Connect with us


      
ಕರ್ನಾಟಕ

ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯ: ಅಪ್ಪುಗೆ ಪದ್ಮಶ್ರೀಗೆ ಶಿಫಾರಸು

Vanitha Jain

Published

on

ಬೆಳಗಾವಿ,ಡಿಸೆಂಬರ್ 13(ಯು.ಎನ್.ಐ) ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

ಚಳಿಗಾಲ ಅಧಿವೇಶನದ ಮೊದಲ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಕಾಗೇರಿ ಮೊದಲನೆಯದಾಗಿ ಸದನದ ಸಂಪ್ರದಾಯದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕೈಗೆತ್ತಿಕೊಂಡರು.

ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಸದನದಲ್ಲಿ ಗಣ್ಯರು ಸಂತಾಪ ಸೂಚಿಸಿ ಮೌನಾಚರಿಸಿದರು. ಪುನೀತ್ ರಾಜ್‍ಕುಮಾರ್ ಸಂತಾಪದ ಮೇಲೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಚಿತ್ರರಂಗ ಸೇರಿದಂತೆ ಸಹಸ್ರಾರು ಅಭಿಮಾನಿಗಳನ್ನು ಅಗಲಿರುವ ಸ್ಯಾಂಡಲ್‍ವುಡ್‍ನ “ಅಪ್ಪು”ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಬೊಮ್ಮಾಯಿ ಕೆಳಮನೆಯ ಸದನಕ್ಕೆ ಭರವಸೆ ನೀಡಿದರು.

ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತೇವೆ. ವಿರೋಧ ಪಕ್ಷದವರು ಕೂಡ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಪತ್ರ ಬರೆದಿದ್ದರು. ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯ ಇದೆ ಅಂದನಿಸುತ್ತಿದೆ. ಪುನೀತ್ ರಾಜಕುಮಾರ್ ವಿಚಾರದಲ್ಲೂ ಹಾಗೆಯೇ ಆಗಿದೆ. ಪುನೀತ್ ಮರಣ ಅಘಾತವಾಗಿದೆ. ಯಾರೂ ಹೀಗೆ ಸಾವನ್ನು ನಿರೀಕ್ಷೆ ಮಾಡಿರಲಿಲ್ಲ. ಕಾನೂನು ಸುವ್ಯವಸ್ಥೆ ದೊಡ್ಡ ಸವಾಲಾಗಿತ್ತು. ರಾಜಕುಮಾರ್ ನಿಧನದ ವೇಳೆ ಆದಂತಹ ಕಹಿ ಘಟನೆಗಳು ನಡೆಯಬಾರದು ಎಂದು ಮುನ್ನೆಚ್ಚರಿಕೆಯಿಂದ ಜನರ ಸಹಕಾರ, ಪೊಲೀಸರ ಸಹಕಾರದಿಂದ ಎಲ್ಲವೂ ವ್ಯವಸ್ಥಿತವಾಗಿ ನಡೆಯಿತು ಎಂದರು.

ಈಗಾಗಲೇ ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ, ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದ ದಿನಾಂಕವನ್ನು ಶೀಘ್ರ ಪ್ರಕಟ ಮಾಡುವುದಾಗಿ ಹೇಳಿದರು.

Share