Connect with us


      
ದೇಶ

ಲಾಲು ಕಿರಿಯ ಪುತ್ರನಿಗೆ ಕಂಕಣ ಬಲ! ವಧುವಿನ ಹೆಸರು ರಹಸ್ಯವಾಗಿಟ್ಟ ಕುಟುಂಬ

Iranna Anchatageri

Published

on

ಪಾಟ್ನಾ, ಡಿ 8 (ಯುಎನ್ಐ) ಬಿಹಾರದ ಜನತೆಯ ಬಹಳ ಕುತೂಹಲದಿಂದ ಕಾಯುತ್ತಿದ್ದ ಸುದ್ದಿಗೆ ಕೊನೆಗೂ ಪೂರ್ಣ ವಿರಾಮ ಬಿದ್ದಿದೆ. ಹೌದು., ಲಾಲು ಪ್ರಸಾದ್ ಯಾದವ್ ಕುಟುಂಬದಿಂದ ದೊಡ್ಡ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಮಗ ಮತ್ತು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ವಿವಾಹ ನಿಕ್ಕಿಯಾಗಿದೆ.

ಲಾಲು ಕಿರಿಯ ಪುತ್ರ ತೇಜಸ್ವಿ ಯಾದವ್

ಮೂಲಗಳ ಪ್ರಕಾರ, ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ನಿಶ್ಚಿತಾರ್ಥ ಗುರುವಾರ ದೆಹಲಿಯಲ್ಲಿ ನಡೆಯಲಿದೆ. ತೇಜಸ್ವಿ ಯಾದವ್ ಅವರ ನಿಶ್ಚಿತಾರ್ಥದಲ್ಲಿ ತಂದೆ ಲಾಲು ಪ್ರಸಾದ್ ಯಾದವ್, ತಾಯಿ ರಾಬ್ರಿ ದೇವಿ, ಮಿಸಾ ಭಾರತಿ ಸೇರಿದಂತೆ ಅವರ ಕುಟುಂಬದ ಎಲ್ಲ ಸದಸ್ಯರು ಭಾಗಿಯಾಗಲಿದ್ದಾರೆ.

ಕಳೆದ ವರ್ಷದಿಂದಲೇ ತೇಜಸ್ವಿ ಯಾದವ್ ಮದುವೆ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಅನೇಕ ಸಂದರ್ಭಗಳಲ್ಲಿ ಪತ್ರಕರ್ತರ ಮದ್ವೆ ಪ್ರಶ್ನೆಗಳಿಗೆ ತೇಜಸ್ವಿ ಯಾದವ್ ತಮಾಷೆ ಉತ್ತರಗಳನ್ನು ನೀಡುತ್ತಿದ್ದರು. ಆದರೆ, 2020ರ ಚುನಾವಣೆಯ ನಂತರ ಮತ್ತು ತಂದೆಗೆ ಜಾಮೀನು ಸಿಕ್ಕ ನಂತರವೇ ಮದುವೆಯಾಗುವುದಾಗಿ ಹಲವು ಬಾರಿ ಹೇಳಿದ್ದರು. ತೇಜ್ ಪ್ರತಾಪ್ ಯಾದವ್ ಅವರ ಮದುವೆಯ ಸುದೀರ್ಘ ಗ್ಯಾಪ್ ನಂತರ ಇದೀಗ ಲಾಲು ಕುಟುಂಬ ಮತ್ತೆ ಸಂತಸದ ಕ್ಷಣದಲ್ಲಿ ಭಾಗಿಯಾಗಲಿದೆ.

ವಧುವಿನ ಹೆಸರನ್ನು ರಹಸ್ಯವಾಗಿಟ್ಟ ಲಾಲು ಕುಟುಂಬ

ತೇಜಸ್ವಿ ಯಾದವ್ ಅವರ ಮದುವೆ ನಿಶ್ಚಯವಾಗಿದೆ ಮತ್ತು ಅವರು ದೆಹಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯನ್ನು ಖಚಿತಪಡಿಸಲಾಗಿದೆ. ಆದರೆ, ತೇಜಸ್ವಿ ಮಾತ್ರ ವಧುವಿನ ಹೆಸರನ್ನು ಬಾಯ್ಬಿಟ್ಟಿಲ್ಲ.

Share