Connect with us


      
ಕರ್ನಾಟಕ

ಶಾಸಕರಿಗೆ ಅಗೌರವ; ತಹಶೀಲ್ದಾರ್ ಅಮಾನತ್ತಿಗೆ ಕಾಂಗ್ರೆಸ್ ಪಟ್ಟು – ವಿಧಾನಸಭೆ ಮುಂದೂಡಿಕೆ

Iranna Anchatageri

Published

on

ಬೆಳಗಾವಿ (ಸುವರ್ಣ ವಿಧಾನಸೌಧ) ಡಿಸೆಂಬರ್ 15 (ಯು.ಎನ್.ಐ.) ಸಂಡೂರು ಶಾಸಕ ತುಕಾರಂ ಅವರಿಗೆ ತಹಶೀಲ್ದಾರ್ ಎಚ್.ಜೆ.ರಶ್ಮಿ ಅವಮಾನಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಯಿತು.

ಕಳೆದ ಬಾರಿಯ ಅಧಿವೇಶನದಲ್ಲಿ ತಹಶೀಲ್ದಾರ್ ವಿರುದ್ಧ ಕ್ರಮಕೈಗೊಳ್ಳುವಂತೆ ಶಾಸಕ ತುಕಾರಂ ಪ್ರಸಾಪ ಮಾಡಿದ್ದರು. ಈ ವೇಳೆ ಮುಖ್ಯಮಂತ್ರಿಗಳು ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡುವುದಾಗಿ ತಿಳಿಸಿದ್ದರು. ಅಲ್ಲದೆ, ಕಾನೂನು ಸಚಿವ ಮಾಧುಸ್ವಾಮಿ ತನಿಖೆಗೆ ಆದೇಶಿಸಿದ್ದರು. ಆದರೆ, ತಹಶೀಲ್ದಾರ್ ವಿರುದ್ಧ ಈವರೆಗೆ ಯಾವುದೇ ರೀತಿಯ ಕ್ರಮಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಈ ವಿಚಾರ ಮತ್ತೆ ವಿಧಾನಸಭೆಯಲ್ಲಿ ಪ್ರಸ್ತಾಪವಾಯಿತು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಹಶೀಲ್ದಾರ್ ಅವರನ್ನು ಅಮಾನತ್ತು ಮಾಡಬೇಕು ಹಾಗೂ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅಧಿಕಾರಿಯನ್ನು ವರ್ಗಾಯಿಸಿ ತನಿಖೆ ಕೈಗೊಳ್ಳುವ ಭರವಸೆ ನೀಡಿದರು. ಆದ್ರೆ ಇದಕ್ಕೆ ಒಪ್ಪದ ಕಾಂಗ್ರೆಸ್ ಪಕ್ಷದ ಸದಸ್ಯರು, ಅಧಿಕಾರಿಯ ಅಮಾನತು ಹಾಗೂ ಶಿಸ್ತು ಕ್ರಮಕ್ಕೆ ಪಟ್ಟು ಹಿಡಿದರು. ಈ ವೇಳೆ ಕಾನೂನು ಸಚಿವ ಮಾಧುಸ್ವಾಮಿ, ಮುಖ್ಯಮಂತ್ರಿಗಳು ವರ್ಗಾವಣೆಗೆ ಆದೇಶಿಸಿದರೂ ಏಕೆ ಕ್ರಮಕೈಗೊಂಡಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಆಮೇಲೆ ಕ್ರಮಕೈಗೊಳ್ಳೋಣ ಎಂದು ಸಮಜಾಯಿಷಿ ನೀಡಿದರು.

ಈ ವೇಳೆ ಏರು ಧ್ವನಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 3 ಬಾರಿ ಶಾಸಕರಾಗಿ ಆಯ್ಕೆಯಾದ ತುಕರಾಂ ಅವರಿಗೆ ಅಗೌರವ ತೋರಿದ್ದಾಗಿದೆ. ಸದನದಲ್ಲಿ ಶಾಸಕರ ಮಾತಿಗೆ ರಕ್ಷಣೆ ಇಲ್ಲದೆ ಇದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಗಲಾಟೆ ಆರಂಭವಾಗಿ ಕೈ ಸದಸ್ಯರು ಸದನದ ಬಾವಿಗೆ ಇಳಿದು ಘೋಷಣೆ ಕೂಗಲಾರಂಭಿಸಿದರು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಿಗೆ ಅಗೌರವ ತೋರಿದ ಅಧಿಕಾರಿಯ  ವರ್ಗಾವಣೆ ಹಾಗೂ ಅವರ ವಿರುದ್ಧ ತನಿಖೆ ಕೈಗೊಳ್ಳುವುದಾಗಿ ಹೇಳಿದೆ ಎಂದು ಶಾಸಕರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ ಕಾಂಗ್ರೆಸ್ ಸದಸ್ಯರು ಸುಮ್ಮನಾಗಲಿಲ್ಲ. ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಿಮ್ಮ ಆಡಳಿತಾವಧಿಯಲ್ಲಿ ಏನೇನು ಮಾಡಿದ್ದೀರಿ ಅನ್ನೋದು ನಮಗೆ ಗೊತ್ತಿದೆ ತಿರುಗೇಟು ನೀಡಿದರು. ಇದರಿಂದ ವಿಧಾನಸಭೆಯಲ್ಲಿ ಗದ್ದಲ ಕೋಲಾಹಲ ಉಂಟಾಗಿದ್ದರಿಂದ 10 ನಿಮಿಷಗಳ ಕಲಾಪವನ್ನು ಮುಂದೂಡಲಾಯಿತು.

ಮತ್ತೆ 10 ನಿಮಿಷಗಳ ಬಳಿಕ ವಿಧಾನಸಭೆ ಆರಂಭಗೊಂಡಾಗ ಕಂದಾಯ ಸಚಿವ ಆರ್.ಅಶೋಕ್, ತಹಶೀಲ್ದಾರ್ ಅವರನ್ನು ಸ್ಥಳ ನಿಗದಿಪಡಿಸದೆ ವರ್ಗಾವಣೆ ಮಾಡಲಾಗಿದೆ. ಹಾಗೂ ಒಂದು ತಿಂಗಳಲ್ಲಿ ತನಿಖಾ ವರದಿ ಬಂದ ಬಳಿಕ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಇದರಿಂದ ಕಾಂಗ್ರೆಸ್ ಸದಸ್ಯರು ಧರಣಿಯನ್ನು ವಾಪಸ್ ಪಡೆದುಕೊಂಡರು.

Share