಲೇಜಿನಲ್ಲಿ ಪ್ರವೇಶ

Iranna Anchatageri

Published

on

ಜೈಪುರ: ಫೆಬ್ರವರಿ 11 (ಯು.ಎನ್.ಐ.) ಕರ್ನಾಟಕದ ನಂತರ ಇದೀಗ ರಾಜಸ್ಥಾನದಲ್ಲೂ ಹಿಜಾಬ್ ವಿವಾದ ಶುರುವಾಗಿದೆ. ಜೈಪುರದ ಚಕ್ಸು ಎಂಬಲ್ಲಿ ಇಂದು ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಮತ್ತು ಬುರ್ಖಾ ಧರಿಸಿ ಕಸ್ತೂರಿ ದೇವಿ ಕಾಲೇಜಿಗೆ ಬಂದಿದ್ದಾರೆ. ವಿದ್ಯಾರ್ಥಿನಿಯರನ್ನು ನೋಡಿದ ಆಡಳಿತ ಮಂಡಳಿಯವರು, ಕಾಲೇಜು ಸಮವಸ್ತ್ರ ಧರಿಸಿ ಬರುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿನಿಯರು ಪ್ರತಿಭಟನೆ ಆರಂಭಿಸಿದರು. ವಿದ್ಯಾರ್ಥಿನಿಯರು ತಮ್ಮ ಕುಟುಂಬದವರನ್ನೂ ಕಾಲೇಜಿಗೆ ಕರೆಸಿಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಪ್ರತಿಭಟನೆ ಹೆಚ್ಚುತ್ತಿರುವುದನ್ನು ಕಂಡು ಕಾಲೇಜು ಆಡಳಿತ ಮಂಡಳಿ ಮುಖ್ಯ ಕಟ್ಟಡದ ಗೇಟ್‌ ಮುಚ್ಚಿದೆ. ಸ್ಥಳಕ್ಕಾಗಮಿಸಿದ ವಿದ್ಯಾರ್ಥಿನಿಯರ ಸಂಬಂಧಿಕರು ಮತ್ತು ಗ್ರಾಮಸ್ಥರು ವಿದ್ಯಾರ್ಥಿನಿಯರಿಗೆ ಹಿಜಾಬ್‌ನಲ್ಲಿಯೇ ಪ್ರವೇಶ ನೀಡುವಂತೆ ಒತ್ತಾಯಿಸಿದರು, ಆದರೆ ಕಾಲೇಜು ಆಡಳಿತ ಮಂಡಳಿ ಒಪ್ಪಲಿಲ್ಲ.

ಕಾಲೇಜಿಗೆ ಆಗಮಿಸಿದ ಬಾಲಕಿಯರು, ಭಾರತದ ಸಂವಿಧಾನದಲ್ಲಿ ಎಲ್ಲ ವೇಷಭೂಷಣಗಳಿಗೂ ಮಾನ್ಯತೆ ನೀಡಲಾಗಿದೆ ಎಂದರು. ಹೀಗಿರುವಾಗ ನಮ್ಮ ಧರ್ಮದ ಬಟ್ಟೆ ತೊಡುವುದಕ್ಕೆ ಯಾರ ಆಕ್ಷೇಪವೂ ಬೇಡ. ಕೆಲವು ಕೋಮುವಾದಿಗಳು ನಮಗೆ ಅನಗತ್ಯವಾಗಿ ತೊಂದರೆ ಕೊಡುತ್ತಿದ್ದಾರೆ, ಇದು ಸಂಪೂರ್ಣ ತಪ್ಪು ಎಂದು ಹೇಳಿದರು. ಆದರೆ, ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮೌನವಹಿಸಿತ್ತು.

ಇದೇ ವೇಳೆ ಜಗಳ ವಿಕೋಪಕ್ಕೆ ಹೋದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಾಧಾನಪಡಿಸಿದರು. ಬುರ್ಖಾ-ಹಿಜಾಬ್ ಧರಿಸುವ ಬಗ್ಗೆ ಸಂಪೂರ್ಣ ಕಾಲೇಜು ಆರವಣದಲ್ಲಿ ವಿವಾದವಿತ್ತು. ಆದರೆ ಈಗ ವಿಷಯ ಸಂಪೂರ್ಣವಾಗಿ ಶಾಂತವಾಗಿದೆ ಎಂದು ಚಕ್ಸು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಿತೇಂದ್ರ ಕುಮಾರ್ ವರ್ಮಾ ಹೇಳಿದ್ದಾರೆ.

ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನ ಸಹಾಯಕ ನಿರ್ದೇಶಕ ಸುಮಿತ್ ಶರ್ಮಾ ಮಾತನಾಡಿ, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕಾಲೇಜಿಗೆ ಹುಡುಗಿಯರು ಬುರ್ಖಾ ಧರಿಸಿ ಬರುತ್ತಿದ್ದಾರೆ. ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿಯು ಸಮವಸ್ತ್ರದಲ್ಲಿ ಬರುವಂತೆ ನಿರಂತರವಾಗಿ ಕೇಳುತ್ತಿತ್ತು. ಕಾಲೇಜು ಆಡಳಿತ ಮಂಡಳಿಯ ಮಾತನ್ನು ನಿರ್ಲಕ್ಷಿಸಿದ ವಿದ್ಯಾರ್ಥಿನಿಯರು, ಬುರ್ಖಾ-ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಅದರ ನಂತರ ಇಂದು ನಾವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಯಿತು. ಇದಾದ ಬಳಿಕ ಕೆಲ ಸಮಾಜಘಾತುಕ ಶಕ್ತಿಗಳೊಂದಿಗೆ ಕಾಲೇಜಿಗೆ ಆಗಮಿಸಿದ ಬಾಲಕಿಯರು ತೀವ್ರವಾಗಿ ಘೋಷಣೆ ಕೂಗಿದರು ಎಂದು ತಿಳಿಸಿದ್ದಾರೆ.

Share