Connect with us


      




ದೇಶ

ಅರಣ್ಯವಾಸಿಗಳ ಅರಣ್ಯರೋದನಕ್ಕೆ ದನಿಯಾಗುವವರು ಯಾರು ?

Kumara Raitha

Published

on

ಅರಣ್ಯವಾಸಿಗಳ ಅರಣ್ಯರೋದನಕ್ಕೆ ದನಿಯಾಗುವವರು ಯಾರು ?

ವಿಶೇಷ ವರದಿ: ಕುಮಾರ ರೈತ

ಬೆಂಗಳೂರು: ಸೆಪ್ಟೆಂಬರ್ 21 (ಯು.ಎನ್.ಐ.) ವ್ಯವಸ್ಥಿತ ಆಡಳಿತ ಜಾರಿಗೆ ಬಂದ ಸಾವಿರಾರು ವರ್ಷಗಳ ಹಿಂದಿನಿಂದಲೂ ಅರಣ್ಯವಾಸಿಗಳ ಜ್ಞಾನಕ್ಕೆ ಬೆಲೆ ಕೊಡುವ ಕಾರ್ಯಗಳಾಗುತ್ತಾ ಬಂದಿವೆ. ಭಾರತೀಯ ರಾಜ ಮಹರಾಜರ ಅಧಿಕಾರದ ಅವಧಿಗಳಲ್ಲಿಯೂ ಕೂಡ ಕಾಡಿಗೆ ಸಂಬಂಧಿಸಿದ ಏನೇ ನಿಯಮ ಜಾರಿಗೊಳಿಸುವ ಮುನ್ನ ಅರಣ್ಯವಾಸಿಗಳ  ಅಭಿಪ್ರಾಯಗಳನ್ನು ಕೇಳುವ ಪರಿಪಾಠವಿತ್ತು ಎಂಬುದನ್ನು ಐತಿಹಾಸಿಕ  ಸಂಗತಿಗಳು ಹೇಳುತ್ತವೆ.

ತಿದ್ದುಪಡಿ

ಭಾರತೀಯ ಜ್ಞಾನ ಪರಂಪರೆಯಲ್ಲಿ ಕಾಡಿನ ಕುರಿತಾದ ತಿಳಿವಳಿಕೆಗೂ ಪ್ರಾಧಾನ್ಯವಿದೆ. ಹೀಗಿದ್ದರೂ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆ ಎಂದು  ಸಾರುವಿಕೆಯಲ್ಲಿಯೇ ಮಗ್ನವಾಗಿರುವ ಕೇಂದ್ರ ಸರ್ಕಾರದ ಬಿಜೆಪಿ ಆಡಳಿತಾವಧಿಯಲ್ಲಿಯೇ ಅರಣ್ಯವಾಸಿಗಳ ಹಕ್ಕುಗಳಿಗೆ ಚ್ಯುತಿ ಬಂದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅರಣ್ಯ ಸಂರಕ್ಷಣೆ ನಿಯಮಗಳಿಗೆ 2022ರ ಜುಲೈನಲ್ಲಿ ತಿದ್ದುಪಡಿ ತಂದಿದೆ. ಈ ತಿದ್ದುಪಡಿ ತರುವ ತನಕ ಅರಣ್ಯ ಪ್ರದೇಶದಲ್ಲಿ ಏನೇ ಅಭಿವೃದ್ಧಿ ಹೆಸರಿನ ಚಟುವಟಿಕೆ ನಡೆಸಬೇಕಾದರೆ ಅಲ್ಲಿನ ವಾಸಿಗಳ ಒಪ್ಪಿಗೆ ಪಡೆಯುವುದು ಅನಿವಾರ್ಯವಾಗಿತ್ತು. ಆದರೆ ಮೋದಿ ಸರ್ಕಾರ ಈ ಒಪ್ಪಿಗೆಯೇ ಅನಗತ್ಯ ಎಂಬಂಧ ತಿದ್ದುಪಡಿ ಮಾಡಿದೆ. ಇದು ಆದಿವಾಸಿಗಳ ಸ್ವಭಾವಿಕ ಹಕ್ಕುಗಳಿಗೆ ಬಹುದೊಡ್ಡ ಕೊಡಲಿ ಪೆಟ್ಟಾಗಿದೆ.

ಬುಡಕಟ್ಟು ಹಕ್ಕು

ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವ ಮಹತ್ವವನ್ನು ಮನವರಿಕೆ ಮಾಡಿಕೊಂಡಿತ್ತು. ಈ ದಿಶೆಯಲ್ಲಿ 2006ರಲ್ಲಿ ಅರಣ್ಯ ಹಕ್ಕುಗಳ ಕಾಯಿದೆಯನ್ನು ಜಾರಿಗೆ ತಂದಿತು. ಈ ಕಾಯಿದೆ ಜಾರಿಯಾದ ನಂತರ ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿದ್ದ ಬಂಡವಾಳಶಾಯಿಗಳ ಚಟುವಟಿಕೆ ನಿಂತೇ ಹೋಗಿತ್ತು. ಮೂರು ತಲೆಮಾರುಗಳಿಗಿಂತ ಹೆಚ್ಚು ಅವಧಿಯಿಂದ ಕಾಡಿನಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳು ತಮ್ಮ ಸಾಂಪ್ರದಾಯಿಕ ಗ್ರಾಮಸಭೆಗಳ ಮೂಲಕ ಒಪ್ಪಿಗೆ ನೀಡಿದರೆ ಮಾತ್ರ ಕಾಡು ಕಡಿಯಲು ಅವಕಾಶವಿದೆ. ಒಪ್ಪಿಗೆ ನೀಡದಿದ್ದರೆ ಕಾಡು ಕಡಿಯಲು ಮುಂದಾಗುವಂತಿಲ್ಲ ಎಂದು ಕಾಯಿದೆ ಹೇಳಿತ್ತು.

ಇಂಥ ಮಹತ್ವದ ಕಾಯಿದೆಗೆ ಮೋದಿ ನೇತೃತ್ವದ ಸರ್ಕಾರ ತಿದ್ದುಪಡಿ ಮಾಡಿದೆ. ಕಾಡು ಕಡಿಯಲು ಅರಣ್ಯವಾಸಿಗಳ ಒಪ್ಪಿಗೆ ಪಡೆಯಬೇಕಿಲ್ಲ ಎಂದು ಹೇಳುವಂಥ ರೀತಿಯಲ್ಲಿ ಹಳೆಯ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ಆದ್ದರಿಂದ ಕಾಡಿನ ಪ್ರದೇಶದಲ್ಲಿ ಚಟುವಟಿಕೆ ನಡೆಸುವ ಕಂಪನಿಗಳೀಗ ಅರಣ್ಯವಾಸಿಗಳಿಂದ ಒಪ್ಪಿಗೆ ಪಡೆಯುವ ಅಗತ್ಯವಿಲ್ಲದಂಥ ಸನ್ನಿವೇಶ ಸೃಷ್ಟಿಯಾಗಿದೆ. ಇದರಿಂದ ಕಾಡಿಗೆ ಕುತ್ತು ಉಂಟಾಗಿದೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ 2006ರಲ್ಲಿ ಅರಣ್ಯ ಹಕ್ಕುಗಳ ಕಾಯಿದೆಯನ್ನು ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ತಂದಿತ್ತು. ಆದರೆ ಈಗ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಭಿಪ್ರಾಯವನ್ನೇ ಕೆಳದೇ ಕೇಂದ್ರ ಪರಿಸರ ಇಲಾಖೆ ಈ ಮಹತ್ವದ ಕಾಯಿದೆಗೆ ತಿದ್ದುಪಡಿ ತಂದಿದೆ.

ಕಾಡಿಗೆ ಕುತ್ತು

ಅರಣ್ಯವಾಸಿಗಳ ಹಕ್ಕುಗಳಿಗೆ ಕುತ್ತು ಬಂದಿದೆ ಎಂದರೆ ಅದು ಕಾಡಿಗೆ ಕುತ್ತು ಬಂದಿದೆ ಎಂದೇ ಅರ್ಥ. ಈಗಾಗಲೇ ಭಾರತದಲ್ಲಿ ಅವಶ್ಯಕತೆಗಿಂತಲೂ ಅತೀ ಕಡಿಮೆ ಪ್ರದೇಶದಲ್ಲಿ ಕಾಡಿದೆ. ಇದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿ ಇದರ ವಿಸ್ತೀರ್ಣ ಮತ್ತಷ್ಟು ಕುಗ್ಗಲು ಅವಕಾಶ ಮಾಡಿಕೊಡುತ್ತದೆ.

Share