Connect with us


      




ದೇಶ

ಮೋದಿ ಭದ್ರತಾ ಲೋಪ ತನಿಖೆಗೆ ಸ್ವತಂತ್ರ ಸಮಿತಿ ರಚಿಸಿದ ಸುಪ್ರೀಂ

Vanitha Jain

Published

on

ನವದೆಹಲಿ: ಜನೆವರಿ 10 (ಯು.ಎನ್.ಐ.) ಕಳೆದ ವಾರ ಪಂಜಾಬ್‍ನ ಫಿರೋಜ್‍ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ಸಮಿತಿಯನ್ನು ರಚಿಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ.

ಸ್ವತಂತ್ರ ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಾಧೀಶರು ವಹಿಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಳೆದ ವಾರ ಪಂಜಾಬ್‍ನಲ್ಲಿ ಪ್ರಧಾನಿ ಮೋದಿ ಭದ್ರತಾ ಲೋಪವನ್ನು ತನಿಖೆ ಮಾಡುವ ಸ್ವತಂತ್ರ ಸಮಿತಿಯಲ್ಲಿ ಡಿಜಿಪಿ ಚಂಡೀಗಢ, ಐಜಿ ರಾಷ್ಟ್ರೀಯ ತನಿಖಾ ಸಂಸ್ಥೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಮತ್ತು ಪಂಜಾಬ್‍ನ ಎಡಿಜಿಪಿ (ಭದ್ರತೆ) ಅವರನ್ನು ಸೇರಿಸುವ ಬಗ್ಗೆ ನ್ಯಾಯಾಲಯ ಪ್ರಸ್ತಾಪಿಸಿದೆ.

ಇದಕ್ಕೂ ಮುನ್ನ ಶುಕ್ರವಾರದ ವಿಚಾರಣೆಯಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‍ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಅವರ ಪ್ರಯಾಣದ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಮತ್ತು ಸಂರಕ್ಷಿಸುವಂತೆ ಸೂಚಿಸಿತ್ತು.

ನ್ಯಾಯಾಲಯವು ಪಂಜಾಬ್ ಮತ್ತು ಪೊಲೀಸ್ ಅಧಿಕಾರಿಗಳು, ಎಸ್‍ಪಿಜಿ ಮತ್ತು ಇತರ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳಿಗೆ ಸಹಕರಿಸಲು, ಅಗತ್ಯ ನೆರವು ನೀಡುವಂತೆ ನಿರ್ದೇಶಿಸಿದೆ.

ಪಿಎಂ ಮೋದಿ ಅವರ ಫಿರೋಜ್‍ಪುರ ಭೇಟಿಯ ಸಂದರ್ಭದಲ್ಲಿ ಭದ್ರತಾ ಲೋಪವನ್ನು ತನಿಖೆ ಮಾಡುವ ಕೇಂದ್ರ ತಂಡವು ಶುಕ್ರವಾರ ಪಂಜಾಬಿಗೆ ತೆರಳಿತ್ತು. ಆದರೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿದ್ದು, ಈ ವಿಷಯದಲ್ಲಿ 150 ಮಂದಿಯ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ ಮತ್ತು ದ್ವಿಸದಸ್ಯ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದೆ.

ಕೇಂದ್ರದ ತ್ರಿಸದಸ್ಯ ಸಮಿತಿಯು ಮೋದಿಯವರ ಜನವರಿ 5 ರ ಭೇಟಿಯ ಸಂದರ್ಭದಲ್ಲಿ ನಡೆದ ಘಟನೆಗಳ ಅನುಕ್ರಮದ ಬಗ್ಗೆ ವಿವರಗಳನ್ನು ಕೇಳಲಿದೆ. ತಂಡವು ಮೊದಲು ಫಿರೋಜ್‍ಪುರ ಬಳಿಯ ಪಯರಾಯನ ಮೇಲ್ಸೇತುವೆಗೆ ತೆರಳಿ ಹಿರಿಯ ಪಂಜಾಬ್ ಪೊಲೀಸ್ ಮತ್ತು ನಾಗರಿಕ ಆಡಳಿತ ಅಧಿಕಾರಿಗಳೊಂದಿಗೆ ಸಂವಾದ ನಡೆಸಿತು.

Share