Connect with us


      
ಖಚಿತ ನೋಟ: ಡಾ. ಜ್ಯೋತಿ

ವ್ಯವಸ್ಥೆಗೆ ಸೆಡ್ಡುಹೊಡೆದ ನಿರ್ಭೀತ ಪತ್ರಕರ್ತರ ಪಾಡು

Kumara Raitha

Published

on

ಲೇಖಕರು: ಡಾ. ಜ್ಯೋತಿ ಎಸ್.

ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವೆಂದು ಪರಿಗಣಿಸಲ್ಪಟ್ಟ ಸುದ್ದಿಮಾಧ್ಯಮವಿಂದು ತನ್ನ ನಿರ್ಭೀತ ಅಭಿಪ್ರಾಯ ಸ್ವಾತಂತ್ರ್ಯವನ್ನು ಬಹುತೇಕ ಕಳೆದುಕೊಂಡಿರುವುದನ್ನು ನಾವು ಕಾಣಬಹುದು. ಮೂಲತಃ, ಸುದ್ದಿಮಾಧ್ಯಮವೆನ್ನುವುದು, ಯಾವುದೇ ರಾಜಕೀಯ ಸಿದ್ದಾಂತದ ಹಿನ್ನೆಲೆಯ ಪಕ್ಷ ಆಡಳಿತ ಚುಕ್ಕಾಣಿ ಹಿಡಿದಿರಲಿ, ಅದರಿಂದ ಸಮಾನ ಅಂತರ ಕಾಯ್ದುಕೊಂಡು, ಸದಾ ವಿರೋಧ ಪಕ್ಷದ ಸ್ಥಾನದಲ್ಲಿದ್ದು, ವ್ಯವಸ್ಥೆಯ ಲೋಪದೋಷಗಳನ್ನು ನಿಷ್ಪಕ್ಷಪಾತವಾಗಿ ಸಾರ್ವಜನಿಕ ಚರ್ಚೆಗೆ ತರಬೇಕಾದುದು ಅದರ ವೃತ್ತಿಧರ್ಮ.

ಈಹಿನ್ನೆಲೆಯಲ್ಲಿ, ಪ್ರಸಕ್ತ ಅಸ್ತಿತ್ವದಲ್ಲಿರುವ ಸುದ್ದಿಮಾಧ್ಯಮಗಳನ್ನು ನಾವು ಎರಡು ರೀತಿಯಲ್ಲಿ ವಿಂಗಡಿಸಬಹುದು; ವ್ಯವಸ್ಥೆಯ ಪರ ಮತ್ತು ವಿರೋಧ. ವ್ಯವಸ್ಥೆಯ ಪರವಾಗಿರುವ ಮಾಧ್ಯಮ ಸಂಸ್ಥೆಗಳು ಆರ್ಥಿಕವಾಗಿ ಲಾಭಗಳಿಸುವುದಲ್ಲದೇ, ವಿಶೇಷ ಸವಲತ್ತುಗಳನ್ನುಪಡೆಯುತ್ತವೆ. ಅವುಗಳು ಸಾಮನ್ಯವಾಗಿ ಮಾಧ್ಯಮದ ಮುಖವಾಡ ಧರಿಸಿ, ವ್ಯವಸ್ಥೆಯ ಮುಖವಾಣಿಯಂತೆ ಕೆಲಸಮಾಡುವುದನ್ನು ಕಾಣುತ್ತೇವೆ.  ಹಾಗಾಗಿ, ಪ್ರಭುದ್ದ ಸಮಾಜವೊಂದು ಹೆಚ್ಚಿನ ನಿರೀಕ್ಷೆ ಇಟ್ಟಿರದ ಇಂತಹ ಮಾಧ್ಯಮಗಳನ್ನು ಪಕ್ಕಕ್ಕಿರಿಸಿ, ವ್ಯವಸ್ಥೆಗೆ ಎದುರಾಗಿ ನಿಂತು ಪ್ರಶ್ನಿಸಿ ಜನಜಾಗ್ರತಿ ಪಸರಿಸುವ ಪತ್ರಕರ್ತರ ಸ್ಥಿತಿಗತಿಯನ್ನು ಗಮನಿಸಿದರೆ, ಪ್ರಸಕ್ತ, ಪ್ರಪಂಚದಾದ್ಯಂತ ರಾಜಕೀಯ ವ್ಯವಸ್ಥೆಗಳು ಅವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುತ್ತಿರುವುದನ್ನು ಕಾಣಬಹುದು.

ಅಧ್ಯಯನ ವರದಿ ಪ್ರಕಾರ 2020ರಲ್ಲಿ 50 ಪತ್ರಕರ್ತರು ತಾವು ಮಾಡಿದ ವರದಿಯಿಂದಾಗಿ, ವ್ಯವಸ್ಥೆಯಿಂದ ಹತ್ಯೆಗೀಡಾಗಿದ್ದಾರೆ. ಹೀಗೆ, ವ್ಯವಸ್ಥೆಯನ್ನು ಪ್ರಶ್ನಿಸುವ ಪತ್ರಕರ್ತರು ಪ್ರತಿವರ್ಷವೂ ಬಲಿಯಾಗುತ್ತಲೇ ಸುದ್ದಿಯಾಗುತ್ತಿದ್ದಾರೆ. ಭಾರತದಲ್ಲಿ ಗೌರಿ ಲಂಕೇಶ್ ಹತ್ಯೆ ಹೇಗೆ ದೇಶದ ಜನಸಾಮಾನ್ಯರಲ್ಲಿ ಆಕ್ರೋಶ ತರಿಸಿತೋ, ಅದೇರೀತಿ, 2018ರಲ್ಲಿ ಸೌದಿ ಅರೇಬಿಯಾದ ಯುವರಾಜನ ಸೂಚನೆಯ ಮೇರೆಗೆ, ಪತ್ರಕರ್ತ ಜಮಾಲ್ಖ ಶೋಗ್ಗಿಯನ್ನು ಟರ್ಕಿಯ ಸೌದಿ ರಾಯಭಾರ ಕಚೇರಿಯಲ್ಲಿ ನಿಗೂಢವಾಗಿ ಸಾಯಿಸಿದ್ದು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು.

ಅಮೇರಿಕಾ ಸರಕಾರವೂ ಕೂಡ, ತನ್ನ ಅವ್ಯವಹಾರಗಳನ್ನು ಬಯಲಿಗೆಳೆದ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸಾಂಜೆಯನ್ನು ವಶಪಡಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಾ, ವಿದೇಶಿ ನೆಲದಲ್ಲಿಯೂ ಚಿತ್ರಹಿಂಸೆ ಕೊಡುತ್ತಲೇ ಇದೆ.  ಹಾಗೆಯೇ, 2000ರಲ್ಲಿ ಪುತಿನ್ ಅಧ್ಯಕ್ಷರಾದಂದಿನಿಂದ, ರಷಿಯಾದಲ್ಲಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ 21 ಪತ್ರಕರ್ತರ ಹತ್ಯೆಯಾಗಿದೆ. ಹೀಗೆ, ರಾಜಕೀಯ ವ್ಯವಸ್ಥೆಯಿಂದ ಚಿತ್ರಹಿಂಸೆಗೊಳಗಾದ ಪತ್ರಕರ್ತರ ಸಾಲಿಗೆ ಮತ್ತೊಂದು ಸೇರ್ಪಡೆ, 2021 ರ ಮೇ 23ರಂದು ಅಭೂತಪೂರ್ವವಾಗಿ ಸೆರೆಯಾದ ಬೆಲಾರಸ್ ಪತ್ರಕರ್ತ ರೋಮನ್ಪ್ರೊಟಾಸೆವಿಚ್.

26 ವರ್ಷ ವಯಸ್ಸಿನ ರೋಮನ್ಪ್ರೊಟಾಸೆವಿಚ್, ‘ನೆಕ್ಸ್ಟಾ’ ಹೆಸರಿನ ಅಂತರ್ಜಾಲ ಸುದ್ದಿಮಾಧ್ಯಮದ ಸಂಪಾದಕ. ಇವರು ತನ್ನ ಮಾಧ್ಯಮ ಸಂಸ್ಥೆಯನ್ನು ವೇದಿಕೆಯನ್ನಾಗಿಸಿ ಬೆಲಾರಸ್ನ ನಿರಂಕುಶ ಪ್ರಭುತ್ವದ ವಿರುದ್ಧ ಜನಜಾಗೃತಿ ಮತ್ತು ಸಾಮೂಹಿಕ ಪ್ರತಿಭಟನೆ ಸಂಘಟಿಸುತ್ತಾ, ವ್ಯವಸ್ಥೆಯ ನಿರಂತರ ಕಣ್ಗಾವಲಿನಲ್ಲಿದ್ದರು. ಕಳೆದ 26 ವರ್ಷಗಳಿಂದ ಅಧಿಕಾರದಲ್ಲಿರುವ ಬೆಲಾರಸ್ ದೇಶದ ಸರ್ವಾಧಿಕಾರಿ ಅಧ್ಯಕ್ಷ ಅಲೆಕ್ಸಾಂಡರ್ಲು ಕಾಶೆಂಕೋ, ಪ್ರಜಾಪ್ರಭುತ್ವದ ಹೆಸರಲ್ಲಿಯೇ ಅಧಿಕಾರ ಹಿಡಿದು, ವ್ಯವಸ್ಥೆಯ ವಿರುದ್ಧ ಉಸಿರೆತ್ತಿದವರನ್ನು ವ್ಯವಸ್ಥಿತವಾಗಿ ನಿರ್ನಾಮಗೊಳಿಸುತ್ತಿದ್ದಾರೆ.

ಹೀಗಿದ್ದರೂ ಕಳೆದ ವರ್ಷದ ಚುನಾವಣೆಯಲ್ಲಿ ಜನರು ಬದಲಾವಣೆ ತರುವ ಧೈರ್ಯ ತೋರಿದ್ದರು. ಆದರೆ, ಲುಕಾಶೆಂಕೋ ತನ್ನ ವಿರುದ್ದದ ಚುನಾವಣೆ ಫಲಿತಾಂಶವನ್ನೇ ಬದಲಾಯಿಸಿ, ತಾನೇ ಜಯಶಾಲಿಯೆಂದು ಘೋಷಿಸಿ, ಅಧ್ಯಕ್ಷರಾಗಿ ಮುಂದುವರಿದರು. ವಿರೋಧಪಕ್ಷದ ನಾಯಕಿ ಸ್ವೆಟ್ಲಾನಾಟಿ ಖಾನೋವ್ಸ್ಕಯಾ ಸೇರಿದಂತೆ, ಅವರನ್ನು ವಿರೋಧಿಸಿದ ಬಹುತೇಕ ರಾಜಕೀಯ ನಾಯಕರು, ಹೋರಾಟಗಾರರು ಮತ್ತು ಪತ್ರಕರ್ತರು ಜೀವಭಯದಿಂದ ದೇಶ ಬಿಟ್ಟು ನೆರೆಯ ದೇಶಗಳಲ್ಲಿ ಆಶ್ರಯಪಡೆದಿದ್ದಾರೆ.  ಹೀಗೆ, ನೆರೆಯ ಪೋಲೆಂಡ್ನಲ್ಲಿ ರಾಜಾಶ್ರಯ ಪಡೆದಿರುವವರಲ್ಲಿ ಪತ್ರಕರ್ತ ರೋಮನ್ಪ್ರೊಟಾಸೆವಿಚ್ಕೂಡ ಒಬ್ಬರು.

ಈ ಘಟನೆಯ ಆಘಾತಕಾರಿ ಅಂಶವೆಂದರೆ, ದೇಶದಿಂದ ಹೊರಗಿರುವ ಪ್ರೊಟಾಸೆವಿಚ್ನ್ನು ಬೆಲಾರಸ್  ವ್ಯವಸ್ಥೆ ಬಂಧಿಸಿದ ರೀತಿ. ವ್ಯವಸ್ಥೆಯೊಂದು ಮನಸು ಮಾಡಿದರೆ, ತನಗೆ ಸೆಡ್ಡು ಹೊಡೆದವರು ಎಲ್ಲಿದ್ದರೂ, ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ, ಅವರನ್ನು ಸೆರೆ ಹಿಡಿಯಬಹುದೆನ್ನುವ ನಿರಂಕುಶ ಧೋರಣೆಗೆ ಇದೊಂದು ನಿದರ್ಶನ.

ಇದನ್ನು ‘ಆಕಾಶಮಾರ್ಗದಲ್ಲಿ ನಡೆದ ಭಯೋತ್ಪಾದನೆ’ ಎನ್ನಬಹುದು. ಕಳೆದ ಭಾನುವಾರ, ಪ್ರೊಟಾಸೆವಿಚ್, ಗ್ರೀಸಿನ ಅಥೆನ್ಸಿನಿಂದ ಲಿಥುವೇನಿಯಾಕ್ಕೆ ವಿಮಾನಯಾನದಲ್ಲಿದ್ದರು.  ವಿಮಾನ, ಬೆಲಾರಸ್ ವಾಯು ಪ್ರದೇಶ ಪ್ರವೇಶಿಸುತ್ತಿದ್ದಂತೆ, ಅಲ್ಲಿನ ವಾಯು ಸಂಚಾರ ನಿಯಂತ್ರಕರು, ವಿಮಾನದಲ್ಲಿ ಬಾಂಬ್ ಇದೆಯೆಂದು ತುರ್ತು ಭೂಸ್ಪರ್ಶಕ್ಕೆ ಆದೇಶಿಸಿದರು.

ನಂತರ ಸಹಪಯಣಿಗರು ಹೇಳಿದಂತೆ, ಆಗಲೇ, ಪ್ರೊಟಾಸೆವಿಚ್ಗೆ ಎದುರಾಗಿರುವ ಅಪಾಯದ ಅರಿವಾಗಿತ್ತು.  ಅಂದುಕೊಂಡಂತೆಯೇ, ವಿಮಾನದ ಸ್ವಾಗತಕ್ಕಾಗಿ ಅಲ್ಲಿನ ಮಿಲಿಟರಿ ಕಾದಿದ್ದು,  ತಕ್ಷಣ ಪ್ರೊಟಾಸೆವಿಚ್ನ್ನು ಬಂಧಿಸಿ ಕರೆದೊಯ್ದು, ವಿಮಾನವನ್ನು ಬಿಡುಗಡೆಗೊಳಿಸಿದರು. ವಿಮಾನದಲ್ಲಿ ಯಾವ ಬಾಂಬ್ ಇರಲಿಲ್ಲ.

ಇದೊಂದು ಅತ್ಯಂತ ಹೀನಾಯ ಮಾನವ ಹಕ್ಕಿನ ಉಲ್ಲಂಘನೆ. ಅಲ್ಲದೆ, ಅಂತಾರಾಷ್ಟ್ರೀಯ ಕಾನೂನು ಮತ್ತು ವಾಯುಯಾನ ನಿಯಮಗಳ ಕಡೆಗಣನೆ. ಅಮೇರಿಕಾ ಮತ್ತು ಹೆಚ್ಚಿನ ಪಾಶ್ಚಿಮಾತ್ಯ ದೇಶಗಳು ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿವೆ ಮತ್ತು ಬೆಲಾರಸ್ ಮೇಲೆ ವಿಮಾನಯಾನ ನಿಷೇಧ ಹಾಗು ಆರ್ಥಿಕ ನಿರ್ಬಂಧದ ಕರೆನೀಡಿವೆ. ಆದರೆ, ಬೆಲಾರಸ್ ಅಧ್ಯಕ್ಷರ ಆಪ್ತರಕ್ಷಕ ಪುತಿನ್ ಸರ್ಕಾರ ಮಾತ್ರ ಇದೊಂದು ‘ಸಮಂಜಸ’ ಕ್ರಮವೆಂದು ಬೆಲಾರಸ್ ಬೆಂಬಲಕ್ಕೆ ನಿಂತಿದೆ. ಇಂತಹ ಕ್ರಮಗಳಿಂದಾಗಿಯೇ, ಪುತಿನ್ ಅವರು ಗಡಿದೇಶವಾದ ಬೆಲಾರಸ್ ಸಂಪೂರ್ಣ ನಿಯಂತ್ರಣ ಸಾಧಿಸಿದ್ದಾರೆ.

ಈ ಘಟನೆಯ ನಂತರ, ಲುಕಾಶೆಂಕೋ, ಅನಧಿಕೃತ ಸಾಮೂಹಿಕ ಸಭೆಗಳನ್ನು ನಿಷೇಧಿಸುವ ಮತ್ತು ನ್ಯಾಯಾಲಯದ ಆದೇಶವಿಲ್ಲದೆ ಮಾಧ್ಯಮ ಸಂಸ್ಥೆಗಳನ್ನು ಮುಚ್ಚುವ ಆದೇಶಕ್ಕೆ ಸಹಿ ಹಾಕಿದರು. ಸಧ್ಯ, ಸೆರೆಯಾಗಲ್ಪಟ್ಟ ಪ್ರೊಟಾಸೆವಿಚ್ಭ ವಿಷ್ಯದ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ಅವರ ತಂದೆ ನಿರೀಕ್ಷಿಸಿದಂತೆ, ಈಗಾಗಲೇ ಮರಣದಂಡನೆಯಾಗಿರಬಹುದು ಅಥವಾ ರಾಜಕೀಯ ಪ್ರತಿಭಟನೆಗಾಗಿ 12ವರ್ಷಗಳ ಜೈಲುಶಿಕ್ಷೆಯಾಗಲೂಬಹುದು. ಆದರೆ, ಈ ಘಟನೆ ಮಾತ್ರ, ವ್ಯವಸ್ಥೆಯನ್ನು ಪ್ರಶ್ನಿಸುವ  ಸ್ವತಂತ್ರ ಮನಸ್ಸುಗಳಿಗೆ ತಲ್ಲಣ ಉಂಟುಮಾಡಿದೆ.

ಲೇಖಕರ ಪರಿಚಯ: ಡಾ.ಜ್ಯೋತಿ ಎಸ್. ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರು.  ಸಾಹಿತ್ಯ – ಸಾಮಾಜಿಕ – ಆರ್ಥಿಕ – ರಾಜಕೀಯ ವಿಷಯಗಳ ನಿಷ್ಪಕ್ಷಪಾತ ವಿಮರ್ಶಕರು. ಕಥೆಗಾರರು, ಕವಿ. ಇವರು ದೇಶದ ಹಳೆಯ, ವಿಶ್ವಾಸಾರ್ಹ ಸುದ್ದಿಸಂಸ್ಥೆ ಯು.ಎನ್.ಐ. ಯಲ್ಲಿ ಅಂಕಣ ಆರಂಭಿಸಿರುವುದು ಸಂತಸದ ಸಂಗತಿ. ಪ್ರತಿವಾರ ಇವರ ಅಂಕಣ ಪ್ರಕಟವಾಗುತ್ತದೆ.

Share