Connect with us


      
ಸಾಮಾನ್ಯ

ಭಾವಚಿತ್ರದ ಭಾವ ಲಹರಿ ; ಎ. ಎನ್. ಮುಕುಂದರ ನೆನಪು

Kumara Raitha

Published

on

ಲೇಖಕರು: ಗೌರೀಶ್‌ ಕಪನಿ

ಇದು ಸೆಲ್ಫಿಯ ಕಾಲ. ನಿತ್ಯವೂ ಕೋಟ್ಯಂತರ ಕೆಮೆರಾಗಳು ಸೆಲ್ಫಿಗಳನ್ನು ಕ್ಲಿಕ್ಕಿಸುತ್ತವೆ! ತರಹೇವಾರಿ ಪೋಸುಗಳು ವಿಚಿತ್ರ ಎಕ್ಸ್ಪ್ರೆಷನ್ನುಗಳು, ಶೃಂಗಾರ, ವಯ್ಯಾರ ಹತ್ತಾರು ರೀತಿ. ಸೆಲ್ಫಿಯು ಈ ಜಮಾನದಲ್ಲಿ ಹೇಗೆ ಮಹತ್ವ ಪಡೆದುಕೊಂಡಿದೆ? ಅಸಲಿಗೆ ಸೆಲ್ಫಿಯ ಮೋಹವೆಂಥದ್ದು? ಹೀಗೆ ಸ್ವಲ್ಪ ವಿಶ್ಲೇಷಿಸೋಣ.

ಹಲವರ ಸೆಲ್ಫಿಗಳನ್ನು ಗಮನಿಸಿದರೆ ತಮ್ಮ ಸೌಂದರ್ಯ, ಅಂತಸ್ತು, ತಾವು ಬಳಸುವ ಗ್ಯಾಜೆಟ್ಟುಗಳು, ವಾಹನ, ಒಡವೆ-ವಸ್ತ್ರ ಪ್ರದರ್ಶನವೇ ಪ್ರಮುಖವಾಗಿರುತ್ತದೆ. ಜೊತೆಗೆ ಸಿನೆಮಾ ಪ್ರಭಾವದ ಯಾವುದೋ ಹೀರೋ/ಹೀರೋಯಿನ್ ಗಳ ಅನುಕರಿಸುತ್ತಾ ಅವರಂತೆ ಭಾವ/ಭಂಗಿಗಳ ಚಿತ್ರಗಳಾಗಿರುತ್ತವೆ. ಭಾಗಶಃ ಸೆಲ್ಫಿಗಳು ಇದೇ ರೀತಿಯವುಗಳು. ಇವು ಏನನ್ನು ಹೇಳುತ್ತವೆ ಎಂಬುದರ ಜೊತೆಗೆ  ನಮ್ಮ ಸುಪ್ತ ಆಲೋಚನೆಗಳನ್ನು ವಿಶ್ಲೇಷಿಸುವುದಾದರೆ…

ಇಂದು ನಮ್ಮೆಲ್ಲರೊಳಗೊಂದು ವಿಲಾಸಿ ವ್ಯಕ್ತಿತ್ವ ಅಡಗಿದೆ. ಅದೇ ಈ ಭ್ರಮಾಲೋಕದ ಹೀರೋ. ಎಲ್ಲರಿಗೂ ಎಲ್ಲೊ ಒಮ್ಮೆಯಾದರೂ ಈ ಹೀರೋವನ್ನು ವಿಜೃಂಭಿಸುತ್ತಾ ತನ್ನನ್ನು ಎತ್ತರಕ್ಕೆ ಬಿಂಬಿಸಿಕೊಳ್ಳುವ ಉತ್ಕಟ ಬಯಕೆ ಹಿಂದೆಂದಿಗಿಂತಲೂ ಈ ಕಾಲ ಘಟ್ಟದ ಪ್ರಮುಖ ಬಯಕೆಗಳಲ್ಲಿ ಒಂದು. ಅದಕ್ಕೆ ಇಂದಿನ ಕೆಮೆರಾ ಟೆಕ್ನಾಲಜಿಯು ಸಾಧ್ಯತೆ  ದೊರಕಿಸಿಕೊಟ್ಟಿದೆ. ಇರಲಿ, ಇದು ತಪ್ಪು – ಸರಿಯ ವಿಶ್ಲೇಷಣೆಯಲ್ಲ. ಇದು ಕೇವಲ ಈ ಕಾಲಘಟ್ಟದ ಮಾನಸಿಕ ನಡವಳಿಕೆ ಮತ್ತು ತಂತ್ರಜ್ಞಾನದ ತುಲನೆಯಷ್ಟೆ!

ಈ ಹಿಂದೆ ಕೆಮೆರಾ ಚಾಲ್ತಿಗೆ ಬರುವುದಕ್ಕೂ ಮೊದಲು ಭಾವಚಿತ್ರಗಳನ್ನು ಕಲಾವಿದರಿಂದ ಚಿತ್ರಿಸಲಾಗುತ್ತಿತ್ತು. ಇಂದಿಗೂ ಲಭ್ಯವಿರುವ ಕೆಲವು ಚಿತ್ರಗಳನ್ನು ತುಲನೆ ಮಾಡುವುದಾದರೆ, ಇವುಗಳೂ ಕೂಡ ಉಳ್ಳವರ ಸ್ವತ್ತೇ ಆಗಿದೆ. ಆಗಿನ ಕಾಲದಲ್ಲಿ ಬಹುಶಃ ಚಿತ್ರ ಬರೆಸಲು ಕೇವಲ ಶ್ರೀಮಂತರಿಗೆ ಮಾತ್ರವೇ ಸಾದ್ಯವಾಗುತ್ತಿದ್ದಿರಬಹುದು. ಯಾಕೆಂದರೆ ನಮಗೆ ಲಭ್ಯವಿರುವ ಭಾಗಶಃ ಚಿತ್ರಗಳು ಉತ್ತಮ ಉಡುಗೆ ತೊಟ್ಟ, ಆಭರಣದಿಂದ ಅಲಂಕೃತಗೊಂಡ, ಅತ್ಯಂತ ಠೀವಿಯಿಂದ ಕೂತ/ನಿಂತ ಚಿತ್ರಗಳು. ಅವರ ಭಾವ/ಭಂಗಿಯಿಂದಲೇ ಅವರು ಸ್ಥಿತಿವಂತರು ಎಂದು ಸ್ಪಷ್ಟವಾಗಿ ಕಾಣುವ ಚಿತ್ರಗಳೇ ಹೆಚ್ಚು. ಇನ್ನುಳಿದವು ರಾಜರು ಮತ್ತು ರಾಜರ ಕುಟುಂಬಸ್ಥರ ಚಿತ್ರಗಳು ಕಾಣಸಿಗುತ್ತವೆ.

ಎ.ಎನ್.‌ ಮುಕುಂದ್‌ ಅವರು ಕ್ಲಿಕ್ಕಿಸಿದ ಪೂರ್ಣಚಂದ್ರ ತೇಜಸ್ವಿ ಚಿತ್ರ

ಮುಂದೆ, ತಂತ್ರಜ್ಞಾನ ಬೆಳೆದಂತೆ ಕೆಮೆರಾ ಆವಿಶ್ಕಾರವಾಗಿ ಒಂದು ಹಂತ ತಲುಪಿದಾಗ ಕಲಾವಿದರು ರಚಿಸುತ್ತಿದ್ದ ಭಾವಚಿತ್ರಗಳು ಛಾಯಾಗ್ರಾಹಕರ ಪಾಲಾದವು. ಛಾಯಾಚಿತ್ರಗಳೂ ಕೂಡ ಚಿತ್ರಗಳ ಮಾದರಿಯನ್ನೇ ಅನುಸರಿಸುತ್ತಿದ್ದವು. ಬೆಳಕಿನ ಬಳಕೆ, ಭಾವಭಂಗಿ, ಚಿತ್ರಸಂಯೋಜನೆಯ ರೀತಿ, ವಿಲಾಸಿತನ ಮತ್ತು ಎಲ್ಲವೂ. ತಂತ್ರಜ್ಞಾನದ ಬದಲಾವಣೆ ಬಿಟ್ಟರೆ ಉಳಿದೆಲ್ಲವೂ ಒಂದೆ. ಛಾಯಾಗ್ರಹಣ ಮಾಡಿಕೊಟ್ಟ ಒಂದು ಅನುಕೂಲವೆಂದರೆ ದಿನಗಟ್ಟಲೆ ಗಂಟೆಗಳ ಕಾಲ ಒಂದೇ ಭಂಗಿಯಲ್ಲಿ ಕೂರುವ ಅಗತ್ಯವಿರಲಿಲ್ಲ, ಕ್ಷಣದಲ್ಲಿ ಸೆರೆ ಹಿಡಿದು ಮುಗಿಯುತ್ತಿದ್ದ ಕೆಲಸ.

ಈ ಕಾಲದ ಸೆಲ್ಫಿ – ಕಲಾಕೃತಿ – ಛಾಯಾಚಿತ್ರಗಳ ಸಾಮ್ಯತೆ ತುಲನೆ ಮಾಡುವುದಾದರೆ; ಅಲಂಕಾರಿಕಾ ಮನೋಭಾವ ಮತ್ತು ತಮ್ಮ ಸಾಮಾಜಿಕ ಸ್ಥಾನ ಪ್ರದರ್ಶನ ಎಲ್ಲಾ ಪ್ರಾಕಾರದಲ್ಲೂ ಪ್ರಮುಖವಾಗಿ ನಿಲ್ಲುತ್ತವೆ. ಇದು ಸೆಲ್ಫಿಯ ಕಾಲಘಟ್ಟ ತಲುಪುವುದರೊಳಗೆ ಇನ್ನೊಂದು ಹಂತವೇ ಧಾಟಿದೆ. ಇನ್ನು ಛಾಯಾಗ್ರಹಣದ ದೃಷ್ಟಿಯಲ್ಲಿ ನೋಡುವುದಾದರೆ ಶಾಸ್ತ್ರಿಯವಾಗಿ ಒಂದು ಚಿತ್ರಕ್ಕೆ ಇರಬೇಕಾದ ಮಾನದಂಡಗಳನ್ನು ಕಾಯ್ದುಕೊಂಡು ಇಂತಿಷ್ಟೇ ನೆರಳು, ಇಷ್ಟೇ ಬೆಳಕು ಮತ್ತು ಚಿತ್ರ ಸಂಯೋಜನೆಯಲ್ಲಿ ಚಿತ್ರಕ್ಕೆ ಪೂರಕವಾಗಿ ಹಲವು ತಾಂತ್ರಿಕ ಹಾಗೂ ಸೌಂದರ್ಯ ದೃಷ್ಟಿಯಲ್ಲಿ ಚಿತ್ರಗಳು ಇರುತ್ತಿದ್ದವು. ಏಕೆಂದರೆ ಈ ಎರಡೂ ಕ್ರಮಗಳು ನುರಿತ ಮತ್ತು ಅಭ್ಯಾಸ ಮಾಡಿದವರಷ್ಟೇ ಮಾಡಲು ಸಾಧ್ಯವಿತ್ತು.

ಇನ್ನೂ ಸೆಲ್ಫಿ ಕಾಲಕ್ಕೆ ಬರುವಷ್ಟರಲ್ಲಿ ತಂತ್ರಜ್ಞಾನ ಬದಲಾಗಿ ಛಾಯಾಗ್ರಹಣದ ಕ್ಲಿಷ್ಟ ಮತ್ತು ಸಂಕೀರ್ಣ ತಾಂತ್ರಿಕ ಅಂಶಗಳು ಅತ್ಯಂತ ಸರಳವಾಗಿ ಎಲ್ಲರ ಜೇಬಿನಲ್ಲೂ ಕೆಮೆರಾ ಇರುವಂತಾಯಿತು. ಛಾಯಾಗ್ರಹಣದ ಯಾವುದೇ ತಿಳಿವಳಿಕೆಯೂ ಇಲ್ಲದೆ ಚಿತ್ರಗಳನ್ನು ಮೂಡಿಸುವ ಸಾಧ್ಯತೆ ತೆರೆದು ಕೊಟ್ಟ ಸೆಲ್ಫಿ ಯುಗ. ಚಿತ್ರಗಳು, ಛಾಯಾಗ್ರಹಣ ಮತ್ತು ಭಾವಚಿತ್ರಕ್ಕೆ ಪಾಲಿಸಿಕೊಂಡು ಬಂದ ಯಾವ ಸೂತ್ರದ ಹಂಗಿಲ್ಲದೆ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಚಿತ್ರ ದಾಖಲಿಸುವ ಅವಕಾಶ ಇಂದಿನ ಸೆಲ್ಫಿ ಕಾಲದ್ದು. ಇಷ್ಟುವರೆಗೂ ಶ್ರೀಮಂತರ ಮತ್ತು ರಾಜ ಕುಟುಂಬಕ್ಕೆ ಸೀಮಿತವಾಗಿದ್ದ ಚಿತ್ರ/ಛಾಯಾಚಿತ್ರ ಸೆಲ್ಫಿಯ ಕಾಲಕ್ಕೆ ಎಲ್ಲರ ಬೇಸಿಕ್ಸ್ ಆಗಿದೆ. ಜೊತೆಗೆ ತನ್ನ ಮೂಲ ಗುಣ ಅಲಂಕಾರಿಕೆ ಮತ್ತು ಸಾಮಾಜಿಕ ಸ್ಥಾನಮಾನ ಪ್ರದರ್ಶನದ ಗುಣ ಇಂದಿಗೂ ಕಾಯ್ದುಕೊಂಡಿದೆ.

ಅಸಹಜ ಮತ್ತು ತೋರಿಕೆಯ ಚಿತ್ರಗಳ ಹೊರತುಪಡಿಸಿ ಒಂದಷ್ಟು ಸಹಜ ಮತ್ತು ಕಲಾತ್ಮಕ ಚಿತ್ರಗಳ ಪ್ರಯೋಗ ಯಾವಾಗ ಶುರುವಾಯಿತು ಎಂದು ನನಗಷ್ಟು ಗೊತ್ತಿಲ್ಲ. ಆದರೆ ಇಲ್ಲಿಯವರೆಗೂ ನಾವು ಚರ್ಚಿಸಿದ ತೋರಿಕೆಯ ಚಿತ್ರಗಳ ಹೊರತಾಗಿ ಶುರುವಾದ ಸಹಜ ಮತ್ತು ಕಲಾತ್ಮಕ ಚಿತ್ರಗಳು ವೈಯಕ್ತಿಕ ಹಿನ್ನೆಲೆ ಬಿಟ್ಟು ಸಾಮಾಜಿಕ ಹಿನ್ನೆಲೆಯ ವಿಷಯಗಳನ್ನು ಪ್ರಯೋಗಿಸಲಾಯಿತು. ಅಂದರೆ ನಿರ್ದಿಷ್ಟ ವೈಯಕ್ತಿಕ ಕಾರಣಕ್ಕೆ ದಾಖಲಿಸುತ್ತಿದ್ದ ಚಿತ್ರಗಳ ಬದಲಾಗಿ ಸಾಮಾಜಿಕ ಹಿನ್ನೆಲೆಯಲ್ಲಿ ಬೇರೆಯವರ ಬದುಕು ಮತ್ತು ಸಂದರ್ಭದ ದಾಖಲೀಕರಣ. ಇಂತಾ ಚಿತ್ರಗಳಲ್ಲಿ ತೋರಿಕೆಯ ಹೊರತಾಗಿ ನೈಜ ಬದುಕಿನ ಚಿತ್ರಣ ಮತ್ತು ವ್ಯಕ್ತಿಯ ಕಸುಬು, ಸ್ಥಿತಿ ಮತ್ತೇನೊ ಹೇಳುವ ಅಂಶಗಳನ್ನು ಗುರುತಿಸಬಹುದು.

ವ್ಯಕ್ತಿಯ ಭಾವಚಿತ್ರ ದಾಖಲಿಸುವಾಗ ಏನನ್ನು ದಾಖಲಿಸುತ್ತೇವೆ? ಅವರ ಮುಖವನ್ನೇ ದಾಖಲಿಸಿದರೆ ಅದು ಕೇವಲ ಒಬ್ಬ ವ್ಯಕ್ತಿಯ ಚಿತ್ರವಾಗುತ್ತದೆ. ಆ ವ್ಯಕ್ತಿ ಆತನೇ ಆಗಬೇಕೆಂದಿಲ್ಲ. ಅದೆ ಸಂಯೋಜನೆ ಅದೆ ಹಿನ್ನೆಲೆ-ಬೆಳಕಿನಲ್ಲಿ ಯಾರೊಬ್ಬರನ್ನು ಕೂರಿಸಿ ದಾಖಲಿಸಿದರೂ ಆದೀತು. ಆದರೆ ಅಷ್ಟೇ ಸಾಕೆ? ಒಂದು ಭಾವಚಿತ್ರದಲ್ಲಿ ಆತನ ಬದುಕು, ವ್ಯಕ್ತಿತ್ವ ಆತನ ಭೌದ್ದಿಕ ಮತ್ತು ಸಾಮಾಜಿಕ ಹಿನ್ನೆಲೆ ಅಥವಾ ಆತನ ಸ್ಥಿತಿ ಗೋಜಲನ್ನು ಒಂದು ಚಿತ್ರದಲ್ಲಿ ದಾಖಲಿಸಲು ಸಾದ್ಯವೆ? ಆ ಮೂಲಕ ಆತನ ಒಟ್ಟಾರೆ ವ್ಯಕ್ತಿತ್ವ ದಾಖಲೀಕರಣಕ್ಕೆ ಪ್ರಯತ್ನಿಸಿದ ಸಾಕಷ್ಟು ಉದಾಹರಣೆಗಳು ಇತಿಹಾಸದಲ್ಲಿ ಇದೆ.  ಇಂಥಾ ಚಿತ್ರಗಳೇ ಸಾರ್ವತ್ರಿಕವಾಗಿ ಸರ್ವಕಾಲಿಕವಾಗಿ ಉಳಿದುಕೊಂಡಿವೆ. ಪ್ರತಿ ಚಿತ್ರಲ್ಲೂ ಆಯಾ ಕಾಲಘಟ್ಟದ ಹಲವು ಕತೆಗಳನ್ನು ತನ್ನ ಮೂಲಕ ದಾಖಲಿಸಿಕೊಂಡು ಕತೆ ಹೇಳುತ್ತವೆ, ಇಂದಿನ ಸೆಲ್ಫಿಗಳೂ ಕೂಡ!

ಭಾವಚಿತ್ರ ಛಾಯಾಗ್ರಹಣವು ಅತ್ಯಂತ ಕ್ಲಿಷ್ಟವೂ ಮತ್ತು ಸಂವೇದನಾಶೀಲತೆಯಿಂದಲೂ ಕೂಡಿದ ಪ್ರಾಕಾರ. ಇಲ್ಲಿ ವ್ಯಕ್ತಿಯ ಮತ್ತು ಛಾಯಾಗ್ರಾಹಕನ ಇಬ್ಬರ ಸಂವೇದನೆಯೂ ಮುಖ್ಯವಾಗುತ್ತದೆ. ಒಂದು ಚಿತ್ರವು ಇಬ್ಬರ ಕತೆ ಹೇಳುತ್ತಿರುತ್ತದೆ. ಚಿತ್ರದಲ್ಲಿರುವ ವ್ಯಕ್ತಿಯ ಕತೆಯು ಒಂದಾದರೆ, ಚಿತ್ರದ ಹಿಂದಿರುವ ಛಾಯಾಗ್ರಾಹಕನ ಕಥೆಯೂ ಅಡಗಿರುತ್ತದೆ. ಒಬ್ಬ ಛಾಯಾಗ್ರಾಹಕನ ಆಯ್ಕೆ ಮತ್ತು ಆಲೋಚನೆ ಚಿತ್ರಕ್ಕೆ ಅತಿ ಮುಖ್ಯ.

ಎ. ಎನ್. ಮುಕುಂದ ಅವರು ಅಂಥಾ ಸಂವೇದನಾಶೀಲ ಛಾಯಾಗ್ರಾಹಕರು. ಅವರ ಚಿತ್ರಗಳು ವ್ಯಕ್ತಿಯನ್ನು ಅತ್ಯಂತ ಸರಳ ರೀತಿಯಲ್ಲಿ ದಾಖಲಿಸುವುದು, ಅದರ ಮೂಲಕ ಅವರೊಳಗಿನ ಯಾವುದೇ ನಾಟಕೀಯ ಮುಖವಾಡವಿಲ್ಲದ ಅವರ ಸಹಜ ವ್ಯಕ್ತಿತ್ವದ ಮುಖ ಭಾವವನ್ನು ಸೆರೆಹಿಡಿಯಲು ಪ್ರಯತ್ನಿಸುವುದು. ಮುಕುಂದರು ನಾಡಿನ ಶ್ರೇಷ್ಟ ಬರಹಗಾರರ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಅವರ ಅಷ್ಟೂ ಚಿತ್ರಗಳಲ್ಲಿ ನಮಗೆ ಕಾಣುವುದು ಸರಳತೆ! ಯಾವುದೇ ಕ್ಲಿಷ್ಟ ಸಂಯೋಜನೆ, ಬೆಳಕು ಮತ್ತು ಕ್ಲಿಷ್ಟ ದೃಶ್ಯ ಅಂಶಗಳಿಲ್ಲದೆ, ಭಾವಚಿತ್ರಕ್ಕೆ ಬೇಕಾದ ಮತ್ತು ವ್ಯಕ್ತಿಯ ಸಹಜತೆಗೆ ಒತ್ತುಕೊಟ್ಟು ದಾಖಲಿಸಿದ ಭಾವಚಿತ್ರಗಳು.

ಎ. ಎನ್. ಮುಕುಂದರು ಅವರ ಪುಸ್ತಕ “ಮುಖಮುದ್ರೆ”ಯ ಪ್ರಸ್ತಾವನೆಯಲ್ಲಿ ಅವರ ಛಾಯಾಗ್ರಹಣದ ನಂಬಿಕೆಗಳ ಆಯ್ದ ಸಾಲುಗಳನ್ನು ಇಲ್ಲಿ ಸೇರಿಸಿರುವೆ. “ಭಾವಚಿತ್ರ ತೆಗೆಯುವ ಸಮಯದಲ್ಲಿ ನನ್ನ ಮನಸ್ಸಿನಲ್ಲಿದ್ದ ಆಲೋಚನೆಗಳನ್ನು ಹೀಗೆ ಸಂಗ್ರಹಿಸಬಹುದೇನೊ:
1. ವ್ಯಕ್ತಿಯ ಮುಖಭಾವ ಅದರಲ್ಲೂ ವಿಶೇಷವಾಗಿ ಕಣ್ಣುಗಳು ಆ ವ್ಯಕ್ತಿಯ ಅಂತರಂಗದ, ವ್ಯಕ್ತಿತ್ವದ ಕನ್ನಡಿಯಾಗಬಲ್ಲದೆಂಬ ದೃಢವಾದ ನಂಬಿಕೆ.
2. ಕಲರ್ ಫೋಟೋಗ್ರಫಿಯ ಬಹುಮುಖ್ಯ ದೌರ್ಬಲ್ಯವಾದ ‘ಮೇಲ್ಪದರದ ಆಕರ್ಷಣೆ’ (Surface Prettiness) ಅನ್ನು ಕುಗ್ಗಿಸುವುದು.
3. ಕೇವಲ ಆರ್ಥಿಕ ಹಾಗೂ ಕಡಿಮೆ ಶ್ರಮ ಕಾರಣಗಳಿಗಾಗಿ ಕಲರ್ ಮಾಧ್ಯಮವನ್ನು ಆರಿಸಿಕೊಂಡರೂ ಮೂಲತಃ ನನ್ನ ಮನೋಧರ್ಮ ಕಪ್ಪು-ಬಿಳುಪು ಮಾಧ್ಯಮದ ಸಂವೇದನೆಯೇ ಆಗಿದ್ದು, ಅದರಲ್ಲೂ ನಿರಾಡಂಬರದ ಅತ್ಯಲ್ಪ ಪರಿಕರಗಳ (Minimalist) ಶೈಲಿಯನ್ನೇ ಅನುಸರಿಸುವುದು.
4. ಕೇಂದ್ರ ವಸ್ತುವಿನ ವೀಕ್ಷಣೆಗೆ ಭಂಗವಾಗದಂಥ, ಸರಳ ಕಪ್ಪು ಅಥವಾ ಬಿಳುಪು ಹಿನ್ನೆಲೆ ಆಯ್ದುಕೊಳ್ಳುವುದು.
5. ಯಾವುದೇ ರೀತಿಯ ಕೃತಕ ಬೆಳಕನ್ನು ಬಳಸದೇ, ಸಹಜ, ಲಭ್ಯ ಬೆಳಕನ್ನೇ ಬಳಸುವುದು.
6. ಭಾವಚಿತ್ರ ಎನ್ನುವುದು ಕೇವಲ ಛಾಯಾಗ್ರಾಹಕನ ಸೃಷ್ಟಿ ಅಲ್ಲ. ಅದು ಫೊಟೋ ತೆಗೆಯುವ ಮತ್ತು ತೆಗೆಸಿಕೊಳ್ಳುವ ಇಬ್ಬರ ಸಂಪೂರ್ಣ ತೊಡಗಿಸಿಕೊಳ್ಳುವಿಕೆಯ ಫಲ. ಇದನ್ನು ಸೂಚಿಸುವುದಕ್ಕಾಗಿಯೇ ನಾನು ತೆಗೆದ ಭಾವಚಿತ್ರಗಳಲ್ಲಿ ನನ್ನ ಸಹಿಯೊಟ್ಟಿಗೆ ಫೋಟೋ ತೆಗೆಸಿಕೊಂಡವರ ಸಹಿಯೂ ಇರುವಂತೆ ನೋಡಿಕೊಳ್ಳುವುದು. ”

ವಿಶಿಷ್ಟ ಸಂವೇದನೆಯ ಎ.ಎನ್.‌ ಮುಕುಂದ್

ಮುಕುಂದರು ಹೇಳಿದಂತೆ ವ್ಯಕ್ತಿಯ ಮುಖಭಾವ ವಿಶೇಷವಾಗಿ ಕಣ್ಣುಗಳು ಆ ವ್ಯಕ್ತಿಯ ಅಂತರಂಗದ ವ್ಯಕ್ತಿತ್ವದ ಕನ್ನಡಿ. ಕಣ್ಣುಗಳು ಕಥೆ ಹೇಳುತ್ತವೆ. ಹಿಂದೊಮ್ಮೆ ಗೆಳೆಯರೊಬ್ಬರು ಅವರ ತಂದೆ-ತಾಯಿಯ ಚಿತ್ರವೊಂದನ್ನು ಒಬ್ಬ ಕಲಾವಿದರ ಮೂಲಕ ಚಿತ್ರ ರಚಿಸಲು ಕೋರಿದ್ದರು. ಚಿತ್ರ ಮುಗಿದ ಮೇಲೆ ನೋಡಿದ ಸ್ನೇಹಿತರು ಮುಖದಲ್ಲಿ ಸಂತೋಷವಿಲ್ಲವೆಂದು ಅಭಿಪ್ರಾಯಪಟ್ಟರು. ಆಗ ಕಲಾವಿದರು ಬಾಯಿಯ ಅಂಚನ್ನು ಸ್ವಲ್ಪ ತಿದ್ದಿ ನಗುವಂತೆ ಮಾಡಿಕೊಟ್ಟರು. ಆದರೆ, ಆ ಚಿತ್ರ ನಕ್ಕಂತೆ ಕಂಡರೂ ನಗು ಕೇವಲ ಬಾಯಿಯ ಅಂಚಲ್ಲಿ ಇರುವುದಿಲ್ಲ. ಅದು ಕೆನ್ನೆಯಲ್ಲಿ, ಕಣ್ಣಲ್ಲಿ, ಕಣ್ಣಿನ ಅಕ್ಕಪಕ್ಕದ ಸ್ನಾಯುಗಳಲ್ಲಿಯೂ ಅಡಕವಾಗಿರುತ್ತದೆ. ತುಟಿ ಸುಳ್ಳು ಹೇಳಿದರೂ ಕಣ್ಣು ಸುಳ್ಳಾಡುವುದಿಲ್ಲ. ಹಾಗಾಗಿಯೇ ನಾವೆಲ್ಲ ಕಣ್ಣು ನೋಡಿ ಮಾತಾಡುವುದು.

ಇನ್ನೂ ಮಿನಿಮಲಿಸ್ಟ್ ಶೈಲಿಯ ಚಿತ್ರದಲ್ಲಿ ಆದಷ್ಟೂ ವಿಷಯ ಕೇಂದ್ರಿತವಾಗಿರುವುದು ಮತ್ತು ವಿಷಯಕ್ಕೆ ಪೂರಕವಾದ ಕೆಲವೇ ಕೆಲವು ಅಂಶಗಳನ್ನು ಮಾತ್ರ ಸೇರಿಸುವ ಕ್ರಮ, ಈ ಕ್ರಮವು ನೋಡುಗನನ್ನು ದೃಶ್ಯದಲ್ಲಿ ಹೆಚ್ಚು ವಿಚಲಿತಗೊಳಿಸದೆ ವಿಷಯ ತನ್ನ ಗಮನವನ್ನು ಸೀಮಿತಗೊಳಿಸಿ ಚಿತ್ರ ಹೇಳಬೇಕೆಂದಿರುವುದನ್ನು ಸೀಮಿತವಾಗಿ ದಾಖಲಿಸುವ ಕ್ರಮ. ಮುಕುಂದರ ಅಷ್ಟೂ ಚಿತ್ರಗಳಲ್ಲಿ ಈ ಗುಣಗಳನ್ನು ಕಾಣಬಹುದು.

ಇನ್ನು ಸಹಜ ಬೆಳಕು, ಕಪ್ಪು-ಬಿಳುಪು ಚಿತ್ರಗಳು ಮೇಲಿನ ಎರಡೂ ಅಂಶಗಳಿಗೆ ಪೂರಕವಾಗಿ ನಿಂತುಬಿಟ್ಟರೆ ಚಿತ್ರಕ್ಕೆ ಮಾಂತ್ರಿಕ ಶಕ್ತಿ ತಂದುಕೊಡುವುದು ನಿರ್ವಿವಾದ ಸತ್ಯ. ಕಲರ್ ಚಿತ್ರ ಮತ್ತು ಕಪ್ಪು ಬಿಳುಪು ಚಿತ್ರವನ್ನು ತುಲನೆ ಮಾಡುವುದಾದರೆ ಒಂದು ದೃಷ್ಟಿಯಲ್ಲಿ ಕಲರ್ ಚಿತ್ರಕ್ಕೆ ಬಣ್ಣಗಳ ಬಳಕೆ ಲಾಭವಾದರೆ ಮತ್ತೆ ಕೆಲವು ಬಾರಿ ಬಣ್ಣಗಳೇ ಅಡ್ಡಿಯಾಗಿ ಚಿತ್ರದ ಮೂಲ ಆಶಯಕ್ಕೆ ಭಂಗ ತರುತ್ತವೆ. ಮುಕುಂದರು ಹೇಳುವಂತೆ “ಮೇಲ್ಪದರದ ಆಕರ್ಷಣೆ (Surface prettiness)” ಅಂದರೆ ಮನುಷ್ಯನ ಪ್ರಕೃತಿ ಗುಣದಲ್ಲಿ ಯಾವಾಗಲು ಬಣ್ಣಗಳ ಆಕರ್ಷಣೆಗೆ ಒಳಗಾಗುವ ಕಣ್ಣು ಮತ್ತು ಮನಸ್ಸು ಇವುಗಳನ್ನು ಧಾಟಿ ಚಿತ್ರದ ಆಂತರಿಕ ವಿಷಯ ಮತ್ತು ಆಳವನ್ನು ನೋಡಲು ಅಡ್ಡಿಯಾಗುತ್ತದೆ. ಎಷ್ಟೋ ಸಂದರ್ಭದಲ್ಲಿ ಚಿತ್ರದ ವಿಷಯವನ್ನು ಗಮನಿಸಿದಂತೆ ಮಾಡಿ ಬರೀ ಬಣ್ಣಗಳಿಗೆ ಸೀಮಿತಗೊಳಿಸುತ್ತದೆ. ಹಾಗಾಗಿ ಕಲರ್ ಚಿತ್ರ ದಾಖಲಿಸುವಾಗ ವಿಷಯಕ್ಕೆ ಪೂರಕವಲ್ಲದ ಬಣ್ಣಗಳನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ.

ಬಣ್ಣಗಳು ಭಾವನೆಗಳ ಜೋಡಿಯಾಗಿರುವುದರಿಂದ ಪ್ರತಿ ಬಣ್ಣಕ್ಕೂ ಒಂದೊಂದು ಭಾವನೆ ತಳುಕು ಹಾಕಿಕೊಂಡಿರುತ್ತದೆ. ಕೆಂಪು ಬಣ್ಣ ನಮ್ಮಲ್ಲಿ ಕೆರಳಿಸುವ ರಸ ಬೇರೆ. ಕಪ್ಪು ಹೇಳುವ ಭಾವ ಬೇರೆ. ಹಾಗಾಗಿ, ಚಿತ್ರದ ರಸ-ಭಾವಕ್ಕೆ ತಕ್ಕಂತೆ ಬಣ್ಣಗಳ ಮೇಲಿನ ಹಿಡಿತವೂ ಮುಖ್ಯ. ಇದು ಅತ್ಯಂತ ಕಠಿಣ ಸವಾಲು.

ಕಪ್ಪು ಬಿಳುಪು ಚಿತ್ರಕ್ಕೆ ಈ ಕಠಿಣ ಸವಾಲು ಸುಲಭವಾದರೂ ಬಣ್ಣದ ಎಲ್ಲಾ ಭಾವನೆಗಳನ್ನು ನೆರಳು-ಬೆಳಕಿನ ಸಂಯೋಜನೆಯಲ್ಲಿ ಸೃಷ್ಟಿಸಬೇಕಾಗುತ್ತದೆ. ಇಲ್ಲದಿದ್ದರೆ ಚಿತ್ರವು ಜೀವವಿಲ್ಲದೆ – ಬಣ್ಣವೂ ಇಲ್ಲದೆ ನಿರ್ಜೀವವಾಗುತ್ತದೆ. ಕಪ್ಪು-ಬಿಳುಪು ಸರಳವಾಗಿ ಕಂಡರೂ ಬಣ್ಣದ ಚಿತ್ರಕ್ಕಿಂತ ಅತ್ಯಂತ ಕಠಿಣ.

ಮುಕುಂದರು ಹೇಳುತ್ತಾರೆ, “ವ್ಯಕ್ತಿಯೊಬ್ಬನ ವ್ಯಕ್ತಿತ್ವ ಜೀವಮಾನವಿಡಿ ಒಂದೇ ರೀತಿಯಲ್ಲಿರುತ್ತದೆಯೆ? ಕಾಲದಿಂದ ಕಾಲಕ್ಕೆ ಜೀವನಾನುಭವ ಪಡೆದಂತೆ ವ್ಯಕ್ತಿತ್ವವೂ ಬದಲಾಗಬಹುದಲ್ಲವೆ ಎಂಬ ಪ್ರಶ್ನೆಯನ್ನ ಮೈಮೇಲೆ ಹಾಕಿಕೊಂಡರೆ ವಿಷಯ ಮತ್ತಷ್ಟು ಜಟಿಲವಾಗುತ್ತದೆ. ಹಾಗಾಗಿ ನಾನು ತೆಗೆದ ಭಾವಚಿತ್ರ ಒಂದು ಕಾಲಘಟ್ಟದ ಆ ವ್ಯಕ್ತಿಯ ವ್ಯಕ್ತಿ ವಿಶಿಷ್ಟತೆ ಹೇಳುವಂತ ಚಿತ್ರವಷ್ಟೆ ಆಗಿರುತ್ತದೆ ಎಂದು ಭಾವಿಸಬೇಕಾಗುತ್ತದೆ.” ಇದು ಮುಕುಂದರ ಪ್ರಾಮಾಣಿಕತೆಗೆ ಸಾಕ್ಷಿ ಮತ್ತು ಅವರ ಚಿತ್ರ ಸೂಕ್ಷ್ಮತೆಗೆ ಹಿಡಿದ ಕನ್ನಡಿ.

ಎ. ಎನ್. ಮುಕುಂದರು 16 ಜುಲೈ 2022 ರಂದು ನಮ್ಮನ್ನು ಅಗಲಿದರು. ಅವರ ಸ್ಥಾನ ತುಂಬುವ ಭಾವಚಿತ್ರ ಛಾಯಾಗ್ರಹಣದಲ್ಲಿ ತೊಡಗಿರುವ ಇನ್ನೊಬ್ಬ ಯುವ ಛಾಯಾಗ್ರಾಹಕರ ಕೊರತೆ ದೊಡ್ಡದಿದೆ. ಇಂದು ಹೆಚ್ಚಿನ ಯುವಕರ ಆಕರ್ಷಣೆಯು ವನ್ಯಜೀವಿ ಛಾಯಾಗ್ರಹಣವಾಗಿದೆ. ಹಾಗೂ ಇತರೆ ವಿಷಯಗಳಲ್ಲಿ ತಮ್ಮನ್ನು ಆಳವಾಗಿ ತೊಡಗಿಸಿಕೊಂಡವರ ಕೊರತೆ ದೊಡ್ಡದಾಗಿ ಕಾಣುತ್ತಿದೆ. ಮುಂದೆ ಯುವಕರು ಹೆಚ್ಚೆಚ್ಚು ಇತರೆ ವಿಷಯಗಳೆಡೆಗೆ ನೋಡುವಂತಾಗಲಿ. ಮುಕುಂದರು ಅವರ ಚಿತ್ರಗಳಷ್ಟೆ ಸರಳವಾಗಿ ತಮ್ಮ ಬದುಕನ್ನೂ ಕಂಡುಕೊಂಡವರು ಅವರ ಚಿತ್ರಗಳಲ್ಲಿ ಕಂಡುಬರುವ ಸರಳತೆ, ಸೌಮ್ಯ ಬೆಳಕು, ವಿಷಯ ಕೇಂದ್ರಿತ, ಸೂಕ್ಷ್ಮ ಕಣ್ಣು, ಮೌನ ಭಾವ ಎಲ್ಲವೂ ಅವರ ವ್ಯಕ್ತಿಯ ಗುಣಗಳು. ಹಾಗಾಗಿಯೆ ನಾನು ಮೊದಲು ಹೇಳಿದ್ದು ಒಂದು ಚಿತ್ರಕ್ಕೆ ಎರಡು ವ್ಯಕ್ತಿತ್ವವಿರುತ್ತದೆ. ಒಂದು ಚಿತ್ರದ ವಿಷಯದ್ದು ಮತ್ತೊಂದು ಛಾಯಾಗ್ರಾಹಕನದ್ದು!

ಸೆಲ್ಫಿಯ ಕಾಲಘಟ್ಟದಲ್ಲಿ ಇಷ್ಟೆಲ್ಲಾ ಸೂಕ್ಷ್ಮಗಳು ಕಳೆದುಹೋಗಿ ಬರೀ ನಾವು ಅಲ್ಲದ್ದನ್ನು ನಮ್ಮಂತೆ ಬಿಂಬಿಸಿಕೊಳ್ಳುತ್ತಾ ಕಳೆದು ಹೋಗುವಾಗ ಮುಕುಂದರ ಚಿತ್ರಗಳು ಮತ್ತು ಸೂಕ್ಷ್ಮತೆಗಳೇ ಪಾಠವಾಗುತ್ತದೆ.

ಎ. ಎನ್. ಮುಕುಂದರಿಗೆ ನನ್ನ ಕೊನೆಯ ನಮಸ್ಕಾರಗಳು.

Share