Connect with us


      
ನ್ಯಾಯಾಲಯ

ಪರಿಷತ್ ಚುನಾವಣೆ: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಸೂರಜ್ ನಾಮಪತ್ರ ಪ್ರಶ್ನಿಸಿದ್ದ ಅರ್ಜಿ ವಜಾ

Kumara Raitha

Published

on

ಹಾಸನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ವಿಧಾನ್ ಪರಿಷತ್ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ಅವರ ನಾಮಪತ್ರ ಅಕ್ರಮವಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಸೋಮವಾರ ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ಹಾಸನದ ಕುಂದೂರು ಗ್ರಾಮದ ಕೆ ಎಲ್ ಹರೀಶ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತು.
“ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಮೇಲೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಚುನಾವಣಾ ತಕರಾರು ಅರ್ಜಿ ಸಲ್ಲಿಸುವ ಮೂಲಕ ಪರಿಹಾರ ಪಡೆಯಿರಿ” ಎಂದು ಪೀಠವು ಅರ್ಜಿದಾರರಿಗೆ ಸೂಚಿಸಿತು.
‘ಸೂರಜ್ ರೇವಣ್ಣ ಅವರು ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ನಮೂನೆ 26ರ ಅಡಿಯಲ್ಲಿನ ಪ್ರಮಾಣ ಪತ್ರದಲ್ಲಿ ಅನೇಕ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ಆದ್ದರಿಂದ, ಇವರ ನಾಮಪತ್ರ ತಿರಸ್ಕೃರಿಸಬೇಕು ಅಥವಾ ಆಯುಕ್ತರಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದರು.
ಇದನ್ನು ಆಧರಿಸಿ ನ್ಯಾಯಾಲಯವು ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯುಕ್ತರು ಹಾಗೂ ಹಾಸನ ಜಿಲ್ಲಾ ಚುನಾವಣಾಧಿಕಾರಿಗೆ ಕಳೆದ ಶುಕ್ರವಾರ ನೋಟಿಸ್ ಜಾರಿ ಮಾಡಿ, ಪ್ರತಿಕ್ರಿಯಿಸಲು ಆದೇಶಿಸಿತ್ತು.

Share