Connect with us


      




ದೇಶ

ಬಿಬಿಎಂಪಿ ಚುನಾವಣೆ: ರಾಜ್ಯ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಲು ಮುಂದಾದ ಸುಪ್ರೀಂ​

Bindushree Hosuru

Published

on

ನವದೆಹಲಿ : ನ. 9 (ಯುಎನ್ಐ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ- 2021ನ್ನು ಯಾವಾಗ ನಡೆಸಬೇಕು ಎಂದು ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

2020 ಡಿಸೆಂಬರ್ ನಾಲ್ಕರಂದು ಸಿಜೆಐ ಆಗಿದ್ದ ಎಸ್.ಎ.ಬೊಬ್ಡೆ ಅವರು ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿ 6 ವಾರದೊಳಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದರು ಎಂದು ವಕೀಲ ನಿಜಾಂ ಪಾಷಾ ಹೇಳಿದಾಗ ‘ ಆ ಫೈಲ್ ಅನ್ನು ನನ್ನ ಛೇಂಬರ್​ಗೆ ಕಳುಹಿಸಿ, ಮಧ್ಯಾಹ್ನ ಒಂದು ಗಂಟೆಗೆ ನಾನು ನೋಡುತ್ತೇನೆ’ ಎಂದು ಸಿಜೆಐ ಎನ್.ವಿ.ರಮಣ ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೇ ಬಿಬಿಎಂಪಿಯ 5 ವರ್ಷಗಳ ಅವಧಿ ಮುಗಿದಿದ್ದು, ಚುನಾವಣೆ ಪ್ರಕ್ರಿಯೆಗೆ ತಡೆ ನೀಡಿದ್ದರಿಂದ ತುರ್ತು ಪರಿಸ್ಥಿತಿ ಇದೆ ಎಂದು ಸುಪ್ರೀಂ ಕೋರ್ಟ್ ಪೀಠದ ಗಮನಕ್ಕೆ ತಂದಿತ್ತು.

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಮೂರನೇ ತಿದ್ದುಪಡಿ ಕಾಯಿದೆ (2020) ರಲ್ಲಿ ಉಲ್ಲೇಖಿಸಿರುವ 243 ಸ್ಥಾನಗಳ ಬದಲಿಗೆ ಸೆಪ್ಟೆಂಬರ್ 23, 2020 ರ ಡಿಲಿಮಿಟೇಶನ್ (ಪುನರ್ ವಿಂಗಡಣೆ) ಅಧಿಸೂಚನೆಯ ಪ್ರಕಾರ ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಹೈಕೋರ್ಟ್ ತೀರ್ಪು ರಾಜ್ಯ ಶಾಸಕಾಂಗದ ಸರ್ವಾನುಮತಕ್ಕೆ ವಿರುದ್ಧವಾಗಿದೆ ಎಂದು ಸರ್ಕಾರ ಹೇಳಿದೆ. ಬೆಂಗಳೂರಿನಲ್ಲಿರುವ ವಾರ್ಡ್‌ಗಳ ಸಂಖ್ಯೆಯನ್ನು 243 ಕ್ಕೆ ಹೆಚ್ಚಿಸಲು 1976 ರ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಗೆ ಶಾಸಕಾಂಗವು ತಿದ್ದುಪಡಿ ಮಾಡಿದೆ.

ಹೈಕೋರ್ಟ್​ನಲ್ಲಿ ಈ ತೀರ್ಪು ಬೆಂಗಳೂರಿನ ಆಡಳಿತ ಸುಧಾರಣೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಅಲ್ಲದೇ ನಗರದಲ್ಲಿ ಜನಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಸರ್ಕಾರ ಮನವಿಯಲ್ಲಿ ಉಲ್ಲೇಖಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ 5 ವರ್ಷಗಳ ಅಧಿಕಾರಾವಧಿ ಮುಗಿದ ನಂತರ, ರಾಜ್ಯ ಸರ್ಕಾರವು ಹಿರಿಯ ಐಎಎಸ್ ಅಧಿಕಾರಿಯನ್ನು ನಾಗರಿಕ ಸಂಸ್ಥೆಯ ಆಡಳಿತಾಧಿಕಾರಿಯಾಗಿ ನೇಮಿಸಿದೆ.

Share