Connect with us


      
ರಾಜಕೀಯ

ಅಧಿಕಾರದಲ್ಲಿರುವವರ ನೀತಿ ರಾಜ್ಯದ ಭವಿಷ್ಯವನ್ನು ನಿರ್ಧರಿಸುತ್ತದೆ : ಬೊಮ್ಮಾಯಿ

Kumara Raitha

Published

on

ಹಾವೇರಿ, ಡಿಸೆಂಬರ್ 06(ಯು.ಎನ್.ಐ.) ಅಧಿಕಾರದಲ್ಲಿರುವವರ ನೀತಿ ರಾಜ್ಯದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಭಾಜಪದ ವತಿಯಿಂದ ಆಯೋಜಿಸಿದ್ದ ಚುನಾವಣಾ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಜನ ಆರ್ಥಿಕವಾಗಿ ಸಬಲರಾದರೆ ರಾಜ್ಯ ಸಬಲವಾಗುತ್ತದೆ. ಆದರೆ ರಾಜ್ಯ ಸಬಲವಾದರೆ ಜನ ಸಬಲರಾಗುತ್ತಾರೆ ಎಂಬ ಗ್ಯಾರೆಂಟಿ ಇಲ್ಲ. ಕಾಂಗ್ರೆಸ್ ಅವಧಿಯಲ್ಲಿ ಸರ್ಕಾರದ ಆದಾಯ ಹೆಚ್ಚಾದರೂ ಜನರ ಆದಾಯ, ಅವರ ಜೀವನಮಟ್ಟ ಹೆಚ್ಚಾಗಲಿಲ್ಲ ಎಂದರು.

ಸೂಕ್ತ ಪರಿಕಲ್ಪನೆಯಿಲ್ಲದ ಕಾಂಗ್ರೆಸ್ ಪಕ್ಷದ ಯೋಜನೆಗಳು : ಕಾಂಗ್ರೆಸ್ ಪಕ್ಷ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದರು.ಸೂಕ್ತ ಪರಿಕಲ್ಪನೆಯಿಲ್ಲದ ಈ ಯೋಜನೆಯಿಂದಾಗಿ ಪುನ: ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಯೋಜನೆ ರೂಪಿಸುವಾಗ ಸಮಗ್ರ ಚಿಂತನೆ ಮಾಡಬೇಕು. ಆ ಕೆಲಸವನ್ನು ಭಾಜಪ ಮಾಡುತ್ತಿದೆ. ಮುಖ್ಯಮಂತ್ರಿಯಾದ ಪ್ರತಿ ಕ್ಷಣವನ್ನು ಈ ರಾಜ್ಯ ಕಟ್ಟಲು ಹಾಗೂ ರಾಜ್ಯದ ಬೆನ್ನೆಲುಬಾಗಿರುವ ರೈತನ ಬದುಕನ್ನು ಹಸನು ಮಾಡಲು, ಹೆಣ್ಣುಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅವರ ಕುಟುಂಬಗಳಿಗೆ ಭದ್ರ ಬುನಾದಿಯನ್ನು ಕಲ್ಪಿಸಿಕೊಡಲು ತಾವು ಶ್ರಮಿಸುವುದಾಗಿ ತಿಳಿಸಿದರು.

ನಾವೆಲ್ಲರೂ ಅಧಿಕಾರ ವಿಕೇಂದ್ರೀಕರಣದ ಭಾಗವಾಗಿದ್ದೇವೆ. ಜನರಿಗೆ ಹತ್ತಿರವಾಗಿರುವ ಸರ್ಕಾರ ಇದ್ದರೆ ಅದು ಗ್ರಾಮ ಪಂಚಾಯತಿ. ಜನರ ಸಮಸ್ಯೆಗಳು, ಮೂಲಭೂತ ಅವಶ್ಯಕತೆಗಳು ನೇರವಾಗಿ ಜನರಿಂದ ತಿಳಿದು ಅದಕ್ಕೆ ಪರಿಹಾರ ನೀಡಬೇಕು. ಈಗ ರಾಜಕೀಯ ವಿಕೇಂದ್ರೀಕರಣವಾಗಿದೆ, ಅದರ ಜೊತೆಗೆ ಆಡಳಿತಾತ್ಮಕ , ಹಣಕಾಸಿನ ವಿಕೇಂದ್ರೀಕರಣವಾಗಬೇಕು. ಮಹಾತ್ಮಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿಯವರು ಗ್ರಾಮ ಸ್ವರಾಜ್ಯದ ಬಗ್ಗೆ ನಂಬಿಕೆವುಳ್ಳವರಾಗಿದ್ದರು. ಇದು ನಮ್ಮ ಪಕ್ಷದ ಧ್ಯೇಯವೂ ಹೌದು. ಜನರ ಸುತ್ತಲೂ ಅಭಿವೃದ್ಧಿಯಾಗಬೇಕು ಎಂದರು.

ನಮ್ಮ ಸರ್ಕಾರ ಜನಸೇವಕ ಕಾರ್ಯಕ್ರಮವನ್ನು ಪ್ರಾರಂಭಿಸಿ ಗ್ರಾಮ ಪಂಚಾಯತಿಗಳಲ್ಲಿ 30 ಸೇವೆಗಳನ್ನು ಲಭ್ಯವಾಗಿಸಿದೆ. ರೈತ ಸಶಕ್ತನಾಗಲು ರೈತರ ಮಕ್ಕಳಿಗೆ ರೈತವಿದ್ಯಾನಿಧಿ ಯೋಜನೆ ಘೋಷಿಸಲಾಗಿದೆ. 1 % ಕೃಷಿ ವಲಯದಲ್ಲಿ ಅಭಿವೃದ್ಧಿಯಾದರೆ 4 % ಕೈಗಾರಿಕಾ ವಲಯ ಹಾಗೂ 10% ಸೇವಾ ವಲಯದಲ್ಲಿ ಹೆಚ್ಚಾಗುತ್ತದೆ. ಇವೆಲ್ಲದರಿಂದ ದೇಶಕ್ಕೆ ಹಾಗೂ ರಾಜ್ಯಕ್ಕೆ ಆದಾಯ ಹೆಚ್ಚಾಗುತ್ತದೆ. ರಾಜ್ಯದ ತಲಾವಾರು ಆದಾಯದಲ್ಲಿ ದೇಶದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ರಾಜ್ಯದ ಶೇ. 70 ರಷ್ಟು ಜನ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ವಿಶೇಷ ಕಾರ್ಯಕ್ರಮ ರೂಪಿಸಿ ಆರ್ಥಿಕ ನೆರವು ನೀಡಲಾಗುವುದು. ದೇಶದಲ್ಲಿಯೇ ತಲಾವಾರು ಆದಾಯದಲ್ಲಿ ರಾಜ್ಯವನ್ನು ನಂ.1 ಆಗಿಸುವುದು ನನ್ನ ಗುರಿ ಎಂದರು.

ಹೆಣ್ಣುಮಕ್ಕಳು ದುಡಿದರೆ ಕುಟುಂಬದ ಆರ್ಥಿಕತೆ ವೃದ್ಧಿ :
ಹೊಲ ಮನೆಗಳಲ್ಲಿ ದುಡಿಯುವ ಎಸ್‍ಸಿ/ಎಸ್‍ಟಿ, ಓಬಿಸಿ ಹೆಣ್ಣುಮಕ್ಕಳಿಗೆ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬ್ಯಾಂಕ್‍ನಿಂದ ಸಾಲ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೆಣ್ಣುಮಕ್ಕಳು ದುಡಿದರೆ ಕುಟುಂಬದ ಆರ್ಥಿಕತೆ ಹೆಚ್ಚಾಗುತ್ತದೆ. ಮಳೆ ಹೆಚ್ಚಾಗಿ ರೈತನ ದುಡಿಮೆ, ಬಂಡವಾಳ ನಾಶವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 7-8 ತಿಂಗಳಾದರೂ ರೈತನಿಗೆ ಪರಿಹಾರ ದೊರಕುತ್ತಿರಲಿಲ್ಲ. ಈಗ ಸರ್ವೇಯಾಗಿ ವರದಿ ಬಂದ 24 ಗಂಟೆಯೊಳಗೆ ರೈತರಿಗೆ ಪರಿಹಾರ ನೀಡಲಾಗುತ್ತಿದೆ. ನವೆಂಬರ್‍ನಲ್ಲಿ ಬಿದ್ದ ಮಳೆಗೆ ಈವರೆಗೆ 428 ಕೋಟಿ ರೂ. ಪರಿಹಾರ ನೀಡಲಾಗಿದೆ. ಹಾವೇರಿ ಜಿಲ್ಲೆಗೆ 5.50 ಕೋಟಿ ರೂ.ಗಳನ್ನು ಪರಿಹಾರ ನೀಡಲು ಪ್ರಾರಂಭಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಹಣಕಾಸಿನ ಮುಗ್ಗಟ್ಟಿದ್ದರೂ ರೈತರನ್ನು ಸರ್ಕಾರ ಮರೆಯಲಿಲ್ಲ. ಅವರ ಕೈ ಹಿಡಿಯುವ ಕೆಲಸವನ್ನು ಮಾಡಿದೆ. ಇದು ನಮ್ಮ ಬದ್ಧತೆ ಎಂದರು.

ಜನರ ಧ್ವನಿಗೆ ಸ್ಪಂದಿಸುವಂತಹ ಬಿಜೆಪಿ ಸರ್ಕಾರ : ವಿಧಾನ ಪರಿಷತ್ ನಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ ಆದರೆ ಗ್ರಾಮೀಣ ಜನರು ಸಮಸ್ಯೆಗಳೊಂದಿಗೆ ಜೀವನ ಮಾಡುತ್ತಾರೆ. ಚರ್ಚೆಗೂ ಸಮಸ್ಯೆಗೂ ವ್ಯತ್ಯಾಸವಿದೆ. ಅಧಿಕಾರದ ವಿಕೇಂದ್ರೀಕರಣದಿಂದ ಜನರ ಧ್ವನಿಗೆ ಸ್ಪಂದಿಸುವಂತಹ ಸರ್ಕಾರ ಅಗತ್ಯ. ಆ ಕೆಲಸವನ್ನು ನಾವು ಮಾಡಲಿದ್ದೇವೆ. ಅತಿ ಹೆಚ್ಚು ಮತಗಳನ್ನು ಭಾಜಪದ ಪ್ರದೀಪ್ ಶೆಟ್ಟರಿಗೆ ನೀಡಬೇಕೆಂದು ಮನವಿ ಮಾಡಿದರು.

ಹಾವೇರಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಭರವಸೆಯನ್ನು ಈಡೇರಿಸಿದೆ. ಹಾವೇರಿಗೆ ಪ್ರತ್ಯೇಕ ಹಾಲು ಉತ್ಪಾದಕರ ಸಂಘವನ್ನು ರಚನೆ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಮೂಲಕ ಈಡೇರಿಸಲಾಗಿದೆ. 30 ಎಕರೆ ಜಮೀನಿನಲ್ಲಿ ಇನ್ನೊಂದು ವರ್ಷದೊಳಗೆ ಹಾಲು ಉತ್ಪಾದಕರ ಸಂಘ ತಲೆ ಎತ್ತಲಿದೆ. ಹಿರೇಕೆರೂರಿನಲ್ಲಿ ನೀರಾವರಿ ಯೋಜನೆ, ಏತನೀರಾವರಿ ಯೋಜನೆಗಳು ಮುಕ್ತಾಯ ಹಂತದಲ್ಲಿವೆ ಎಂದರು.

Share