Connect with us


      




ಬೆಂಗಳೂರು

ಸಚಿವ ಉಮೇಶ ಕತ್ತಿ ಹೇಳಿಕೆ ಕಟುವಾಗಿ ಖಂಡಿಸಿದ ಕನ್ನಡ ಸಾಹಿತ್ಯ ಪರಿಷತ್ತು

Vanitha Jain

Published

on

ಬೆಂಗಳೂರು: ಜೂನ್ 28 (ಯು.ಎನ್.ಐ.) ರಾಜ್ಯ ಪ್ರತ್ಯೇಕತೆ ಕುರಿತು ಮಾತನಾಡಿ ಕನ್ನಡಿಗರ ನಡುವೆ ಗೊಂದಲ ಸೃಷ್ಟಿಸಿದ ಅರಣ್ಯ ಖಾತೆ ಸಚಿವ ಉಮೇಶ ಕತ್ತಿ ಅವರ ಹೇಳಿಕೆಯನ್ನು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಕಟುವಾಗಿ ಖಂಡಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿಸುವ ಕುರಿತು ಸ್ವಾರ್ಥ ಹಾಗೂ ಸ್ವಹಿತಾಸಕ್ತಿ ಹಿನ್ನೆಲೆಯಲ್ಲಿ ಸಚಿವ ಉಮೇಶ ಕತ್ತಿಯವರು ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಇವರ ಪ್ರಚೋದನಾಕಾರಿ ಹೇಳಿಕೆಯಿಂದ ಕನ್ನಡಿಗರಲ್ಲಿ ಗೊಂದಲ ಉಂಟಾಗುತ್ತಿದೆ. ರಾಜ್ಯದಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಲು ಕಾರಣವಾಗುತ್ತಿದೆ. ಸರಕಾರ ಅವರಿಗೆ ಮುಖ್ಯ ಖಾತೆಯಾದ ಅರಣ್ಯ ಇಲಾಖೆಯನ್ನು ನೀಡಿದೆ. ಅದರಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಬದಲು ಕನ್ನಡಿಗರಲ್ಲಿ ಪ್ರತ್ಯೇಕ ರಾಜ್ಯದ ಕಿಚ್ಚು ಹಚ್ಚುತ್ತಿರುವ ಇವರ ಹೇಳಿಕೆಗಳು ಖಂಡನೀಯ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

ಕನ್ನಡ ನಾಡಿನ ಏಕೀಕರಣ ಸಂದರ್ಭದಲ್ಲಿ ಕನ್ನಡ ನೆಲಕ್ಕಾಗಿ ಅನೇಕ ಮಹನೀಯರು ಹೋರಾಟದಲ್ಲಿ ಪಾಲ್ಗೊಂಡು ನಾಡು ಒಂದಾಗಲು ಶ್ರಮಿಸಿದ್ದಾರೆ. ಅವರ ಹೋರಾಟ, ತ್ಯಾಗ, ಶ್ರಮದ ಫಲವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಯಿತು. ಹೀಗೆ ಒಂದಾಗಿರುವ ಕನ್ನಡ ನೆಲ ಒಡೆಯುವ ಮಾತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

ಕನ್ನಡಿಗರೇ ಹೆಚ್ಚಾಗಿರುವ ಇನ್ನೂ ಹಲವು ಪ್ರದೇಶಗಳು ನೆರೆಯ ರಾಜ್ಯಗಳಲ್ಲಿ ಉಳಿದುಕೊಂಡಿವೆ. ಅವುಗಳನ್ನು ಕರ್ನಾಟಕಕ್ಕೆ ವಿಲೀನಗೊಳಿಸುವ ಇಚ್ಛಾಶಕ್ತಿಯನ್ನು ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಸಚಿವ ಕತ್ತಿಯವರು ಪ್ರಕಟಿಸಬೇಕಿತ್ತು. ಇವರ ಸ್ವಕ್ಷೇತ್ರ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿಗರ ಅಟ್ಟಹಾಸವನ್ನು ಮಟ್ಟಹಾಕುವ ಧ್ವನಿ ಎತ್ತುವ ಬದಲು ಪ್ರತ್ಯೇಕತೆಯ ಸ್ವರ ಎಬ್ಬಿಸುತ್ತಿದ್ದಾರೆ. “ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದುʼ ಎಂಬ ಸದಾಶಯದ ನುಡಿಯ ವಿಭಜನೆಗಾಗಿ ಕತ್ತಿ ಮಸೆಯುತ್ತ ಕಿಡಿ ಹಚ್ಚುವ ಕತ್ತಿಯವರ ನಡೆ ಸರಿಯಲ್ಲ.

ಅಪಸ್ವರದ ರಾಗದಿಂದಲೇ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುತ್ತಿರುವ ಉಮೇಶ ಕತ್ತಿಯವರು ಕನ್ನಡಿಗರ ಹಾಗೂ ಅಖಂಡ ಕರ್ನಾಟಕದ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಉಮೇಶ ಕತ್ತಿಯವರ ಹೇಳಿಕೆಯನ್ನು ಸಮಸ್ತ ಕನ್ನಡ ಜನತೆ ಬೆಂಬಲಿಸಬಾರದು, ನಿರ್ಲಕ್ಷಿಸಬಾರದು. ಮುಖ್ಯಮಂತ್ರಿಗಳು ಉಮೇಶ ಕತ್ತಿಯವರಿಗೆ, ಮಾತಿನಲ್ಲಿ ಹಿಡಿತ ಇಟ್ಟುಕೊಂಡು ಎಚ್ಚರದಲ್ಲಿರುವಂತೆ ಸೂಚಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸುತ್ತಿದೆ.

ಕನ್ನಡ ನಾಡು-ನುಡಿ ಕಟ್ಟುವ ನಿರಂತರ ಕಾಯಕದಲ್ಲಿ ಹಾಗೂ ಅದರ ಅಖಂಡತೆ ಕಾಪಾಡುವಲ್ಲಿ ೧೦೭ ವರ್ಷಗಳ ಇತಿಹಾಸ ಹೊಂದಿರುವ, ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಸದಾ ಬದ್ಧವಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

Share